
ಪಿ ಶೇಷಾದ್ರಿ
ಅದು ಎಪ್ಪತ್ತರ ದಶಕದ ಆರಂಭ. ಆಗ ಡಾ.ರಾಜ್ ಕುಟುಂಬ ಚನ್ನೈನಲ್ಲಿ ವಾಸವಿತ್ತು.
ಒಂದು ಭಾನುವಾರ ಬೆಳಗ್ಗೆ ಹಳೆಯ ಪೇಪರಿನವನು ಆಗಿನ ಮದ್ರಾಸ್ನ ಇವರ ಮನೆಗೆ ಬಂದ. ಮನೆಯವರು ಅವನ ಮುಂದೆ ಹಳೆಯ ದಿನಪತ್ರಿಕೆಗಳನ್ನು ಹಾಕಿದರು. ಅವನು ತೂಕ ಹಾಕತೊಡಗಿದ.
ಪಾರ್ವತಮ್ಮನವರು ಅಲ್ಲೇ ಇದ್ದರು.

ಅವರ ಕಣ್ಣಿಗೆ ಅವನ ರದ್ದಿ ಚೀಲದಲ್ಲಿದ್ದ ಹಳೆಯ ಪುಸ್ತಕಗಳ ಮಧ್ಯೆ ಒಂದು ಕನ್ನಡದ ಪುಸ್ತಕ ಕಣ್ಣಿಗೆ ಬಿತ್ತು. ನಿಧಿ ಸಿಕ್ಕವರಂತೆ ಅದನ್ನು ತಕ್ಷಣ ಕೈಗೆ ತೆಗೆದುಕೊಂಡರು. ಅದು ದೇವುಡು ನರಸಿಂಹಶಾಸ್ತ್ರಿಗಳು ಬರೆದಿದ್ದ ‘ಮಯೂರ’ ಐತಿಹಾಸಿಕ ಕಾದಂಬರಿಯಾಗಿತ್ತು. ಪಾರ್ವತಮ್ಮನವರಿಗೆ ಕನ್ನಡ ಕಾದಂಬರಿ ಓದುವ ಬಯಕೆ. ಆದರೆ ಅಲ್ಲಿ ಅಷ್ಟಾಗಿ ಕನ್ನಡ ಪುಸ್ತಕಗಳು ದೊರೆಯುತ್ತಿರಲಿಲ್ಲ. ಹಳೇ ಪೇಪರಿನವನ ಮುಂದೆ ಆ ಪುಸ್ತಕ ಹಿಡಿದು, ‘ನೋಡಪ್ಪ, ಇಂದಿನ ನಮ್ಮ ಹಳೇ ದಿನಪತ್ರಿಕೆಗಳಿಗೆ ನೀನು ದುಡ್ಡು ಕೊಡುವುದು ಬೇಡ ಬದಲಿಗೆ ಈ ಕಾದಂಬರಿಯನ್ನು ನನಗೆ ಕೊಟ್ಟರೆ ಸಾಕು’ ಎಂದರು. ಅವನು ಸಂತೋಷದಿಂದ ಒಪ್ಪಿದ.
ಪಾರ್ವತಮ್ಮನವರು ಅಂದೇ ಕುಳಿತು ಆ ಕಾದಂಬರಿ ಓದಿ ಮುಗಿಸಿದರು.
ಅವರಿಗೆ ಅದು ತುಂಬ ಇಷ್ಟವಾಯಿತು. ಡಾ.ರಾಜ್ಕುಮಾರ್ ಅವರು ಚಿತ್ರೀಕರಣ ಮುಗಿಸಿ ಬಂದ ತಕ್ಷಣ ಅವರ ಕೈಗೆ ‘ಮಯೂರ’ ಕಾದಂಬರಿ ಕೊಟ್ಟು, ದಯವಿಟ್ಟು ಇದನ್ನು ಓದಿ. ಇದನ್ನು ಸಿನಿಮಾ ಮಾಡಿದರೆ ತುಂಬಾ ಚನ್ನಾಗಿರುತ್ತೆ ಅಂದರು. ಅಣ್ಣಾವ್ರು ಕೂಡ ಓದಿದರು. ಅವರಿಗೂ ಇಷ್ಟವಾಯಿತು.
ಮುಂದಿನದ್ದು ಇತಿಹಾಸ…
ಕನ್ನಡನಾಡನ್ನಾಳಿದ್ದ ಕದಂಬರ ಮಯೂರವರ್ಮನಾಗಿ ಡಾ.ರಾಜ್ ತೆರೆಯ ಮೇಲೆ ರಾರಾಜಿಸಿದರು. ‘ನಾನಿರುವುದು ನಿಮಗಾಗಿ…’ ಎಂದು ಹಾಡಿ ಎಲ್ಲರ ಮನಗೆದ್ದರು. ಹೀಗೆ ಕನ್ನಡಚಿತ್ರರಂಗಕ್ಕೆ ಶ್ರೀಮತಿ ಪಾರ್ವತಮ್ಮನವರ ಕೊಡುಗೆ ಅಪಾರ. ನಾನು ಅವರ ಜೊತೆ ಕೆಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ. ನಾನು ಕಂಡ ಅಪರೂಪದ ವ್ಯಕ್ತಿತ್ವ ಅವರದ್ದು… ಎಂಥ ಗಟ್ಟಿಗಿತ್ತಿ! ಅಮ್ಮ ನಿಮಗೆ ಕನ್ನಡ ಚಿತ್ರರಂಗ ಎಂದೆಂದೂ ಋಣಿಯಾಗಿರುತ್ತದೆ. ನಿಮ್ಮ ಆತ್ಮಕ್ಕೆ ಶಾಂತಿ ದೊರೆಯಲಿ.






ಅವರಲ್ಲಿ ಓದುವ ಹವ್ಯಾಸ ಬಹಳವಿತ್ತೆಂದು ಇತ್ತೀಚಿನ ಪತ್ರಿಕೆಗಳಲ್ಲಿನ ಲೇಖನಗಳಿಂದ ತಿಳಿಯಿತು. ತಾವು ಹೇಳಿದಂತೆ ಅಪರೂಪದ ವ್ಯಕ್ತಿತ್ವ ಮತ್ತು ಗಟ್ಟಿಗಿತ್ತಿ.