ಡೈಲಿ ಬುಕ್ : ನವೀನ್ ಮಧುಗಿರಿ ಬರೆದ ’ನವಿಗವನ’

ನವೀನ್ ಮಧುಗಿರಿ

ಹೆಸರಿಲ್ಲದ ಒಂದಷ್ಟು ಹನಿಗವಿತೆ ಮತ್ತು ಹಲವು ಹನಿಗಳಿರುವ ಈ ಪುಸ್ತಕವು ಕರ್ನಾಟಕ ಸರ್ಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಇವರಿಂದ ಯುವ ಬರಹಗಾರರ ಚೊಚ್ಚಲ ಕೃತಿ ಪ್ರಕಟಣೆಗಾಗಿ ಪ್ರೋತ್ಸಾಹಧನ ವನ್ನು ಪಡೆದಿದೆ.

ಪುಟಗಳು: 74
ಬೆಲೆ: 60 ರೂಪಾಯಿಗಳು
ಮುಖಪುಟ ಮತ್ತು ರೇಖಾಚಿತ್ರಗಳು: ಗುರುನಾಥ್ ಬೋರಗಿ

***

ಮುನ್ನುಡಿ
‘ನವಿಗವನ’ – ನವೀನ್ ಅವರ ‘ಹನಿಗವನ’ ಗಳ ಸಂಕಲನ. ಇದು ಅವರ ಮೊದಲ ಕೃತಿ. ಮುಕ್ತಕಗಳ ರೂಪದಲ್ಲಿ , ಹಾಯಿಕುಗಳನ್ನು ನೆನಪಿಗೆ ತಂದು ಕೊಡುವ ಇಂಥ ಹನಿಗವಿತೆಗಳು ಹೊಸಗನ್ನಡ ಕಾವ್ಯದ ಇತಿಹಾಸ ಬರೆಯುವಂಥವರಿಗೆ ನೆರವಾಗುತ್ತದೆ. ಹೊರ ಜಗತ್ತು ಬಿಂಬಿತಗೊಳ್ಳುತ್ತಿರುವ ರೀತಿ ಮತ್ತು ಅಂತಃಕರಣ ಮಿಡಿದಿದ್ದನ್ನು ಪ್ರೇರಣೆಯಾಗಿಸಿ ಕೊಂಡು ಜನ್ಮ ತಳೆದಿರುವ ಈ ಜೇನಹನಿಗಳು ಸ್ವಾದವಾದವು , ಆರೋಗ್ಯಕರವಾದವು , ಅಚ್ಚರಿ ಮೂಡಿಸುವಂಥವು.
ಸಗಣಿ, ಗಂಜಳ, ಗೊಬ್ಬರದ ನಡುವೆ ಬದುಕನ್ನು ಕಟ್ಟಿಕೊಳ್ಳುತ್ತಿರುವ ಅಪ್ಪಟ ಗ್ರಾಮೀಣ ಪ್ರತಿಭೆಯಾದ ಯುವ ಕವಿಯ ಸಂವೇದನೆ, ಕಾವ್ಯದ ತುಣುಕುಗಳಲ್ಲಿ ವ್ಯಕ್ತವಾಗಿದೆ. ಈ ಹನಿಗವನಗಳು ಚುರುಕಾದ ಭಾಷೆ, ಶಬ್ದ ಚಮತ್ಕಾರದಿಂದ ಥಟ್ಟನೆ ಓದುಗರನ್ನು ಆಕರ್ಷಿಸಬಲ್ಲವು. ಕಚಗುಳಿ ಕೊಡುವಂಥವು, ಮನಸ್ಸಿಗೆ ಮುದ ನೀಡಬಲ್ಲವು. ಹಾಗೆ ಗಮನಿಸಿದರೆ ಯಾವುದಾದರೊಂದು ವಿಚಾರವನ್ನೋ, ಸಣ್ಣ ಸಂಗತಿಯನ್ನೋ, ಭಾವವನ್ನೋ ‘ಕಿರಿದರೊಳೆ ಪಿರಿದರ್ಥಮಂ’ ತುಂಬಿ ಕೊಡುವಂಥವು. ಇದು ಹನಿಗವಿತೆಗಳ ಲಕ್ಷಣವಾಗಿರುತ್ತದೆ.
ಕಣ್ಣ ನೋಟದಲ್ಲೇ ಕ್ಷಣಾರ್ಧದಲ್ಲಿ ಓದಬಲ್ಲವುಗಳಾಗಿದ್ದು , ಓದಿನ ಅಭಿರುಚಿಯನ್ನು ಪೋಷಿಸುವ ದೃಷ್ಟಿಯಿಂದಲೂ ಇಂಥ ಹನಿಗವನಗಳು ಅವಶ್ಯವಾದವು. ಕನ್ನಡ ನಿಯತಕಾಲಿಕೆಗಳಲ್ಲಿ ಇಣುಕು ಹಾಕುವ ಇವನ್ನು ಪತ್ರಿಕೆಯವರು ಪೋಷಿಸಿಕೊಂಡು ಬರುತ್ತಿದ್ದಾರೆ. ಹಿರಿಯರಾದ ವೈಎನ್ಕೆ , ಡುಂಡಿರಾಜ್, ಸಿ . ಪಿ . ಕೆ, ಲಕ್ಷ್ಮಣರಾವ್ ಮುಂತಾದವರು ಈ ನಿಟ್ಟಿನಲ್ಲಿ ಗಮನಾರ್ಹರು.
ಈ ಸಂಕಲನದ ಹನಿಗವಿತೆಗಳಲ್ಲಿ ಇಂಥದೇ ವಸ್ತು ಎಂಬ ಮಿತಿಯಿಲ್ಲದಿರುವುದು ಕಂಡು ಬರುತ್ತದೆ. ಪ್ರೀತಿ, ಪ್ರೇಮ, ವಿರಸ, ವಾತ್ಸಲ್ಯ, ಆಪ್ತತೆ, ಕರುಳ ಸಂಬಂಧ, ಸಾಮಾಜಿಕ, ರಾಜಕೀಯ ಹೀಗೆ ಹತ್ತಾರು ವಸ್ತುಗಳು ಈ ಕಿರು ಕವಿತೆಗಳಲ್ಲಿ ಹಾಸುಹೊಕ್ಕಾಗಿ ಬೆರೆತಿವೆ. ಇವು ಆ ಕ್ಷಣದಲ್ಲಿ ಸುಳಿದ, ಹೊಳೆದ ವಸ್ತುಗಳು, ಭಾವಗಳು.
ಇಲ್ಲಿನ ಹನಿಗವನಗಳ ಉದ್ದೇಶ ಮಹತ್ತರವಾದುದನ್ನು ಹೇಳುವಂಥದಲ್ಲ. ಆದರೂ ತಮಗೆ ಸುಳಿ ಮಿಂಚಿನಂತೆ ಕಂಡದ್ದನ್ನು ಹೇಳಬಲ್ಲ ಮುಕ್ತ ಅವಕಾಶ ಕವಿಗಿರುತ್ತದೆ. ಆದ್ದರಿಂದಲೇ ಕಾವ್ಯ ಪರಿಕರವಾದ ಭಾಷೆ, ಲಯ, ಪ್ರತಿಮೆ, ರೂಪಕ, ಸಂಕೇತಗಳ ಚಿತ್ರಣವನ್ನೂ , ಆ ಕ್ಷಣದಲ್ಲಿ ತಲ್ಲಣವನ್ನುಂಟು ಮಾಡಬಲ್ಲ ಲಕ್ಷಣಗಳನ್ನು ಈ ಸಂಕಲನದ ಕೆಲವು ಕವಿತೆಗಳಾದರೂ ಹೊಂದಿವೆಯೆಂಬ ಕಾರಣದಿಂದ ಮೆಚ್ಚಬಹುದಾಗಿದೆ.
ಸವಿಯಲು ಕೆಲವನ್ನು ಗಮನಿಸಿ.
ನಮ್ಮೆಲ್ಲರ ತಾಯನ್ನು ನೆನಪಿಗೆ ತರುವ —
ಅಪ್ಪ ಕೊಡಿಸಿದ
ಐಸ್‌ಕ್ಯಾಂಡಿ
ಹತ್ತು ನಿಮಿಷಕ್ಕೆ ಖಾಲಿ
ಹಣೆಯ ಮೇಲಿನ
ಅಮ್ಮನ ಮುತ್ತು
ಇನ್ನೂ ಹಾಗೇ ಇದೆ.
_
 
ಅವ್ವ
ತನ್ನ ಕಷ್ಟ ಕಣ್ಣೀರುಗಳನ್ನೆಲ್ಲ
ಬಚ್ಚಿಟ್ಟು
ಬರಿ ನಗುವನ್ನಷ್ಟೇ
ನಮಗೆ ಉಣ ಬಡಿಸಿದಳು
 
ಮಾನವೀಯತೆಯನು ಮೆರೆಯುವ —
ನಾವು ತಿನ್ನುವ
ಅನ್ನದಗುಳು
ನಿನ್ನ ಜಾತಿ ಧರ್ಮಗಳು
ಯಾವುದೆಂದು
ನಮ್ಮನೆಂದು ಕೇಳುವುದಿಲ್ಲ
_
ಅಕ್ಷರದಿಂದ ದೇಶವನ್ನು
ಬದಲಿಸಬಹುದು
ನಿಜಾ
ಆದರೆ ಹಸಿವಿಗೆ
ಅನ್ನವೇಬೇಕು.
 
ಇಂಥ ನೂರಾರು ಹನಿಗವನಗಳು ಪುಸ್ತಕದಲ್ಲಿವೆ. ಓದಿ ಸವಿಯಿರಿ. ಇವುಗಳಿಗೆ ವಿವರಣೆ ನೀಡಿ ಕಾವ್ಯದ ಸತ್ವವನ್ನು ಕುಂದಿಸಲಾರೆ. ಕವಿಯಾಗಿ ನವೀನ ಅವರು ಹೆಚ್ಚು ಹೆಚ್ಚು ಬರೆಯಲಿ, ಬೆಳೆಯಲಿ.
‘ನಡೆದಷ್ಟೂ ದಾರಿಯಿದೆ. ಪಡೆದಷ್ಟೂ ಭಾಗ್ಯವಿದೆ.’
ಪ್ರೊ. ಮ.ಲ.ನ. ಮೂರ್ತಿ
ಹಿರಿಯ ಸಾಹಿತಿಗಳು ಮತ್ತುಚಿಂತಕರು
***
ಕೃತಿಯಲ್ಲಿನ ಕೆಲವು ಹನಿಗವಿತೆಗಳು
ಬಂದವರಿಗೆಲ್ಲ
ಸೆರಗ ಹಾಸುವ
ವೇಶ್ಯೆಯ
ಸೀರೆಯ ಮೇಲೆ
ಹೂವಿನ ಚಿತ್ರಗಳು

ಜೋಗಯ್ಯನ ಜೋಳಿಗೆ
ಬಲು ಭಾರ
ಒಳಗಿರುವುದು
ಹಲವು ಕೈಗಳ ಶ್ರಮ

ಜಗತ್ತಿನ
ಯಾವ ಸೂಲಗಿತ್ತಿಯರಿಗೂ
ಗೊತ್ತಿಲ್ಲ
ಪ್ರೀತಿ ಹುಟ್ಟಿದ್ದು
ಯಾವಾಗೆಂದು

ಪ್ರತೀಸಂಜೆ ಕೆಲಸದಿಂದ
ಮನೆಗೆ ಹಿಂತಿರುಗುವ
ಅಪ್ಪನ ಕೈಗಳಲ್ಲಿ
ತಿಂಡಿ ಪೊಟ್ಟಣದ ಜೊತೆ
ಬೊಬ್ಬೆಗಳು

ಪುಟ್ಟ ಮಗುವಿನ
ಮೊದಲ ಅಳುವಿನ
ಜೊತೆಗೆ
ಕಾರಿಡಾರಿನಲ್ಲೊಬ್ಬ
ಅಪ್ಪನ ಜನನ

ಕಾಗೆಯ ಗೂಡಿನಿಂದ
ಹೊರಬಂದ ಕೋಗಿಲೆಯು
ಹಸಿರೆಲೆಗಳ ನಡುವೆ
ತನ್ನಮ್ಮನ ನೆನೆದು
ಅತ್ತು , ಕರೆದು, ಬಿಕ್ಕುವಾಗ
ನಾವಂದುಕೊಂಡೆವು
ಆಹಾ ಎಷ್ಟು ಕಿವಿಗಿಂಪು
ಕೋಗಿಲೆಯ ಕುಹೂ ಕುಹೂ

ಹತ್ತೂರು ಸುತ್ತಿಬಂದ
ತಂಗಾಳಿಯು
ಆ ಹೂವಿನ ಸುತ್ತಲೇ
ತಿರುಗುವಾಗ
ಪರಿಮಳವು
ಬೆರಳಿಡಿದು ಬೇಡಿತು;
‘ನನ್ನ ಕೊನೆಯುಸಿರು
ಲೀನವಾಗಲಿ ನಿನ್ನೊಂದಿಗೆ’

ವಸುಂಧರೆಯ
ಚೆಲುವ ಮೋಹಿಸಿದ
ಚಂದಿರ
ಬೆಳದಿಂಗಳ ಸ್ಖಲಿಸಿಕೊಂಡ

ಮಳೆಬಿಲ್ಲು ಮೂಡಿದ ದಿನ
ಮುಗಿಲಿಗೂ ಸಹ
ಹೋಳಿ ಹಬ್ಬ!

ಬಣ್ಣ ಮಾಸಿದ
ಗೋಡೆಯ ಮೇಲೆ
ಬಡತನದ ಚಿತ್ರ

ಮಾಲೆ ಕಟ್ಟುವ ಕೈಗಳಿಗೆ
ಸಾವಿರ ಹೂಗಳ
ಸಾವಿನ ಸೂತಕ

ಅಪ್ಪ ಗೇಯ್ಮೆ ಮಾಡಿದ
ಹೊಲದಲ್ಲಿ
ಅವ್ವ
ಜೋಳದ ಜೊತೆ
ಬಿತ್ತುವಳು
ತನ್ನ ಕನಸುಗಳ

ಅಡುಗೆಯಲ್ಲಿ ಖಾರ
ಹೆಚ್ಚಾದ ಕಾರಣ
ಹೆಂಗಸಿನ ಕೈಯಳತೆಯಲ್ಲ
ಗಂಡ ಕೊಡಿಸದ ಆಭರಣ!

ನಿದ್ರಿಸುತಿದ್ದ
ತರಗೆಲೆಯ
ಬಡಿದೆಬ್ಬಿಸಿತು
ಬಿರುಗಾಳಿ

ನೋಡು ರಾಧೇ,
ಈ ಭೂಮಿಯ ಮೇಲೆ ಬರೀ
ಸುಳ್ಳು, ಮೋಸ, ವಂಚನೆಗಳೆ
ಚಲಾವಣೆಯಲ್ಲಿವೆ.
ಇಲ್ಲಿ ಬದುಕಲು ಹಣ ಬೇಕಂತೆ
ಎಲ್ಲವು ಶುದ್ಧ ಸುಳ್ಳು..

 

‍ಲೇಖಕರು G

February 19, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಅಕ್ಕಿಮಂಗಲ ಮಂಜುನಾಥ

    ಸೂಪರ್ ಚುಟುಕುಗಳು. ನಮಸ್ಕಾರ ಮದುಗಿರಿ.

    ಪ್ರತಿಕ್ರಿಯೆ
  2. santhoshkumar LM

    ನವೀನರ ಚುಟುಕುಗಳನ್ನು ಕಳೆದೆರಡು ವರ್ಷಗಳಿಂದಲೂ ಓದಿಕೊಂಡೇ ಬಂದವನು ನಾನು. ಅವರ ಪ್ರತೀ ಸಾಲುಗಳನ್ನು ಓದುವಾಗಲೂ ಹೊಸತೇನನ್ನೋ ಓದಿದ ಅನುಭವವಾಗುತ್ತದೆ. ಅವರ ಈ ಸಂಕಲನ ಬಿಡುಗಡೆಯಾಗಿರುವುದು ಖುಶಿಯ ವಿಚಾರ. All the best..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: