ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಾರ್ವತಿ ಜಿ ಐತಾಳ್ ಅನುವಾದಿತ ಕವಿತೆ- ದೇವದಾಸಿ…

ಮೂಲ : ಸುಗತಕುಮಾರಿ

ಕನ್ನಡಕ್ಕೆ : ಪಾರ್ವತಿ ಜಿ ಐತಾಳ್

ಗುಡಿಗೆ ಹದಿನೆಂಟು ಮೆಟ್ಟಿಲು, ಮೊದಲ
ಮೆಟ್ಟಲಲಿ ಕುಳಿತಿರುವೆ ನಾ ದೇವದಾಸಿ
ಕಾಲಿಗಿಲ್ಲ ಗೆಜ್ಜೆ ಕೈಗಿಲ್ಲ ಬಳೆ
ಉಟ್ಟ ಬಟ್ಟೆಯ ಬಣ್ಣ ಮಾಸಿದೆ
ಕೂದಲೋ ನರೆತಿದೆ ಅದರ
ತುದಿಯಿಂದ ಮುಚ್ಚಿ ನಿನ್ನ
ಸಿರಿಮೈಯನಲಂಕರಿಸುವ ಹಾಡು ಹಾಡಿ
ಹಲವು ನೆರಳುಗಳ ಗುಂಪಿನಲ್ಲೊಬ್ಬಳಾಗಿ ತಲೆತಗ್ಗಿಸಿ
ಇಲ್ಲಿ ಕುಳಿತಿರುವೆ ನಾ ದೇವದಾಸಿ.

ಮೇಲಕ್ಕೆ ಓಡೋಡಿ ಹೋಗುವವರೆಸೆಯುವರು ನಾಣ್ಯಗಳ
ನಾ ಮುಟ್ಟದಿರುವುದ ಕಂಡು
ಇವಳೊಬ್ಬ ಹುಚ್ಚಿಯೆಂದು ಸರಿಯುವರು ದೂರ.
ನಕ್ಕು ಬಿಡುವೆ ನಾ ನಿನ್ನ ದಾಸಿ.
ಅವರಿಗೇನು ಗೊತ್ತು! ಮಲಿನಳಾಗಿ ದೀನಳಾಗಿ
ಅತ್ತೂ ಅಳದಿರುವ ಕಣ್ಣುಗಳೊಂದಿಗೆ
ಎರಡೂ ಕೈಗಳ ಜೋಡಿಸಿ ಕುಳಿತಿರುವೆ ದೇವಾ
ನಾ ನಿನ್ನ ಪ್ರೇಯಸಿಯೆಂಬುದನರಿತವರಾರು?
ಮೇಲೆ ನಿನ್ನ ಗುಡಿಯಲ್ಲದೆಂಥ ಜಾತ್ರೆ! ಕೇಳುತಿದೆ
ಚೆಂಡೆ ವಾದ್ಯ ಜನರ ಜಯಕಾರ
ನಡುನಡುವೆ ಗೆಜ್ಜೆಯನಾದ ಗಾನ
ಅಲ್ಲಿ ಉತ್ಸವ ಕಾಲವಾಗಿರಬಹುದು.
ಅಲ್ಲಿ ಯಾರಷ್ಟು ಇಂಪಾಗಿ ಹಾಡುವವರು
ಅಲ್ಲೊಂದು ನೃತ್ಯವೂ ನಡೆಯುತಿದೆ!
ಅವರು ಭಾಗ್ಯವಂತರು! ನಾ ಕೆಳಗೆ ಕುಳಿತು
ಕೇಳುತ್ತಿರುವೆ ಕಿವಿಗೊಟ್ಟು ಅದರ ರಾಗ ತಾಳ.
ಒಂದು ರಾಶಿ ಹೂಗಳ ಪರಿಮಳ.
ಶ್ರೀಗಂಧ ಕರ್ಪೂರಗಳ ಸುವಾಸನೆ
ಎಲ್ಲವೂ ಹರಿದುಬರುತ್ತಿದೆ ಕೆಳಗೆ
ಬುದ್ಧಿಭ್ರಮಣೆಯಾಗುತಿದೆ ನನಗೆ ನಾ ದೇವದಾಸಿ… 
ನನಗರಿವಿಲ್ಲದೆಯೇ ನನ್ನ ಕಾಲುಗಳು ಏಳುತ್ತಿವೆ
ಘಾಸಿಗೊಂಡ ಹೃದಯ ಹೊಡೆದುಕೊಳ್ಳುತ್ತಿದೆ.
ನಿನ್ನ ಮುಂದೆ ಆಡಲು ಹಾಡಲು ಬೇಡಲು ಅಲ್ಲದೆ
ಈ ವೃದ್ಧೆಗೆ ತಾಳ ಮುದ್ರೆ ಕಂಠಧ್ವನಿಗಳ
ಸಿದ್ಧಿಯೇಕೆಂಬ ಸಂದೇಹವೆನಗೆ.

ಒಂದು ಬಾರಿ ಒಂದೇ ಬಾರಿಯಾದರೂ
ನಿನ್ನ ಬಳಿ ಬಂದು ನರ್ತಿಸಲು ಕರೆಯಲಿಲ್ಲ
ಕೌಶಲವೂ ಹೆಜ್ಜೆಯೂ ಮರೆತು ಹೋಗಿ
ಗುಡಿಯ ಮೆಟ್ಟಲೇರಲಿಲ್ಲ…
ಇನ್ನು ಆಕ್ಷೇಪಿಸಲಾರೆ ಕರುಣೆದೋರಲಿಲ್ಲ
ವೇಕೆಂದು ಕೇಳಲಾರೆ.
ಪೊಡಮಟ್ಟು ಬಂದಿಳಿದು ಕೈಗಳಲಿ ಹೂವು ಪ್ರಸಾದ
ತಂಪಾದ ಕಣ್ಣುಗಳೊಂದಿಗೆ ಮರಳಿಹೋಗಬೇಕು ನಾನು.
ಕೇಳಬೇಕೆಂದೆನಿಸುತಿದೆ ಸುಖವೆಂದರೇನೆಂದು.
ಗುಡಿಗೆ ಹದಿನೆಂಟು ಮೆಟ್ಟಲುಗಳು
ಇಲ್ಲಿ ಒಬ್ಬಳೇ ಕುಳಿತಿರುವೆ ನಾ ದೇವದಾಸಿ.
ಕಂಪಿಸುವ ಕಂಠದಿಂದ ನಿನಗಾಗಿ ಮಾತ್ರ
ಹಾಡನ್ನು ಹಾಡುವೆ ದೇವದಾಸಿ.

ದೇವದಾಸಿಯ ಹಾಡು :
ಕಡಲಿಗೆ ಮಳೆಯಿದೆ  ಬಾನಿಗೆ ಮಳೆಬಿಲ್ಲಿದೆ
ಅಡವಿಗಿದೆ ಇರುಳ ಪುಷ್ಪಗಳಷ್ಟೆಷ್ಟೋ.
ಬಿಸಿಯಾದ ಮರುಭೂಮಿಗೆ ನೀರೊರತೆಯಿದೆ
ನನ್ನೊಡಲ ತುಂಬ ಇದೆ ಅನುರಾಗ.
ಅದ ನೋಡಿದವರಿಲ್ಲ ಅದ ಮುಟ್ಟಿದವರಿಲ್ಲ
ಜೇನಸಿಹಿಯುಂಡವರಿಲ್ಲ
ಅದರೊಂದಿಗೆ ಬಂದು ಕಾಯುತಿರುವೆ ನಾನು
ಇದುವರೆಗೆ ನನ್ನ ಒಡೆಯಾ.
ಕತ್ತಲಾಗಿದೆ ಇಲ್ಲಿ ಮುಚ್ಚಿಹರು ಗುಡಿಯ ನಡೆ
ತಿರುಗಿ ನಡೆದಿಹರಿಲ್ಲಿಂದ ಎಲ್ಲರೂ ಆಗಲೇ.
ಕೊನೆಯ ಹೊನ್ನದೀಪದ ಬತ್ತಿ ನಂದಿ ಹೋಗಿ
ನೀನು ನಡೆ ತೆರೆದು ಇರುಳ ಮೆಟ್ಟಲು ದಾಟಿ
ನನ್ನ ಸಂತೈಸೆ ಬರುವೆಯೆಂಬಾಸೆಯಿಲ್ಲ.
ಬಹಳ ತಡವಾಗಿದೆ ದೇವ ಬಹಳ ತಡವಾಗಿದೆ
ತಿರುಗಿ ನಾ ಮೌನವಾಗೆದ್ದು ಹೋಗುವೆ.
ಅದಕ್ಕೆ ಮೊದಲೀ ಮೊದಲ ಮೆಟ್ಟಲಲಿ ಕಾದ
ಈ ಸಿಹಿಯನ್ನು ಜೋರಾಗಿ ಎಸೆದು ಒಡೆದು ಬಿಡುವೆ!

‍ಲೇಖಕರು avadhi

10 May, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading