ಲಂಕೇಶ್ ಪತ್ರಿಕೆ ಅತ್ಯಂತ ಉಚ್ಹ್ರಾಯ ಸ್ಥಿತಿಯಲ್ಲಿ ಇದ್ದಾಗ, ಲಂಕೇಶರು ಪ್ರಗತಿರಂಗದ ಗೀಳು ಹತ್ತಿಸಿ ಕೊಂಡು ಊರೂರು ಸುತ್ತಿದಾಗ, ಪ್ರತಿ ಸಂಜೆ ಅನವರತ ನಡೆಯುತ್ತಿದ್ದ ಪಾರ್ಟಿಗಳಲ್ಲಿ ಮೇಷ್ಟ್ರ ಜೊತೆ ಸದಾ ಇರುತ್ತಿದ್ದವನು ರೆಡ್ಡಿ. ಮೇಷ್ಟ್ರ ಎಲ್ಲ ಒಳ ಹೊರಗುಗಳನ್ನು ಹತ್ತಿರದಿಂದ ಬಲ್ಲವನು. ಹಾಗೆಯೇ ಅವರ ಶಕ್ತಿ ದೌರ್ಬಲ್ಯಗಳು ಅವನಿಗೆ ತಿಳಿದಿವೆ .
ಮತ್ತೊಂದು ಕುತೂಹಲದ ಸಂಗತಿ ಅಂದರೆ ಈ ಅವಧಿಯಲ್ಲಿ ನಂತರ ಅವರಿಗೆ ಹತ್ತಿರವಾದಂತೆ ಕಂಡ ಸಾಹಿತಿಗಳು ಯಾರೂ ಅಲ್ಲಿ ಸುಳಿಯುತ್ತಿರಲಿಲ್ಲ. ಅವರ ಕಲ್ಲು ಕರಗುವ ಸಮಯ ಬಂದ ನಂತರವಷ್ಟೇ ಸಾಹಿತಿಗಳು ಸಂಜೆಕೂಟಗಳಿಗೆ ಮರು ಪ್ರವೇಶ ಪಡೆದಿದ್ದು .
ಈ ಕಾರಣದಿಂದ 80 ರ ದಶಕದ ಲಂಕೇಶರನ್ನ ತೀರಾ ಸಮೀಪದಿಂದ ಬಲ್ಲವನು ನನಗೆ ತಿಳಿದಂತೆ ರೆಡ್ಡಿ ಒಬ್ಬನೇ. ಮತ್ತೊಬ್ಬ ಸತ್ಯಮೂರ್ತಿ. ಅದರೆ ಸತ್ಯ ಸಂಜೆ ಕೂಟಗಳಿಂದ ಹೊರಗಿದ್ದವನು.
ಹೀಗಾಗಿ ರೆಡ್ಡಿ ಮೇಷ್ಟ್ರ ಬಗೆಗೆ ಬರೆದರೆ ಒಂದು ಅದ್ಭುತ ಒಳನೋಟಗಳಿರುವ 80ರ ದಶಕದ ಸಾಂಸ್ಕೃತಿಕ ಜಗತ್ತನ್ನ ಕಟ್ಟಿ ಕೊಡ ಬಲ್ಲ.
ಅವನ ಕನ್ನಡ ಕೂಡ ಸಹಜ ಸುಂದರವಾದುದು .
-ಚಂದ್ರಶೇಖರ ಆಲೂರು
ಮೇಷ್ಟ್ರು ಹುಟ್ಟಿದ ದಿನ. ಪತ್ರಿಕೆ ಜೊತೆಗಿದ್ದ ೯ ವರ್ಷಗಳಲ್ಲಿ ಅವರಿಂದ ಕಲಿತದ್ದು ಮರೆಯಲು ಹೇಗೆ ತಾನೆ ಸಾಧ್ಯ?
೧೯೮೯ರಲ್ಲಿ ನಾನು ಅಮೆರಿಕಕ್ಕೆ ಬಂದ ಹೊಸತಲ್ಲಿ ಪತ್ರಿಕೆ ಮತ್ತು ಮೇಷ್ಟ್ರನ್ನ ಯಾಕಪ್ಪ ಬಿಟ್ಟು ಬಂದೆ ಎಂದು ಕೊರಗಿದ್ದುಂಟು. ಆ ನಂತರ ಮೇಷ್ಟ್ರೊಡನೆ ಪತ್ರ ವ್ಯವಹಾರ, ಫೋನ್ ಸಂಬಾಷಣೆ, ಪುಸ್ತಕ ವಿನಿಮಯ ಇತ್ಯಾದಿ ನಡೆಯುತ್ತಲೇ ಇತ್ತು. ಆಗ ಮೇಷ್ಟ್ರು ನನಗೆ ತಪ್ಪದೇ ಪತ್ರಿಕೆಯನ್ನ (ಪುಕ್ಕಟೆ) ಕಳಿಸುತ್ತಿದ್ದರು.
ಒಮ್ಮೆ ಇದ್ದಕ್ಕಿದ್ದಂತೆ ಪತ್ರಿಕೆ ಬರೋದು ನಿಂತುಹೋಯಿತು. ಫೋನ್ ಮಾಡಿದಾಗ ಮೇಷ್ಟ್ರು ವ್ಯವಹಾರ ಮಾಡುವವರು ಹೀಗೆ ಪುಕ್ಕಟೆ ಪತ್ರಿಕೆ ಕಳಿಸಿ ನಷ್ಟ ಅನುಭವಿಸಬಾರದು ಮತ್ತು ಪುಕ್ಕಟೆ ಪತ್ರಿಕೆ ನನಗೊಬ್ಬನಿಗೇ ಅಲ್ಲ, ಅಗ್ರಹಾರ ಕೃಷ್ಣಮೂರ್ತಿ ಮತ್ತಿತರರಿಗೆ ಕೂಡಾ ನಿಲ್ಲಿಸಲಾಗಿದೆ ಎಂದು ಸಮಾಧಾನ ಮಾಡಿದ್ದು ನೆನಪಾಗುತ್ತಿದೆ.
ಇದನ್ನೆಲ್ಲಾ ನೆನೆಪಿಸಿಕೊಂಡು ಮೇಷ್ಟ್ರು ಬರೆದ ಒಂದು ಪತ್ರ ಇಲ್ಲಿ ಹಾಕುತ್ತಿದ್ದೇನೆ.






0 Comments