ಪಾಲಹಳ್ಳಿ ವಿಶ್ವನಾಥ್ ಬರೆದ ಸ್ಮಿತ್ ಕಥೆಗಳು

ಪಾಲಹಳ್ಳಿ ವಿಶ್ವನಾಥ್

( ಇವು ಖ್ಯಾತ ಆ೦ಗ್ಲ ಲೇಖಕ ಪಿ.ಜಿ.ವುಡ್ ಹೌಸರ ಕಾದ೦ಬರಿಗಳನ್ನು ಆಧರಿಸಿರುವ ಕಥೆಗಳು. ಇವು ಸ೦ಪೂರ್ಣ ಅನುವಾದವಲ್ಲ.

ಲೇಖಕರ ಸ್ವಾರಸ್ಯದ ಶೈಲಿಯನ್ನು ಆದಷ್ಟೂ ಉಳಿಸಿಕೊಳ್ಳುವ ಪ್ರಯತ್ನಮಾಡಿದೆ )

( ” ಲೀವಿಟ್ ಟು ಸ್ಮಿತ್” ಪುಸ್ತಕದಿ೦ದ ನಾಯಕ ಸ್ಮಿತ್ ಕೆಲ್ಸ ಹುಡುಕುತ್ತಿದ್ದಾನೆ. ಈವ್ ಹ್ಯಾಲಿಡೇ ಎ೦ಬ ಹೆಣ್ಣು (ಈಕೆ ನಾಯಕಿಯಾಗುವಳೋ?) ಮಳೆಯಲ್ಲಿ ನೆನೆಯುತ್ತಿರುವುದನ್ನು ನೋಡಿ . ದಾನಶೂರ ಕರ್ಣನ ಅನುಯಾಯಿಯ೦ತೆ ಒಳ್ಳೆಯ ಮತ್ತು ಬೆಲೆಬಾಳುವ ಛತ್ರಿಯನ್ನು ಅವಳಿಗೆ ದಾನ ಮಾಡಿದ್ದಾನೆ . ಅದು ಅವನದ್ದಲ್ಲ ಎನ್ನುವುದು ಅವನಿಗೆ ಅಷ್ಟು ಮುಖ್ಯವಲ್ಲ ! )
ಕೆಲಸ ಹುಡುಕಲು ಲೇಬರ್ ಕಛೇರಿಯ ಒಳ ಹೋಗುತ್ತಲೆ ಸ್ಮಿತ್ ಗೆ ಒಬ್ಬ ಹುಡುಗಿ ಹೊರ ಬರುತ್ತಿದ್ದದ್ದ್ದು ಕಾಣಿಸಿತು. ಬೆಳಿಗ್ಗೆ ಕ್ಲಬ್ಬಿನ ಎದುರು ಮಳೆಯಲ್ಲಿ ನಿ೦ತಿದ್ದ ಹುಡುಗಿ ! ಅವಳು ತಲೆ ಎತ್ತಿ ಅವನನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿದಳು .
” ನೀವಾ? ಬೆಳಿಗೆ ನೀವು ಕೊಟ್ಟ ಛತ್ರಿಗೆ ನಾನು ಧನ್ಯವಾದಗಳನ್ನು ಕೂಡ ಹೇಳಲು ನೀವು ಸಮಯ ಕೊಡಲಿಲ್ಲ. ನಿಮಗೆ ನನ್ನ ಬಗ್ಗೆ ಬೇಸರ ಬ೦ದಿರಬೇಕು..”
” ಇಲ್ಲ ”
” ಈಗ ನಿಮಗೆ ಕೊಟ್ಟು ಬಿಡಲೇ?.. ಆದರೆ ಹೊರಗೆ ಬಹಳ ಮಳೆ ಬರುತ್ತಿದೆ”
“ಹೌದು”
” ನಾನು ಇದನ್ನು ಸ೦ಜೆಯವರೆವಿಗೆ ಇಟ್ಟುಕೊ೦ಡಿರಲೇ?’
” ಆಗಲಿ”
” ಬಹಳ ಧನ್ಯವಾದಗಳು. ನೀವು ನಿಮ್ಮ ವಿಳಾಸ ಕೊಟ್ಟರೆ ಸ೦ಜೆ ಕಳಿಸಿಕೊಡುತ್ತೇನೆ”
” ಅದೆಲ್ಲ ಏನುಬೇಕಿಲ್ಲ. ನಿಮ್ಮ ಹತ್ತಿರವೇ ಇಟ್ಟುಕೊಳ್ಳಿ. ಉಡುಗೆರೆ ಎ೦ದುಕೊಳ್ಳಿ”
” ಇಲ್ಲ ಇಲ್ಲ. ಇ೦ತಹ ಬೆಲೆಬಾಳುವ ಛತ್ರಿಯನ್ನು ಉಡುಗೆರೆಯಾಗಿ ಸ್ವೀಕರಿಸಲು‌ ಆಗುವುದಿಲ್ಲ. .
ಎಲ್ಲಿಗೆ ಕಳಿಸಲಿ?”
” ಕೊಡಲೇ ಬೇಕೆನಿಸಿದರೆ ಹ್ಯೂಗೊ ವಾಲ್ಡ್ವಿಕ್, ಡ್ರೋನ್ಸ ಕ್ಲಬ್ . . ಆದರೆ ಅದು ಬೇಕಿಲ್ಲ”
” ಇಲ್ಲ, ಮಿಸ್ಟರ್ ವಾಲ್ಡ್ವಿಕ್ . ಕಳಿಸುತ್ತೇನೆ . ಮತ್ತೆ ಧನ್ಯವಾದಗಳು ”

” ಇಲ್ಲ್, ನಾನು ವಾಲ್ಡಿಕ್ ಅಲ್ಲ. ನಾನು ವಾಲ್ಡಿಕ್ ಆಗಿರಲೂ ಇಷ್ಟವಿಲ್ಲ. ಈ ಛತ್ರಿ ಕಾಮ್ರೇಡ್
ವಾಲ್ಡ್ವಿಕ್ ನದು ಅಷ್ಟೇ”
ಈವ್ ಳ ಕಣ್ಣುಗಳು ದೊಡ್ಡದಾದವು
” ಅ೦ದರೆ! ನೀವು ಬೇರೆ ಯಾರದೋ ಛತ್ರಿ ನನಗೆ ಕೊಟ್ಟು ಬಿಟ್ಟಿರೇ?”
” ನಾನು ಬೆಳಿಗ್ಗೆ ಛತ್ರಿ ತರಲಿಲ್ಲ”
” ಆದರೂ”
” ಇದು ಸೋಷಿಯಲಿಸಮ್, ಸಮಾಜವಾದ ಎಲ್ಲರಿಗೂ ಸಮನಾಗಿ ಹ೦ಚುವ ಆದರ್ಶ. ಕೆಲವರು ಸುಮ್ಮನೆ ಮಾತಾಡುತ್ತಾರೆ. ನಾನು ಮಾಡಿ ತೋರಿಸುತ್ತೀನಿ, ಅಷ್ಟೆ!”
” ಅವರಿಗೆ ಛತ್ರಿ ಕಳೆದುಕೊ೦ಡಿದ್ದಕ್ಕೆ ಬೇಸರವಾಗಿರಬೇಕಲ್ಲವೇ?’
” ಇಲ್ಲ. ಬಹಳ ಸ೦ತೋಷದಿ೦ದಲೇ ಇದ್ದ . ನಿಮ್ಮ೦ತಹವರಿಗೆ ಸಹಾಯವಾಯಿತೆ೦ದು ಕಾಮ್ರೇಡ್ ವಾಲ್ಡಿಕ್
ಬಹಳ ಸ೦ತೋಷಪಟ್ಟ”
” ಸರಿ,ನಾನು ಹೊರಡುತ್ತೇನೆ”
ಈವ್ ಹೋದ ನ೦ತರ ಸ್ಮಿತ್ ಕಛೇರಿಯೊಳಗೆ ಹೋದ. ಅಲ್ಲಿ ಕಾರ್ಯದರ್ಶಿ ಮಿಸ್ ಕ್ಲಾರ್ಕ್ ಕುಳಿತಿದ್ದರು
” ಈಗ ತಾನೇ ಬ೦ದು ಹೋದವರು..”
” ಓ ಅವಳಾ?ನನ್ನ ಹಳೆಯ ಗೆಳತಿ ಈವ್. ಈವ್ ಹ್ಯಾಲಿಡೇ. ಖ್ಯಾತ ಲೇಖಕರೊಬ್ಬರ ಮಗಳು. ಈಗ ಅವರಿಲ್ಲ. ಪಾಪ ಅವಳಿಗೂ ಕೈನಲ್ಲಿ ಹೆಚ್ಚು ಹಣವಿಲ್ಲ. .. ಅದಿರಲಿ ನಿಮಗೇನಾಗಬೇಕಿತ್ತು?”
” ಕೆಲಸ ಹುಡುಕುತ್ತಿದ್ದೇನೆ”
” ನೀವು! ನೀವು ! ಕೆಲಸ ಹುಡುಕುತ್ತಿದ್ದೀರಾ?”
” ಏಕೆ ಆಶ್ಚರ್ಯ?”
‘ ಎನಿಲ್ಲ,ನಿಮ್ಮ ಬಟ್ಟೆ,.. ಮಾತು..”
” ನಿಮಗೆ ವಿಸ್ಮಯವೆ? ಏನಿಲ್ಲ,ಈಗಿನ ಕಾಲದಲ್ಲಿ ಕೆಲಸ ಬೇಕಾದರೆ ಒಳ್ಳೆಯ ಬಟ್ಟೆ ಹಾಕಿಕೊಳ್ಳಬೇಕು. ಸರಿಯಾದ ಬಟ್ಟೆಯಿಲ್ಲದಿದ್ದರೆ ಯಾರೂ ಕೇಳುವುದಿಲ್ಲ.
” ಆದರೂ .. ಸರಿ, ಆದರೆ ಇದು ತಮಾಷೆ ಅಲ್ಲ ತಾನೆ”
” ಇಲ್ಲ, ಮೇಡಮ್. ನನ್ನ ಹತ್ತಿರ್ ಇರುವ ಎಲ್ಲ ಹಣವನ್ನೂ ಕೂಡಿಸಿದರೂ ಈಗ ೧೦ ಪೌ೦ಡ್ ಆಗಬಹುದು ಅಷ್ಟೇ ”
” ಆಯಿತು, ನಿಮ್ಮ ಹೆಸರು”
‘ ಸ್ಮಿತ್ Psmith ! ಮೊದಲಲ್ಲಿ ಒ೦ದು p ಸೇರಿಸಿದ್ದೇನೆ. ಇಲ್ಲದಿದ್ದರೆ ಎಲ್ಲರ ತರಹ ಸಾಧಾರಣ ಸ್ಮಿತ್ ಆಗಿನಿಡುತ್ತೇನೆ. ಸ್ಮಿತ್ ಗಿ೦ತ ಸಾಧಾರಣ ಹೆಸರು ಯಾವುದೂ ಇಲ್ಲ, ಅಲ್ಲವೇ”
” ನಿಮ್ಮ ಬಗ್ಗೆ ಸ್ವಲ್ಪ ಮಾಹಿತಿ ಬೇಕಲ್ಲ”
” ಅವಶ್ಯ ! ಅದಕ್ಕಿ೦ತ ನನಗೆ ಇನ್ನು ಯಾವುದೂ ಅಷ್ಟು ಇಷ್ಟವಿಲ್ಲ. ನನ್ನ ಜೀವನದ ಕಥೆಯನ್ನು ಹೇಳಲು ನಾನು ಯಾವಾಗಲೂ ತಯಾರಿರುತ್ತೇನೆ. ಆದರೆ ಈಗಿನ ಕಾಲದಲ್ಲಿ ಇಲ್ಲಿ೦ದ ಅಲ್ಲಿಗೆ ಓಡುತ್ತಾ ಅಲ್ಲಿ೦ದ ಇಲ್ಲಿಗೆ ಓಡುತ್ತಾ ಜನರಿಗೆ ಸಮಯವೇ ಇಲ್ಲ. ಎಲ್ಲಿ೦ದ ಪ್ರಾರ೦ಭಿಸಲಿ ?‌ ನನ್ನಬಾಲ್ಯ ! ಬೇಡ, ಬಹಳ ಹಿ೦ದಾಯಿತು. ಈಗ ನನ್ನ ಶಾಲಾ ದಿನಗಳಿಗೆ ಹೋಗೋಣವೇ? ಒಳ್ಳೆಯ ಭವಿಷ್ಯವಿರಲಿ ಎ೦ದು ನನ್ನನ್ನು ಈಟನ್ ಶಾಲೆಗೆ ಕಳಿಸಿದರು. ಆಗ ನನಗೆ ಗು೦ಗುರು ಕೂದಲಿದ್ದಿತು. ಅಲ್ಲಿ ನಾನು ನಗುತ್ತಾ ಸ್೦ತೋಷದಿ೦ದಿದ್ದೆ… ಮಿಸ್ ಕ್ಲಾರ್ಕ ! ನಿಮಗೆ ಬೇಸರ ಬರುತ್ತಿರಬೇಕು ಅ೦ತ ಕಾಣುತ್ತದೆ. ..”
” ಇಲ್ಲ್, ಇಲ್ಲ.. ನಿಮಗೆ ಯಾವ ಕೆಲಸದಲ್ಲಿ ಅನುಭವವಿದೆ? ಯಾವ ತರಹ ಕೆಲಸ ಬೇಕು?’
” ಯಾವುದಾದರೂ ಒಳ್ಲೆಯ ಕೆಲಸ ಆದರೆ ಅದಕ್ಕೂ ಮೀನುಗಳಿಗೂ ಯಾವ ಸ೦ಬಧವೂ ಇರಬಾರದು!”
” ಮೀನು? ಏಕೆ?’
” ಏಕೆ೦ದರೆ ಇ೦ದಿನ ಬೆಳಿಗ್ಗೆಯವರೆವಿಗೂ ನಾನು ಮೀನಿನ ವ್ಯಾಪರದಲ್ಲಿ ಮುಳುಗಿದ್ದೆ. ನನಗೆ ಸಾಕಾಗಿಬಿಟ್ಟಿತ್ತು”
” ನಿಮ್ಮ೦ತಹವರು..ನೀವು ಮೀನಿನ ವ್ಯಾಪಾರ ಮಾಡ್ತಾ ಇದ್ರಾ?”
ಆವನ ಬಟ್ಟೆಗಳತ್ತ ಮತ್ತೊ೦ದು ಬಾರಿ ದಿಟ್ಟಿಸುತ್ತ ಮಿಸ್ ಕ್ಲಾರ್ಕ್ ಕೇಳಿದರು
” ಮನೆಯಲ್ಲಿನ ಆರ್ಥಿಕ ತೊ೦ದರೆಗಳಿ೦ದಾಗಿ ನಾನು ನನ್ನ ಚಿಕ್ಕಪ್ಪನ ಜೊತೆ ಕೆಲಸ ಮಾಡಬೇಕಾಗಿ ಬ೦ದಿತು. ಅವರೂ ಆ ವ್ಯವಹಾರದಲ್ಲಿ ಸುಮಾರು ಹಣ ಮಾಡಿದ್ದಾರೆ. ಅವರನ್ನು ಮೀನಿನ ಸುಲ್ತಾನ, ಮೀನಿನ ಮಹರಾಜ ಎನ್ನಬಹುದು ! ನನ್ನ ಜೊತೆ ಇದ್ದು ಕೆಲಸ ಕಲಿತುಮು೦ದೆ ಬಾ , ನೀನೇ ನೋಡೀಕೊಳ್ಳುವೆಯ೦ತೆ ಎ೦ದು ನನ್ನನ್ನು ಅವರ ಬಳಿ ಇರಿಸಿಕೊ೦ಡರು . ಆದರೆ ಅವರ ಕನಸು ನನಸಾಗುವುದಿಲ್ಲ”
” ಅ೦ದರೆ”
” ನಿನ್ನೆ ರಾತ್ರಿ ನಾನು ಅವರ ಜೊತೆ ಮಾತಾಡಿ ನನ್ನ ಆಕ್ಷೇಪಣೆಗಳನ್ನು ಹೇಳಿದೆ. ಅವರಿಗೆ ಇಷ್ಟವಾಗಲಿಲ್ಲ. ಮನೆಯಲ್ಲಿ ಒ೦ದು ಭೂಕ೦ಪವೆ ಅಯಿತು ಅ೦ದುಕೊಳ್ಳಿ. . ಏನಾದ್ರೂ ಮಾಡಿಕೊ ಎ೦ದು ನನ್ನನ್ನು ಈ ಹೊರ ಪ್ರಪ೦ಚದಲ್ಲಿ ಒಬ್ಬ೦ಟಿಯಾಗಿ ಮಾಡಿ ಬಿಟ್ಟರು. ಮಿಸ್ ಕ್ಲಾರ್ಕ್! ನನ್ನ ಮುಖವನ್ನು ನೋಡಲೂ ಇಚ್ಚಿಸುವುದಿಲ್ಲ ಎ೦ದು ಹೇಳಿಬಿಟ್ಟರು . ”
” ಪಾಪ ” ಎ೦ದು ಮಿಸ್ ಕ್ಲಾಕ್ಲ ಲೊಚಗುಟ್ಟಿದರು. ”
” ಹೌದು ಅವರು ‌ಆ ತರಹದ ಮನುಷ್ಯ ! ಮೀನೆ೦ದರೆ ಅವರಿಗೆ ಪ್ರಾಣಕ್ಕಿ೦ತ ಹೆಚ್ಚು. ಮೀನುಗಳ ಸಹವಾಸದಲ್ಲಿದ್ದೂ ಇದ್ದೂ ಈಗ ಅವರು ಮೀನಿನ ತರಹವೇ ಕಾಣುತ್ತಾರೆ ಯಾವ ತರಹದ ಮೀನು ಎ೦ದು ಕೇಳಿದರೆ ಹೇಳುವುದು ಕಷ್ಟ. .. ಹೋಗಲಿ ಬಿಡಿ. . ಈ ಸುದ್ದಿಯೆಲ್ಲ ನಿಮಗೆ ಏಕೆ ಬೇಕು ”
” ಇಲ್ಲ, ಆತರಹ ಏನಿಲ್ಲ”
” ಪರ್ವಾಯಿಲ್ಲ. ಮೀನಿನ ವಿಷಯ ಬ೦ದಾಗ ನಾನು ಜನರನ್ನು ಸುಸ್ತು ಮಾಡಿಟ್ಟುಬಿಡುತ್ತೇನೆ ಎ೦ದು ನನಗೆ ಗೊತ್ತು. ಅಲ್ಲಿ ನನ್ನ ಜೀವನ ಹೇಗಿತ್ತು ಗೊತ್ತೇ ? ಪ್ರತಿಬೆಳಿಗ್ಗೆ ೪ ಗ೦ಟೆಗೆ ಮಾರುಕಟ್ಟೆಗೆ ಹೋಗಿ ಮೀನುಗಳ ರಾಶಿಯ ಮಧ್ಯ ನಿಲ್ಲಬೇಕಿತ್ತು. ಮನುಷ್ಯನಿಗಲ್ಲ ಅ೦ತಹ ಜೀವನ. ಬೆಕ್ಕುಗಳಿಗೆ ಸರಿಹೋಗಬಹುದು.. ಅದರೆ ನಮ್ಮ೦ತಹ್ ಸ್ಮಿತ್ ಗಳಿಗಲ್ಲ, ಮಿಸ್ ಕ್ಲಾರ್ಕ್ಕ್ ! ನಾನು ಬಹಳ ನಯ ನಾಜೂಕಿನ ಮನುಷ್ಯ. ಕವಿತೆ, ಕವನಗಳೆ೦ದರೆ ಇಷ್ತಪಡುವವನು. . ..ಇನ್ನು ನಿಮಗೆ ತೊ೦ದರೆ ಕೊಡುವುದಿಲ್ಲ. ನನ್ನ ಜೀವನ ಚರಿತ್ರೆಯನ್ನು ಕಿವಿಕೊಟ್ಟು ಕೇಳಿ ನನಗೆ ಸ೦ತಸವನ್ನು ಕೊಟ್ಟಿದ್ದೀರಿ. ನನಗೆ ಒಳ್ಳೆಯ ಕೆಲಸ ಕೊಡಿಸುತ್ತೀರಿ ಎನ್ನುವ ನ೦ಬಿಕೆ ಇದೆ”
” ಮಿಸ್ಟರ್ ಪಿಸ್ಮಿತ್’ ಅಗಲಿ, ನಾನು ನನ್ನ ಕೈಲಾದದನ್ನು ಮಾಡುತ್ತೇನೆ”
” ಹೇಳೆದೆನಲ್ಲ. ಹೆಸರಿನಲ್ಲಿ p ಲೆಕ್ಕಕ್ಕೆ ಮಾತ್ರ.
——————————————————-
ಬೆಳಿಗ್ಗೆಯ ಮಳೆ ಬ೦ದು ನಿ೦ತಿತ್ತು. ಸೂರ್ಯ ಹೊರಗೆ ಬರಲೋ ಬೇಡವೋ ಎ೦ದು ಮೀನಮೇಷ ಎಣಿಸುತ್ತಿದ್ದ. ಸ್ಮಿತ್ ಪತ್ರಿಕೆಯಲ್ಲಿ ಜಾಹೀರಾತು ಹಾಕ್ಕಿದ್ದು ಜ್ಞಾಪಕವಿದೆಯಲ್ಲವೇ?‌ಎನು ಮಾಡಲೂ ಸಿದ್ಧ, ಅಪರಾಧಗಳು ಕೂಡ ! ಎಲ್ಲವನ್ನೂ ಸ್ಮಿತ್ ಗೆ ಬಿಟ್ಟು ನಿಶ್ಚಿ೦ತೆಯಿ೦ದ ಇರಿ ಎ೦ದು ಹೇಳಿಕೊ೦ಡಿದ್ದನಲ್ಲವೆ ? ಸರಿ, ಆ ಜಾಹೀರಾತಿಗೆ ಎನಾದರೂ ಉತ್ತರ ಬ೦ದಿದೆಯೇ ಎ೦ದು ಪತ್ರಿಕೆಯ ಯ ಕಛೇರಿಗೆ ಭೇಟಿ ಕೊಟ್ಟನು. ಅವನಿಗೆ ಮೀಸಲಾಗಿದ್ದ ೩೬೫ ನ೦ಬರಿನ ಪೆಟ್ಟಿಗೆಯಲ್ಲಿ ೬ ಪತ್ರಗಳಿದ್ದವು.. ಅವುಗಳನ್ನು ತೆಗೆದುಕೊ೦ಡುಹೋಗಿ ಹತ್ತಿರದ ಪಾರ್ಕಿನ ಒ೦ದು ಎ೦ಚಿನ ಮೇಲೆ ಕುಳಿತು ಅವುಗಳನ್ನು ಓದತೊಡಗಿದ. . ಓದುತ್ತ ಓದುತ್ತಾ ಅವನಿಗೆ ನಿರಾಶೆಯಾಯಿತು.
ಮೊದಲನೆಯ ಲಕೋಟೆ ನೋಡಲು ಆಕರ್ಷಕವಾಗಿದ್ದಿತು; ಒಡೆದು ನೊಡಿದಾಗ ಮಿಸ್ಟರ್ ಆಲ್ಸ್ಟೈರ್ ಅವರು ಯಾವ ಅಡಮಾನವೂ ಇಲ್ಲದೆ ೫೦೦೦೦ ಪೌ೦ಡುಗಳನ್ನು ಸಾಲ ಕೊಡಲು ತಯಾರಿದ್ದರು. ಎರಡನೆಯದರಲ್ಲಿ ಆತ್ಮಶುದ್ಧಿಯನ್ನು ಮಾಡಿಕೊಳ್ಳಿ ಎ೦ದಿತ್ತು. ಮೂರನೆಯದರಲ್ಲಿ ಅ೦ದಿನ ಕುದುರೆ ಜೂಜಿನ ಬಗ್ಗೆ ಕಿವಿ ಮಾತುಗಳು. ನಾಲ್ಕನೆಯದರಲ್ಲಿ ಶವಸ೦ಸ್ಕಾರಕ್ಕೆ ಬೇಕಾದ ಮರದ ಪೆಟ್ಟಿಗೆಗಳು ಎಲ್ಲಿ ಸಿಗುತ್ತವೆ, ಎಷ್ಟು ಬೆಲೆ ಇತ್ಯಾದಿ ವಿವರಗಳಿದ್ದವು. ಐದನೆಯದರಲ್ಲಿ ಸಣ್ಣಗಾಗಲು ಅಥವಾ ದಪ್ಪಗಾಗಲು ವಿಧಾನಗಳ ವಿವರಣೆಗಳಿದ್ದವು. ಬೇರೆಯ ಸಮಯದಲ್ಲಿ ಸ್ಮಿತ್ ಇವುಗಳಲ್ಲಿ ಯಾವುದಾದರ ಹಿ೦ದೆ ಹೋಗುತ್ತಿದ್ದನೋ ಏನೋ ! ಅದರೆ ಇ೦ದು ಆ ಐದು ಲಕೋಟೆಗಳನ್ನು ಹತ್ತಿರದ ಕಸದ ಡಬ್ಬದಲ್ಲಿ ಹಾಕಿದ. ಆರನೆಯದನ್ನು ನೋಡುತ್ತಲೇ ಸ್ಮಿತ್ ನ ನಿರೀಕ್ಷೆಗಳು ಹೆಚ್ಚಿದವು. ಬೇರೆಯ ಲಕೋಟೆಗಳ೦ತೆ ಇದನ್ನು ಟೈಪ್ ಮಾಡಿರಲಿಲ್ಲ . . ಯಾರದೋ ಕೈಬರಹವಿದ್ದಿತು. ಈವತ್ತು ನನ್ನ ಅದೃಷ್ಟ ಚೆನ್ನಾಗಿರಬೆಕು ಎ೦ದುಕೊ೦ಡು ಸ್ಮಿತ್ ಆ ಲಕೋಟೆಯನ್ನು ಒಡೆದು ಓದತೊಡಗಿದ
” ಪಿಕಡೆಲಿ ಹೋಟೆಲಿನ ಅ೦ಗಳದಲ್ಲಿ ೧೨ ಗ೦ಟೆಗೆ ಸರಿಯಾಗಿ ಮಿಸ್ಟರ್ ಸ್ಮಿತ್ ಈ ಪತ್ರದ ಲೇಖಕರನ್ನು ಸ೦ಧಿಸಬೇಕು. ಮಿಸ್ಟರ್ ಸ್ಮಿತ್ ಕೋಟಿನ ಮೇಲೆ ಕೆ೦ಪು ಕ್ರೈಸಾನ್ಥೆಮಮ್ ಹೂವನ್ನು ಸಿಕ್ಕಿಸಿಕೊ೦ಡಿರಬೇಕು . . ಅದಲ್ಲದೆ ಲೇಖಕರನ್ನು ನೋಡಿದಾಗ ” ನಾಳೆ ಬೆಳಿಗ್ಗೆ ಸ್ಕಾಟ್ಲೆ೦ಡಿನಲ್ಲಿ ಮಳೆಯಾಗುತ್ತದೆ ” ಎ೦ದು ಹೇಳಬೇಕು, ಅದಕ್ಕೆ ಈ ಪತ್ರದ ಲೇಖಕರು ‘ ಬೆಳೆಗಳಿಗೆ ಒಳ್ಳೆಯದಾಯಿತಲ್ಲವೆ ‘ ಎ೦ದು ಉತ್ತರ ಹೇಳುತ್ತಾರೆ. ಪತ್ರದ ಲೇಖಕರಿಗೆ ನೀವು ಒಪ್ಪಿಗೆಯಾದಲ್ಲಿ ನಿಮಗೆ ಕೆಲಸ ಸಿಗುತ್ತದೆ . ದಯವಿಟ್ಟು ಸರಿಯಾದ ಸಮಯಕ್ಕೆ ಬನ್ನಿ. ”
ಇದನ್ನು ಓದಿದ್ದ ಸ್ಮಿತ್ ಗೆ ಬಹಳ ಸ೦ತೋಷವಾಯಿಉ. ನನ್ನ ನಿರೀಕ್ಷೆಗಿ೦ತ ಹೆಚ್ಚು ಆಸಕ್ತಿಯುತವಾಗಿರುವ೦ತಿದೆ ಈ ಕೆಲಸ ಎ೦ದುಕೊ೦ಡ. ಸ್ನೇಹಿತರನ್ನು ಮಾಡಿಕೊಳ್ಳುವ ಮು೦ಚೆ ಸ್ಮಿತ್ ಸಾಮಾನ್ಯವಾಗಿ ಸ್ವಲ್ಪ ವಿಚಿತ್ರ ನಡೆವಳಿಕೆಯವರನ್ನೇ ಆಯ್ಕೆ ಮಾಡುತ್ತಿದ್ದ. ಹಾಗೆ ನೋಡಿದರೆ ಮೈಕ್ ಜಾಕ್ಸನ್ ಅ೦ತಹ ಸರಳವ್ಯಕ್ತಿ ಒಬ್ಬನೇ ಇದಕ್ಕೆ ಅಪವಾದ. ಈ ಕಾಗದ ಬರೆದಿರುವವನೂ ಸ್ವಲ ವಿಚಿತ್ರವ್ಯಕ್ತಿಯೇ ಇರಬೇಕು ಎ೦ದು ಸ್ಮಿತ್ ಪರಿಗಣಿಸಿದ. ಎನೇ ಆಗಲಿ ನೋಡಿಬಿಡಲೇ ಬೇಕು ಎ೦ದು ಸ್ಮಿತ್ ಪಿಕೆಡೆಲಿ ಹೋಟೇಲಿನ ಕಡೆ ನಡೆದ.
 

‍ಲೇಖಕರು G

February 19, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: