ಪತ್ರಕರ್ತನಿಗೆ ಹಲ್ಲೆಯಾದರೆ ಹೇಗೆ ?

ಚಿದಂಬರ ಬೈಕಂಪಾಡಿ

ವೃತ್ತಿಯಲ್ಲಿ ಒಳಸುಳಿಗಳು ಹೇಗಿರುತ್ತವೆ ಎನ್ನುವುದನ್ನು ಒಬ್ಬ ಸಾಮಾನ್ಯ ಓದುಗ ಖಂಡಿತಕ್ಕೂ ಗ್ರಹಿಸಿರಲಾರ. ಯಾಕೆಂದರೆ ತಾನು ಓದುವ ಪತ್ರಿಕೆಯಲ್ಲಿ ಸುದ್ದಿ, ಲೇಖನಗಳು ಹೇಗಿರಬೇಕು?, ಹೇಗಿವೆ?, ಇವುಗಳ ಹಿಂದಿರುವ ವ್ಯಕ್ತಿಗಳು ಅರ್ಥಾತ್ ಪತ್ರಕರ್ತರು ಯಾರು ? ಎನ್ನುವಷ್ಟಕ್ಕೆ ಸೀಮಿತವಾಗುತ್ತಾನೆ. ಅದರಾಚೆಗೆ ಆ ಓದುಗ ಯೋಚಿಸುವುದಿಲ್ಲ ಮತ್ತು ಅದು ಅವನಿಗೆ ಬೇಕಾಗಿಯೂ ಇಲ್ಲ.

ನಾನೇ ಎಷ್ಟೋ ಸಲ ಯೋಚನೆ ಮಾಡಿದ್ದಿದೆ. ಪತ್ರಕರ್ತನಾಗಿ ಟ್ರೇಡ್ ಯೂನಿಯನ್ ಕಾರ್ಯಕ್ರಮಗಳನ್ನು ವರದಿ ಮಾಡುವಾಗ ಕಾರ್ಮಿಕರಿಗೆ ಸರಿಯಾಗಿ ವೇತನ, ಭತ್ಯೆ ಕೊಡುವುದಿಲ್ಲ, ಶೋಷಣೆ ಮಾಡುತ್ತಾರೆ ಎಂದು ಬರೆದ ನಾನು ಎಷ್ಟರಮಟ್ಟಿಗೆ ಶೋಷಣೆಗೆ ಒಳಗಾಗುತ್ತಿದ್ದೇನೆ, ಆದರೆ ನಾನು ಪ್ರಶ್ನೆ ಮಾಡುವುದಿಲ್ಲ, ನನ್ನ ಪರವಾಗಿ ಯಾರೂ ಪ್ರಶ್ನೆ ಮಾಡುವುದೂ ಇಲ್ಲವೆಂದು.

‘ಮುಂಗಾರು’ ಆರಂಭದ ಮೊದಲ ವರ್ಷ ಕಾರ್ಮಿಕರಿಗೆ ತಿಂಗಳು ತಿಂಗಳಿಗೆ ಮೊದಲ ವಾರದ ಏಳನೇ ದಿನಾಂಕದೊಳಗೆ ವೇತನ ಕೊಟ್ಟಿದ್ದನ್ನು ಬಿಟ್ಟರೆ ಮತ್ತೆ ಸಕಾಲಕ್ಕೆ ವೇತನ ಪಾವತಿಸಲಾಗಲಿಲ್ಲ. ಆಗ ಆ ಪತ್ರಿಕೆಯ ಉದ್ಯೋಗಿಯಾಗಿ ವೇತನವಿಲ್ಲದೆ ಕಂಗಾಲಾಗಿ ಸಾಲ ಮಾಡಿ ನಿತ್ಯದ ಖರ್ಚನ್ನು ನಿಭಾಯಿಸಿದ ಉದಾಹರಣೆಗಳೂ ಇವೆ.

ನ್ಯೂಸ್ ಪ್ರಿಂಟ್ ತರಲು ಹಣ ಸಾಕಾಗುತ್ತಿರಲಿಲ್ಲ, ಅಂಥ ಸಂದರ್ಭದಲ್ಲಿ ವಡ್ಡರ್ಸೆ ರಘುರಾಮ ಶೆಟ್ಟರು ಏಜಂಟರಿಂದ ಮುಂಗಡ ಪಡೆದು ನ್ಯೂಸ್ ಪ್ರಿಂಟ್ ತರಿಸುತ್ತಿದ್ದರು. ಪರಿಸ್ಥಿತಿ ಹೀಗಿರುವಾಗ ಸಂಬಳ ಕೊಡುವ ಮಾತಾದರೂ ಎಲ್ಲಿಂದ ಬರಬೇಕು?.

ನಾವು ಪತ್ರಕರ್ತರಾಗಿ ಕಾರ್ಮಿಕರ ಪರವಾಗಿ ಬೀದಿಯಲ್ಲಿ ನಿಂತು ಸುದ್ದಿ ಬರೆದುಕೊಂಡು ಅವರ ನ್ಯಾಯಕ್ಕಾಗಿ ದುಡಿಯುವ ನಮ್ಮನ್ನು ಕೇಳುವವರೇ ಇಲ್ಲವಲ್ಲ ಎನ್ನುವ ವ್ಯಥೆಯಾಗುತಿತ್ತು. ಇನ್ನೊಬ್ಬರ ಶೋಷಣೆಯನ್ನು ಕಣ್ಣಿಗೆ ಕಟ್ಟುವಂತೆ ಬರೆಯುವ ನಾವೇ ಶೋಷಣೆಗೆ ಒಳಗಾಗುತ್ತಿರುವುದನ್ನು ಯಾರಲ್ಲೂ ಹೇಳಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ ಅನುಭವಿಸುವುದು ಅನಿವಾರ್ಯವಾಗಿತ್ತು.

ಈ ಕಷ್ಟಗಳು ಈಗ ಇವೆ ಎನ್ನಲಾರೆ. ಯಾಕೆಂದರೆ ಪತ್ರಿಕೆಗಳು ಕೈಗಾರಿಕೆಯ ಸ್ವರೂಪ ಪಡೆದುಕೊಂಡಿರುವುದರಿಂದ ಲಾಭದ ಲೆಕ್ಕಾಚಾರ ಮಾಡಿಯೇ ವ್ಯವಹಾರ. ಪತ್ರಕರ್ತರಿಗೂ ಅಷ್ಟೆ ಹಿಂದಿನಂತೆ ಪುಡಿಗಾಸು ಸಂಬಳವಲ್ಲ. ಸಂಬಳದ ಜೊತೆಗೆ ಜಾಹೀರಾತು ಕಮಿಷನ್, ಸರ್ವಿಸ್ ಕೊಟ್ಟದ್ದಕ್ಕೆ ಭಕ್ಷೀಸು ಇತ್ಯಾದಿ ಇತ್ಯಾದಿ ಗಳಿಕೆಯ ಭಿನ್ನ ಮೂಲಗಳಿವೆ. ಉದ್ಯಮ ಬೆಳೆದಿದೆ, ಪತ್ರಕರ್ತರೂ ಬೆಳೆಯುತ್ತಿದ್ದಾರೆ, ಹಾಗೆ ಬೆಳೆಸುವಂಥ ಜನವರ್ಗವೂ ಈಗ ಧಾರಾಳವಾಗಿ ಇದೆ.

ಒಂದೇ ಕಚೇರಿಯೊಳಗೆ, ಒಂದೇ ಸೂರಿನೊಳಗೆ ಕೆಲಸ ಮಾಡುವ ಪತ್ರಕರ್ತರು ಭಿನ್ನಭಿನ್ನ ಹಿನ್ನೆಲೆಯಿಂದ ಬಂದವರು ಅವರ ಪ್ರತಿಭಾ ಸಂಪನ್ನತೆಯೂ ಭಿನ್ನವಾಗಿರುತ್ತದೆ. ಎಲ್ಲರ ಕೂಡುವಿಕೆಯಿಂದ ಒಳ್ಳೆಯ ಪತ್ರಿಕೆ ಮಾರುಕಟ್ಟೆಗೆ ಬರುತ್ತದೆ.

ಇವಿಷ್ಟೇ ಅಲ್ಲ ಇದರಾಚೆಗೂ ಪತ್ರಕರ್ತರ ಮನಸ್ಸುಗಳು ಪರಸ್ಪರ ಕಾಲೆಳೆಯುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತವೆ ಎನ್ನುವುದನ್ನು ಬಹಳ ಜನ ಅರ್ಥಮಾಡಿಕೊಂಡಿಲ್ಲ ಎನ್ನುವುದನ್ನು ನಾನು ಬಲ್ಲೆ.

1998ರಲ್ಲಿ ಮಂಗಳೂರಲ್ಲಿ ಕೋಮುಗಲಭೆ ನಡೆದು ಕೆಲವು ವಾರಗಳ ಕಾಲ ಪರಿಸ್ಥಿತಿ ಹದಗೆಟ್ಟಿತ್ತು. ಅಗ ನಾನು ‘ಕನ್ನಡಪ್ರಭ’ದಲ್ಲಿದ್ದೆ. ನನ್ನ ಮನೆ ಸುರತ್ಕಲ್ ಚೊಕ್ಕಬೆಟ್ಟಿನಲ್ಲಿ. ರಾತ್ರಿ ಏಳು ಗಂಟೆಗೆ ಚೊಕ್ಕಬೆಟ್ಟಿನಲ್ಲಿ ಗಲಾಟೆ ನಡೆದು ರಾತ್ರಿ ಸುಮಾರು ಹತ್ತು ಗಂಟೆಹೊತ್ತಿಗೆ ಪರಿಸ್ಥಿತಿ ಬಿಗಡಾಯಿಸಿ ಬೂದಿಮುಚ್ಚಿದ ಕೆಂಡದಂತಾಗಿತ್ತು. ಪುಣ್ಯಕ್ಕೆ ಈಗಿನಂತೆ ಮೊಬೈಲ್, ವಾಟ್ಸಾಪ್ ಇರಲಿಲ್ಲ.

ನಾನು ರಾತ್ರಿ ಸುಮಾರು ಹತ್ತು ಗಂಟೆಗೆ ಮಿತ್ರರ ಸ್ಕೂಟರ್ ನಲ್ಲಿ ಸುರತ್ಕಲ್ ನಿಂದ ಚೊಕ್ಕಬೆಟ್ಟಿನ ನನ್ನ ಮನೆಗೆ ಹೋಗುತ್ತಿದ್ದೆ. ಚೊಕ್ಕಬೆಟ್ಟು ಮಸೀದಿ ಬಳಿ ನೂರಾರು ಜನ ಯುವಕರು ಜಮಾಯಿಸಿದ್ದರು. ನಾನು ಪ್ರಯಾಣಿಸುತ್ತಿದ್ದ ಸ್ಕೂಟರ್ ನಿಲ್ಲಿಸಿದರು. ನನ್ನ ಪರಿಚಯ ಆ ಜನರಿಗಿದ್ದ ಕಾರಣ ಅವರು ಹೋಗಲಿ ಹೋಗಲಿ ಬಿಡಿ ಎನ್ನುತ್ತಿದ್ದರು.

ಆದರೆ ಸ್ವಲ್ಪ ದೂರ ಹೋದ ಮೇಲೆ ಯುವಕರ ಗುಂಪು ನನ್ನನ್ನು ಕರೆದುಕೊಂಡು ಹೋಗುತಿದ್ದ ವ್ಯಕ್ತಿಯನ್ನು ಒಂದು ಹೆಜ್ಜೆ ಮುಂದಕ್ಕೆ ಸ್ಕೂಟರ್ ಚಲಿಸಲು ಬಿಡಲಿಲ್ಲ. ನನ್ನನ್ನು ಬೇರೆ ಸ್ಕೂಟರ್ ನಲ್ಲಿ ಮನೆಗೆ ಬಿಡುವುದಾಗಿ ಮೂರು ನಾಲ್ಕು ಜನ ಏಕಕಾಲಕ್ಕೆ ಸ್ಕೂಟರ್ ಸ್ಟಾರ್ಟ್ ಮಾಡಿದರು. ಯಾರಾದರೂ ಒಬ್ಬರು ನನ್ನನ್ನು ಬಿಡಿ, ಆದರೆ ನನ್ನನ್ನು ಇಲ್ಲಿಗೆ ಕರೆತಂದ ವ್ಯಕ್ತಿ ತನ್ನ ಮನೆಗೆ ಹೋಗಲು ತೊಂದರೆ ಮಾಡಬಾರದು ಎಂದೆ, ಆ ಜನರು ಒಪ್ಪಿದರು.

ನನ್ನನ್ನು ಕರೆದುಕೊಂಡು ಬಂದಿದ್ದ ವ್ಯಕ್ತಿ ನಿರಾತಂಕವಾಗಿ ವಾಪಸ್ ಹೋದರು, ನನ್ನನ್ನು ಅಲ್ಲಿನವರೇ ತಮ್ಮ ಸ್ಕೂಟರ್ ನಲ್ಲಿ ನನ್ನ ಮನೆಯಿದ್ದ ರೇಲ್ವೇ ಬ್ರಿಡ್ಜ್ ಬಳಿಗೆ ತಂದು ಬಿಟ್ಟು ವಾಪಸಾದರು. ರೇಲ್ವೇ ಬ್ರಿಡ್ಜ್ ಆ ಕಡೆಗೆ ಒಂದಷ್ಟು ಜನ ಯುವಕರು ಆತಂಕದಿಂದಲೇ ಕಾಯುತ್ತಿದ್ದರು. ಅಲ್ಲಿ ನಿಂತಿದ್ದವರೊಂದಿಗೆ ಮಾತನಾಡಿ ಮನೆಗೆ ಬಂದೆ. ಆದರೆ ಇದಕ್ಕೂ ಮೊದಲು ಆ ರಸ್ತೆಯಲ್ಲಿ ಹೋಗಲು ಯಾರನ್ನೂ ಬಿಡುತ್ತಿರಲಿಲ್ಲ ಅಂದರೆ ಪರಿಸ್ಥಿತಿ ಹೇಗಿರಬಹುದು ಊಹಿಸಿ.

ರಾತ್ರಿ ಮಲಗಿದೆ ಎಲ್ಲವೂ ಶಾಂತ. ಮರುದಿನ ಮುಂಜಾನೆ ಆರು ಗಂಟೆಗೆ ಮನೆಯ ದೂರವಾಣಿ ರಿಂಗಣಿಸಿತು. ಕರೆ ಸ್ವೀಕರಿಸಿದರೆ ಮೊದಲ ಮಾತೇ ಹೇಗಿದ್ದೀರಿ?, ಪೆಟ್ಟು ಹೆಚ್ಚಿಗೆ ಏನೂ ಆಗಿಲ್ಲ ತಾನೇ?. ನನಗೇ ಅಚ್ಚರಿ ಯಾಕಿಂತ ಪ್ರಶ್ನೆ?. ಆಗ ಗೊತ್ತಾಯಿತು ರಾತ್ರಿ ನನ್ನಮೇಲೆ ಮನೆಗೆ ಹೋಗುವಾಗ ಹಲ್ಲೆ ಮಾಡಿದ್ದಾರೆಂದು ಒಂದು ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು. ಅದನ್ನು ಓದಿದ ನನ್ನ ಹಿತೈಷಿಗಳು ಫೋನಾಯಿಸಿದ್ದರು. ಆ ಒಂದು ಕರೆಯ ನಂತರ ಫೋನ್ ರಿಸಿವರ್ ಕೆಳಗೆ ಇಡುವಂತಿಲ್ಲ ಮತ್ತೆ ಏನಾಯ್ತು ಏನಾಯ್ತು ? ಹೇಳಿ ಹೇಳೀ ಸಾಕಾಯ್ತು. ಆದರೆ ಮಂಗಳೂರಲ್ಲಿ ರಾತ್ರಿ ಗಲಾಟೆ ನಡೆದು ಕಫ್ಯೂ ಹೇರಿದ್ದರು. ಸುರತ್ಕಲ್ ಪ್ರದೇಶದಲ್ಲೂ ಕರ್ಫ್ಯೂ.

ಮನೆಯಿಂದ ಹೊರಗೆ ಹೋಗುವಂತಿಲ್ಲ. ಬೆಳಿಗ್ಗೆ ಸುಮಾರು ಹತ್ತು ಗಂಟೆ ಹೊತ್ತಿಗೆ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಮೊಹಿದ್ದೀನ್ ಫೋನ್ ಮಾಡಿದವರೇ ಪೇಪರ್ ನಲ್ಲಿ ನಿಮ್ಮ ಮೇಲೆ ಹಲ್ಲೆ ಮಾಡಿದ್ದಾರೆಂದು ಸುದ್ದಿ ಬಂದಿದೆಯಂತೆ. ನಾನು ದೆಹಲಿಯಲ್ಲಿದ್ದೇನೆ, ನನಗೆ ಫೋನ್ ಮೇಲೆ ಫೋನ್ ಬರ್ತಾ ಇವೆ ಏನು ವಿಷಯ ಕೇಳಿದರು.

ನನ್ನ ಮೇಲೆ ಹಲ್ಲೆ ಆಗಿಲ್ಲ ಸುಳ್ಳು ಸುದ್ದಿ ಎಂದೆ. ನೀವು ಮಧ್ಯಾಹ್ನ 3 ಗಂಟೆಗೆ ಸರ್ಕ್ಯೂಟ್ ಹೌಸ್ ಗೆ ಬನ್ನಿ, ನಾನು ದೆಹಲಿಯಿಂದ ಹೊರಡುತ್ತಿದ್ದೇನೆ, ಅಲ್ಲಿ ಭೇಟಿ ಮಾಡೋಣವೆಂದರು.

ಇಲ್ಲಿ ಕರ್ಫ್ಯೂ ಹಾಕಿದ್ದಾರೆ ನಾನು ಹೇಗೆ ಬರಲು ಸಾಧ್ಯ ಎಂದೆ ಸಚಿವರಿಗೆ. ನಾನು ಅಡಿಷನಲ್ ಎಸ್ಪಿಯನ್ನೇ ನಿಮ್ಮನ್ನು ಕರೆದುಕೊಂಡು ಬರಲು ಹೇಳುತ್ತೇನೆ ಎಂದರು. ಆಗ ಪಿ.ಎಚ್.ರಾಣೆ ಮಂಗಳೂರಿನ ಅಡಿಷನಲ್ ಎಸ್ಪಿ. ಅವರ ಕಾರಲ್ಲಿ ಬರಬಹುದು ಆದರೆ ಮತ್ತೆ ನನ್ನನ್ನು ವಾಪಸ್ ಮನೆಗೆ ಬಿಡಿಸುವುದಾದರೆ ಮಾತ್ರ ಬರುತ್ತೇನೆ ಎಂದೆ. ಯಾಕೆಂದರೆ ಇಂಥ ಅನುಭವ ಆಗಿದೆ. ಸಚಿವರು ಹೇಳಿದರು ಎನ್ನುವ ಕಾರಣಕ್ಕೆ ಕರೆದುಕೊಂಡು ಹೋಗುತ್ತಾರೆ, ಮತ್ತೆ ವಾಪಸ್ ಬಿಡುವವರೇ ಇರುವುದಿಲ್ಲ. ಅಂಥ ಪರಿಸ್ಥಿತಿಯನ್ನು ಗಮನಿಸಿಯೇ ಈ ಮಾತನ್ನು ಹೇಳಿದೆ. ಮೊಹಿದ್ದೀನ್ ವಾಪಸ್ ಮನೆಗೆ ಬಿಡಿಸುವುದಾಗಿ ಭರವಸೆ ಕೊಟ್ಟರು.

ಪತ್ರಿಕೆಯಲ್ಲಿ ಸುದ್ದಿ ಬಂತೆಂದರೆ ಪತ್ರಕರ್ತರಿಗೆ ಸಹಜವಾಗಿಯೇ ಆತಂಕ ಎಲ್ಲರೂ ಕೇಳುವವರೇ ಎಲ್ಲರಿಗೂ ವಿಷಯ ತಿಳಿಸಿದೆ. ಮಧ್ಯಾಹ್ನದ ಹೊತ್ತಿಗೆ ಮತ್ತೂ ಫೋನ್ ಕರೆ. ಬೆಳಗಿನ ದಿನಪತ್ರಿಕೆಯಲ್ಲಿ ಬಂದ ಸುದ್ದಿಯ ಮುಂದುವರಿದ ಭಾಗವಾಗಿ ಸಂಜೆ ಪತ್ರಿಕೆಯಲ್ಲಿ ನನ್ನನ್ನು ಥಳಿಸಲಾಗಿದೆ, ಆಸ್ಪತ್ರೆಗೆ ಕೊಂಡು ಹೋಗಲೂ ಬಿಡಲಿಲ್ಲವಂತೆ ಎನ್ನುವ ಗಂಭೀರ ಸುದ್ದಿ. ಉರಿವ ಬೆಂಕಿಗೆ ತುಪ್ಪ ಸುರಿದಂತಾಗಿತ್ತು.

ಈ ವಿಚಾರ ನನ್ನ ಸಹೋದ್ಯೋಗಿ ಎನ್ ಆರ್ ಉಭಯ ಇಂಡಿಯನ್ ಎಕ್ಸ್ ಪ್ರೆಸ್ ವರದಿಗಾರರ ಕಿವಿಗೂ ಬಿದ್ದಿದೆ. ಅವರೂ ಫೋನ್ ಮಾಡಿದರು. ಅವರಿಗೂ ವಿವರಿಸಿ ಮಧ್ಯಾಹ್ನ 3 ಗಂಟೆಗೆ ಬರುವುದಾಗಿ ಹೇಳಿದೆ. ಮೊಹಿದ್ದೀನ್ ಹೇಳಿದಂತೆ ರಾಣೆಯವರ ಕಾರು ಮನೆಗೆ ಬಂತು, ಅವರ ಕಾರಿನಲ್ಲಿ ಸರ್ಕ್ಯೂಟ್ ಹೌಸ್ ಗೆ ಹೋದೆ. ಅಲ್ಲಿ ಸಚಿವ ಮೊಹಿದ್ದೀನ್ ಗಾಬರಿಯಿಂದಲೇ ನನ್ನನ್ನು ಬೆನ್ನು ತಿರುಗಿಸಿ, ಕೈ ಕುಲುಕಿ ಏನೂ ಆಗಿಲ್ಲ ತಾನೇ ಎಂದು ವಿಚಾರಿಸಿದರು. ನನಗೆ ಏನೂ ಆಗಿಲ, ಯಾರೂ ಹಲ್ಲೆ ಮಾಡಿಲ್ಲ ಎಂದು ಹೇಳಿ ಹಿಂದಿನ ದಿನ ನಡೆದ ಘಟನೆಯನ್ನು ವಿವರಿಸಿದೆ.

ನಾನು ಎಲ್ಲಿಗೆ ಬಿಡಲು ಹೇಳುತ್ತೇನೆ ಅಲ್ಲಿಗೆ ಬಿಟ್ಟು ಬನ್ನಿ ಎನ್ನುವ ಸೂಚನೆ ಸಚಿವರಿಂದಲೇ ಪೊಲೀಸ್ ಅಧಿಕಾರಿಗಳಿಗೆ. ಪೊಲೀಸ್ ಕಾರು ನನಗಾಗಿಯೇ ಮೀಸಲು. ನೇರವಾಗಿ ಕಚೇರಿಗೆ ಹೋಗಿ ನ್ಯೂಸ್ ಕಳುಹಿಸಿ ಅದೇ ಕಾರಿನಲ್ಲಿ ರಾತ್ರಿ ಮನೆಗೆ ವಾಪಸಾದೆ. ಆದರೆ ನಿರಂತರವಾಗಿ ಮೂರು ದಿನ ಕಚೇರಿಗೆ ಹೋಗಲಾಗಲಿಲ್ಲ. ಎಕ್ಸ್ ಪ್ರೆಸ್ ನ್ಯೂಸ್ ಕಾಪಿಯನ್ನೇ ತೆಗೆದುಕೊಳ್ಳಲು ಕನ್ನಡಪ್ರಭದ ನನ್ನ ಮೇಲಿನವರಿಗೆ ವಿನಂತಿ ಮಾಡಿಕೊಂಡೆ.

ಬೆಂಗಳೂರಲ್ಲಿ ಏನು ನಡೆಯಿತೋ ಗೊತ್ತಿಲ್ಲ ಕ್ಲೋಸ್ ಡೋರ್ ಮೀಟಿಂಗ್ ನಡೆದು ಮಂಗಳೂರಿಗೆ ಒಂದು ವಾರದ ಮಟ್ಟಿಗೆ ಡಿ.ಆರ್.ಅಶೋಕ್ ರಾಮ್ ಅವರನ್ನು ಡೆಪ್ಯೂಟ್ ಮಾಡಲಾಗಿತ್ತು. ನಾಳೆಯೇ ಅವರು ಇಲ್ಲಿಗೆ ಬಂದು ರಿಪೋರ್ಟ್ ಮಾಡಿಕೊಳ್ಳಬೇಕಿತ್ತು.

ಅಶೋಕ್ ರಾಮ್ ಮರುದಿನ ಬಂದರು ವರದಿ ಕಳುಹಿಸಿದರು. ಮೂರು ದಿನಗಳ ಬಳಿಕ ನಾನು ಕಚೇರಿಗೆ ಹೋದೆ ಎಂದಿನಂತೆಯೇ ವರದಿ ಕಳುಹಿಸಿದೆ. ಮಂಗಳೂರು ನಿಧಾನವಾಗಿ ಸಹಜ ಸ್ಥಿತಿಗೆ ಬಂತು. ಅಶೋಕ್ ರಾಮ್ ವಾಪಸ್ ಬೆಂಗಳೂರಿಗೆ ಹೋದರು. ನಂತರ ತಿಳಿಯಿತು ಅಶೋಕ್ ರಾಮ್ ಅವರನ್ನು ಬೆಂಗಳೂರಿನಿಂದ ಮಂಗಳೂರಿಗೆ ಡೆಪ್ಯೂಟ್ ಮಾಡಿದ್ದ ಉದ್ದೇಶ ನನ್ನ ಮೇಲೆ ಹಲ್ಲೆ ಮಾಡಲಾಗಿತ್ತೇ?, ಮಾಡಿದ್ದರೆ ಯಾವ ಕಾರಣಕ್ಕೆ, ಇದರ ಹಿಂದಿನ ಕಾರಣಗಳೇನು ? ವರದಿ ಸಲ್ಲಿಸಲು ಎನ್ನುವುದು.

ಆದರೆ ಅಶೋಕ್ ರಾಮ್ ಸರಿಯಾಗಿಯೇ ವರದಿ ಕೊಟ್ಟಿರಬೇಕು ಆದ್ದರಿಂದಲೇ ನನ್ನಿಂದ ಘಟನೆಯ ಬಗೆ ಯಾವುದೇ ವಿವರಣೆಯನ್ನು ಯಾರೂ ಕೇಳಲಿಲ್ಲ.

ಆದರೂ ಇಡೀ ಪ್ರಕರಣ ನನ್ನ ವೃತ್ತಿ ಬದುಕಿನಲ್ಲಿ ಅವಿಸ್ಮರಣೀಯ ಮಾತ್ರವಲ್ಲ ವೃತ್ತಿ ವೈಷಮ್ಯ ಯಾವ ರೀತಿ ಒಳಗೊಳಗೇ ಕೆಲಸ ಮಾಡುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಕಲಿಸಿತು. ಒಂದು ಸಣ್ಣ ಸುಳ್ಳು ಸುದ್ದಿ ಉಂಟುಮಾಡುವ ಪರಿಣಾಮ ಇದು, ಇಂಥ ಸುದ್ದಿಗಳಿಗೆ ಅದೆಷ್ಟು ಜನರ ಬದುಕು, ಮಾನ ಕಳೆಗುಂದುತ್ತದೆ ಅಲ್ಲವೇ?.

‍ಲೇಖಕರು avadhi

March 2, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: