ಪರನಾಡಿನಲ್ಲಿ ಪ್ರೀತಿ ಹಂಚಿದ ಮುಖಗಳು

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟ ಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ಆಗಷ್ಟೇ ಆ ಕೇಸರಿಯ ಗದ್ದೆಗಳ ಫೋಟೋ ತೆಗೆದು ಕಾರು ಹತ್ತಿದ್ದೆ. ಯಾಕೋ ಸಮಾಧಾನವಾಗಿರಲಿಲ್ಲ. ಹಾಗಾಗಿ, ಹಿಂತಿರುಗಿ ನೋಡಿ ನೋಡಿ ಇನ್ಯಾವುದಾದರೂ ಆಂಗಲ್ಲು ಬಾಕಿ ಇದೆಯಾ ಅಂತ ಮತ್ತೆ ಮತ್ತೆ ಅಲ್ಲೇ ನೋಡುತ್ತಿದ್ದೆ. ಕಾರು ಹತ್ತಿ ಸ್ವಲ್ಪ ಮುಂದೆ ಹೋಗಿಯಾಗಿತ್ತು. ಗದ್ದೆಗಳು ಮತ್ತೆ ನೇರಳೆಯಾಗಿ ಕಂಡವೆಂದು ಕಾರು ನಿಲ್ಲಿಸಿ ಪುನಃ ಓಡಿ, ಅಲ್ಲೂ ಮತ್ತದೇ ಮೊದಲು ತೆಗೆದ ಫೋಟೋಗಳಂತೆ ಕಂಡು ನನ್ನ ಸಮಾಧಾನಕ್ಕೆ ಸುಮ್ಮನೆ ಒಂದೆರಡು ಕ್ಲಿಕ್ಕಿಸಿ ಇನ್ನೇನು ಕಾರು ಹತ್ತಬೇಕು ಅನ್ನುವಷ್ಟರಲ್ಲಿ ಕ್ಯಾಮರಾ ಹೆಗಲಿಗೇರಿಸಿಕೊಂಡು ಸೈಕಲ್ಲೇರಿ ರಸ್ತೆಯ ಆ ಬದಿಯಲ್ಲಿದ್ದ ಆತ ಬ್ಯಾರಿಕೇಡ್‌ ಜಂಪ್‌ ಮಾಡಿಕೊಂಡು ಓಡೋಡಿ ಬಂದ. ʻನಿಮ್ಮನ್ನು ಆಗಲೇ ಅಲ್ಲಿ ನೋಡಿದೆ. ಅಷ್ಟು ದೂರದಿಂದಲೇ ಫಾಲೋ ಮಾಡಿಕೊಂಡು ಬಂದೆʼ ಅಂದ.

ಅರೆ, ನಮ್ಮನ್ಯಾಕಪ್ಪಾ ಈತ ಫಾಲೋ ಮಾಡಿದ್ದು ಅಂತ ಅನಿಸಿದರೂ, ಚೆಂದಕ್ಕೆ ಅರಳಿದ್ದ ಆತನ ಮುಖಾರವಿಂದ, ಕುತೂಹಲ ತುಂಬಿದ ಕಣ್ಣುಗಳು, ಕತ್ತಲ್ಲಿ ನೇತಾಡುತ್ತಿದ್ದ ಕ್ಯಾಮರಾ ಹಾಗೂ ಸೈಕಲ್ಲು ಎಲ್ಲವೂ ಈತ ಯಾಕೆ ಫಾಲೋ ಮಾಡಿದ್ದಿರಬಹುದು ಎಂದು ಅರ್ಥವಾಗಿತ್ತು. ನಿಮ್ಮ ಗಾಡಿ ನೋಡಿದೆ, ನಂಬರ್‌ ಪ್ಲೇಟ್‌ ನೋಡಿ ಶಾಕ್‌ ಆಯ್ತು. ದಕ್ಷಿಣದಿಂದ ಇಲ್ಲಿವರೆಗೆ ಡ್ರೈವ್‌ ಮಾಡಿದ್ರಾ ಅಂದ್ಕೊಂಡೆ. ಅದಕ್ಕೇ ಫಾಲೋ ಮಾಡಿದ್ದು ಎಂದು ಉತ್ತರ ತಿಳಿಯುವ ಕುತೂಹಲದೊಂದಿಗೆ ನಕ್ಕ.

ಆತನ ಹೆಸರು ಮುಸ್ತಾಫಾ. ʻಚೆನ್ನೈ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸಿವಿಲ್‌ ಎಂಜಿನಿಯರಿಂಗ್‌ ಮಾಡ್ತಿದೇನೆ. ಹಾಗೆ ದಕ್ಷಿಣ ಭಾರತದ ಮೇಲೊಂದು ಲವ್ವು. ಈಗ ಕೊರೊನಾದಿಂದಾಗಿ ಇಲ್ಲೇ ಊರಲ್ಲೇ ಇದ್ದೇನೆ. ಅದಕ್ಕೇ ತುಂಬಾ ದೂರದಿಂದ ನಿಮ್ಮನ್ನು ನೋಡಿ ಹಿಂದೆಯೇ ಬಂದೆ. ನೀವು ಇಲ್ಲಿ ನಿಲ್ಲಿಸಿದ್ದರಿಂದ ನಿಮ್ಮನ್ನು ಹಿಡಿಯೋದಕ್ಕೆ  ಸಾಧ್ಯವಾಯಿತು ನೋಡಿ. ಇಲ್ಲವಾದರೆ ಆಗ್ತಿರಲಿಲ್ಲʼ ಎಂದ. ಒಂದೈದು ಹತ್ತು ನಿಮಿಷ ನಮ್ಮ ಬಗ್ಗೆ ಕೇಳಿಕೊಂಡು, ಖುಷಿಯಿಂದ ನಾಲ್ಕೈದು ವಾಕ್ಯಗಳನ್ನು ತಮಿಳಿನಲ್ಲಿಯೂ ಮಾತನಾಡಿ, ಪ್ರೀತಿ ಹಂಚಿ ʻವಣಕ್ಕಂʼ ಹೇಳಿ, ಬಂದ ವೇಗದಲ್ಲೇ ವಾಪಾಸು ಹೋದ. ಒಂದ್ಹತ್ತು ನಿಮಿಷ, ಮಳೆ ಬಂದು ನಿಂತ ಹಾಗೆ ತಂಪಾಯಿತು.

*****

ರಾತ್ರಿ ಗಂಟೆ ಏಳು ದಾಟಿತ್ತು. ಕತ್ತಲೋ ಕತ್ತಲು. ಆಗಷ್ಟೇ ಸಿಂಥನ್‌ ಟಾಪ್‌ನ ಮೇಲೆ ಅದ್ಭುತ ಸೂರ್ಯಾಸ್ತ ನೋಡಿ ಕೆಳಗಿಳಿದಿದ್ದೆವು. ಜಮ್ಮು-ಶ್ರೀನಗರದ ಹೆದ್ದಾರಿ ಇನ್ನೆರಡು ದಿನಕ್ಕೆ ಒನ್‌ ವೇ ಮಾಡಿಬಿಟ್ಟಿದ್ದರು. ಶ್ರೀನಗರದಿಂದ ಜಮ್ಮುವಿಗೆ ಬರಬಹುದು, ಆದರೆ ಶ್ರೀನಗರಕ್ಕೆ ಹೋಗುವಂತಿಲ್ಲ. ಒಂದು ರಸ್ತೆ ಕಾಮಗಾರಿ, ಇನ್ನೊಂದು ದರ್ಬಾರ್‌ ಮೂಮೆಂಟ್‌, ಅಂದರೆ ಆಡಳಿತದ ಸ್ಥಳ ಬದಲಾವಣೆ. ಶ್ರೀನಗರವೆಂಬ ಬೇಸಿಗೆಯ ರಾಜಧಾನಿಯು ಚಳಿಗಾಲಕ್ಕಾಗಿ ಜಮ್ಮುವಿಗೆ ವರ್ಗಾವಣೆಯಾಗುತ್ತದೆ. ಆಗ, ಸರ್ಕಾರಿ ಕಡತಗಳೆಲ್ಲವೂ ಸಾಲು ಸಾಲು ವಾಹನಗಳಲ್ಲಿ ಜಮ್ಮುವಿಗೆ ಸಾಗುತ್ತದೆ. ಇದೊಂದು ಮೈಸೂರು ದಸರಾ ಮೆರವಣಿಗೆಯ ಹಾಗೆ, ಈ ಪರ್ವತ ನಾಡಿನ ಪ್ರತಿವರ್ಷದ ಹಾಡು.

ಚಳಿಗಾಲ ಮುಗಿದ ತಕ್ಷಣ ಮತ್ತೆ ಶ್ರೀನಗರಕ್ಕೆ. ಜೊತೆಗೆ ರಸ್ತೆ ಕಾಮಗಾರಿಯೂ ಸೇರಿಕೊಂಡು, ಈ ಹೆದ್ದಾರಿ ಇನ್ನೂ ಗಜಿಬಿಜಿಯಾಗಿತ್ತು. ಸ್ಥಳೀಯರೂ ಸೇರಿದಂತೆ ಎಲ್ಲರಿಗೂ ಒಂದೇ ನಿಯಮ. ಬೇಕಾದರೆ ಸುತ್ತಿ ಬಳಸಿ ಹೋಗುವ ಬೇರೆ ದುರ್ಗಮ ರಸ್ತೆಗಳನ್ನು ಬಳಸಬಹುದು. ಇವೆಲ್ಲ ಕಾರಣಗಳಿಂದಾಗಿ, ಅನಿವಾರ್ಯವಾಗಿ ನಾವೂ ಕೂಡಾ, ಜಮ್ಮುವಿನಿಂದ ಶ್ರೀನಗರಕ್ಕೆ ಸಿಂಥನ್‌ ಟಾಪ್‌ ಮೂಲಕ ಸಾಗುವ ಮಾರ್ಗ ಹಿಡಿದಿದ್ದೆವು. ಜೊತೆಗೆ ನಮಗೂ ನೆಮ್ಮದಿಯ ಮನೋಹರ ರಸ್ತೆ ಬೇಕಾಗಿತ್ತು. ಸಿಂಥನ್‌ ಟಾಪ್‌ ರಸ್ತೆ, ಎಷ್ಟು ರಮಣೀಯವೋ ಅಷ್ಟೇ ರುದ್ರವೂ ಎಂಬುದರಲ್ಲಿ ಮಾತೇ ಇಲ್ಲ.

ಬೆಟ್ಟ, ಕಣಿವೆ, ಮತ್ತೆ ಬೆಟ್ಟ, ಮತ್ತೆ ಕಣಿವೆ ಎಂದು ಹಾವಿನಂಥ ತೆವಳುವ ರಸ್ತೆಯಲ್ಲಿ ಇಳಿದು ಹತ್ತಿ ಇಳಿದು ಹತ್ತಿ, ಒಂದು ಬದಿಯಲ್ಲಿ ಭಾರೀ ಪ್ರಪಾತ ದರ್ಶನ ಮಾಡುತ್ತಾ ಬೆಳಗ್ಗಿನಿಂದ ಸಂಜೆಯಾಗಿತ್ತು. ಈ ಸುಸ್ತಿಗೆ ಸಂಜೀವಿನಿಯಾದದ್ದು ಆ ಸೂರ್ಯಾಸ್ತ. ನೀಲಿ ಪರ್ವತಗಳೆಡೆಯಲ್ಲಿ ತನ್ನ ಹೊಂಬಣ್ಣವನ್ನು ಸ್ವಲ್ಪವೂ ಹೊರಚೆಲ್ಲದೆ, ನೀಟಾಗಿ ತನ್ನ ಸೀಮೆಯೊಳಗಷ್ಟೇ ಕೆಂಪಾಗಿ, ಇಂಚಿಂಚಾಗಿ ಕಂಡೂ ಕಾಣದ ತಿಳಿ ನೀಲಿ ಬೆಟ್ಟದೊಳಗೆ ಕರಗಿಹೋಗಿ, ಕೆಂಪಿನಂಥ ಕೆಂಪೇ ನೀಲಿಯಾಗುವ ಸಂದರ್ಭವದು.

ಚಳಿಗಾಲದ ಸೂರ್ಯಾಸ್ತಗಳೇ ಹಾಗೆ. ಮಂದ ಬೆಳಕು ಚೆಲ್ಲುವ, ಹಿತವಾದ ಸೊಬಗು. ಛೇ, ಅರೆ ಕ್ಷಣದಲ್ಲಿ ಈ ಅಪೂರ್ವ ಗಳಿಗೆ ಮುಗಿಯಿತಲ್ಲಾ ಎಂದುಕೊಂಡು ಕೆಳಗಿಳಿಯತೊಡಗಿದ್ದೆವು. ಅನಂತನಾಗ್ ‌ಗೆ ಇನ್ನೂ ೭೦ ಕಿಮೀ ತೋರಿಸುತ್ತಿತ್ತು. ಕತ್ತಲಾದ ಮೇಲೆ ಈ ಊರಲ್ಲಿ ಅಷ್ಟು ದೂರವೆಲ್ಲ ಬೇಡ, ಕೆಳಗೆ ಯಾವ ಊರು ಮೊದಲು ಸಿಗುತ್ತೋ ಅಲ್ಲೇ ರಾತ್ರಿ ಕಳೆಯೋಣ ಎಂದುಕೊಂಡು, ಸಣ್ಣಗೆ ಅಲ್ಲಲ್ಲಿ ಮಿಣಿಮಿಣಿ ನಾಲ್ಕು ಬುಡ್ಡಿದೀಪಗಳೇ ಊರಾಗಿದ್ದ ಡಕ್ಸುಮ್‌ ದಾಟಿ ಬಂದದ್ದೇ ಗೊತ್ತಾಗಿರಲಿಲ್ಲ. ಮುಂದಿದ್ದುದು ಕೋಕರ್ ನಾಗ್.‌

ಮುಂಗಡ ಬುಕ್ಕಿಂಗ್‌ ಏನೂ ಮಾಡಿರಲಿಲ್ಲ. ಎರಡನೇ ದಿನದ ಡ್ರೈವ್‌ ಅದು. ಸುಸ್ತಾಗಿತ್ತು. ಅನಂತನಾಗ್‌ ಜಿಲ್ಲೆಯ ಒಂದು ಪುಟಾಣಿ ಊರದು. ಈ ಪುಟಾಣಿ ಊರಲ್ಲೊಂದು ಜಮ್ಮು ಕಾಶ್ಮೀರ ಪ್ರವಾಸೋದ್ಯಮ ಇಲಾಖೆಯ ಚೆಂದನೆಯ ಹೊಟೇಲು ಇದೆ ಎಂದು ಗೂಗಲ್‌ ದಯದಿಂದ ಗೊತ್ತಿತ್ತು. ಅವರು ಯಾವುದೇ ಕರೆಗಳನ್ನು ಸ್ವೀಕರಿಸುತ್ತಿಲ್ಲವಾದ್ದರಿಂದ ಇನ್ನೇನು ಹುಡುಕಿಕೊಂಡು ನೇರವಾಗಿ ಅಲ್ಲಿಯೇ ಹೋಗಿ ಕೇಳೋಣವೆಂದುಕೊಂಡು, ಯಾವುದೇ ರಸ್ತೆ ದೀಪಗಳೂ ಇಲ್ಲದ ಕಪ್ಪಾದ ಆ ಊರಲ್ಲಿ ಅತ್ತ ಮ್ಯಾಪನ್ನೂ ಪೂರ್ತಿ ನಂಬುವುದು ಗೊತ್ತಾಗದೆ ಆ ಪುಟಾಣಿ ಕೆಫೆಯೊಂದರ ಎದುರು ನಿಲ್ಲಿಸಿದ್ದೆವು.

ಆ ಇಬ್ಬರ ಹೊರತಾಗಿ ಅಲ್ಯಾರೂ ಇರಲಿಲ್ಲ. ನಾವು ದಕ್ಷಿಣ ಭಾರತದವರು ಎಂದು ಗೊತ್ತಾದ ತಕ್ಷಣ, ಭಾರೀ ಆಸ್ಥೆಯಿಂದ ಮಾತನಾಡಿಸಿದ ಅವರು, ʻನೀವು ಕೇಳುವ ವಿಳಾಸ ಇಲ್ಲೇ ಪಕ್ಕದಲ್ಲೇ ಇದೆ. ಸುಸ್ತಾಗಿ ಬಂದಿದ್ದೀರಿ ಬೇರೆ, ಆರಾಮಾಗಿ ಟೀ ಕುಡಿದು ಹೋಗಿʼ ಎಂದರು. ನಮಗೂ ಒಂದು ಟೀ ಕುಡಿಯೋಣ ಎನಿಸಿತ್ತು. ಸರಿ ಎಂದು ಕೂತು ಟೀ ಕುಡಿದು, ನಮ್ಮ ಮುಂದಿನ ಪ್ಲಾನಿನ ಬಗ್ಗೆ ಕೇಳಿ ತಿಳಿದುಕೊಂಡು, ಅಕ್ಕರೆಯ ಮಾತಾಡಿ ಬೀಳ್ಕೊಟ್ಟರು.

ಟೀ ಕುಡಿದ ದುಡ್ಡು ಮಾತ್ರ ಜಪ್ಪಯ್ಯ ಎಂದರೂ ತೆಗೆದುಕೊಳ್ಳದೆ, ನಮ್ಮನ್ನು ಇನ್ನೂ ಕಂಗಾಲು ಮಾಡಿದರು. ʻನೀವು ನಮ್ಮ ಅತಿಥಿಗಳು. ಅದೂ ದಕ್ಷಿಣ ಭಾರತದವರು. ನಿಮ್ಮ ಬಳಿ ದುಡ್ಡು ಹೇಗೆ ತೆಗೆದುಕೊಳ್ಳಲಿ. ದಿಲ್‌ ಸೇ ದೇ ರಹೇ ಹೇʼ ಅಂತೆಲ್ಲಾ ಹೇಳಿ ನಮ್ಮ ಬಾಯಿಮುಚ್ಚಿಸಿದರು. ನಿಮಗೇನೇ ತೊಂದರೆಯಾದರೂ ಹೇಳಿ, ನಾವಿದ್ದೇವೆ. ರೂಂ ಸಿಗದಿದ್ದರೆ ಹೇಳಿ, ನಮ್ಮ ಮನೆಯಲ್ಲೇ ಉಳಿದುಕೊಳ್ಳಬಹುದು, ಹುಷಾರು ಎಂದು ಹೇಳಿ ನಂಬರ್‌ ಕೊಟ್ಟು, ನಮ್ಮ ನಂಬರ್‌ ಕೂಡಾ ಪಡೆದುಕೊಂಡರು.

ಆ ಇಬ್ಬರಲ್ಲಿ ಒಬ್ಬನ ಹೆಸರು ಫಿರ್‌ದೋಸ್‌. ಅಲ್ಲೇ ಯಾವುದೋ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಮಾಡುವ ಹುಡುಗ. ನಾವಲ್ಲಿಂದ ಹೋಗಿ ಅರ್ಧ ಗಂಟೆಯಲ್ಲಿ ಕಾಲ್.‌ ʻರೂಂ ಸಿಕ್ತಾ? ಏನೂ ತೊಂದರೆಯಿಲ್ಲ ಇಲ್ಲ ತಾನೇ?ʼ ವಿಚಾರಣೆ. ಅವರು ತೋರಿಸಿದ ಪ್ರೀತಿಗೆ ನಮ್ಮ ಬಳಿ ಉತ್ತರವಿರಲಿಲ್ಲ.

ಇದಾಗಿ ನಾವು ಕಾಶ್ಮೀರದಲ್ಲಿದ್ದ ಅಷ್ಟೂ ದಿನಗಳಲ್ಲಿ ಪ್ರತಿನಿತ್ಯವೂ ಈತನಿಂದ ನಮ್ಮ ಕ್ಷೇಮ ಸಮಾಚಾರ ವಿಚಾರಿಸಲು ಕಾಲ್‌ ಬರುತ್ತಿತ್ತು. ಹೋಗುವಾಗ ಖಂಡಿತ ಭೇಟಿಯಾಗಿ, ಒಂದು ಚಹಾ ಕುಡಿದು ಹೋಗಿ ಎಂಬ ಪ್ರೀತಿಯ ಒತ್ತಾಯ. ಅಷ್ಟೂ ದಿನಗಳಲ್ಲಿ ಪ್ರತಿದಿನವೂ ವಿಚಾರಿಸಿಕೊಂಡ ಅವರ ಕಾಳಜಿಗೆ ಇಲ್ಲವೆನ್ನಲಾಗಲಿಲ್ಲ. ʻಸರಿ, ಬಂದೇ ಬರುತ್ತೇವೆʼ ಎಂದಿದ್ದೆವು.

ಹೊರಡುವ ಮೊದಲು, ʻನಾಳೆ ಬೆಳಗ್ಗೆ ಬಹುಶಃ ಇಂಥ ಟೈಮಿಗೆ ಬರುತ್ತೇವೆ. ಇದ್ದೀರಿ ತಾನೇ? ಒಂದರ್ಧ ಗಂಟೆಗೆ ಅಷ್ಟೇ, ಟೀ ಕುಡಿದು ಹೊರಡುತ್ತೇವೆʼ ಎಂದಿದ್ದೆವು. ʻತಪ್ಪಿಸಬೇಡಿʼ ಎಂದರು. ಹೇಳಿದ ಹೊತ್ತಿಗೆ ಅಲ್ಲಿ ತಲುಪಿದ್ದೆವು ಕೂಡಾ. ಆದರೆ ವಿಚಿತ್ರವೆಂದರೆ, ಅವರೇ ಇಲ್ಲ! ಕಾಲ್‌ಗೆ ಉತ್ತರವಿಲ್ಲ. ಮೆಸೇಜಿಗೂ. ಅರೆ, ಇಷ್ಟು ದಿನ ವಿಚಾರಿಸಿಕೊಂಡ ಇವರು ಸಡನ್ನಾಗಿ, ಗೊತ್ತಿದ್ದೂ ಹೀಗೇಕೆ ಮಾಡಿದರು ಎಂದು ಅರ್ಥವಾಗಲಿಲ್ಲ. ಕಾಯುವುದರಲ್ಲಿ ಅರ್ಥವಿಲ್ಲ ಎಂದು ಹೊರಟೆವು.

ಮನೆಗೆ ತಲುಪಿದ ಮೇಲೆ, ಆ ಪ್ರಯಾಣದುದ್ದಕ್ಕೂ ಪ್ರೀತಿ ಕಾಳಜಿ ತೋರಿದ ಎಲ್ಲರಿಗೂ ಕಳುಹಿಸಿದ ಮೆಸೇಜಿನಂತೆ, ಅವರಿಗೂ ʻನಿಮ್ಮ ಪ್ರೀತಿಗೆ, ಕಾಳಜಿಗೆ ಧನ್ಯವಾದಗಳು, ಮನೆಗೆ ಕ್ಷೇಮವಾಗಿ ತಲುಪಿದ್ದೇವೆʼ ಎಂಬ ಮೆಸೇಜು ದಾಟಿಸಿದ್ದೆವು. ಅದಕ್ಕೂ ಉತ್ತರವಿಲ್ಲ. ಎರಡು ದಿನಗಳ ಬಳಿಕ ʻಐಯಾಮ್‌ ಸಾರಿʼ ಎಂಬ ಸ್ಟೇಟಸ್ಸು! ಒಂದೂ ಅರ್ಥವಾಗಲಿಲ್ಲ. ಉತ್ತರವೂ ಸಿಗಲಿಲ್ಲ. ಇರಲಿ.

*****

ಅದು ಅನಂತನಾಗ್ ‌ನ ಮಟ್ಟನ್‌ ದೇವಸ್ಥಾನ. ಭಾರೀ ಮಿಲಿಟರಿ ಬಂದೋಬಸ್ತಿದ್ದ ಆ ದೇವಸ್ಥಾನದಿಂದ ಹೊರಬರುತ್ತಿದ್ದಂತೆ ಅವರು ನಮ್ಮನ್ನು ಮಾತಿಗೆಳೆದರು. ʻಯಾವ ಊರು? ಎಲ್ಲಿಗೆ ಪಯಣʼ ಪ್ರಶ್ನೆಗಳೂ ಬಂದವು. ʻಮಾರ್ತಾಂಡ ಸೂರ್ಯ ದೇವಾಲಯ ನೋಡಬೇಕು. ಅದಾಗಿ ಪೆಹಲ್ಗಾಂʼ ಎಂದೆ. ʻಊಟ ಮಾಡಿದಿರಾ?ʼ ಎಂದರು. ʻಇನ್ನೂ ಇಲ್ಲʼ ಎಂದೆ. ʻಅರೆ, ಹಸಿ ಹೊಟ್ಟೆಯಲ್ಲಿ ಹೋಗುತ್ತಿದ್ದೀರಾ? ಅದ್ಹೇಗೆ ನಿಮ್ಮನ್ನು ಬಿಡೋದಕ್ಕಾಗುತ್ತೆ? ಇಲ್ಲಿಂದ ಖಾಲಿ ಹೊಟ್ಟೆಯಲ್ಲಿ ನೀವು ಹೋದರೆ, ನಮಗೆ ಬೇಸರವಾಗುತ್ತದೆʼ ಅಂತ ಹೇಳಿ, ಯಾರಿಗೋ ಕರೆ ಮಾಡಿ, ನಮಗೆ ಉತ್ತರವನ್ನೂ ಕೊಡಲು ಅವಕಾಶ ಕೊಡದೆ, ಒಂದು ಹದಿನೈದು ನಿಮಿಷದಲ್ಲಿ ಎಲ್ಲಾ ಅರೇಂಜು ಮಾಡಿಸಿಬಿಟ್ಟರು.

ಊಟ ರೆಡಿಯಾಗಲು ಇದ್ದ ೧೦ ನಿಮಿಷದಲ್ಲಿ ಅಲ್ಲೇ ಮೂಲೆಯಲ್ಲಿ ಅಗ್ಗಿಷ್ಟಿಕೆಗೆ ಕೈ ಒಡ್ಡಿ ಚಳಿ ಕಾಯಿಸುತ್ತಾ, ನಾನು ಸತೀಶ್‌ ಭಟ್.‌ ಈತ ತಾರಿಕ್‌, ನನ್ನ ಅಸಿಸ್ಟೆಂಟ್‌, ಅವರು ಈ ಊರಿನ ಪುರೋಹಿತ ಸಂಜಯ್‌ ರೈನಾ ಎಂದು ಜೊತೆಗಿದ್ದವರನ್ನು ಪರಿಚಯಿಸಿದ್ದರು. ಬಿಸಿ ಬಿಸಿ ಅನ್ನ, ದಾಲ್‌ ಬಡಿಸಿ ಹೊಟ್ಟೆಯನ್ನೂ, ಮೇಲಾಗಿ ಮನಸ್ಸನ್ನೂ ತುಂಬಿಸಿದರು. ಅರ್ಚಕ ಸಂಜಯ್‌ ರೈನಾ ಹೊರಡುವಾಗ, ಮಗನನ್ನು ಕರೆದು ಕೈತುಂಬಾ ವಾಲ್‌ ನಟ್ ಕೊಟ್ಟು ಶುಭ ಹಾರೈಸಿದರು.

ಇದಾಗಿ ಎರಡು ಮೂರು ದಿನ ಕಳೆದಿತ್ತು. ಇನ್ನೇನು ಮರುದಿನ ಶ್ರೀನಗರದಿಂದ ಹೊರಡಬೇಕಿತ್ತು. ರಾತ್ರಿ ಗಂಟೆ ಏಳು ದಾಟಿತ್ತು. ಉಳಿದುಕೊಂಡಿದ್ದ ಹೌಸ್‌ಬೋಟಿಗೆ ಹೋಗಬೇಕು ಎಂದು ಕಾರು ಪಾರ್ಕ್‌ ಮಾಡಿದ್ದ ಸ್ಥಳಕ್ಕೆ ಹೊರಟಾಗ, ಅಲ್ಲೇ ರಸ್ತೆ ಬದಿಯಲ್ಲಿ ಮಾತಿಗೆ ಸಿಕ್ಕ ಜುನೈದ್‌, ಇಲ್ಲೇ ಸ್ವಲ್ಪ ದೂರದಲ್ಲಿ ನಿಮ್ಮ ರಘುನಾಥ ದೇವಸ್ಥಾನವಿದೆ ನೋಡಿ, ಒಮ್ಮೆ ಭೇಟಿಕೊಟ್ಟು ಹೋಗಬಹುದಲ್ಲಾ ಎಂದರೆಂದು ಹೊರಟಿದ್ದೆವು.

ಮುಖ್ಯವಾಗಿ, ಅದು ಸಿಟಿಯೊಳಗೇ ಅಲ್ಲೇ ಪಕ್ಕದಲ್ಲೇ ಇತ್ತು, ಹಾಗೂ ಮುರಿದು ಬಿದ್ದ ಈ ಪುರಾತನ ದೇವಸ್ಥಾನದ ಪುನರ್‌ನಿರ್ಮಾಣ ಕಾರ್ಯ ಈಗಷ್ಟೇ ಸರ್ಕಾರ ಕೈಗೆತ್ತಿಕೊಂಡಿದೆ ಎಂದೂ ಗೊತ್ತಾಗಿ, ಹೋಗುವಾಗ ಒಮ್ಮೆ ನೋಡಿ ಬಿಡುವ ಅನಿಸಿತ್ತು. ಯಾರೋ ಒಂದಿಬ್ಬರು ದಾರಿ ತಪ್ಪಿಸಿ ಕನ್‌ಫ್ಯೂಸ್‌ ಮಾಡಿಸಿದರೂ, ಇನ್ಯಾರೋ ಬಂದು ಸಹಾಯ ಮಾಡಿ, ವಾಹನ ಹೋಗಲಾರದಂಥ ಆ ಗಲ್ಲಿಯಲ್ಲಿ ನಡೆದು ಕೊನೆಗೂ ದೇವಸ್ಥಾನದ ಬಳಿ ತಲುಪಿದೆವು.

ಒಂದು ಗಲ್ಲಿ ದಾಟಿದರೆ ದೇವಸ್ಥಾನ. ಕಣ್ಣೆದುರೇ ಗೋಪುರ ಕಾಣುತ್ತಿದೆ ಎಂಬಂತಾದಾಗ, ಅಲ್ಲೇ ಕೂತಿದ್ದ ಇಬ್ಬರು, ʻಬೇಡ, ಈಗ ಹೋಗಬೇಡಿ. ಈಗ ಅಲ್ಲಿ ಹೋಗುವುದು ಉಚಿತವಲ್ಲ. ಬೆಳಗ್ಗೆ ಬನ್ನಿʼ ಎಂದರು. ಆ ಕತ್ತಲು, ಖಾಲಿ ಹಾದಿ, ದಾರಿಯುದ್ದಕ್ಕೂ ಮುಚ್ಚಿದ್ದ ಅಂಗಡಿ ಬಾಗಿಲುಗಳಲ್ಲಿ ಬರೆದಿದ್ದ  ʻಮುರ್ದಾಬಾದ್‌ʼ ಸ್ಲೋಗನ್ನುಗಳು ನಮ್ಮನ್ನು ಕಂಗೆಡಿಸಿದ್ದರಿಂದ ಹೆಚ್ಚು ಮಾತನಾಡದೆ ಹಿಂತಿರುಗಿದ್ದೆವು.

ಇದೆಲ್ಲ ಆಗಿ, ರೂಂ ತಲುಪಿ ಬೇಗ ಏಳುವ ಸಲುವಾಗಿ ಮಲಗುವ ಗಡಿಬಿಡಿಯಲ್ಲಿದ್ದಾಗ ಇದೇ ಸತೀಶ್‌ ಭಟ್ರ ಕಾಲ್.‌ ʻನೀವು ಕ್ಷೇಮವಾಗಿದ್ದೀರಿ ತಾನೇ? ನಿನ್ನೆಯಷ್ಟೇ ನಡೆದ ಘಟನೆಯಿಂದಾಗಿ ನೀವು ಹೇಗಿದ್ದೀರೋ ಅನಿಸಿತು. ಅದಕ್ಕೆ ಕಾಲ್‌ ಮಾಡಿದೆʼ ಎಂದರು. ಮುನ್ನಾ ದಿನವಷ್ಟೇ, ಅಲ್ಲೇ ಶ್ರೀನಗರದಲ್ಲಿ ಹಿಜ್ಬುಲ್‌ ಮುಜಾಹಿದ್ದೀನ್‌ ಮುಖ್ಯಸ್ಥ ಸೈಫುಲ್ಲಾ ಎನ್‌ಕೌಂಟರ್‌ ನಡೆದಿತ್ತು! 

****

ಹೇಳಿ ಕೇಳಿ ಆಪಲ್‌ ಕೊಯ್ಲಿನ ಕಾಲ. ಆಪಲ್‌ ತೋಟಕ್ಕೆ ದಾಳಿಯಿಡದಿದ್ದರೆ ಹೇಗೆ ಅಂದುಕೊಂಡು ಅಲ್ಲೇ ಒಂದು ತೋಟಕ್ಕೆ ನುಗ್ಗಿದ್ದೆವು. ದೊಡ್ಡ ಕುಟುಂಬ. ಅಪ್ಪ, ಚಿಕ್ಕಪ್ಪ, ಅಮ್ಮ, ಮಕ್ಕಳೆಲ್ಲರು ರಾಶಿ ರಾಶಿ ಆಪಲ್‌ ಕೊಯ್ದು ತಮ್ಮ ಹುದ್ದೆಗಳನ್ನು ಮರೆತು ಒಂದಾಗಿ ಪೆಟ್ಟಿಗೆಗಳಲ್ಲಿ ತುಂಬುವ ಕಾರ್ಯ ಮಾಡುತ್ತಿದ್ದರು, ನಮ್ಮೂರಲ್ಲಿ ಎಲ್ಲರೂ ಸೇರಿ ಅಡಿಕೆ ಸಿಪ್ಪೆ ಸುಲಿಯುವಂತೆ! ಅಲ್ಲೇ ಬಣ್ಣ ಹಾಗೂ ಪಕ್ವತೆಯ ಆಧಾರದಲ್ಲಿ ಪ್ರತ್ಯೇಕಿಸಿ ಆಪಲ್‌ ಹರವಿಡುತ್ತಿದ್ದ ಅಮ್ಮ ಸುರಯ್ಯಾ, ʻಕಾಶ್ಮೀರ ಹೆಂಗಿದೆ? ಇಷ್ಟವಾಯಿತಾ?ʼ ಎಂದರು. ʻಸ್ವರ್ಗ ಇದುʼ ಎಂದೆ. ʻಅಲ್ಲವೇ ಮತ್ತೆʼ ಎನ್ನುತ್ತಾ ಬೊಗಸೆ ತುಂಬಾ ಆಪಲ್‌ ತಂದು ಮಗನ ಪುಟಾಣಿ ಕೈಗಳ ತುಂಬಾ ತುಂಬಿಸಿ, ಈ ಕೋವಿಡ್‌ ಕಾಲದಲ್ಲೂ ಮೈಮರೆತು ಮಗನನ್ನು ಬಾಚಿ ತಬ್ಬಿ ಮುತ್ತಿಟ್ಟಳು.

‍ಲೇಖಕರು ರಾಧಿಕ ವಿಟ್ಲ

November 29, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: