ಪಾಕಿಸ್ತಾನದಲ್ಲಿ ಹೀಗೊಬ್ಬಳು ಮುಕ್ತರ್ ಮಾಯಿ…

ಜಗದೀಶ್ ಕೊಪ್ಪ


ಇವಳು ಮುಕ್ತರ್ ಮಾಯಿ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮೀರ್ ವಾಲ ಎಂಬ ಹಳ್ಳಿಯಲ್ಲಿ ಕೆಳ ಜಾತಿಯ ಗುಜಾರ್ ಎಂಬ ಬುಡಕಟ್ಟು ಜನಾಂಗದ ಕುಟುಂಬದಲ್ಲಿ ಜನಿಸಿದ ಅನಕ್ಷರಸ್ತ ಹೆಣ್ಣು ಮಗಳು. ತನ್ನದಲ್ಲದ ತಪ್ಪಿಗೆ ಅಂದರೆ, ತನ್ನ ಹನ್ನೆರೆಡು ವರ್ಷದ ಕಿರಿಯ ಸಹೋದರನೊಬ್ಬ ಅದೇ ಊರಿನ ಮೇಲ್ಜಾತಿಯ ಜಮೀನ್ದಾರನ ಇಪ್ಪತ್ತೇಳು ವರ್ಷದ ಪುತ್ರಿಯನ್ನು ಮಾತನಾಡಿಸಿದ ಎಂಬ ಏಕೈಕ ಕಾರಣಕ್ಕಾಗಿ 2002 ರ ಜೂನ್ ತಿಂಗಳಿನಲ್ಲಿ ಸಾಮೂಹಿಕ ಅತ್ಯಾಚಾರದ ಶಿಕ್ಷೆಯನ್ನು ಅನುಭವಿಸಿದ ನತದೃಷ್ಟೆ.
ಪಾಕಿಸ್ತಾನದ ಗ್ರಾಮಾಂತರ ಪ್ರದೇಶದಲ್ಲಿ ಜಿರ್ಗ ಎಂಬ ಹೆಸರಿನಲ್ಲಿ ಆಚರಣೆಯಲ್ಲಿರುವ ನ್ಯಾಯಪಂಚಾಯಿತಿಯ ವ್ಯವಸ್ಥೆಯಲ್ಲಿ ಈಕೆಗೆ ಅತ್ಯಾಚಾರದ ಶಿಕ್ಷೆಯನ್ನು ನೀಡಲಾಗಿತ್ತು. ಅಲ್ಲಿನ ಮಹಿಳೆಯರಿಗೆ ಇಂತಹ ಶಿಕ್ಷೆ ಅನುಭವಿಸಿದ ನಂತರ ಇದ್ದ ಏಕೈಕ ಪರಿಹಾರವೆಂದರೆ, ಆತ್ಮಹತ್ಯೆ ಮಾತ್ರ. ಕುಟುಂಬದ ಸದಸ್ಯರು ಸಾರ್ವಜನಿಕ ಅಪಮಾನವನ್ನು ಸಹಿಸಲಾರದೆ, ಊರು ತ್ಯೆಜಿಸುತ್ತಿದ್ದರು. ಆದರೆ, ಮುಕ್ತರ್ ಮಾಯಿ ಪಾಕಿಸ್ತಾನದ ಇತಿಹಾಸದಲ್ಲಿ ಪ್ರಪಥಮಬಾರಿಗೆ ತನಗಾದ ಅನ್ಯಾಯವನ್ನು ಪ್ರತಿಭಟಿಸಿ, ನ್ಯಾಯಾಲಯದ ಮೆಟ್ಟಿಲೇರುವುದರ ಮೂಲಕ ಜಡ್ಡುಗಟ್ಟಿದ್ದ ಅಲ್ಲಿನ ಸಾಮಾಜಿಕ ವ್ಯವಸ್ಥೆಗೆ ತನ್ನ ಆಕ್ರೋಶದ ಕಿಚ್ಚನ್ನು ಹೊತ್ತಿಸಿದ್ದಳು.
ತನಗಾದ ಅನ್ಯಾಯ ಈ ನೆಲದ ಯಾವ ಹೆಣ್ಣು ಮಗಳಿಗೂ ಬರಬಾರದು ಎಂಬ ಉದ್ದೇಶದಿಂದ ತನ್ನ ಮೇಲೆ ನಡೆದ ಅತ್ಯಾಚಾರದ ಘಟನೆಯನ್ನು ಮಾಧ್ಯಮಗಳ ಮುಖಾಂತರ ಹೊರಜಗತ್ತಿಗೆ ಅನಾವರಣಗೊಳಿಸಿದಳು. ಇದರಿಂದಾಗಿ ಇಕ್ಕಟ್ಟಿಗೆ ಸಿಲುಕಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೆ ಒಳಗಾದ ಅಂದಿನ ಜನರಲ್ ಮುಶ್ರಪ್ ನೇತೃತ್ವದ ಪಾಕ್ ಸರ್ಕಾರ ಈ ಪ್ರಕರಣ ಕುರಿತಂತೆ ಗಂಭೀರವಾದ ತನಿಖೆಗೆ ಆಜ್ಞೆ ಮಾಡಿತು.
ಎಲ್ಲವನ್ನೂ ಸಾಕ್ಷಾಧಾರಗಳ ಮೂಲಕ ಸಾಭೀತುಗೊಳಿಸಿದ ಮುಕ್ತರ್ ಮಾಯಿ, ತನ್ನ ಮೇಲೆ ಅತ್ಯಾಚಾರವೆಸಗಿದ ಜಮೀನ್ದಾರನ ಕುಟುಂಬದ ನಾಲ್ವರು ಸದಸ್ಯರಿಗೆ ಗಲ್ಲು ಶಿಕ್ಷೆ, ಅತ್ಯಾಚಾರಕ್ಕೆ ಸಹಕರಿಸಿದ ನಾಲ್ವರು ಜಮೀನ್ದಾರನ ಭಂಟರಿಗೆ ಜೀವಾವಧಿ ಶಿಕ್ಷೆ ಮತ್ತು ಜಿರ್ಗ ಹೆಸರಿನ ಪಂಚಾಯಿತಿಯಲ್ಲಿ ಅತ್ಯಾಚಾರದ ಶಿಕ್ಷೆ ನೀಡಿದ್ದ ಆರು ಮಂದಿಗೆ ಜೈಲು ಶಿಕ್ಷೆ ಕೊಡಿಸಿ, ಪಾಕಿಸ್ತಾನದ ರಾಜಕೀಯ ಮತ್ತು ಸಾಮಾಜಿಕ ರಂಗದಲ್ಲಿ ದೊಡ್ಡ ಸಂಚಲವನ್ನುಂಟು ಮಾಡಿದ್ದಳು.(ಮುಂದೆ ಇಸ್ಲಾಮಾ ಬಾದ್ ನ ಸುಪ್ರೀಂ ಕೋರ್ಟಿನಲ್ಲಿ ಆರೋಪಿಗಳು ಖುಲಾಸೆಯಾದರು)

ಅಂತಿಮವಾಗಿ ಪಾಕಿಸ್ತಾನ ಸರ್ಕಾರ ಮುಕ್ತರ್ ಮಾಯಿಗೆ ಐದು ಲಕ್ಷ ರೂಪಾಯಿ ಪರಿಹಾರ ಧನ ನೀಡಿದಾಗ ಅದನ್ನು ನಿರಾಕರಿಸಿದ ಆಕೆ, ತನ್ನ ಹಳ್ಳಿಗೆ ಒಂದು ಹೆಣ್ಣು ಮಕ್ಕಳ ಶಾಲೆ ಕೊಡಿ ಎಂದು ಬೇಡಿಕೊಂಡಿದ್ದಳು. ಹುಟ್ಟಿನಿಂದ ಅಕ್ಷರ ಲೋಕದಿಂದ ವಂಚಿತಳಾಗಿದ್ದ ಈ ನತದೃಷ್ಟ ಹೆಣ್ಣು ಮಗಳು ತನ್ನ ಹದಿನೆಂಟನೆಯ ವಯಸ್ಸಿನಲ್ಲಿ ವಿವಾಹವಾಗಿ, ಹತ್ತೊಂಬತ್ತನೆಯ ವಯಸ್ಸಿಗೆ ಪತಿಯಿಂದ ವಿಚ್ಛೇಧಿತಳಾಗಿ ಅಪ್ಪನ ಮನೆ ಸೇರಿದ್ದಳು. ಊರಿನ ಮಸೀದಿಯ ಮುಲ್ಲಾ ಒಬ್ಬರಿಂದ ಕುರಾನ್ ಧರ್ಮ ಗ್ರಂಥದ ಶ್ಲೋಕಗಳನ್ನು ಕಂಠಪಾಠ ಮಾಡಿಕೊಂಡು ಅವುಗಳನ್ನು ತನ್ನ ಹಳ್ಳಿಯ ಮಕ್ಕಳಿಗೆ ಬೋದಿಸುತ್ತಿದ್ದಳು. ಅತ್ಯಾಚಾರ ನಡೆದ ದಿನ ಕುರಾನ್ ಗ್ರಂಥವನ್ನು ತನ್ನ ಎದೆಗೆ ಅಪ್ಪಿಕೊಂಡು ಜಮೀನ್ದಾರನ ಮನೆಗೆ ಹೋಗಿದ್ದಳು. ಆದರೆ, ಅವಳ ಕೈಲಿದ್ದ ಧರ್ಮಗ್ರಂಥವನ್ನು ಕಿತ್ತೆಸೆದ ಜಮೀನ್ದಾರ, ಆಕೆಯ ಅಪ್ಪ, ಚಿಕ್ಕಪ, ಮುಲ್ಲಾ ಸೇರಿದಂತೆ ಊರಿನ ಗ್ರಾಮಸ್ಥರ ಎದುರು ಬಹಿರಂಗವಾಗಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ.
ನನ್ನಂತ ಅನಕ್ಷರಸ್ತ ನತದೃಷ್ಟ ಜೀವಕ್ಕೆ ಅಪ್ಪಳಿಸಿದ ದುರಂತ ಈ ನೆಲದ ಮೇಲಿನ ಯಾವ ಹೆಣ್ಣು ಜೀವಕ್ಕೂ ಬರಬಾರದು ಎಂಬುದು ಮುಕ್ತರ್ ಮಾಯಿಯ ನಿರ್ಧಾರವಾಗಿತ್ತು. ಶಿಕ್ಷಣವೊಂದೇ ಹೆಣ್ಣು ಮಕ್ಕಳ ಬದುಕಿಗೆ ರಕ್ಷಣೆ ನೀಡುವ ಮಾಧ್ಯಮ ಎಂದು ಅವಳು ಬಲವಾಗಿ ನಂಬಿಕೊಂಡಿದ್ದಳು. ಈ ಕಾರಣಕ್ಕಾಗಿ ಅವಳು ಶಾಲೆಗಾಗಿ ಪಾಕ್ ಸರ್ಕಾರವನ್ನು ಒತ್ತಾಯಿಸಿದ್ದಳು. ಪಾಕ್ ಸರ್ಕಾರ, ಪರಿಹಾರದ ಜೊತೆಗೆ ಮುಕ್ತರ್ ಮಾಯಿ ವಾಸವಾಗಿದ್ದ ಹಳ್ಳಿಗೆ ಶಾಲೆಯನ್ನು ಮಂಜೂರು ಮಾಡಿತು. ತನ್ನೂರಿಗೆ ಬಂದ ಶಾಲೆಯಲ್ಲಿ ಮಕ್ಕಳ ಜೊತೆ ಕುಳಿತ ಇಪ್ಪತ್ತೆಂಟು ವರ್ಷದ ಮುಕ್ತರ್ ಮಾಯಿ, ತಾನೂ ಅಕ್ಷರ ಕಲಿತಳು. ಜೊತೆಗೆ ಶಾಲೆಯನ್ನು ಪಂಜಾಬ್ ಪ್ರಾಂತ್ಯದ ಅತಿ ದೊಡ್ಡ ಶಿಕ್ಷಣ ಸಂಸ್ಥೆಯಾಗಿ ಬೆಳಸಿದಳು.
ಅಂತರಾಷ್ಟ್ರೀಯ ಮಟ್ಟದಲ್ಲಿ ಆಕೆಗೆ ಹರಿದು ಬಂದ ನೆರವಿನ ಮಹಾಪೂರವನ್ನೆಲ್ಲಾ ಶಾಲೆಗೆ ದೇಣಿಗೆಯಾಗಿ ನೀಡಿದಳು. ಇದೀಗ ಶಿಕ್ಷಣದ ಜೊತೆಗೆ ಆರೋಗ್ಯ ಕ್ರೇತ್ರಕ್ಕೂ ಮುಕ್ತರ್ ಮಾಯಿ ಕಾಲಿರಿಸಿದ್ದಾಳೆ. ವೈದ್ಯರು, ದಾದಿಯರನ್ನು ಒಳಗೊಂಡ ನಾಲ್ಕಾರು ಅಂಬುಲೆನ್ಸ್ ವಾಹನಗಳು ಮೀರ್ವಾಲ ಗ್ರಾಮದ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಸಂಚರಿಸುತ್ತಾ ಜನರ ಆರೋಗ್ಯವನ್ನು ಕಾಪಾಡುತ್ತಿವೆ.
ಇತ್ತೀಚೆಗೆ ನೋಬೆಲ್ ಪ್ರಶಸ್ತಿ ಪಡೆದ ಪಾಕಿಸ್ತಾನದ ಬಾಲಕಿ, ಮಲಾಲಾ ಗಿಂತ ಹನ್ನೆರೆಡು ವರ್ಷ ಮುಂಚಿತವಾಗಿ ಪಾಕಿಸ್ತಾನದಲ್ಲಿ ಶಿಕ್ಷಣದ ಮಹತ್ವವನ್ನು ಸಾರಿದ ಮುಕ್ತರ್ ಮಾಯಿ ಇಂದಿಗೂ ಸಹ ಅದೇ ಹಳ್ಳಿಯಲ್ಲಿ ಅನಾಮಿಕಳಂತೆ ಬದುಕು ಸಾಗಿಸುತ್ತಿದ್ದಾಳೆ. ಅವಳ ಶಾಲೆಯಲ್ಲಿ ಈಗ ಸಾವಿರಾರು ಹೆಣ್ಣು ಮಕ್ಕಳು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ. ಇಂತಹ ಸಾಹಸದ ಬದುಕುನ್ನು ಬದುಕಿದ ಈ ಅಪರೂಪದ ಹೆಣ್ಣು ಮಗಳ ಹೋರಾಟದ ಬದುಕನ್ನು ಇಂಗ್ಲೀಷ್ ಭಾಷೆಯಲ್ಲಿ ಓದಿಕೊಂಡು ಸುಮ್ಮನಿರಲು ನನ್ನ ಮನಸ್ಸು ನಿರಾಕರಿಸಿತು. ಹಾಗಾಗಿ ನಲವತ್ತು ದಿನಗಳ ಕಾಲು ಕುಳಿತು ಆ ಹೆಣ್ಣು ಮಗಳನ್ನು ಎದೆಗಿಳಿಸಿಕೊಂಡು, ಅವಳದೇ ಆದ ಸರಳ ಭಾಷೆಯಲ್ಲಿ “ ಮೂಕ ಹಕ್ಕಿಯ ಹಾಡು” ಎಂಬ ಹೆಸರಿನಲ್ಲಿ ಮುಕ್ತರ್ ಮಾಯಿಯ ನೋವಿನ ಹಾಗೂ ಸಾಹಸದ ಕಥನವನ್ನು ಇದೀಗ ನಿಮ್ಮ ಮುಂದೆ ಇಡುತ್ತಿದ್ದೇನೆ.
 

‍ಲೇಖಕರು G

April 14, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Bandesab Megeri

    nimmadeyaada “Marubhoomiya hoo” books koodaa tumba chennagi moodi bandide sir, aa books na 2 saari odiddene….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: