ಪಾಂಚಜನ್ಯವ ಊದಲಾರದೆ..

ಗುಳೆ

ಡಾ. ಗೀತಾ ವಸಂತ

ಮಹಾನಗರಗಳೆಂಬ ಗುಳ್ಳೆಗಳೊಡೆದು
ಗುಳೆಹೊರಟಿದ್ದಾರೆ ಹಸಿದ ಅವತಾರ ಪುರುಷರು.

ಸೊಂಟಬಳಸಿದ ಕಪ್ಪು ಹೈವೇಗಳ
ಕಾಳಿಂಗ ಸರ್ಪದಂಥ ಬಿಗಿತದಲಿ
ಉಸಿರುಗಟ್ಟಿದ್ದ ಕೃಷ್ಣ
ಮಾಯದ ನಿದ್ದೆ ಮುಗಿಸಿ ಎಚ್ಚರಾಗಿದ್ದಾನೆ.
ತುತ್ತಿನ ಚೀಲ ತುಂಬುವ ನಿತ್ಯ ಯುದ್ಧಗಳಲ್ಲಿ
ಸೋತು ಸುಣ್ಣವಾದವರ ಮುಂದೆ
ಪಾಂಚಜನ್ಯವ ಊದಲಾರದೆ ಕುಳಿತಿದ್ದಾನೆ.
ಬೆಣ್ಣೆಯಂಥ ಪಾದಗಳಲ್ಲಿ ಬೊಬ್ಬೆಯೆದ್ದ
ಕುಂಟುಗಾಲಿನ ರಾಧೆಯರ ಜೊತೆಗೂಡಿ
ಗೊಲ್ಲರಹಟ್ಟಿಗಳ ಹುಡುಕಿ ಹೊರಟಿದ್ದಾನೆ.

ಧರ್ಮಕಾರಣ ರಾಜಕಾರಣದ
ಸಂಕಟದ ಸರಪಳಿಯಲ್ಲಿ ಬಂಧಿತ ರಾಮ
ಇತ್ತ ಓಡೋಡಿ ಬಂದಿದ್ದಾನೆ
ರಥಚಕ್ರಗಳು ತಲುಪಲಾಗದ ತಾವು ಹುಡುಕಿ.
ಶಬರಿಯ ಗುಡಿಸಲಲ್ಲಿ ಮುದ್ದೆಯುಂಡು
ಮುದ್ದಾಗಿ ನಿದ್ದೆಹೋಗಿದ್ದಾನೆ.
ಹಳೆಸೀರೆಯ ಕಮಟುವಾಸನೆ ಹೊದ್ದು
ನಿಡಿದಾಗಿ ಉಸಿರೆಳೆಯುತಿದ್ದಾನೆ
ಬೆಳುದಿಂಗಳ ಮಂದಬೆಳಕಲ್ಲಿ
ಕಾಣುತ್ತ ಹೊಸಕನಸ
ನಿದ್ದೆಯಲ್ಲೇ ನಗುತ್ತಿದ್ದಾನೆ.

ಹಗಲಲ್ಲಿ ಇರುಳು ಇರುಳಲ್ಲಿ ಹಗಲು
ಸೃಜಿಸುವ ಮಾಯದ ಊರುಗಳ
ಅನುದಿನವೂ ಉರಿವ ಜೀವ ಸಂತೆಯಲ್ಲಿ
ಕಳೆದುಹೋದ ಸಿದ್ದಾರ್ಥ ಸಿಕ್ಕಿದ್ದಾನೆ.
ಉಂಡಷ್ಟೂ ನೀಗದ ಕೊಂಡಷ್ಟೂ ತೀರದ
ದಾಹಗಳ ದಾಳದಲ್ಲಿ ಉರುಳಿಹೋದವ
ಒಳಗಿಳಿದಿಳಿದು ತಿಳಿನೀರಲ್ಲಿ
ತನ್ನ ಕಂಡಿದ್ದಾನೆ.

ಹುಸಿಭಾಷಣಗಳ ಹುದುಲಲ್ಲಿ ಸಿಕ್ಕ
ತನ್ನ ಪ್ರತಿಮೆಯ ತಾನೇ ಒಡೆದು ಬುದ್ದ
ಸಿದ್ದಅರ್ಥಗಳ ಮೈಕೊಡವಿ ಎದ್ದು ನಡೆದಿದ್ದಾನೆ.
ನಡೆಯುತ್ತಲೇ ಇದ್ದಾನೆ.

 

‍ಲೇಖಕರು avadhi

May 5, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Malati Bhat

    ಮೇಡಂ ಕವಿತೆ ತುಂಬಾ ಇಷ್ಟವಾಯಿತು….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: