ಪಾರ್ವತಿ ಜಿ. ಐತಾಳ್ ಓದಿದ  ‘ಉಮಾಕೇರಳಂ’

ಪಾರ್ವತಿ ಜಿ. ಐತಾಳ್

ವೈವಿಧ್ಯಮಯವಾಗಿ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿ ಶತ-ಶತಮಾನಗಳನ್ನು ದಾಟಿ ಬಂದ ಶ್ರೀಮಂತ ಭಾಷೆ ಮಲೆಯಾಳ. ಕುಮಾರನ್ ಆಶಾನ್, ಉಳ್ಳೂರು ಎಸ್. ಪರಮೇಶ್ವರ ಅಯ್ಯರ್ ಮತ್ತು ವಲ್ಲತ್ತೋಳ್ ನಾರಾಯಣ ಮೆನೋನ್ ಆಧುನಿಕ ಮಲೆಯಾಳದ ಮಹಾಕವಿಗಳು. ಅವರನ್ನು ಆಧುನಿಕ ಕವಿತ್ರಯರು ಎಂದು  ಗುರುತಿಸಲಾಗುತ್ತದೆ.

ಈ  ಕವಿತ್ರಯರು ಮಲೆಯಾಳದಲ್ಲಿ ಒಂದು ಸಾಹಿತ್ಯ ಚಳುವಳಿಯನ್ನೇ ಹುಟ್ಟುಹಾಕಿದರು. ಅದು ೧೯ನೇ ಶತಮಾನದ ಅಂತ್ಯ ಮತ್ತು ೨೦ನೇ ಶತಮಾನದ ಆರಂಭದ ಕಾಲ. ಕೇರಳದಲ್ಲಿ  ಮಲೆಯಾಳ ಸಾಹಿತ್ಯವು ಬ್ರಿಟಿಷ್ ವಸಾಹತುಶಾಹಿ, ರಾಷ್ಟ್ರೀಯ ಚಳುವಳಿ,  ನವೋದಯ ಮತ್ತು ಸುಧಾರಣಾವಾದಿ ಚಳುವಳಿಗಳಿಂದ ಪ್ರಭಾವಿತವಾಗಿತ್ತು. ಈ ಕವಿತ್ರಯರು  ಅಭಿಜಾತ ಮಲೆಯಾಳ ಕಾವ್ಯದ ಸಾಂಪ್ರದಾಯಿಕ ವಸ್ತು ಮತ್ತು ಸ್ವರೂಪಗಳಿಂದ ಹೊರ ಬಂದು  ಹೊಸ ಶೈಲಿ, ಪ್ರಕಾರ, ಛಂದಸ್ಸು, ಹಾಗೂ ಅಭಿವ್ಯಕ್ತಿ ಗಳೊಂದಿಗೆ ಪ್ರಯೋಗ ನಡೆಸಿದರು. ಅನುವಾದ ಮತ್ತು ರೂಪಾಂತರಗಳ ಮೂಲಕ ಮಲೆಯಾಳ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು.

ಉಳ್ಳೂರರು (೧೮೭೭-೧೯೪೯) ಮಹಾನ್ ಪಾಂಡಿತ್ಯವುಳ್ಳ ಓರ್ವ ಕವಿಗಳಾಗಿದ್ದರು. ಅವರು ತಮ್ಮ ಕಾವ್ಯದಲ್ಲಿ ಸಂಪ್ರದಾಯ ಮತ್ತು ಆಧುನಿಕತೆಗಳನ್ನು ಸಮ್ಮಿಶ್ರಗೊಳಿಸಿದರು. ಅವರು ಸಂಸ್ಕೃತಿ, ಇಂಗ್ಲಿಷ್ ಮತ್ತು ತಮಿಳು ಸಾಹಿತ್ಯಗಳ ಬಗ್ಗೆ ಉತ್ತಮ ಜ್ಞಾನ ಹೊಂದಿದ್ದು ಅವುಗಳಿಂದ ಸ್ಫೂರ್ತಿ ಪಡೆದರು.  ಐತಿಹಾಸಿಕ, ಸಾಂಸ್ಕೃತಿಕ ಮತ್ತು ಸೌಂದರ್ಯ ಶಾಸ್ತ್ರಗಳ ಕುರಿತಾದ ವಸ್ತುಗಳ ಮೇಲೆ ಕಾವ್ಯ ರಚನೆ ಮಾಡಿದರು. ಉಮಾಕೇರಳಂ (ಕೇರಳದ ಕೀರ್ತಿ), ಕರ್ಣಭೂಷಣ (ಕರ್ಣನ ಆಭರಣ), ಪಿಂಗಳ (ಆಸ್ಥಾನ ನರ್ತಕಿ) ಭಕ್ತದೀಪಿಕಾ, ಮತ್ತು ಚಿತ್ರಶಾಲ ಇವರ ಪ್ರಮುಖ ಕೃತಿಗಳು.

‘ ಉಮಾಕೇರಳಂ’ ತಿರುವಿದಾಂಕೂರಿನ ಇತಿಹಾಸದ ಘಟನೆಗಳನ್ನು ಆಧರಿಸಿದ ಕಥೆ. ೧೯ ಸರ್ಗಗಳು (ಸಂಧಿಗಳು) ಮತ್ತು ೨೦೨೨ ಪದ್ಯಗಳಿರುವ  ಈ ಮಹಾಕಾವ್ಯವು ೧೯೧೩ರಲ್ಲಿ ಪ್ರಕಟಗೊಂಡಿತು.  ಮಲೆಯಾಳದ ಅತ್ಯುತ್ತಮ ಮಹಾಕಾವ್ಯವೆಂಬ ಪ್ರಸಿದ್ಧಿ ಇದಕ್ಕಿದೆ.   

ವಂಜಿನಾಡಿನ (ತಿರುವಿದಾಂಕೂರು)  ರಾಜ ಆದಿತ್ಯವರ್ಮ.  ಎಲ್ಲಾ ಉತ್ತಮ ಗುಣಗಳಿರುವ ಆತನಲ್ಲಿರುವ ಒಂದೇ ಒಂದು ದೋಷವೆಂದರೆ ಆತನದ್ದು ಹಿತ್ತಾಳೆ ಕಿವಿ. ಆತನಿಗೆ ರವಿವರ್ಮ ತಂಬಾನ್ ಎಂಬ ಬಹಳ ಒಳ್ಳೆಯ ಮಂತ್ರಿಯಿದ್ದ. ರಾಜನಿಗೆ ಬೇಕು ಬೇಕಾದ ಸಲಹೆ ಸೂಚನೆಗಳನ್ನು ಕೊಡುತ್ತಾ  ಬರುತ್ತಿದ್ದ. ರಾಜ್ಯದಲ್ಲಿ ಸುಭಿಕ್ಷೆ  ನೆಲೆಸಿತ್ತು. ಅವನು ಮತ್ತು ರಾಜನ ಮಗಳು ಕಲ್ಯಾಣಿ ಪರಸ್ಪರ ತುಂಬಾ ಪ್ರೀತಿಸುತ್ತಿದ್ದರು. ರಾಜ್ಯದ ಆಡಳಿತ ಯಂತ್ರಕ್ಕೆ ಸೇರಿದ ‘ಎಟ್ಟುವೀಟ್ಟಿಲ್ ಪಿಳ್ಳಮಾರ್’ (ಎಂಟು ಮನೆಗಳ ಪಿಳ್ಳರು… ಪಿಳ್ಳರು ಅನ್ನುವುದು ನಾಯರ್ ಜಾತಿಯವರ ಒಂದು ಪದನಾಮ) ಈ ಕಾವ್ಯದ ಖಳನಾಯಕರು.  ಸದಾ ರಾಜನ ವಿರುದ್ಧ ಕತ್ತಿ ಮಸೆಯುತ್ತಿದ್ದ ಅವರಿಗೆ ತಂಬಾನ್ ಬಗ್ಗೆ  ಭಯವಿತ್ತು.  ಆದ್ದರಿಂದ ಅವನ ಬಗ್ಗೆ ರಾಜನ ಕಿವಿಯೂದಿ ಅವನನ್ನು ರಾಜ್ಯದಿಂದ ಗಡೀಪಾರು ಮಾಡಿಸುವಲ್ಲಿ ಅವರು ಸಫಲರಾಗುತ್ತಾರೆ.  ನಂತರ ಅವರು ರಾಜನ ಕೊಲೆ ಮಾಡುತ್ತಾನೆ.

ಆದಿತ್ಯ ವರ್ಮನ ಉತ್ತರಾಧಿಕಾರಿಯಾದ ಆತನ ಸೋದರಿ ಉಮಯಮ್ಮ ರಾಣಿಯಾಗುತ್ತಾಳೆ. ಆದರೆ ಅವಳ ಐದು ಮಕ್ಕಳನ್ನು ಪಿಳ್ಳರು ಮೋಸದಿಂದ ಕೊಲೆ ಮಾಡಿಸುತ್ತಾರೆ. ಮುಂದೆ ಮುಸಲ್ಮಾನರ ಆಕ್ರಮಣ,  ಯುದ್ಧ,  ಉಮಯಮ್ಮ ರಾಣಿಯ ಸೋಲು, ಮುಸಲ್ಮಾನರ ಸೈನ್ಯಾಧಿಪತಿ  ಕಲ್ಯಾಣಿಯನ್ನು ಹಾರಿಸಿಕೊಂಡು ಹೋಗಿ ಸೆರೆಯಲ್ಲಿಡುವುದು,  ಒಂದು ದಿನ ಇದ್ದಕ್ಕಿದ್ದಂತೆ ತಂಬಾನ್ ಪ್ರತ್ಯಕ್ಷನಾಗಿ ರಾಣಿಯ ಬೆಂಬಲಕ್ಕೆ ನಿಲ್ಲುವುದು,  ರಾಜ್ಯದ ಹದಗೆಟ್ಟ ಪರಿಸ್ಥಿತಿಯನ್ನು ಸರಿಪಡಿಸಲು ಪಕ್ಕದ ಕೊಟ್ಟಾಯಂ ರಾಜ್ಯದ ರಾಜಾ ಕೇರಳವರ್ಮನ ಸಹಾಯ ಬೇಡುವುದು ಮತ್ತು ಎಲ್ಲವೂ ಸುಖಾಂತ್ಯವಾಗುವುದು ಈ ಮಹಾಕಾವ್ಯದ ಕಥಾವಸ್ತು.  

ಉಮಾಕೇರಳಂ ಮಹಾಕಾವ್ಯದ ಎಲ್ಲಾ ಲಕ್ಷಣಗಳನ್ನೂ ಯಶಸ್ವಿಯಾಗಿ ಮೈಗೂಡಿಸಿಕೊಂಡಿರುವ ಒಂದು ಅಪರೂಪದ ಮಹಾಕಾವ್ಯ .    ಮನುಷ್ಯರ ನಡುವಣ ಕ್ಷುದ್ರ ರಾಜಕೀಯ, ಒಳಸಂಚುಗಳು, ಹೆಣ್ಣಿಗಾಗಿ ಜಗಳ, ನಾಯಕ-ಖಳನಾಯಕರ ನಡುವಣ ಸಂಘರ್ಷ,  ಯುದ್ಧಗಳ ವರ್ಣನೆ,  ಪ್ರಕೃತಿ ವರ್ಣನೆ, ದೇಶಭಕ್ತಿಯ  ಭಾವುಕತೆ, ನೂರಾರು ಪಾತ್ರಗಳು- ಹೀಗೆ  ಮಹಾಕಾವ್ಯದ ಹಲವು ಗುಣಗಳು ಇಲ್ಲಿ ಸಮ್ಮಿಳಿತಗೊಂಡಿವೆ. ಮೂಲಕಾವ್ಯದ ಭಾಷೆ  ಉದ್ದಕ್ಕೂ ಛಂದಸ್ಸು ಮತ್ತು ಅಲಂಕಾರಗಳಿಂದ ಕಿಕ್ಕಿರಿದು ತುಂಬಾ ಸಂಕೀರ್ಣವಾಗಿದೆ.  

ಇದನ್ನು ಕನ್ನಡಕ್ಕೆ ತರುವ ಭಗೀರಥ ಸಾಹಸ ಮಾಡಿದವರು ‘ಪ್ರಜಾವಾಣಿ’ಯ ಪತ್ರಕರ್ತರೂ ಈಗಾಗಲೇ ತಮ್ಮ  ‘ಕಾವೇರಿ ತೀರದ ಪಯಣ’ (ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪುರಸ್ಕೃತ )ಎಂಬ ಸುಂದರ ಅನುವಾದಿತ ಕೃತಿಯ ಮೂಲಕ ಜನಪ್ರಿಯರೂ ಆದ ವಿಕ್ರಂ ಕಾಂತಿಕೆರೆ. 

ಮೂಲಕಾವ್ಯದ ಛಂದಸ್ಸನ್ನು ಉಳಿಸಿಕೊಂಡಿಲ್ಲ ನಿಜ.  ಆದರೆ ಮೂಲದ ಅರ್ಥವನ್ನು ಉಳಿಸಿಕೊಳ್ಳಲು ಬಳಸಬೇಕಾದ ಕನ್ನಡ ಪರ್ಯಾಯ ಪದಗಳಿಗಾಗಿ ಬಹಳ ಪರಿಶ್ರಮ ಪಟ್ಟಿರುವುದು  ಪುಟ ಪುಟಗಳಲ್ಲೂ ಕಾಣುತ್ತದೆ. ಅನುವಾದಕ್ಕೆ ಎತ್ತಿಕೊಳ್ಳುವುದೇ ಒಂದು ಸವಾಲಾಗಿರುವಾಗ ಛಂದಸ್ಸನ್ನು ಉಳಿಸಿಕೊಳ್ಳುವ ಪ್ರಶ್ನೆಯೆಲ್ಲಿ?  

ಯಾವುದೇ ಭಾಷೆಯ ಯಾವುದೇ ಕಾವ್ಯದ ಅನುವಾದ ಮಾಡುವಾಗಲೂ ಭಾಷೆಗಳು ಸ್ವಭಾವದಲ್ಲಿರುವ ಭಿನ್ನತೆಗಳಿಂದಾಗಿ ಛಂದಸ್ಸನ್ನು ಉಳಿಸಿಕೊಳ್ಳುವ ಕೆಲಸ ಸುಲಭವಲ್ಲ. ಬಿ.ಎಂ.ಶ್ರೀ.ಯವರು ತಮ್ಮ ಇಂಗ್ಲಿಷ್ ಗೀತೆಗಳಲ್ಲಿ ತಮ್ಮ ಸ್ವಂತ ಕಲ್ಪನೆಗಳನ್ನು ಸೇರಿಸಿಕೊಳ್ಳುವ ಸ್ವಾತಂತ್ರ್ಯ ತೆಗೆದುಕೊಂಡಿದ್ದರಿಂದ ಪ್ರಾಸಬದ್ಧವಾಗಿ ಕಾವ್ಯ ರಚಿಸುವುದು ಅವರಿಂದ ಸಾಧ್ಯವಾಯಿತು.

ಅಲ್ಲಿ ಅವರು ಮಾಡಿದ್ದು ಭಾವಾನುವಾದ. ಇಲ್ಲಿ ಹಾಗಲ್ಲ.  ಇದು ಮೂಲದ ಗುಣಗಳನ್ನು ಸಾಧ್ಯವಾದಷ್ಟು ಉಳಿಸಿಕೊಳ್ಳುವ ನೇರ ಅನುವಾದ. ಅನುವಾದಕರಿಗೆ ಮೂಲಕ್ಕೆ ನಿಷ್ಠರಾಗಿರಬೇಕಾದ ಬದ್ಧತೆ ಇರುವುದರಿಂದ  ಛಂದಸ್ಸನ್ನು ಉಳಿಸಿಕೊಳ್ಳುವುದು ಸಾಧ್ಯವಿಲ್ಲ.  ಏನಿದ್ದರೂ ಉಮಾಕೇರಳಂನಂಥ ಒಂದು ಮಹತ್ವದ ಕಾವ್ಯಕೃತಿಯನ್ನು ಕನ್ನಡಕ್ಕೆ ತಂದ ವಿಕ್ರಂ ಒಂದು ಬಹಳ ದೊಡ್ಡ ಕೆಲಸ ಮಾಡಿದ್ದಾರೆ. ಅದಕ್ಕಾಗಿ ಅವರನ್ನು ಎಷ್ಟು ಅಭಿನಂದಿಸಿದರೂ ಸಾಲದು.

‍ಲೇಖಕರು avadhi

August 24, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: