ಪಲ್ಲವಿ ಇಡೂರು ಓದಿದ ‘ಸತ್ತು’

ಪಲ್ಲವಿ ಇಡೂರು

ದಿನ ಬೆಳಗಾದರೆ ನಾವು ಭೇಟಿ ಮಾಡುವುದು ಅದೆಷ್ಟೊ ಮಂದಿಯನ್ನು. ಒಬ್ಬೊಬ್ಬರದ್ದು ಒಂದೊಂದು ರೀತಿಯ ಬದುಕು, ಯೋಚನಾ ಲಹರಿ. ಎಲ್ಲ ಯಾಕೆ ಇಲ್ಲೇ ಸೋಶಿಯಲ್ ಮೀಡಿಯಾಗಳಲ್ಲಿ ಗೊತ್ತಿರುವ, ಗೊತ್ತಿಲ್ಲದ ಅನೇಕರು, ಮುಖವೇ ನೋಡಿರದ ಅನೇಕರು ಎಲ್ಲರೂ ಜೊತೆಜೊತೆಯಾಗಿಯೇ ಒಬ್ಬರಿಗೊಬ್ಬರು ಪರಿಚಿತರೆನಿಸಿಕೊಂಡಿದ್ದರೂ ನಿಜಾರ್ಥದಲ್ಲಿ ಅಪರಿಚಿತರೇ! ಅಷ್ಟೇ ಯಾಕೆ ತೀರ ಚಿಕ್ಕ ವಯಸ್ಸಿನಿಂದ ಜೊತೆಯಲ್ಲೇ ಆಡಿ ಬೆಳೆದ ಸ್ನೇಹಿತರು ಕೇವಲ ಐಡಿಯೊಲಾಜಿಕಲ್ ಡಿಫರೆನ್ಸ್ ನಿಂದ ಅಪರಿಚಿತರಾಗಿ ಹೋಗುತ್ತಾರೆ.

ವರ್ಷಾನುಗಟ್ಟಲೆ ಪ್ರೀತಿಸಿ ಮದುವೆಯಾದ ಗಂಡ ಹೆಂಡತಿಯೂ ಜೊತೆಯಲ್ಲಿ ಬದುಕಲು ಶುರುವಾದ ನಂತರ ಹುಟ್ಟುವ ಪರಸ್ಪರರ ಮೇಲಿನ ಅಸಹನೆಗಳು ಹೆಮ್ಮರವಾಗಿ ದೂರಾಗುವ ಸಂಭವವೂ ಇರುತ್ತದೆ. ಇಷ್ಟುದ್ದದ ಪೀಠಿಕೆ ಈ ಎಲ್ಲ ಉರುಳಾಡಿಕೊಂಡು ಹೋಗುವಷ್ಟು ಧಾವಂತದ ಬದುಕಿನ ನಡುವೆಯೂ ನಾ ಓದಿದ ಈ ಪುಟ್ಟ ಕನ್ನಡದ ಕಾದಂಬರಿಯ ಕಾರಣಕ್ಕೆ.

ಎರಡು ವಿಭಿನ್ನ ರೀತಿಯ ವ್ಯಕ್ತಿತ್ವಗಳಿಗೆ ಜೊತೆಯಾಗಿ ಬದುಕುವುದು ಅನಿವಾರ್ಯವಾದಾಗ, ಅನಿವಾರ್ಯತೆಯೇ ಪ್ರೀತಿಯಾಗುತ್ತಾ ? ಅಥವಾ ಪ್ರೀತಿಯಿಲ್ಲದ ಅಡ್ಜೆಸ್ಟ್ ಮೆಂಟ್ ಗಳಾಗುತ್ತಾ ? ಅಥವಾ ಅಸಹನೆಯ ನಡುವಿನ ಗೊಂದಲದ ಬದುಕಾಗುತ್ತಾ ? ಅರ್ಥೈಸಿಕೊಳ್ಳುವುದು ನಿಜಕ್ಕೂ ಕಷ್ಟ!ಈ ತನಕ ಕಾದಂಬರಿಕಾರ ಕರಣಂ ಪವನ್ ಪ್ರಸಾದ್ ರು ಬರೆದ ಕಾದಂಬರಿಗಳದ್ದು ಒಂದು ತೂಕವಾದರೆ ‘ಸತ್ತು’ ವಿನದ್ದು ಇನ್ನೊಂದು ತೂಕ! ಹಾಂ ಸತ್ತು ವೇ ಯಾವಾಗಲೂ ತೂಕದ್ದು.

ಅಸ್ವಿತ್ವಕ್ಕಾಗಿ ನಾವು ಹೋರಾಡುತ್ತೇವೊ, ನಮ್ಮೆಲ್ಲ ಗೊಂದಲದ ಬದುಕಿನಲ್ಲಿ ಅಸ್ವಿತ್ವವೇ ಹೊಯ್ದಾಡುತ್ತದೊ ಈ ಪ್ರಶ್ನೆಗೆ ಈ ಪುಸ್ತಕ ಓದುವ ಮೊದಲೂ ಬಹಳ ಸಲ ಯೋಚಿಸಿದ್ದಿದೆ. ಇಲ್ಲಿರುವ ಹೆಣ್ಣಿನ ಪಾತ್ರ ಬಹಳಷ್ಟು ಸಲ ನಾನೇನೊ ಅನ್ನಿಸುವಂತಿದ್ದರೆ, ಗಂಡಿನ ತರ್ಕ ಆಗಾಗ ಬಂದು ಚುಚ್ಚುವಂತಿದೆ. ಇದ್ದಕ್ಕಿದ್ದ ಹಾಗೆ ಬರುವ ‘ನನಗೆ ಬದುಕಿನಲ್ಲಿ ಆಸಕ್ತಿ, ಸಾವಿನ ಮೇಲಲ್ಲ..’ ಎನ್ನುವಂತಹ ಫಿಲಾಸಾಫಿಕಲ್ ಸಾಲುಗಳು ಅರೇ ಹೌದಲ್ಲ, ನಾನಿದುವರೆಗೂ ನನ್ನ ಸಾವನ್ನು ಯೋಚಿಸಲೇ ಇಲ್ಲ, ಮತ್ಯಾಕೆ ಬದುಕಿಗಿಷ್ಟು ಸಂಕೋಲೆಗಳನ್ನು ಹಾಕಿಕೊಂಡಿದ್ದೇನೆ ಅನ್ನಿಸುವಂತೆ ಮಾಡಿತು..

‘ಮನುಷ್ಯ ತಾನು ಏನಾಗಿರುತ್ತಾನೊ ಅಲ್ಲಿಂದ ಅವನನ್ನು ಮೇಲಕ್ಕೆ ಎತ್ತಬಹುದು, ಅವನೂ ತೀರಾ ತಳ ಇದ್ದರೆ ಎಷ್ಟು ಎತ್ತಿದರೂ, ಮೊದಲೇ ಮೇಲಿದ್ದವನು ಇನ್ನಷ್ಟು ಮೇಲೆ ಹೋಗಿರುತ್ತಾನೆ…’ ಅನ್ನುವ ತರ್ಕ ಹೌದಲ್ಲ ಅನ್ನಿಸಿದರೆ, ‘ಅದಕ್ಕೆ… ಕೆಳಗಿರುವವರನ್ನು ಮೇಲಕ್ಕೆ ತರುವ ಮುಂಚೆ ಮೇಲಿನವರನ್ನು ಮೊದಲು ಕೆಳಗಿಳಿಸಬೇಕು’ ಅನ್ನುವುದು ಸ್ವಲ್ಪ ಸಮಾಧಾನ ನೀಡಿದರೂ, ಅರೇ, ಆಗುವಂತಹ ತರ್ಕವೇ ಇದು ? ಅನ್ನಿಸಿ ನನ್ನಂತಹ ಅನೇಕ ಕ್ರಾಂತಿಕಾರಿ ಮನಸ್ಸುಗಳನ್ನು ವಾಸ್ತವದತ್ತ ಎಳೆಯುತ್ತದೆ’….

ಸುಖವನ್ನೇ ನಿನಗಿಂತ ಕೆಳಗಿನವರನ್ನು ತುಳಿಯಲು ಉಪಕರಣ ಮಾಡಿಕೊಳ್ಳಬಾರದು’ ಅನ್ನುವ ಸುಖದಲ್ಲಿರಬೇಕಾದ ಸರಳತೆಯನ್ನು ಹೇಳಿದ್ದು ಮಾತ್ರ ನನ್ನ ಮನಸಿನ ನೇರ ಮಾತನಿಸಿದ್ದು ಸುಳ್ಳಲ್ಲ.

ಹೇಳುತ್ತಾ ಹೋದರೆ ಇಡೀ ಪುಸ್ತಕದ ಪುಟ ಪುಟವನ್ನೂ ಚರ್ಚಿಸಬಹುದಾದಂತಹ ಕೃತಿ ಇದಾಗಿರುವುದರಿಂದ ನಾ ಇದಕ್ಕಿಂತ ಜಾಸ್ತಿ ಹೇಳಲು ಹೋಗುವುದಿಲ್ಲ. ಇದೊಂದು ಓದು ನಿಮಗೂ ಖುಷಿ ಕೊಡಬಹುದು ಓದಿ ನೋಡಿ..

‍ಲೇಖಕರು Admin

June 22, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: