
ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದವರು ಅಭಯ ಸಿಂಹ. ಇವರು ನಿರ್ದೇಶಿಸಿದ ಮೊದಲ ಚಲನಚಿತ್ರ ‘ಗುಬ್ಬಚ್ಚಿಗಳು’. ೨೦೦೮ ರಲ್ಲಿ ಆರಂಭವಾದ ಇವರ ಚಿತ್ರ ಪಯಣಕ್ಕೆ ಈಗ ದಶಕದ ವಸಂತ.
ಕಡಲ ಅಲೆಗಳ ಅಬ್ಬರವನ್ನು ಆಲಿಸುತ್ತಲೇ ಬೆಳೆದ ಹುಡುಗನಿಗೆ ಮನಸ್ಸು ಮತ್ತೆ ಮತ್ತೆ ಅತ್ತಲೇ ಎಳೆದದ್ದು ಆಕಸ್ಮಿಕವಲ್ಲ. ತಾನು ಬಾಲ್ಯದಿಂದಲೂ ಕಂಡ ಸಮುದ್ರ, ಮೀನುಗಾರರು, ದೋಣಿ, ಬಲೆ, ಹಡಗು ಎಲ್ಲವನ್ನೂ ಸೇರಿಸಿ ಕಟ್ಟಿದ ಚಿತ್ರವೇ ‘ಪಡ್ಡಾಯಿ’.
ತುಳು ಭಾಷೆಯ ಈ ಸಿನೆಮಾ ಕೇವಲ ಭಾಷೆಯ ಕಾರಣಕ್ಕಾಗಿ ಮಾತ್ರ ನೋಡುಗರನ್ನು ಕಾಡಲಿಲ್ಲ. ಬದಲಿಗೆ ಇದು ಯಶಸ್ವಿಯಾಗಿ ತುಳು ನೆಲದ ಸಂಸ್ಕೃತಿಯನ್ನು ಕಟ್ಟಿಕೊಟ್ಟ ಚಿತ್ರ. ಈ ಚಿತ್ರಕ್ಕೆ ಮತ್ತೆ ರಾಷ್ಟ್ರ ಪ್ರಶಸ್ತಿ ಇವರನ್ನು ಹುಡುಕಿಕೊಂಡು ಬಂದಿತು.
ಅಭಯ ಸಿಂಹ ಹೇಗೆ ತಮ್ಮ ಸಿನೆಮಾವನ್ನು ಕಟ್ಟುತ್ತಾರೆ ಎನ್ನುವ ಕುತೂಹಲ ಎಲ್ಲರಿಗೂ ಇದೆ. ಈ ಪ್ರಶ್ನೆಯನ್ನು ನಾವೂ ಕೇಳಬೇಕು ಎಂದುಕೊಂಡಿದ್ದಾಗಲೇ ಅಭಯ ಸಿಂಹ ‘ಅಕ್ಷರ ಪ್ರಕಾಶನ’ದ ಮೂಲಕ ‘ಪಡ್ಡಾಯಿ’ ಕಟ್ಟಿದ ಕಥೆಯ ಕೃತಿಯನ್ನು ಹಿಡಿದು ಬಂದರು.
ಕನ್ನಡದಲ್ಲಿ ಸಿನೆಮಾ ಕುರಿತ ಕೃತಿಗಳು ಬೆರಳೆಣಿಕೆಯಷ್ಟು. ಇಂತಹ ಸಂದರ್ಭದಲ್ಲಿ ಚಿತ್ರಕಥೆಯ ಸಮೇತ ಅಭಯ ಸಿಂಹ ಪಡ್ಡಾಯಿ ಕಟ್ಟಿದ ಕಥೆಯನ್ನು ಹೇಳಿದ್ದಾರೆ. ಓದಿ-
ಈ ಕೃತಿ ಕೊಳ್ಳುವ ಆಸಕ್ತಿ ಇದ್ದಲ್ಲಿ ಇಲ್ಲಿ ಒತ್ತಿ

| ನಿನ್ನೆಯಿಂದ |
6
ಒಂದೊಂದಾಗಿ ಚಿತ್ರೀಕರಣಕ್ಕೆ ಅಗತ್ಯವಾದ ಎಲ್ಲಾ ಸ್ಥಳಗಳ ಆಯ್ಕೆ ಮುಗಿಯಿತು. ದಿನವಿಡೀ ಊರು ಸುತ್ತಿ, ರಾತ್ರಿ ಹೊತ್ತಿನಲ್ಲಿ, ಉಡುಪಿಯ ಹೋಟೇಲ್ ಕೋಣೆಯೊಳಗೆ ಕುಳಿತು, ಚಿತ್ರೀಕರಣ ಯೋಜನೆಯನ್ನು ಮಾಡುತ್ತಿದ್ದೆವು. ಎಷ್ಟು ದೂರದಲ್ಲಿ ಯಾವ ಸ್ಥಳ ಇದೆ. ಆಯಾ ಸ್ಥಳದಲ್ಲಿ ಎಷ್ಟು ಚಿತ್ರೀಕರಣ ವೇಳೆ ಬೇಕು, ಯಾವ ಯಾವ ನಟರು ಅಲ್ಲಿ ಬೇಕು, ಅದನು ಯಾವ ದಿವಸ ಚಿತ್ರೀಕರಿಸಬೇಕು ಇತ್ಯಾದಿ ನಿಶ್ಚಯಿಸುತ್ತಾ ಸಾಗಿದೆವು. ಈ ಸಿದ್ಧತೆ, ಸಿನಿಮಾವನ್ನು ನಿಶ್ಚಿತ ಬಜೆಟ್ ಒಳಗಡೆ, ದಕ್ಷತೆಯಿಂದ ಮಾಡಲು ಬಹಳ ಸಹಕಾರಿ.
ಇದು ನಟರಿಗೂ, ತಂತ್ರಜ್ಞರಿಗೂ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಹಾಯಕ. ಇದರೊಂದಿಗೆ, ಆಯಾ ದೃಶ್ಯಕ್ಕೆ ಅಗತ್ಯವಾದ ಪರಿಕರಗಳೇನು, ಪಾತ್ರಗಳ ಬಟ್ಟೆ ಯಾವುದು ಈ ಎಲ್ಲಾ ವಿವರಗಳನ್ನು ಬರೆಯುತ್ತಾ, ಚರ್ಚಿಸುತ್ತಾ ಇಡೀ ಚಿತ್ರ ತಂಡ, ತಮ್ಮ ತಮ್ಮ ಜವಾಬ್ದಾರಿಗಳನ್ನು ಹಂಚಿಕೊಂಡು ಸಿದ್ಧಗೊಳ್ಳಲಾರಂಭಿಸಿತು.
ಮೊಳಗಿತು ರಣಕಹಳೆ!
ಚಿತ್ರೀಕರಣದ ಪೂರ್ವ ಸಿದ್ಧತೆಗಳೆಲ್ಲಾ ಒಂದು ಹಂತಕ್ಕೆ ಬಂತು ಎನ್ನುವಾಗ, ಎಲ್ಲರನ್ನೂ ಒಮ್ಮೆ ಜೊತೆಯಾಗಿ ಭೇಟಿಯಾಗಿ ಮಾತನಾಡುವುದು ಅಗತ್ಯವಾಗಿತ್ತು. ಎಲ್ಲರೂ ಒಂದೆಡೆ ಸೇರಿದೆವು. ಕಲಾವಿದರು, ತಂತ್ರಜ್ಞರು, ನಿರ್ಮಾಪಕರು ಹಾಗೂ ನಾನು. ಯಾವಾಗ ಆರಂಭ, ಹೇಗೆ, ಎಲ್ಲಿ ಇತ್ಯಾದಿ ವಿವರಗಳನ್ನು ಹಂಚಿಕೊಂಡಾಯಿತು.
ಇಷ್ಟೊಂದು ದಿನಗಳ ಶ್ರಮ, ಈಗ ನಿಜವಾದ ಅರ್ಥ ಪಡೆದುಕೊಳ್ಳಲು, ಸಮಯ ಕೂಡಿ ಬಂದಿತ್ತು. ಎಲ್ಲರೊಳಗೆ ಒಂದು ವಿಚಿತ್ರ ಕಸಿವಿಸಿ, ಆತಂಕ, ಆದರೆ ಅಪರಿಮಿತ ಉತ್ಸಾಹ ತುಂಬಿತ್ತು. ಆ ದಿನ ಇಡೀ ತಂಡದಲ್ಲಿ ಒಂದು ಒಳ್ಳೆಯ ಚಿತ್ರ ಮಾಡುವ ಉತ್ಕಟ ಹಂಬಲ ಮಾತ್ರವೇ ಇದ್ದದ್ದು. ಎಲ್ಲರೂ ಒಂದು ಹೊಸ ಹುರುಪಿನಿಂದ ಹೊರಟೆವು, ಮುಂದಿನ ಯುದ್ಧಕ್ಕಾಗಿ.

ಸಿನಿಮಾ ಚಿತ್ರೀಕರಣಕ್ಕೆ ಮುನ್ನ ಕಲಾವಿದರಿಗೆ ಕೇಶಮುಂಡನೆ ಮಾಡಿಸಿದ ಚಿತ್ರ
ನಾವು ಮೊದಲು ಮಾಡಿದ ಕೆಲಸ, ಎಲ್ಲಾ ನಟರಿಗೆ ಕೇಶ ಮುಂಡನೆ. ಮೋಹನ, ಅವಿನಾಶ, ಸದಾಶಿವ, ಶ್ರೀನಿಧಿ, ಇವರಷ್ಟೂ ಜನರನ್ನು ಕರೆದುಕೊಂಡು ಸನಿಹದ ಕ್ಷೌರದಂಗಡಿಗೆ ಕರೆದೊಯ್ದು, ಅಲ್ಲಿ ಪಾತ್ರಕ್ಕೆ ತಕ್ಕಂತೆ ಕ್ಷೌರ ಮಾಡಿಸಲಾಯಿತು. ಎಷ್ಟೋ ದಿನಗಳಿಂದ ಸಾಕಿ ಬೆಳೆಸಿದ್ದ ಮಾರುದ್ದದ ಕೂದಲು ಕಳೆದುಕೊಳ್ಳಲು ಅವರಿಗಾದ ಬೇಸರ ಅಷ್ಟಿಷ್ಟಲ್ಲ. ಯಾರೋ ಒಬ್ಬ ನಟನ ತಾಯಿಗೆ ಕೂದಲು ತೆಗೆದು ಫೊಟೊ ಕಳಿಸಿದಾಗ, ಆ ಸಿನಿಮಾದವರಿಗೆ ನನ್ನ ಕೃತಜ್ಞತೆ ತಿಳಿಸು, ಕನಿಷ್ಟ ಅವರಿಂದಾಗಿ ನನ್ನ ಮಗನ ಅಷ್ಟುದ್ದದ ಕೂದಲು ಹೋಯಿತಲ್ಲಾ ಎಂದಾಗ, ನಮ್ಮೆಲ್ಲರ ನಗು ತಡೆಯುವುದು ನಿಜಕ್ಕೂ ಕಷ್ಟವಾಗಿತ್ತು!
ಆಗಸ್ಟ್ ನಾಲ್ಕನೇ ತಾರೀಕಿಗೆ ಮೊಗವೀರರ ಸಾಂಪ್ರದಾಯಿಕ ಸಮುದ್ರ ಪೂಜೆ ಎಂದು ನಿಗದಿಯಾಗಿತ್ತು. ಅಂದು, ಕರ್ನಾಟಕದ ಕರಾವಳಿಯಲ್ಲಿ ಮೀನುಗಾರಿಕಾ ರಜೆ ಮುಗಿದು, ಮತ್ತೆ ದೋಣಿಗಳು ಸಮುದ್ರಕ್ಕೆ ಇಳಿಯುವ ಕಾಲ. ಸಮುದ್ರಕ್ಕೆ ಪೂಜೆ ಮಾಡಿ, “ಈ ಬಾರಿ ಮೀನುಗಾರಿಕೆ ಚೆನ್ನಾಗಿರಲಿ, ಮೀನುಗಾರರು ಸುರಕ್ಷಿತವಾಗಿರಲಿ” ಎಂದು ಇಷ್ಟ ದೈವಗಳಲ್ಲಿ ಬೇಡುವ ಸಮಯ.
ಈ ಪೂಜೆಗೆ ದಿನ ನಿಗದಿಯಾದದ್ದು ಪೇಪರಿನಲ್ಲಿ ಓದುತ್ತಲೇ, ವಾರ್ಷಿಕ ಮೀನುಗಾರಿಕೆಯ ಈ ಪ್ರಮುಖ ದಿನವಾದ ಆ ದಿನವನ್ನು ದಾಖಲಿಸಿಕೊಳ್ಳುವುದು ಮುಖ್ಯ ಎಂದು ನಮಗನ್ನಿಸಿತು. ಮೊಗವೀರರ ಜೀವನ ಶೈಲಿಯನ್ನು ಕಟ್ಟಿಕೊಡುವಲ್ಲಿ, ಇಂಥಾ ವಿವರಗಳು ನಮಗೆ ಸಹಕಾರಿಯಾಗಲಿದ್ದವು.
ಹೇಗೂ ಆ ದಿನವನ್ನು ದಾಖಲೀಕರಿಸಲು, ಸೇರುವಾಗ, ನಟ-ನಟಿಯರನ್ನೂ ಊರ ಜನರೊಂದಿಗೆ ಸೇರಿಸಿಕೊಂಡು ಚಿತ್ರೀಕರಣ ಮಾಡೋಣ ಎಂದು ನಿಶ್ಚಯಿಸಿದೆವು. ಊರ ದೇಗುಲದ ಪುರೋಹಿತರು ಇದಕ್ಕೆ ಒಪ್ಪಿ, ನಮ್ಮನ್ನು ಹರಸಿದರು. ಪೂಜೆಯ ದಿನ ಬರಲು ಆಹ್ವಾನವಿತ್ತರು.

ಚಿತ್ರೀಕರಣದ ದಿನ ಹತ್ತಿರ ಬರುತ್ತಿದ್ದಂತೆ, ನಮ್ಮ ತಯಾರಿಯಲ್ಲಿನ ಸಣ್ಣ-ಪುಟ್ಟ ಕೊರತೆಗಳೂ ಆತಂಕಕ್ಕೆ ಕಾರಣವಾಗುತ್ತಿದ್ದವು. ಚಿತ್ರದಲ್ಲಿ ತುಳುನಾಡಿನ ದೈವ ಒಂದು ಮಹತ್ತರ ಪಾತ್ರವಹಿಸುತ್ತದೆ. ನಂಬಿದವರಿಗೆ ಇಂಬು ನೀಡುವ ಖ್ಯಾತಿಯ ತುಳುನಾಡ ದೈವಗಳು, ಇಲ್ಲಿನ ಸಾಂಸ್ಕೃತಿಕ, ಧಾರ್ಮಿಕ ಪರಂಪರೆಯ ಒಂದು ಅವಿಭಾಜ್ಯ ಅಂಗ.
ವಿವಿಧ ಕಥೆಗಳ ಹಿನ್ನೆಲೆಗಳು, ಮಹಿಮೆ ಬಣ್ಣಿಸುವ ಪದ್ಯಗಳು, ಹಿಮ್ಮೇಳದ ಸಂಭ್ರಮ ಹೀಗೆ ಎಲ್ಲವೂ ಸೇರಿ, ಆರಾಧನಾ ಕಲೆಯಾಗಿ ಬಹಳ ಮಹತ್ತರವಾದದ್ದು. ಇದನ್ನು ಅದರ ಸಂಪೂರ್ಣ ಸೌಂದರ್ಯದೊಂದಿಗೇ ನಮ್ಮ ಸಿನಿಮಾದಲ್ಲಿ ಸೇರಿಸಿಕೊಳ್ಳಬೇಕು ಎನ್ನುವುದು ನಮ್ಮ ಆಶಯ. ನಮಗೆ ಇಡೀ ಪ್ರದರ್ಶನವನ್ನು ಚಿತ್ರೀಕರಿಸಲು, ನುರಿತ ಕಲಾವಿದರ, ಏರ್ಪಾಡಿನ ಅನುಭವ ಇತ್ಯಾದಿಗಳಿದ್ದವರು ಬೇಕಿತ್ತು. ಸಾಕಷ್ಟು ಹುಡುಕಿದ ಮೇಲೆ, ನಮ್ಮ ಸೀಮಿತ ಹಣಕಾಸಿನಲ್ಲೆ ಅತ್ಯುತ್ತಮ ಗುಣಮಟ್ಟ ಕೊಡುವ ಭರವಸೆ ನೀಡಿದ ಒಂದು ತಂಡ, ನಮ್ಮ ಸ್ನೇಹಿತರ ಮೂಲಕ ಪರಿಚಯವಾಯಿತು.
ಮತ-ಧರ್ಮಗಳ ಸೀಮೆ ದಾಟಿ, ಸಾಂಸ್ಕೃಂತಿಕ ಆಚರಣೆಯ, ನ್ಯಾಯ ತೀರ್ಮಾನದ ವೇದಿಕೆಯಾಗಿ ತುಳುನಾಡಿನ ಜೀವನದಲ್ಲಿ ಬೆರೆತಿದೆ ಈ ಕಲೆ. ಯಾರೇನೇ ಹೇಳಿದರೂ, ನಮ್ಮ ಮನಸ್ಸಿಗೆ ನ್ಯಾಯ ಏನೆಂಬುದು ತಿಳಿದಿರುತ್ತದೆ. ಈ ಒಳ ಮನಸ್ಸಿನ ತುಡಿತವೇ ದೈವದ ನುಡಿಯಾಗಿರುತ್ತದೆ. ಆ ಲೋಕಹಿತದ ನುಡಿಗಳನ್ನು ವ್ಯಕ್ತಿ ತನ್ನ ಮನಸ್ಸಿನ ವಿಕಾರಗಳಿಗೆ ಸಮೀಕರಿಸಿದರೆ ಏನಾದೀತು? ಈ ವಿಚಾರ ನಮ್ಮ ಚಿತ್ರಕಥೆಯೊಳಗೆ ಬಂದಿತ್ತು. ಮ್ಯಾಕ್‌ಬೆತ್ ಕಥೆಯಲ್ಲಿನ ಮೂವರು ಮಾಟಗಾತಿಯರ ಪ್ರತಿಮೆ, ದೈವಾರಾಧನೆಯ ಮೂಲಕ, ನಮ್ಮ ನೆಲದ ಸಂಸ್ಕೃಂತಿಗೆ ಒಗ್ಗುವಂತೆ ಸೇರಿಬಂತು.
ಶೇಕ್ಸ್‍ಪಿಯರ್ ಕವಿಯ ಮೂಲ ಕೃತಿ, ಮ್ಯಾಕ್‌ಬೆತ್‌ಗೆ, ನಮ್ಮ ಕೃತಿಯೊಳಗೆ ನಮನ ನೀಡುವ ಒಂದು ಪ್ರಯತ್ನವಾಗಿ, ಸಿನೆಮಾದ ಕಟ್ಟೊಣದೊಳಗೆ ಪ್ರದರ್ಶನ ಕಲೆಯ ಸ್ಮೃತಿ ಹುಟ್ಟುವಂಥಾ ಪ್ರಯತ್ನವೊಂದು ಇರಬೇಕು ಅಂದುಕೊಂಡಿದ್ದೆ. ಇದಕ್ಕೆ ಒದಗಿ ಬಂದದ್ದು, ಕರಾವಳಿಯ ಯಕ್ಷಗಾನ.
ಈ ಭಾಗದಲ್ಲಿ ಜನಪ್ರಿಯವಾದ ಈ ಕಲೆಯಲ್ಲಿ, ವಿವಿಧ ಬಣ್ಣಗಳ ಬಳಕೆ, ಪ್ರದರ್ಶನದ ಸೂಕ್ಷ್ಮತೆಗಳು, ಎಲ್ಲಕ್ಕೂ ಮುಖ್ಯವಾಗಿ, ಅದರ ಕಥೆಗಳಲ್ಲಿ ಬಿಂಬಿತವಾಗುವ ಮೌಲ್ಯಗಳು ನಮ್ಮ ಸಿನಿಮಾ ಮಾಧ್ಯಮಕ್ಕೆ ಬಹಳ ಅಂದವನ್ನು ನೀಡುವುದು ಸಾಧ್ಯ. ಯಕ್ಷಗಾನದಲ್ಲಿ, ಬಣ್ಣ ಹಾಕುವ ಮತ್ತು ಬಣ್ಣ ತೆಗೆಯುವ ಪ್ರಕ್ರಿಯೆ ನನಗೆ ರೂಪಕವಾಗಿ ಒಬ್ಬ ಮನುಷ್ಯನ ಮನಸ್ಸಿನ ರೂಪಗೊಳ್ಳುವಿಕೆ ಮತ್ತು ವಿರೂಪಗೊಳ್ಳುವಿಕೆಯ ಹಿನ್ನೆಲೆಯಲ್ಲಿ ಮಹತ್ತರವಾಗಿ ಕಾಣಿಸಿತು.
ಜೊತೆಗೇ ಗ್ರೀಕ್ ನಾಟಕಗಳಲ್ಲಿ ಬರುವ ಕೋರಸ್ ಗಾಯಕರಂತೆ, ನಡೆಯುತ್ತಿರುವ ಕಥೆಯ ಹೂರಣವನ್ನು ಪ್ರೇಕ್ಷಕರಿಗಾಗಿ ಮತ್ತೊಮ್ಮೆ ವಿಶ್ಲೇಷಿಸುತ್ತಾ, ನಡಿಗೆಗೆ ಒತ್ತು ನೀಡುವ ಸಾಧನವಾಗಿ ಕಂಡಿತು. ಸಿನೆಮಾ ಭಾಷೆಯಲ್ಲಿ ‘ಮೊಂಟಾಜ್’ ಬದಲಿಗೆ ಒದಗಿಬರುವ ಸಾಧನವಾಗಿಯೂ ಯಕ್ಷಗಾನ ನನಗೆ ಕಾಣಿಸಿತು.
ಹಾಗೆಯೇ, ಯಕ್ಷಗಾನದಲ್ಲಿ ಸಾಮಾನ್ಯವಾಗಿ ವಸ್ತುವಾಗಿ ಬಳಸಲ್ಪಡುವ, ನಮ್ಮದೇ ಮಹಾ ಕಾವ್ಯಗಳಾದ ರಾಮಾಯಣ, ಮಹಾಭಾರತಗಳ ಕಥನಗಳೊಳಗೆ ಇಣುಕಿ ಮ್ಯಾಕ್‌ಬೆತ್ ಜೊತೆಗಿನ ಭಾವ ಸಾಮ್ಯತೆಗಳನ್ನು ಹುಡುಕುವುದೂ ‘ಪಡ್ಡಾಯಿ’ ಚಿತ್ರಕಥೆಯ ಇನ್ನೊಂದು ಪ್ರಯತ್ನವಾಗಿತ್ತು. ಈ ಹಲವು ಪದರಗಳ ಅರ್ಥ ಸಾಧ್ಯತೆಯಿಂದಾಗಿ, ಯಕ್ಷಗಾನದ ಚೌಕಿ (ಮೇಕಪ್ ರೂಮ್) ಹಾಗೂ ಅಲ್ಲಿನ ಮಾತುಕತೆಗಳು ‘ಪಡ್ಡಾಯಿ’ ಚಿತ್ರಕಥೆಯಲ್ಲಿ ಸ್ಥಾನಪಡೆದವು. ಪತ್ರಕರ್ತರಾಗಿರುವ ಪ್ರಥ್ವಿರಾಜ್ ಕವತ್ತಾರ್ ನಮಗೆ ಕಲಾವಿದರ ಆಯ್ಕೆಯಲ್ಲಿ ಮಾರ್ಗದರ್ಶನ ಮಾಡಿದರು.
ಉಡುಪಿಯ ಯಕ್ಷಗಾನ ಕೇಂದ್ರದ ಗುರು ಬನ್ನಂಜೆ ಸಂಜೀವ ಸುವರ್ಣರು ಯಕ್ಷಗಾನ ರಂಗಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ಗುರು ಸಂಜೀವರು ನನ್ನ ಸಿನಿ-ವಿದ್ಯಾರ್ಥಿ ಕಾಲದಿಂದಲೂ ನನ್ನೆಲ್ಲ ಪ್ರಯೋಗಗಳಿಗೂ ತುಂಬು ಹೃದಯದಿಂದ ಸಹಾಯ ಮಾಡಿ ಹರಸಿದವರು. ಈಗಲೂ ಪಡ್ಡಾಯಿ ಚಿತ್ರಕ್ಕೆ ಗುರು ಸಂಜೀವರು ತಮ್ಮ ಗುರು, ವಿದ್ಯಾರ್ಥಿವೃಂದವನ್ನು ಸೇರಿಸಿಕೊಂಡು ಸಂಪೂರ್ಣ ಬೆಂಬಲವನ್ನು ನೀಡಿದರು.

ಯಕ್ಷ ಗುರು ಸಂಜೀವ ಸುವರ್ಣ
ಯಕ್ಷಗಾನ ಕೇಂದ್ರದ ವಠಾರ ಬಳಕೆಗೆ ಅಗತ್ಯವಾದ ಆಡಳಿತಾತ್ಮಕ ಒಪ್ಪಿಗೆಯನ್ನು, ಯಕ್ಷಗಾನ ಕೇಂದ್ರದ ನಿರ್ದೇಶಕ, ಮಣಿಪಾಲದ ಸಮೂಹಮಾಧ್ಯಮ ಶಾಲೆಯ ಪ್ರಾಧ್ಯಾಪಕ, ಬಹುಕಾಲದ ಕುಟುಂಬ ಗೆಳೆಯರೂ ಆದ ವರದೇಶ್ ಹಿರೇಗಂಗೆಯವರು ಉದಾರವಾಗಿ ಒದಗಿಸಿದರು.
ಸಮುದ್ರಪೂಜೆಯ ದಿನದಂದು, ಕಲಾವಿದರೆಲ್ಲರೂ ಜೊತೆಯಾಗಿ ಬಂದರು. ಕ್ಯಾಮರಾ ಬಂತು, ಚಿತ್ರೀಕರಣದ ವಾತಾವರಣ ಸಿದ್ಧವಾಗಿಯೇ ಬಿಟ್ಟಿತು. ಮಂದಿರದಲ್ಲಿ ಸಮುದ್ರದಿಂದ ತಂದ ಮಣ್ಣಲ್ಲೇ ಶಿವಲಿಂಗವನ್ನು ರೂಪಿಸಿ, ಪೂಜಿಸಿದರು. ಮತ್ತೆ ಅದನ್ನು ಪೂರ್ಣಕಲಶಗಳ ಸಹಿತ ಸಮುದಾಯದವರ ಮೆರವಣಿಗೆಯಲ್ಲಿ ಸಮುದ್ರಕ್ಕೆ ಒಯ್ದು, ಸಮರ್ಪಿಸಿದರು.
ಊರ ಜನರೊಂದಿಗೆ ಸೇರಿಕೊಂಡ ನಮ್ಮ ಕಲಾವಿದರನ್ನು ಎರಡು ಕ್ಯಾಮರಾ ಕಣ್ಣುಗಳು ಹಿಂಬಾಲಿಸುತ್ತಿದ್ದವು. ಆಕಾಶದಲ್ಲಿ ಕವಿಯುತ್ತಿದ್ದ ಕಾರ್ಮೋಡಗಳೂ ಸರಿಯಾದ ಸಮಯಕ್ಕೆ ಮಳೆ ಸುರಿಸಿ, ನಡೆಯುತ್ತಿದ್ದ ಕಲಾಪಕ್ಕೆ ಪನ್ನೀರು ಚಿಮುಕಿಸಿ ಆಶೀರ್ವದಿಸಿದವು. ಆ ಮಧ್ಯಾಹ್ನ ಕ್ಯಾಮರಾಗಳು ಅಲ್ಲೆ ಪಕ್ಕದ ಬಂದರಿನಲ್ಲಿ ಒಂದೊಂದಾಗಿ ಸಮುದ್ರಕ್ಕೆ ಇಳಿಯುತ್ತಿದ್ದ ದೋಣಿಗಳನ್ನು ದಾಖಲಿಸಿಕೊಂಡವು.
ಸೂರ್ಯ ಪಡ್ಡಾಯಿಗೆ ಹೋಗುತ್ತಿದ್ದಂತೆ, ಮಳೆಯಿಂದ ನೆನೆದ ಬಟ್ಟೆಗಳನ್ನು ಹಿಂಡಿಕೊಳ್ಳುತ್ತಾ, ಚಿತ್ರೀಕರಣ ಆರಂಭಗೊಂಡ ಮಧುರ ಭಾವದಲ್ಲಿ ನಾವು ಗೂಡು ಸೇರಿಕೊಂಡೆವು. ನಮ್ಮ ನಿರೀಕ್ಷೆಯಂತೆ ಮಳೆ ತಗ್ಗಲಿಲ್ಲ. ಹೀಗಾಗಿ ಊರಿನ ಕಡಲಪೂಜೆ ನಮಗೆ ಸಾಂಪ್ರದಾಯಿಕ ಮುಹೂರ್ತ ಪೂಜೆಯಂತೆ ಒದಗಿದರೂ ನಿಜ ಚಿತ್ರೀಕರಣಕ್ಕೆ ನಾವು ಕಾಯಲೇ ಬೇಕಿತ್ತು.
। ಇನ್ನು ಉಳಿದದ್ದು ನಾಳೆಗೆ ।
ಹಾಗೆಯೇ, ಅಮೆಜಾನ್ ಪ್ರೈಮ್ ನಲ್ಲಿ ಪಡ್ಡಾಯಿ ಸಿನಿಮಾ ಇದೆ.
Link to audience in UK:
https://amzn.to/2MtHFw5
Link to audience in USA:
https://amzn.to/2MtHukp
Link to audience in India:
https://bit.ly/2KLzUzB






0 Comments