ಪಾರ್ವತಿ ಜಿ ಐತಾಳ್ ಓದಿದ ‘ಹಂಸಯಾನ’

ಪಾರ್ವತಿ ಜಿ ಐತಾಳ್

ವಿಶಿಷ್ಟ ಕಥಾವಸ್ತುವನ್ನೊಳಗೊಂಡ ತೇಜಸ್ವಿನಿ ಹೆಗಡೆಯವರ ಕಾದಂಬರಿ ‘ಹಂಸಯಾನ’ ತನ್ನ ಡಿಟೆಕ್ಟಿವ್ ಶೈಲಿಯಿಂದ ಹೆಜ್ಜೆ ಹೆಜ್ಜೆಗೂ ಕುತೂಹಲ ಹೆಚ್ಚಿಸುತ್ತ ಥ್ರಿಲ್ಲರ್ ನಂತೆ ಓದಿಸಿಕೊಂಡು ಹೋಗುತ್ತದೆ. ದುಡ್ಡಿನ ದುರಾಸೆಯ ಹಿಂದೆ ಓಡುವ ಭರದಲ್ಲಿ ದಾರಿಗಡ್ಡ ಬಂದವರನ್ನು ದೂಡಿ ಬದಿಗೆ ತಳ್ಳುವ ದುಷ್ಟರ ಧಂದೆಯನ್ನು ಬೆಳಕಿಗೆ ತರುವ ಪ್ರಯತ್ನ ಈ ಕಾದಂಬರಿಯಲ್ಲಿದೆ. ದುಷ್ಟರಿಂದ ನಾಶಕ್ಕೊಳಗಾಗುವ ಪ್ರಕೃತಿಯ ಬಗೆಗಿನ ಕಾಳಜಿಯೂ ಇದೆ. ಮುಗ್ಧ ಜನರಿಗಾಗುವ ಅನ್ಯಾಯದ ವಿರುದ್ಧ ಆಕ್ರೋಶವೂ ಇದೆ.

ಕಥನದ ನಿರೂಪಣೆಯು ಮುಖ್ಯ ಪಾತ್ರವಾದ ಮಹತಿಯ ದೃಷ್ಟಿಯಿಂದ ಹೆಣೆಯಲ್ಪಟ್ಟಿದೆ. ಅಪ್ಪ ಅಮ್ಮ ಇಬ್ಬರನ್ನೂ ಆಕಸ್ಮಿಕವಾಗಿ ಕಳೆದುಕೊಂಡು ಅನಾಥಳಾಗಿ ಅಪ್ಪನ ಮಿತ್ರರಾದ ಡಾಕ್ಟರ್ ವಿನೋದರ ಆಶ್ರಯದಲ್ಲಿ ಬೆಳೆದು ಸೋಶಿಯಲ್ ವರ್ಕ್ ಸ್ನಾತಕೋತ್ತರ ಪಡೆಯುವ ಮಹತಿ ತನ್ನ ಅಮ್ಮನ ನಿಗೂಢ ಸಾವು ಸಂಭವಿಸಿದ ‘ಸಸ್ಯವನ’ದ ‘ಹಂಸಕುಟೀರ’ಕ್ಕೆ ಹೋಗುವ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಾಳೆ. ಯಾರಿಗೂ ಸುಲಭದಲ್ಲಿ ಸಿಗದ ಅಲ್ಲಿ ಹೋಗಿ ಉಳಿದುಕೊಳ್ಳುವ ಅವಕಾಶ ಅವಳಿಗೆ ಡಾ.ವಿನೋಧರ ಸ್ನೇಹಿತ ಧನಂಜಯ ರಾಯ್ಕರ್ ಮೂಲಕ ಸಿಗುತ್ತದೆ. ಹಾಗೆ ಸಸ್ಯವನಕ್ಕೆ ಹೋದ ನಂತರ ಮಹತಿ ಮಾಡುವ ಮಹತ್ಕಾರ್ಯಗಳು ಕೃತಿಯ ಕೊನೆಯ ವರೆಗೂ ಮುಂದುವರಿಯುತ್ತವೆ.

ಹೆಜ್ಜೆಹೆಜ್ಜೆಗೂ ಅನುಮಾನಿಸುತ್ತ, ತನ್ನಲ್ಲೇ ಪ್ರಶ್ನೆ ಕೇಳುತ್ತ ಗಹನ ಚಿಂತನೆ ಮಾಡುತ್ತ ಹೋಗುವ ಅವಳಿಗೆ ಸಸ್ಯವನವಾಗಲಿ ಹಂಸಕುಟೀರವಾಗಲಿ ಹೊರನೋಟಕ್ಕೆ ಕಾಣುವಂತೆ ಆಧ್ಯಾತ್ಮಿಕ ತಾಣವಲ್ಲ, ಬದಲಾಗಿ ಸರಕಾರದ ಕಣ್ಣು ತಪ್ಪಿಸಿ ವಜ್ರದ ಕಾಳಧಂದೆಯ ತಾಣವೆಂದು ಅವಳಿಗಿಂತ ಮೊದಲೇ ಅಲ್ಲಿಗೆ ಪತ್ತೇದಾರಿಕೆ ಮಾಡಲೆಂದು ಬಂದ ನಚಿಕೇತನ ಸಹಾಯದಿಂದ ಅವಳ ಅರಿವಿಗೆ ಬರುವಲ್ಲಿಗೆ ಕಥನ ಕೊನೆಗೊಳ್ಳುತ್ತದೆ. ಮಹಿಳೆಯರಿಂದ ಈ ರೀತಿಯ ಥ್ರಿಲ್ಲರ್ ಕಾದಂಬರಿಗಳು ಇದುವರೆಗೆ ಬಂದಿಲ್ಲವೆಂದೇ ಹೇಳಬೇಕು.

ಕಥನದುದ್ದಕ್ಕೂ ಸಾಗುವ ಪ್ರಕೃತಿಯ ಸೊಬಗಿನ ವರ್ಣನೆ ಚೇತೋಹಾರಿಯಾಗಿದೆ. ಮಹತಿಯ ಆಲೋಚನೆಗಳಲ್ಲಿ ಬರುವ ಮನುಷ್ಯನ ಜೀವನದ ಕುರಿತಾದ ತಾತ್ವಿಕ ಹಾಗೂ ಸಾಂಸ್ಕ್ರತಿಕ ಚಿಂತನೆಗಳು , ಹಿರಿಯ ಸಾಹಿತಿಗಳ ಉಲ್ಲೇಖಗಳು ಕಥನಕ್ಕೆ ಜೀವಂತಿಕೆಯನ್ನು ತುಂಬುತ್ತವೆ. ಮಹತಿ ಅಪಾಯದಲ್ಲಿ ಸಿಕ್ಕಿ ಬಿದ್ದಾಗ ಕಾಪಾಡುವ ಕಾಡಿನ ವಾಸಿಗಳಾದ ಕಾಳವ್ವ ಮತ್ತು ಬೆಟ್ಟದಜ್ಜರು ಕಾದಂಬರಿಗೊಂದು ಆಧ್ಯಾತ್ಮಿಕ ತಿರುವನ್ನು ಕೊಡುವುದು ಲೌಕಿಕದ ಲಾಲಸೆಯನ್ನು ಬಿಡಲಾಗದ ಧಂದೆಕೋರರ ಮೂರ್ಖತನವನ್ನು ಎತ್ತಿ ಹಿಡಿಯುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಯಾವುದೇ ರೀತಿಯ ಕಾವಿ-ರುದ್ರಾಕ್ಷಿಗಳ ಪೋಸು ಇಲ್ಲದೆ ಆತ್ಮ, ಅಧ್ಯಾತ್ಮ, ಪ್ರಕೃತಿಯ ಶಕ್ತಿ, ಹಾಗೂ ಜೀವನ ತತ್ವಗಳ ಬಗ್ಗೆ ಅಪಾರವಾಗಿ ತಿಳಿದುಕೊಂಡವನು ಮಹತಿ ಕಾಡಿನಲ್ಲಿ ಭೇಟಿಯಾಗುವ ಬೆಟ್ಟದಜ್ಜ. ನಿಸ್ವಾರ್ಥಿಯಾಗಿ ಲೋಕ ಕಲ್ಯಾಣಕ್ಕೋಸ್ಕರ ಪ್ರಾರ್ಥಿಸುವ ಬೆಟ್ಟದಜ್ಜನ ಅಧ್ಯಾತ್ಮದ ಜ್ಞಾನ ಅತ್ಯದ್ಭುತ.

ಮನುಷ್ಯನ ಬದುಕಿನ ಬಗ್ಗೆ, ಯಾವುದೇ ತಪ್ಪು ಮಾಡದವರ ಮೇಲೂ ಬೆಟ್ಟದಂಥ ಕಷ್ಟಗಳು ಎರಗುವ ಬಗ್ಗೆ, ಕರ್ಮ ಫಲದ ಬಗ್ಗೆ, ಹಂಸದ ಆಧ್ಯಾತ್ಮಿಕ ಮಹತ್ವದ ಬಗ್ಗೆ, ಹಂಸ ಪದದ ಅಕ್ಷರ ಮೂಲವಾದ ಸೋಹಂ ಬಗ್ಗೆ, ಹಂಸಧ್ಯಾನದ ಮೂಲಕ ಸಾಮಾನ್ಯ ಮನುಷ್ಯನೂ ಹೇಗೆ ಪರಮಹಂಸನಾಗಬಲ್ಲ ಎಂಬುದರ ಬಗ್ಗೆ ಬೆಟ್ಟದಜ್ಜ ಮಹತಿಗೆ ಹೇಳುವ ಮಾತುಗಳು ಕಾದಂಬರಿಗಾರ್ತಿಯ ಅಧ್ಯಾತ್ಮ ಚಿಂತನೆಯ ವೈಖರಿಗೆ ಸಾಕ್ಷಿಯಾಗಿವೆ. ಆದ್ದರಿಂದ ಕಾದಂಬರಿ ಒಂದಷ್ಟು ಡಿಟೆಕ್ಟಿವ್ ಧಾಟಿಯಲ್ಲಿ ಸಾಗಿದರೂ ಮನುಷ್ಯನಿಗೆ ತಾನಾಗಿ ಒದಗುವ ಕಷ್ಟಗಳನ್ನಾಗಲಿ, ಇತರರು ಮಾಡುವ ಅನ್ಯಾಯಗಳನ್ನಾಗಲಿ ಹೇಗೆ ಎದುರಿಸಬೇಕು ಎಂಬ ಅದರ ಆಧ್ಯಾತ್ಮಿಕ ಸಂದೇಶವು ಹೃದ್ಯವಾಗಿದೆ. ಉದ್ದಕ್ಕೂ ಆಸಕ್ತಿಕರವಾದ ವಿವರಗಳಿಂದ ಬೆರಗು ಹುಟ್ಟಿಸುವ ರೀತಿಯಲ್ಲಿ ಓದಿಸಿಕೊಂಡು ಹೋಗುವ ಕಾದಂಬರಿ ಕೊನೆಯಲ್ಲಿ ತುಸು ಅವಸರ ಪಟ್ಟಂತೆ ಕಾಣುತ್ತದೆ ಎಂಬುದನ್ನು ಬಿಟ್ಟರೆ ಬಹಳ ಖುಷಿಯಿಂದ ಸವಿಯ ಬಹುದಾದಂತಹ ಕಾದಂಬರಿ ‘ ಹಂಸಯಾನ’.

‍ಲೇಖಕರು Admin

November 18, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: