ಪ್ರವರ ಕೊಟ್ಟೂರು
ಅಮ್ಮಾ, ಮೋಡ ಕವಿದಂತಿದೆ
ಓಣಿ ತುಂಬಾ ನೆರಳು,
ಸಣ್ಣಗೆ ಗಾಳಿಯೂ ಬೀಸುತ್ತಿದೆ
ಬರಬಹುದು ಮಳೆ
ತಾರಸಿಯ ಮೇಲೆ ಒಣೆ ಹಾಕಿದ ಬಟ್ಟೆಗಳು
ಒದ್ದೆಯಾದಾವು,
ಕಿಡಕಿ ಎದೆಯಿಂದ
ನಾನಿದೆಲ್ಲವನ್ನೂ ನೋಡುತಿದ್ದೇನೆ
ಕವಿತೆ ಬರೆದುಕೊಂಡು
ಎಷ್ಟು ಸಾರಿ ಹೇಳೋದು
ಕವಿತೆ ಬರ್ಕೊಂಡು
ಸಮಯ ಹಾಳು ಮಾಡ್ಕೊಬೇಡ ಅಂತ,
ಒಂದೊಳ್ಳೆ ಕೆಲಸ ನೋಡ್ಕೋಬಾರ್ದ,
ಸಂಬ್ಳ ಸಿಗುವಂಥದ್ದು,
ಮೈ ದಣಿಯುವಂಥದ್ದು.
ಮೂರ್ ಕಾಸು ಸಂಪಾದ್ನೆ ಮಾಡ್ದಿರೋ ಆ ಕವಿತೆನ
ಬರಿಯೋದ್ ಬಿಟ್ಟು ಉದ್ದಾರ ಆಗು
ಅದೆಲ್ಲಾ ಇರ್ಲಿ
ಹಪ್ಪಳ ಕರೀತಿದಿನಿ
ನೀನೆ ಎರಡೆಜ್ಜೆ ಹೋಗಿ, ಬಟ್ಟೆನೆಲ್ಲಾ ತಂದಿಡು,
ಬಾಗ್ಲಲ್ಲಿರೋ ಕಾಲು ಒರ್ಸೊ ಮ್ಯಾಟು ತೆಗಿ
ಒದ್ದೆ ಆದೀತು,
ಇದೊಳ್ಳೆ ಕಥೆ ಆಯ್ತು,
ನನ್ ಮೇಲಿನ್ ಸಿಟ್ಟಿಗೆ ಕವಿತೆನ್ಯಾಕ್ ಬೈಬೇಕು!
ಕೆಲ್ಸ ಎಲ್ಲಿಗ್ ಹೋಗುತ್ತೆ?
ಸಂಬ್ಳ ಎಲ್ಲಿಗ್ ಹೋಗುತ್ತೆ?
ಸಿಗುತ್ತೆ ಬಿಡು…
ಕವಿತೆ?
ಅದು ಹಂಗೆಲ್ಲಾ ಸುಮ್ಮನೆ ಬೇಕು ಅಂದಾಗ ಸಿಕ್ಕೋದಿಲ್ಲ
ಕಾಡುತ್ತೆ
ಎದೆಯೊಳಗಿನ ಜೀವ ಕೈಯಿಗ್ ಬರೋವರ್ಗು
ಜೀವ ಹಿಂಡುತ್ತೆ
ಬರಿದೆ ಇದ್ರೆ ಸಾಯೋ ಹಂಗೆ ಕಾಡುತ್ತೆ…
ಒಳಗಿಂದ ಹಪ್ಪಳದ ವಾಸನೆ
“ನಾಯಿ ಬೆಳಿಗ್ಗೆಯಿಂದ ಏನು ತಿಂದಿಲ್ಲ
ಏನಾರ ತಿನ್ನೋಕ್ ಹಾಕು, ಸುಮ್ನೆ ಅಲ್ಲಿ ನಿತ್ಕೊಂಡಾದ್ರು ಏನ್ ಮಾಡ್ತಿ”
ಅಮ್ಮನ ಹುಕುಂ.
ನಾಯಿಗೆ
ಬಟ್ಟಲಲ್ಲಿನ ಅನ್ನವನ್ನು ತಿನ್ನಲಿಕ್ಕೆ ಹೇಗೆ ಹೇಳೋದು?
ಅದಕ್ಕೆ ತಿಳಿಯದ ನನ್ನ ಮಾತು
ನನಗೋ ಅರ್ಥವಾಗದ ಅದರ ಮಾತು
ಒಬ್ಬರೊಬ್ಬರ ಮಾತುಗಳೇ ಅರ್ಥವಾಗಲ್ಲ ಅಂದಾಗ
ಇನ್ನು ಕವಿತೆ ಯಾರಿಗ್ ಅರ್ಥ ಆಗುತ್ತೆ?
ಅದೆಲ್ಲಾ ಸರಿ…
ಮೋಡಗಟ್ಟೋದು ಗಾಳಿಗೆ ಅರ್ಥವಾಗೋದು ಹೇಗೆ?
ಬಿಸಿಯಾದ ನೆಲ ಮಳೆಗೆ ಅರ್ಥವಾಗೋದು ಹೇಗೆ?
ಮೊಗ್ಗಿಗೆ ಬೆಳಕು ಅರ್ಥವಾಗೋದು ಹೇಗೆ?
ಇಲ್ಯಾರ ಮಾತೂ ಇಲ್ಲ, ಕವಿತೆನೂ ಇಲ್ಲ
ಸ್ಪಂದನೆ ಮಾತ್ರ ಇದೆ…
ಮೇಲೆ ಹೋಗಿದ್ಯಲ
ಹಂಗೆ ಗವಾಕ್ಷಿ ಹಾಕೋಕ್ ಏನಾಗಿತ್ತು ರೋಗ?
ನೋಡು ನೀರು ಬೀಳ್ತಿದೆ…
ಮರ್ತಿದ್ದೆ, ಇವಾಗ ಹಾಕ್ತಿನಮ್ಮ,
ಜೋರು ಬೀಸುತ್ತಿರುವ ಗಾಳಿಗೆ
ಪದ್ಯ ಬರೆದುಕೊಂಡ ಹಾಳೆ ಹಾರುತ್ತಿದೆ,
ಜಿಟಿ ಜಿಟಿ ಮಳೆಗೆ ಅಳಿಸಿ ಹೋಗುತ್ತಿದೆ,
ಪದ್ಯ ತೂಕವಿಲ್ಲದ್ದು.
ಕವಿ ಓದುವಾಗಲೇ ಉಸಿರಿಗೆ ಅದರುತ್ತೆ
ನನಗ್ಯಾಕೊ ಪದ್ಯಕ್ಕೆ ರೆಕ್ಕೆ ಬಂದದ್ದು
ಚೂರೂ~
ಇಷ್ಟವಾಗಲಿಲ್ಲ…
ಚಹಾದ ಕಪ್ಪು ಇಟ್ಟಿದ್ದರೆ ಸಾಕಿತ್ತು
ಹಾಳೆಯ ಜೊತೆ ಒಂದು ಕವಿತೆಯಾದರೂ ಮಿಕ್ಕುತ್ತಿತ್ತು





thumba chennagide. odisikolluva guna ide.
hey,that’s very nice 😉
ಗದ್ಯದೊಳಗೊಂದು ಪದ್ಯ. ತುಂಬಾ ಸೊಗಸಾಗಿ ಬರೆದಿದ್ದೀರಾ. ಶಬ್ದಗಳ ಜೋಡಣೆ ಶೈಲಿ ಸೂಪರ್.
good poem pravara
Pravara,
“ಚಹಾದ ಕಪ್ಪು ಇಟ್ಟಿದ್ದರೆ ಸಾಕಿತ್ತು
ಹಾಳೆಯ ಜೊತೆ ಒಂದು ಕವಿತೆಯಾದರೂ ಮಿಕ್ಕುತ್ತಿತ್ತು”
Soooooooper