ಗೊರೂರು ಶಿವೇಶ್ ಬರೆದ ’ಕಾಪಿಗಳ ಲೋಕದಲ್ಲಿ’

ಕೋಟಿ ವಿದ್ಯೆಗಲ್ಲಿ ಕಾಪಿ ವಿದ್ಯೆಯೇ ಮೇಲು

ಗೊರೂರು ಶಿವೇಶ್

ಬಿಹಾರ, ಉತ್ತರ ಪ್ರದೇಶಗಳಲ್ಲಿ ಕಾಪಿ ಚೀಟಿಯನ್ನು ನೀಡಲು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ನಾಲ್ಕೈದು ಅಂತಸ್ತಿನ ಹಳೆಯ ಕಟ್ಟಡವನ್ನು ಹಗ್ಗದ ಮೇಲೇರಿ ಕಿಟಿಕಿಯ ಸಜ್ಜಾದಲ್ಲಿ ಅಪಾಯಕಾರಿಯಾಗಿ ನಿಂತು ಅದ್ಭುತ ಸಾಹಸ ಮೆರೆಯುತ್ತಿರುವ ಚಿತ್ರಗಳು ಪತ್ರಿಕೆಯಲ್ಲಿ ಪ್ರಕಟವಾಗಿ, ಸಾವಿರಕ್ಕೂ ಹೆಚ್ಚು ಜನ ಡಿಬಾರಾದ ಪ್ರಸಂಗಗಳು ವರದಿಯಾಗುತ್ತಿರುವ ಸಂದರ್ಭದಲಿ ಎಸ್.ಎಸ್.ಎಲ್.ಸಿ ಯನ್ನು ಇಡೀ ಊರಿಗೇ ಊರೇ ಅಚ್ಚರಿಯಾಗುವಂತೆ ತೇರ್ಗಡೆ ಹೊಂದಿದ ರಂಗಣ್ಣಿ ತನ್ನ ಯಶಸ್ಸನ್ನು ಕುರಿತು ಹೇಳುತ್ತಿದ್ದ ಮಾತು ನೆನಪಾಯಿತು. ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಓದಿದ ನಾವು ಪರೀಕ್ಷಾ ದಿನ ಪರೀಕ್ಷಾ ಹಾಲ್ನ ಹೊರಗೆ ಚಡಪಡಿಸುತ್ತಿದ್ದರೆ ಈತ ಆರಾಮಾಗಿ ಅವರಿವರನ್ನು ಛೇಡಿಸಿಕೊಂಡು ತಿರುಗುತ್ತಿದ್ದವನು ಅದು ಹೇಗೆ ಪಾಸಾದ ? ಎಂದು ನಮ್ಮಲ್ಲಿ ಅನೇಕರಿಗೆ ಅಚ್ಚರಿ. ಆಗಾಗ್ಗೆ ಬರುತ್ತಿದ್ದ ಸ್ಕ್ವಾಡ್ ಗಗಳಿಗೂ ಅವನು ಸಿಕ್ಕಿಹಾಕಿಕೊಳ್ಳುತ್ತಿರಲಿಲ್ಲ. ಅವನ ಸಾಹಸದ ವಿವರಗಳನ್ನು ಕೇಳಿದ್ದ ನಾನು ಎಂಟನೇ ತರಗತಿಯಲ್ಲಿ ಇಂಗ್ಲೀಷ್ನ ಪ್ರಬಂಧವನ್ನು ಬರೆದುಕೊಂಡು ಹೋಗಿ ಚೀಟಿ ಬಿಡಿಸಲು ಪರದಾಡಿ, ಎಚ್.ಎಂ. ಕೈಯಲ್ಲಿ ಮಂಡಿ ಮತ್ತು ಕುಂಡಿ ಊದಿಕೊಳ್ಳುವ ಹಾಗೇ ಹೊಡೆಸಿಕೊಂಡ ಮೇಲೆ ಈ ಕಾಪಿ ಎಂಬುದು ‘ಅದ್ಭುತ ಕೌಶಲ’ ಎಂಬ ನಿರ್ಧಾರಕ್ಕೆ ಬಂದು ಕಾಪಿ ಭೂತದಿಂದ ಮುಕ್ತನಾದೆ.
ಕಾಪಿ ಎಂದರೇನು ? ಅವುಗಳಲ್ಲಿ ಎಷ್ಟು ವಿಧ ? ಯಾವುವು ? ಅವುಗಳನ್ನು ವಿವರಿಸು ? ಎಂದ ಒಮ್ಮೆ ರಂಗಣ್ಣಿಯನ್ನು ಪ್ರಶ್ನಿಸಿದ್ದೆ. ಅದಕ್ಕೆ ಆತ ಶ್ರಮವಿಲ್ಲದೆ, ಆಯಾಯ ಸಂದರ್ಭದಲ್ಲಿ ತನ್ನ ಕೌಶಲವನ್ನು ಬಳಸಿ ಸಾಧಿಸುವ ಯಶಸ್ಸಿಗೆ ಕಾಪಿ ಎಂಥಲೂ ಅವುಗಳಲ್ಲಿ ಮೂರು ವಿಧ ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕಲಿಂಗವೆಂದು ಹೇಳುತ್ತಿದ್ದ. ಪುಲ್ಲಿಂಗ ನಕಲು ಎಂದರೆ ಯಾರನ್ನು ಕೇರ್ ಮಾಡದೇ ಪುಸ್ತಕ ಚೀಟಿಯನ್ನು ಎದುರಿಗಿಟ್ಟುಕೊಂಡು ನಕಲು ಮಾಡುವುದು. ಇದಕ್ಕೆ ಎಂಟೆದೆ ಬೇಕಲ್ಲದೆ, ಕೊಠಡಿ ಮೇಲ್ವಿಚಾರಕರನ್ನು ಎದುರಿಸುವ ಛಾತಿಯೂ ಬೇಕು. ಸ್ತ್ರೀಲಿಂಗ ಎಂದರೆ ಕೊಠಡಿ ಮೇಲ್ವಿಚಾರಕರಿಗಾಗಲಿ ತಪಾಸಣಾಧಿಕಾರಿಗಳಿಗಾಗಲಿ ಸಿಗದಂತೆ ಕೌಶಲ ಬಳಸಿ ನಕಲು ಮಾಡುವುದು. ನಪುಂಸಕ ನಕಲು ಎಂದರೆ ಅದು ಮುಂದಿನವರ ಇಲ್ಲವೆ ಪಕ್ಕದವರ ಉತ್ತರಗಳನ್ನು ಭಟ್ಟಿ ಇಳಿಸುವುದು. ಈ ಮೂರು ವಿಧಗಳನ್ನು ಅವನು ಕರಗತಮಾಡಿಕೊಂಡಿದ್ದ. ಆಯಾ ಸಂದರ್ಭಕ್ಕನುಸಾರವಾಗಿ ಅದನ್ನು ಯಶಸ್ವಿಯಾಗಿ ಬಳಸಿ ತೇರ್ಗಡೆಯೂ ಆಗುತ್ತಿದ್ದ.
ಬಹುಶಃ ಪರೀಕ್ಷಾ ಪದ್ಧತಿಯ ಜೊತೆ ಜೊತೆಗೆ ನಕಲಿ ಮಾಡುವ ಪದ್ಧತಿಯು ಹುಟ್ಟಿಕೊಂಡಿರಬೇಕು. ಗಾಂಧಿಜಿಯವರಿಗೆ ಸ್ವತಃ ಮಾಸ್ತರರೇ ನಕಲು ಮಾಡಲು ಪ್ರೇರೇಪಿಸಿದ್ದನ್ನು ಪಠ್ಯಪುಸ್ತಕದಲ್ಲಿ ಓದಿದ್ದೇವೆ. ಇನ್ನೂ ಕಾಪಿ ಮಾಡುವುದರಲ್ಲೂ ಎಷ್ಟು ವೈವಿದ್ಯ ? ಸಾಧಾರಣವಾಗಿ ಪರೀಕ್ಷಾ ಪ್ರಾರಂಭದಲ್ಲೇ ಪ್ಯಾಂಟು ಷರ್ಟ್ ನ ಜೇಬುಗಳನ್ನು, ಜಾಮಿಟ್ರಿ ಬಾಕ್ಸುಗಳನ್ನು ತರುವುದರಿಂದ ಕಾಪಿ ಚೀಟಿಗಳನ್ನು ಅಲ್ಲಿ ಇಡುವುದು ಅಪರೂಪ. ತಮ್ಮ ಮೂಲದ್ವಾರದ ಸಮೀಪ ಚೀಟಿಗಳನ್ನಿಟ್ಟುಕೊಂಡು, ಅದನ್ನು ತೆಗೆಯಲು ಸಾಹಸ ಪಡುವುದನ್ನು ಕಣ್ಣಾರೆ ನೋಡಿಯೇ ತಣಿಯಬೇಕು. ಕಾಲುಚೀಲದೊಳಗೆ, ಷೂಗಳ ಸೋಲ್ನೊಳಗೆ, ಕಾಲರ್ಪಟ್ಟಿ, ಪ್ಯಾಂಟು, ಷಟರ್ಿನ ಮಡಿಕೆಯೊಳಗೆ, ಹೆಣ್ಣು ಮಕ್ಕಳು ಪರ್ಸ್ ನೊಳಗೆ ಇಟ್ಟುಕೊಂಡಿರುತ್ತಾರೆ. ಒಬ್ಬ ಅಂತೂ ತನ್ನ ಪೊದೆಕೂದಲಿನ ನಡುವೆ ಚೀಟಿಗಳನ್ನಿರಿಸಿದ್ದ, ಇನ್ನು ಅಲ್ಲಿನ ಅಕ್ಷರಗಳಂತೂ ಸೂಕ್ಷ್ಮದರ್ಶಕದ ಸಹಾಯದಿಂದ ವೀಕ್ಷಿಸಬಹುದಾದಂತವು. ಕೆಲವು ಗೈಡ್ನ ಪ್ರಕಾಶಕರಂತೂ ಇಂಥವರಿಗೆ ಅನುಕೂಲವಾಗಲೆಂದೆ ತಮ್ಮ ಗೈಡನ್ನು ಮುದ್ರಿಸಿರುತ್ತಾರೆ. ಅವರ ನೆರವಿಗೆಂದು ಮೈಕ್ರೋ ಜೆರಾಕ್ಸ್ಗಳು ಬಂದಿವೆ.
ಇವರಿಗೆ ನೆರವು ನೀಡಲೆಂದು ಬರುವವರದ್ದು ಇನ್ನೊಂದು ಕಥೆ. ಪರೀಕ್ಷೆ ಬರೆಯುವವರಿಗಿಂತ ಇವರೆ ಹೆಚ್ಚು, ಎಕ್ಸೈಟ್ ಆಗಿರುತ್ತಾರೆ. ಎಸ್.ಎಸ್.ಎಲ್.ಸಿ ಗೆ ಹೊಸ ಪರೀಕ್ಷಾ ಕೇಂದ್ರವೊಂದು ಮಂಜೂರಾಗಿತ್ತು. ಅಕ್ಕಪಕ್ಕದ ಎರಡು ಶಾಲೆಗಳನ್ನು ಈ ಶಾಲೆಗೆ ಪರೀಕ್ಷೆಗಾಗಿ ಸೇರ್ಪಡೆ ಮಾಡಲಾಗಿತ್ತು. ಈ ಮಕ್ಕಳಿಗಾಗಿ ಊರಿನ ದಾನಿಯೊಬ್ಬರು ಮಧ್ಯಾಹ್ನದ ಲಘುಉಪಹಾರದ ವ್ಯವಸ್ಥೆಯನ್ನು ಮಾಡಿದ್ದರು. ಆದರೆ ಊಟ ತಂದ ಕಾಲುಗಂಟೆಗೆ ಅದು ಖಾಲಿಯಾಗಿ ಅನ್ನಕ್ಕಾಗಿ ಹಾಹಾಕಾರ! ನೋಡಿದರೆ ಪರೀಕ್ಷೆಯ ವಿದ್ಯಾರ್ಥಿಗಳಿಗಿಂತ, ನೆರವು ನೀಡಲು ಬಂದಿದ್ದ ಸಂಖ್ಯೆಯೆ ದೊಡ್ಡದಿದ್ದು, ಅವರೆಲ್ಲಾ ಬಿಟ್ಟಿ ಊಟಕ್ಕಾಗಿ ಮುಗಿಬಿದ್ದಿದ್ದರು. ಇದನ್ನು ಗಮನಿಸಿದ ಪ್ರಾಚಾರ್ಯರು ತಮ್ಮ ಸಂಸ್ಥೆಯಲ್ಲಿ ಮಾರನೆಯ ವರ್ಷದಿಂದ ಊಟವನ್ನು ಬಂದ್ ಮಾಡಿದ್ದರು.
ಮಾರ್ಚ್ -ಏಪ್ರಿಲ್ ತಿಂಗಳಿನಲ್ಲಿ ಎಸ್.ಎಸ್.ಎಲ್.ಸಿ, ಪಿಯೂ.ಸಿ ಪರೀಕ್ಷೆಗಳು ಪ್ರಾರಂಭವಾದರೆ ಪ್ರಾಮಾಣಿಕ ಶಿಕ್ಷಕರಿಗೆ ವನವಾಸವೇ ಸರಿ. ಕೆಲವು ಶಿಕ್ಷಕರಂತೂ ವಿದ್ಯಾರ್ಥಿಗಳಿಗೆ ನೆರವು ಹಸ್ತ ನೀಡುವುದರಲ್ಲಿ ಸದಾ ಮುಂದು ಇವರು ಕೆಲ ನ್ಯೂಟೈಪ್ಗಳಿಗೆ ಉತ್ತರ ಹೇಳಿ ವಿದ್ಯಾರ್ಥಿಳಿಂದ ಥ್ಯಾಂಕ್ಯೂ ಸಾರ್, ಮಾತು ಕೇಳಿ ಧನ್ಯತಾಭಾವ ಅನುಭವಿಸುತ್ತಾರೆ. ಇದೇ ವಿದ್ಯಾರ್ಥಿಗಳು ಆ ಶಿಕ್ಷಕರು ಇವರ ಎದುರಿಗೆ ಹಾದುಹೋದಾಗ ಲೋ ಇವರು ತುಂಬಾ ಲೂಸು (?) ಕಣೋ ಎಂದು ಹೇಳುವುದನ್ನು ಗಮನಿಸಿದ್ದೇನೆ.
ಇನ್ನು ಶಿಕ್ಷಕರು ‘ಸ್ಟ್ರಿಕ್ಟ್’ ಆದರೆ ತುಂಬಾ ರಿಸ್ಕ್. ನನ್ನ ಆತ್ಮೀಯ ಸ್ನೇಹಿತರೊಬ್ಬರು ತಮ್ಮ ಶಿಸ್ತಿನಿಂದಾಗಿ ಪ್ರತಿ ಪರೀಕ್ಷೆಯ ಸಂದರ್ಭದಲ್ಲೂ ಒಂದಲ್ಲ ಒಂದು ತೊಂದರೆ ಅನುಭವಿಸುತ್ತಿದ್ದರು. ಪರೀಕ್ಷೆ ಮುಗಿದೊಡನೆ ಕೆಲವು ವಿದ್ಯಾರ್ಥಿಗಳು ಅವರಿಗೆ ಬೆದರಿಕೆಯನ್ನೊಡ್ಡಿ ನಾವೆಲ್ಲಾ ಅವರನ್ನು ಸುತ್ತ್ತುವರೆದು ಆಫೀಸ್ ರೂಮಿಗೆ ಕರೆದುಕೊಂಡು ಹೋಗಬೇಕಾಯಿತು. ಒಮ್ಮೆಯಂತೂ ಒಬ್ಬಾತ ಉತ್ತರ ಪತ್ರಿಕೆಯನ್ನು ಹೊತ್ತೊಯ್ದು, ಸುಟ್ಟುಹಾಕಿ, ಅದರ ಕೇಸ್ಗಾಗಿ ಈಗಲೂ ಕೋಟರ್್ ಅಲೆಯುತ್ತಿದ್ದಾರೆ. ಕೆಲವೊಮ್ಮೆ ಎಷ್ಟೇ ಸ್ಟ್ರಿಕ್ಟ್ ಅಂದುಕೊಂಡರೂ ಅದೇ ವಿಷಯದ ಶಿಕ್ಷಕರನ್ನು ಅವರದೆ ಶಾಲೆಯ ಮಕ್ಕಳ ಕೊಠಡಿಯ ಮೇಲ್ವಿಚಾರಕರಾಗಿ ಹಾಕಿದರೆ ಖಂಡಿತ ಒಂದೆರಡು ಅಂಕಗಳು ಜಾರಿಹೋಗುವುದುಂಟು. ಹೀಗಾಗಿ ಆಯಾ ವಿಷಯದ ಶಿಕ್ಷಕರನ್ನು ಕೊಠಡಿ ಮೇಲ್ವಿಚಾರಕರಾಗಿ ಹಾಕಲು ಇಲಾಖೆ ನಿರ್ಬಂಧಿಸಿದೆ. ಕೆಲವೆಡೆ ಕೆಲವು ಶಿಕ್ಷಕರಂತೂ ಎಷ್ಟು ಉದಾರಿಗಳೆಂದರೆ ಸ್ಕ್ವಾಡ್  ಬಂದಾಗ ವಿದ್ಯಾರ್ಥಿಗಳನ್ನು ಎಚ್ಚರಿಸುವುದಲ್ಲದೆ ಅವರಿಂದ ಚೀಟಿ ಪಡೆದು ತಮ್ಮ ಜೇಬಿನಲ್ಲಿಟ್ಟುಕೊಂಡು ಅವರು ಆ ಕಡೆ ಹೋದ ನಂತರ, ಈ ಕಡೆ ವಿದ್ಯಾರ್ಥಿಗಳಿಗೆ ನೀಡಿ ವಿದ್ಯಾರ್ಥಿ ಗಳಿಗೆ ಅನುರಾಗಿಗಳಾಗಿರುತ್ತಾರೆ.

ಕೊಠಡಿಯ ಮೇಲ್ವಿಚಾರಕರು ಎಚ್ಚರಿಕೆಯಿಂದ ಗಮನಿಸಬೇಕಾದದ್ದು ಎಂದರೆ, ಕಿಟಕಿಯ ಪಕ್ಕದಲ್ಲಿ ಕುಳಿತಿರುವ ವಿದ್ಯಾರ್ಥಿಗಳನ್ನು. ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆಗಳನ್ನು ಹಂಚಿ, ಉತ್ತರ ಪತ್ರಿಕೆಗಳಿಗೆ ಸಹಿಮಾಡಿ ಬರುವಷ್ಟರಲ್ಲಿ, ಈ ವಿದ್ಯಾರ್ಥಿಗಳು ಪ್ರಶ್ನೆಯನ್ನು ಬರೆದು ಕಿಟಕಿಯಿಂದಾಚೆಗೆ ಎಸೆದಿರುತ್ತಾರೆ. ಇತ್ತ ಕೆಲ ಹನುಮಂತರು ಬೇಲಿಯನ್ನು ಥಟ್ಟನೆ ಹಾರಿ ಮಿಂಚಿನೋಪಾದಿಯಲ್ಲಿ ಚೀಟಿಗಳನ್ನು ತಂದು, ಗೈಡು, ನೋಟ್ಸ್ ಮುಂತಾಗಿ ಸಾಮಗ್ರಿಗಳನ್ನಿಟ್ಟುಕೊಂಡು ಕಾಯುತ್ತಿರುವವರಿಗೆ ನೀಡಿದರೆ ಇತ್ತ ಇನ್ಸ್ಟಂಟ್ ಉತ್ತರಗಳನ್ನು ಕಾರ್ಬನ್ ಕಾಪಿ ಹಾಕಿ ಬರೆದುಕೊಡುವರಿಗೆ ಬೇಡಿಕೆ ಹೆಚ್ಚುತ್ತದೆ. ಹೀಗೆ ಪ್ರಶ್ನೆಗಳು ಹೊರಬಂದ ಅರ್ಧಘಂಟೆಯೊಳಗೆ ಉತ್ತರಗಳು ಸಿದ್ಧವಾಗಿ ಬೇಲಿ ಹಾರುವವರ ಸಂಖ್ಯೆ ಹೆಚ್ಚತೊಡಗುತ್ತದೆ. ಅಲ್ಲಿ ಜಮಾವಣೆಯಾದ ಜನರ ಸಂಖ್ಯೆ ಹೆಚ್ಚತೊಡಗಿದಂತೆ ಮುಖ್ಯ ಅಧೀಕ್ಷಕರಿಗೆ ಪ್ರಶ್ನೆಗಳು ಹೊರಹೋಗಿರುವುದು ಖಾತ್ರಿಯಾಗುತ್ತದೆ. ಪ್ರಶ್ನೆಗಳು ಎಲಿಂದ ಹೋಗಿವೆ ಎಂದು ಸಂಶೋಧನೆಯಲ್ಲಿ ತೊಡಗಿ ಕೊಠಡಿ ಮೇಲ್ವಿಚಾರಕರ ಬೇಜವಾಬ್ದಾರಿಯ ಬಗ್ಗೆ ಗೊಣಗುತ್ತಾ, ಪೋಲಿಸರಿಗೆ ಎಚ್ಚರದಿಂದರಲು ಹೇಳಿ, ಇತ್ತ ಓಡಾಟ ಪ್ರಾರಂಭಿಸಿದೊಡನೆ ಅತ್ತ ಜೂಟಾಟ ಪ್ರಾರಂಭವಾಗುತ್ತದೆ. ಅವರೆಲ್ಲರ ಕಾವಲನ್ನು ಭೇದಿಸಿ ಕೊನೆಗೂ ಉತ್ತರಗಳನ್ನು ಕೊಠಡಿಯ ಒಳಕ್ಕೆ ತಲುಪಿಸಲು ಯಶಸ್ವಿಯಾಗುತ್ತಾರೆ. ಒಮ್ಮೆಯಂತೂ ಈ ರೀತಿ ಕೊಟ್ಟು ಓಡುವಾಗ ಪೋಲಿಸ್ರಿಂದ ಪರಾರಿಯಾಗಲು ಯತ್ನಿಸಿ ಬಿದ್ದು ಅಲ್ಲಿಂದ ನೇರವಾಗಿ ಒಬ್ಬಾತ ಆಸ್ಪತೆಯ ದಾರಿ ಹಿಡಿಯಬೇಕಾಯಿತು. ಕೆಲವು ಕಡೆಯಂತೂ ಸ್ವತಃ ಪೋಲಿಸರೆ ವಿದ್ಯಾರ್ಥಿಗಳ ನೆರವಿಗೆ ಬರುವುದುಂಟು.
ಒಂದು ಕೇಂದ್ರದ ಮುಖ್ಯ ಅಧೀಕ್ಷಕರಂತೂ, ತಪಾಸಣಾಧಿಕಾರಿಗಳ ಕೈಯಲ್ಲಿ ವಿದ್ಯಾರ್ಥಿಗಳು ಚೀಟಿ ಸಮೇತ ಸಿಕ್ಕಿಹಾಕಿಕೊಂಡರೆ, ಅಧಿಕಾರಿಗಳ ಎದುರಿಗೆ ದನ ಬಡಿಯುವ ಹಾಗೆ ಬಡಿಯುವುದರ ಜೊತೆಗೆ ‘ನಮ್ಮ ಸೆಂಟರ್ ಹೆಸರು ಹಾಳುಮಾಡುತ್ತೀರಾ, ಬಡ್ಡೀ ಮಕ್ಕಳ’ ಎಂದು ಹೀನಾಮಾನ ಬೈದು ಕೊನೆಗೆ ಅಧಿಕಾರಿಗಳೆ ಗಾಬರಿಯಾಗಿ ಹೋಗಲಿ ಬಿಟ್ಟುಬಿಡಿ ಎನ್ನುವಂತೆ ಮಾಡುತ್ತಿದ್ದರು. ಅವರು ಆ ಕಡೆ ಹೋದೋಡನೆ ಇವರು ಮಕ್ಕಳನ್ನು ಕೊಠಡಿಗೆ ಕಳುಹಿಸಿ ಅಗತ್ಯ ಪರಿಕರಗಳನ್ನು ಪೂರೈಸಿ ಆ ವಿದ್ಯಾರ್ಥಿಗಳ ಪಾಲಿಗೆ ಆಪತ್ಬಾಂದವರಂತೆ ಕಂಗೊಳಿಸುತ್ತಿದ್ದರು.
ಕೆಲವು ಪರೀಕ್ಷಾ ಕೇಂದ್ರಗಳಂತೂ ಕಾಪಿ ವಿಷಯಕ್ಕಾಗಿಯೇ ಕುಖ್ಯಾತಿ ಹೊಂದಿವೆ. ನಮ್ಮೂರ ನಾರಾಯಣ ಎಲ್ಲಾ ವಿಷಯ ಸೇರಿ ಇಪ್ಪತ್ತೆಂಟು ಅಂಕ ಪಡೆದಿದ್ದ. ಅದನ್ನು ನೋಡಿದ ನಮ್ಮ ಕನ್ನಡ ಮಾಸ್ಟರ್ ಲೋ ಕನ್ನಡ ಪಾಸಾಗೋಕೆ ಐವತ್ಮೂರು ಅಂಕ ಬೇಕು. ನೀನು ಒಟ್ಟು ಇಪ್ಪತ್ತೆಂಟು ಅಂಕ ತೆಗೆದುಕೊಂಡಿದ್ದೀಯಾ, ನೀನು ಉದ್ದಾರವಾದ ಹಾಗೇ ಅಂದಿದ್ದರು. ಅವನು ಸೆಂಟರ್ ಬದಲಾಯಿಸಿ, ಮೈಸೂರು ಜಿಲ್ಲೆಯ ಸೆಂಟರೊಂದರಲ್ಲಿ ಪರೀಕ್ಷೆ ಬರೆದು ದ್ವಿತೀಯ ದಜರ್ೆಯಲ್ಲಿ ಪಾಸಾದ. ಮರುವರ್ಷ ನೋಡಿದರೆ ಅನೇಕರು ಇವನ ಜಾಡನ್ನೆ ಹಿಡಿದು ಆ ಪರೀಕ್ಷಾ ಕೇಂದ್ರದಲ್ಲಿ ತಮ್ಮ ಹೆಸರನ್ನು ನೊಂದಾಯಿಸಿದ್ದರು. ಈಗ ಪರೀಕ್ಷಾಪದ್ಧತಿಯಲ್ಲಿ ಸುಧಾರಣೆಯಾಗಿ ಇಂತಹ ಅಟೆಂಪ್ಟ್ ಪರೀಕ್ಷೆ ಬರೆಯುವವರಿಗಾಗಿ ಪ್ರತ್ಯೇಕ ಪರೀಕ್ಷಾ ಕೇಂದ್ರಗಳಿವೆ. ಪರೀಕ್ಷೆಗಳಲ್ಲಿ
ಒಮ್ಮೊಮ್ಮೆ ಅನಿರೀಕ್ಷಿತಗಳು ಸಂಭವಿಸುವುದುಂಟು. ನಮ್ಮೂರ ನಾಗ, ರೇವಣ್ಣ, ಪ್ರಕಾಶ ಪರೀಕ್ಷೆಗೆ ಹೋಗಿದ್ದರು. ಬೆಳಿಗ್ಗೆ ಬಂದ ಕೊಠಡಿ ಮೇಲ್ವಿಚಾರಕರು ಶಿಸ್ತಿನ ಸಿಪಾಯಿಯಾಗಿದ್ದರು. ಅವರು ನಾಗನ ಜೊತೆಯಲ್ಲಿದ್ದ ಚೀಟಿಗಳನ್ನು ಕಂಡು ಉತ್ತರ ಪತ್ರಿಕೆಯನ್ನು ಕಿತ್ತುಕೊಂಡು ಹೊರಗೆ ಅಟ್ಟಿದ್ದರು. ಮಧ್ಯಾಹ್ನ ಏನಾಗುವುದೋ ಎಂದು ಚಿಂತಿತನಾಗಿಯೇ ಸೆಕೆಂಡ್ ಪೇಪರ್ಗೆ ಹೋಗಿದ್ದ. ಆದರೆ ಬೆಳಗಿನ ಘಟನೆಯಿಂದಾಗಿ ಚೀಟಿಯನ್ನು ಒಯ್ದಿರಲಿಲ್ಲ. ಆದರೆ ಮಧ್ಯಾಹ್ನ ಅವರಿಗೆ ಪರಿಚಯವಿದ್ದ ಮಾಸ್ತರೆ ಬೀಳಬೇಕೆ ! ವಿಧಿಯಿಲ್ಲದೆ ನಾಗ ತನ್ನ ಮುಂದಿದ್ದ ಪ್ರಕಾಶ ಮತ್ತು ಶಿವಣ್ಣ ಬರೆದು ಎಸೆಯುತ್ತಿದ್ದ ಚೀಟಿಗಳನ್ನು ಪಡೆದುಕೊಂಡು ಉತ್ತರ ಬರೆದು ಬಂದಿದ್ದ. ಫಲಿತಾಂಶ ಬಂದಾಗ ಶಿವಣ್ಣ, ಪ್ರಕಾಶ ಡುಂಕಿ ಹೊಡೆದಿದ್ದರೆ, ನಾಗ ಎಲ್ಲರ ನಿರೀಕ್ಷೆಯನ್ನು ಮೀರಿ ಪಾಸಾಗಿದ್ದ.
ಇನ್ನು ಸಕರ್ಾರಿ ವೃತ್ತಿಗೆ ಸೇರಿದ ನಂತರ ತೇರ್ಗಡೆ ಹೊಂದಬೇಕಾದ ಇಲಾಖಾ ಪರೀಕ್ಷೆಗಳಲ್ಲಿ ಪುಸ್ತಕಗಳನ್ನು ನೋಡಿಕೊಂಡು ಬರೆಯುವ ಅವಕಾಶಗಳಿದ್ದರೂ ಅಲ್ಲೂ ಉತ್ತರ ಬರೆಯಲಾಗದೆ ಪರದಾಡುವವರನ್ನು ಗಮನಿಸಬೇಕು. ಖಜಾನೆ, ಕಂದಾಯ, ಪೋಲೀಸ್ ಮುಂತಾದ ಇಲಾಖೆಗಳಲ್ಲಿ, ಬಡ್ತಿಗಾಗಿ ಇಲಾಖಾ ಪರೀಕ್ಷೆ ತೇರ್ಗಡೆಯಾವುದು ಕಡ್ಡಾಯವಾಗಿರುತ್ತದೆ. ಇದಕ್ಕಾಗಿ ಕೆಲವೊಮ್ಮೆ ಈ ಪರೀಕ್ಷೆ ಬರೆಯುವ ಮೇಲ್ಮಟ್ಟದ ಅಧಿಕಾರಿಗಳಿಗೆ ನೆರವು ನೀಡಲು ನೌಕರರ ತಂಡವೇ ತಯಾರಿದ್ದು ಉತ್ತರದ ಚೀಟಿಗಳನ್ನು ಕೊಡುವ ತರಾತುರಿಯಲ್ಲಿರುತ್ತಾರೆ.
ಇತ್ತೀಚಿಗಂತೂ ಇದಕ್ಕೂ ಮುಂದೆ ಹೋಗಿ ಪರೀಕ್ಷೆ ಇಲ್ಲವೇ ಪರೀಕ್ಷೆಯ ನಂತರ ಪ್ರತ್ಯೇಕವಾಗಿ ಆ ವಿದ್ಯಾರ್ಥಿಗಳನ್ನು ಬೇರೆಡೆ ಕೂರಿಸಿ ಉತ್ತರ ಬರೆಸುವ ಮತ್ತು ಕೆಲೆವೆಡೆ, ಬೇರೆಯವರಿಂದ ಉತ್ತರ ಪತ್ರಿಕೆಗಳನ್ನು ಬರೆಸುವ ಪ್ರಸಂಗಗಳು ನಡೆಯುತ್ತಿದ್ದು, ಅವು ಮಾಧ್ಯಮಗಳಲ್ಲೂ ಆಗಾಗ ವರದಿಯಾಗುತ್ತಿರುತ್ತದೆ. ಈ ನಕಲಿನ ಪಿಡುಗು ವ್ಯಾಪಕವಾಗಿ ಹರಡುತ್ತಿರುವಂತೆಯೇ ಇದಕ್ಕೆ ಪರಿಹಾರ ರೂಪಿಸಿದಂತೆ ಕಾಪಿಯ ವಿಧಗಳು ವೈವಿದ್ಯವಾಗುತ್ತಾ ಸಾಗುತ್ತಿವೆ.
ಇದನ್ನು ಮನಗಂಡ ಬಹುತೇಕ ಖಾಸಗಿ ಉದ್ಯೋಗ ಸಂಸ್ಥೆಗಳು ಅಂಕಪಟ್ಟಿಗೆ ಮಾನ್ಯತೆ ನೀಡದೆ ವೈಯಕ್ತಿಕ ಸಂದರ್ಶನಕ್ಕೆ ಒತ್ತು ನೀಡುತ್ತಿವೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದವರು ಕೂಡ ಸಿ.ಇ.ಟಿ. ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡವ ಹಾದಿ ಹಿಡಿದಿವೆ. ಆದರೆ ಅಲ್ಲೂ ಕೂಡ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ರಂಗೋಲಿ ಕೆಳಗೆ ನುಸಿಯುವ ‘ಕಾಪಿ’ಗಳು ತಮ್ಮ ಚಾಕ-ಚಕ್ಯತೆ ಪ್ರದರ್ಶಿಸುತ್ತಿದ್ದಾರೆ.
ಇವುಗಳ ನಡುವೆ ಸ್ವತಃ ಮಾಸ್ತರರೇ ಒತ್ತಾಯಿಸಿದರೂ ಕಾಪಿ ಮಾಡಲು ನಿರಾಕರಿಸಿದ ಮಹಾತ್ಮಗಾಂಧಿಯವರು ಸದಾ ನಮಗೆ ಆದರ್ಶವಾಗಿಯೇ ಉಳಿಯುತ್ತಾರೆ.
 

‍ಲೇಖಕರು G

April 14, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Pratibha

    ನಾನು ಹತ್ತನೇ ತರಗತಿ ಪರೀಕ್ಷೆ ಬರೆದಾಗ (30 ವರ್ಷಗಳ ಹಿಂದೆ)ಶಿಕ್ಷಕರೇ ಕಾಪಿ ಕೊಡುತ್ತಿದ್ದರು. 75% ಫಲಿತಾಂಶ. ನಾನು ಸ್ನಾತಕ್ಕೋತ್ತರ ಅಭ್ಯಾಸವನ್ನು ಅಮೇರಿಕೆಯ ವಿಶ್ವವಿದ್ಯಾಲಯದಲ್ಲಿ ಮಾಡುತ್ತಿದ್ದಾಗ ಹೆಚ್ಚಿನ ಎಲ್ಲಾ ಪರೀಕ್ಷೆಗಳು ತೆರೆದ ಪುಸ್ತಕದ ಪರೀಕ್ಷೆಗಳಾಗಿರುತ್ತಿದ್ದವು. ಪ್ರಶ್ನೆಗಳು ಕಲಿತ ಪಾಠಗಳ practical applicationಗಳಾಗಿರುತ್ತಿದ್ದವು. ತೆರೆದ ಪುಸ್ತಕದ ಪರೀಕ್ಷೆ ಇಲ್ಲದಿದ್ದರೆ formulaಗಳನ್ನಾಗಲೀ, ಮುಖ್ಯ ಟಿಪ್ಪಣಿಗಳನ್ನಾಗಲೀ ತರಬಹುದಾಗಿತ್ತು. ಮುಂದೆ licensing ಪರೀಕ್ಷೆ ತೆಗೆದುಕೊಳ್ಳುವಾಗಲೂ ಇದೇ ಪದ್ಧತಿ. ಹೀಗಿದ್ದೂ ಎಲ್ಲರೂ ಅತ್ಯುತ್ತಮ ಅಂಕ ತೆಗೆಯುವುದೇನೂ ಸುಲಭ ಆಗಿರಲಿಲ್ಲ. ಸರಿಯಾಗಿ ಪಾಠ ಅರ್ಥ ಮಾಡಿಕೊಂಡವರಿಗೆ ಮಾತ್ರ ಅದು ಸಾಧ್ಯವಾಗಿತ್ತು. ನಮ್ಮಲ್ಲೂ ಈ ಪದ್ಧತಿಯಿಂದ ಕಾಪಿಯ ಪಿಟುಗನ್ನು ದೂರ ಮಾಡಬಹುದೇನೋ?

    ಪ್ರತಿಕ್ರಿಯೆ
  2. ಜೆ.ವಿ.ಕಾರ್ಲೊ

    ನಮ್ಮ ಪರೀಕ್ಷಾ ವಿಧಾನಗಳೂ ಕೂಡ ‘ಕಾಪಿ’ಯನ್ನು ಪ್ರೇರೇಪಿಸುವಂತಿವೆ.ಪರೀಕ್ಷೆ ಕೊಡುವವರೂ ಕೂಡ ಹಳೆಯ ಪ್ರಶ್ನೆಗಳನ್ನೇ ‘ಕಾಪಿ’ ಮಾಡಿ ಕೊಡುವುದನ್ನು ಬಿಡಬೇಕು!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: