ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪರೀಕ್ಷೆ 'ರಾಮಾಯಣ'

ಜಿ ಎನ್ ನಾಗರಾಜ್ 

ಪಿಯುಸಿ ಕನ್ನಡ ಪರೀಕ್ಷೆಯಲ್ಲಿ ಫೇಲ್ ಆಗಿಯೇ ಹೋಯ್ತಾ !
ಏಳೂವರೆ ಅಂಕಗಳಿಗೆ ಒಂದು ಗಂಟೆ ಉತ್ತರ ಬರೆದರೆ ಮತ್ತೇನಾದೀತು ? ವಿಜ್ಞಾನ, ಗಣಿತ ಬಿಟ್ಟು ಕನ್ನಡವನ್ನೇ ಶೇ. ೭೦ರಷ್ಟು ಕಾಲ ಓದಿದ್ದೇ ಮುಳುವಾಯ್ತೇ !
ಈ ವಿಶೇಷ ಪ್ರಸಂಗ ನಿಮಗಾಗಿ.
ಪಿಯುಸಿಯಲ್ಲಿ ನಮಗೆ ಡೀಟೇಲ್ಡ್ ಪಠ್ಯ ಎಂದು ಮಹಾಕವಿ ಭಾಸನ ಪ್ರತಿಮಾ ನಾಟಕದ ಅನುವಾದ ಇಡಲಾಗಿತ್ತು. ನನಗೆ ಆ ನಾಟಕದ ಪಾತ್ರ ಚಿತ್ರಣ, ಶೈಲಿ ಬಹಳ ಹಿಡಿಸಿತು. ಇದು ನನ್ನನ್ನು ಒಂದು ಕಡೆ ರಾಮಾಯಣದ ಕಡೆಗೆ, ಮತ್ತೊಂದು ಕಡೆ ಭಾಸನ ಬರಹಗಳ ಕಡೆಗೆ ಇನ್ನಿಲ್ಲದಂತೆ ಸೆಳೆಯಿತು.
ಕನ್ನಡದಲ್ಲಿ ಸಿಗುವ ರಾಮಾಯಣಗಳನ್ನೆಲ್ಲಾ ಹುಡುಕಾಡಿ ಓದಲಾರಂಭಿಸಿದೆ. ಕುವೆಂಪುರವರ ‘ವಾಲ್ಮೀಕಿ ರಾಮಾಯಣ’ದ ಜನಪ್ರಿಯ ಅನುವಾದ, ಅದರ ಇಂಗ್ಲಿಷ್ ನ ಪೂರ್ಣ ಅನುವಾದ, ಕಾಲೀದಾಸ ‘ರಘು ವಂಶ’, ಭವಭೂತಿಯ ‘ಉತ್ತರ ರಾಮಚರಿತೆ’ ನಾಟಕ, ತಮಿಳಿನ ‘ಕಂಬ ರಾಮಾಯಣ’, ಹಿಂದಿಯ ತುಲಸೀದಾಸರ ‘ರಾಮಚರಿತ ಮಾನಸ’, ಅದ್ಭುತ ರಾಮಾಯಣ, ಜೈನ ಪರಂಪರೆಯ ಅಭಿನವ ಪಂಪನ ರಾಮಾಯಣ, ಜಾನಪದ ರಾಮಾಯಣಗಳು ಹೀಗೆ ಹಲವು ಕೈಗೆ ಸಿಕ್ಕ ರಾಮಾಯಣದ ಬಗೆಗಿನ ಬರಹಗಳು.
ಹಾಗೆಯೇ ಭಾಸನ ಬಗ್ಗೆ ಇದ್ದ ಎ.ಆರ್ ಕೃಷ್ಣಶಾಸ್ತ್ರಿ, ಸಿ ಕೆ ವೆಂಕ ಟರಾಮಯ್ಯನವರ ಎರಡು ದೊಡ್ಡ ವಿಮರ್ಶನ ಗ್ರಂಥಗಳು, ಭಾಸ ನಾಟಕ ಚಕ್ರವೆಂದು ಹೆಸರಾದ ೧೪ ನಾಟಕಗಳು, ಮತ್ತು ಸಂಸ್ಕೃತದ ಮತ್ತೆ ಕೆಲವು ನಾಟಕಗಳ ಕನ್ನಡ ಅನುವಾದ. ಜೊತೆಗೆ ಶೇಕ್ಸಪಿಯರನ ಕಿಂಗ್ ಲಿಯರ್ ಇತ್ಯಾದಿ.
ನನ್ನ ಐಚ್ಛಿಕ ವಿಷಯಗಳಾದ ವಿಜ್ಞಾನ, ಗಣಿತಗಳನ್ನು ಕೇವಲ ತರಗತಿಗಳ ಪಾಠಗಳಿಗೆ ಸೀಮಿತಗೊಳಿಸಿ ಉಳಿದೆಲ್ಲ ಕಾಲ ಸರಿಸುಮಾರು ಈ ಎಲ್ಲ ಓದಿಗೆ ಮೀಸಲು.
ಇನ್ನು ಪರೀಕ್ಷೆಗೆ ಬಂದರೆ ಕನ್ನಡದಲ್ಲಿ ಮೊದಲ ಪ್ರಶ್ನೆ ೧೫ ಅಂಕಗಳಿಗೆ ಎರಡು ಪಾತ್ರ ಚಿತ್ರಣ . ಅದರಲ್ಲಿ ದಶರಥನ ಪಾತ್ರ ಚಿತ್ರಣ ಕೈಗೆತ್ತಿಕೊಂಡು ಬರೆದೆ, ಬರೆದೆ. ಪುಟಗಟ್ಟಲೆ ಬರೆದೆ.ಒಂದು ಘಟ್ಟದಲ್ಲಿ ಸಮಯ ನೋಡಿದರೆ ಮೂರು ಗಂಟೆಗಳಲ್ಲಿ ಒಂದು ಗಂಟೆ ಕಳೆದುಹೋಗಿದೆ. ಇನ್ನೂ ೯೨.೫ ಅಂಕಗಳಿಗೆ ಉತ್ತರ ಬರೆಯಬೇಕು. ಗಾಬರಿಯಾದೆ. ಮುಂದೆ ಸೀತೆಯ ಪಾತ್ರ ಚಿತ್ರಣ ಕುವೆಂಪು, ವಿವೇಕಾನಂದರ ಕೆಲ ವಾಕ್ಯ ಕೋಟ್ ಮಾಡಿ ಓಡಿದೆ. ಪ್ರಶ್ನೆ ಸಂಖ್ಯೆ ಬರೆಯುವುದು ಕೆಲ ವಾಕ್ಯ ಬರೆಯುವುದು ಮುಂದಕ್ಕೆ ಓಡುವುದು. ಕೊನೆಗೆ ಕೇವಲ ೬೭ ಅಂಕಗಳಿಗೆ ಮಾತ್ರ ಅಟೆಂಪ್ಟ್.
ಕನ್ನಡದಲ್ಲಿ ಆಗ ಅಂಕ ಕೊಡುತ್ತಿದ್ದ ರೀತಿಯಲ್ಲಿ ೬೭ ಅಂಕಗಳಿಗೆ ಉತ್ತಮ ಉತ್ತರ ಬರೆದರೂ ಎಷ್ಟು ಕೊಡುತ್ತಿದ್ದರು ? ಇನ್ನು ನಾನು ಬರೆದ ಆತುರದ ಉತ್ತರಗಳಿಗೆ. ಹೇಗೆ ಲೆಕ್ಕಾಚಾರ ಮಾಡಿದರೂ ೩೦ – ೩೫ ಅಂಕಗಳನ್ನು ಮೀರುತ್ತಿರಲಿಲ್ಲ.
ಸರಿ ಮೊತ್ತ ಮೊದಲ ಬಾರಿಗೆ ಫೇಲು ಎಂಬ ಹೆದರಿಕೆ. ಗಣಿತದಲ್ಲಿ ನೂರಕ್ಕೆ ನೂರು ಬರುವ ಖಾತರಿ ಇತ್ತು. ಅದಕ್ಕೆ ಏನೂ ಗಮನ ಕೊಡದಿದ್ದರೂ . ಆದರೆ ಕನ್ನಡ .ಇಡೀ ಬೇಸಿಗೆ ರಜೆ ಹೀಗೆ ಒಳಗೇ ದುಮ್ಮಾನದಲ್ಲಿಯೇ ಕಳೆಯಿತು.
ಫಲಿತಾಂಶದ ದಿನ ಓಡಿ ಗದ್ದಲದ ನಡುವೆ ಇಣುಕಿದರೆ ಫರ್ಸ್ಟ್ ಕ್ಲಾಸ್ ನಲ್ಲಿ ಪಾಸು. ಕನ್ನಡದಲ್ಲಿ ೫೨ . ನನಗೇ ಫರ್ಸ್ಟ್ ರ‌್ಯಾಂಕ್ ನಲ್ಲಿ ಪಾಸಾದಷ್ಟು ಖುಷಿಯಾಯಿತು.

‍ಲೇಖಕರು avadhi

11 March, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading