ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪದ್ಮಿನಿ ನಾಗರಾಜು ಹೊಸ ಕವಿತೆ- ಜಿಂದಗಿ ಅಬಿ ಬಾಕಿ ಹೈ…

ಡಾ ಪದ್ಮಿನಿ ನಾಗರಾಜು

ಬೆನ್ನಿಗೇರಿದ ಸಾವೆಂಬ ಬೇತಾಳವ
ಕೆಳಗಿಳಿಸಲು ತಿಳಿಯದೆ
ದಿನ ದಿನವೂ ಅಳಿದು ಹೋಗುವ
ಕಾಯವ ಮೆಚ್ಚಿ ಮೆರೆಯುತ
ಜೋಗತಿಯಂತೆ ಹೊತ್ತು ತಿರುಗುತಿಹೆ

ಹೃದಯಗಳ ಪೊಟ್ಟಣಕಟ್ಟಿ
ತುಂಬಿಸು ಬೇಕು ಬೇಡದ್ದನೆಲ್ಲಾ
ಕಾಣದ್ದನ್ನೆಲ್ಲಾ ನಂಬಿಸಿ
ಮಾತಿನ ಮೋಡಿ ಮಾಡಿ
ಸುತ್ತಲಿನವರ ಯಾಮಾರಿಸು

ಸರಿ ತಪ್ಪುಗಳ ತೂಕ ಹಾಕುವ
ತಕ್ಕಡಿ ಕಾಣೆಯಾಗಿದೆ
ನಮ್ಮದೇ ನೆಲ ಬಗೆದಷ್ಟು
ನಮ್ಮದೇ ಜಲ ಮೊಗೆದಷ್ಟು
ಮುಗಿಸು ಒಂದೇ ಗುಟುಕಿಗೆ
ಉಳಿದವರ ಚಿಂತೆ ನಮಗೇಕೆ

ಗ್ಯಾಂಗ್ರೀನ್ ಹಿಡಿದ ಸಂಬಂಧಗಳ
ಪೂರ್ತಿ ಕಿತ್ತು ಬಿಸಾಡು
ಕೊರಗುವವರು ಯಾರಿಲ್ಲ
ಜಗದ ಜನರೊಂದಿಗೆ
ನೋಟುಗಳೇ ಮಾತಾಡುತ್ತಿವೆ

ಕಿಡ್ನಿ ಕಣ್ಣು ಮಾರಾಟಕ್ಕಿವೆ
ಹೃದಯದ ಬಡಿತ
ಪ್ರಾಣವಾಯುವಿನ ತುಡಿತ
ಎಲ್ಲವೂ ಅಂಗಡಿಯಲಿ
ಜೋಡಿಸಿಟ್ಟಾಗಿದೆ
ದಲ್ಲಾಳಿಯ ಜೊತೆಗಿಟ್ಟು
ವ್ಯವಹಾರ ಕುದುರಿಸು

ಅದಾಗದಿದ್ದರೆ
ಚಿಂತೆ ಬೇಡ
ಕೊಂಡು ಕೊಳ್ಳುವ
ಚತುರನಲ್ಲವಾದರೆ
ಮಸಣದಲ್ಲಿ ಜೊತೆಯಾಗು
ಅಲ್ಲಿಯೂ ಸರತಿಯಿದೆ
ಕಾಸಿದ್ದವರೇ ಮೊದಲು

ಬೀದಿ ನಾಯಿಗಳು ಜೊಲ್ಲು
ಸುರಿಸಿ ಕಾಯುತ್ತಿವೆ
ಬಯಲ ಹೆಣವಾಗುವ
ಬಯಕೆ ಬೇಡವಾದಲ್ಲಿ
ಮುಚ್ಚಿಟ್ಟಿದ್ದು ಬಿಚ್ಚಿಡು

ಕೈಯ ರೇಖೆಯ ದೇಕುಗಳ
ಬದಲಿಸುವರಾರೂ ಇಲ್ಲ
ಅದೃಷ್ಟದ ಆಟದಲಿ
ಮೇಲೇರಿ ಇಳಿದರೂ
ಒಮ್ಮೆ ಅಮೀರ
ಮತ್ತೊಮ್ಮೆ ಗರೀಬ

ಭಾವನೆಗಳಿಗೆ ಬಣ್ಣ ಹಚ್ಚಿ
ಕಣ್ಣೀರನ್ನು ಮಾರಾಟಕಿಟ್ಟು
ಮುಖದಲ್ಲಿ ನಗುವ ತುಳಕಿಸುವ
ನವಾಬರೇ
ಜಿಂದಗಿ ಅಬಿ ಬಾಕಿ ಹೈ

‍ಲೇಖಕರು Admin

16 January, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading