ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಪಡ್ಡಾಯಿ’ಗದು ಅಡ್ಡಿಯಲ್ಲಾ!

ಜಿ ಎನ್ ಅಶೋಕವರ್ಧನ 

ಅಯ್ಯೋ ತುಳು ನಂಗ್ ಬರಲ್ವಲ್ಲಾ… (‘ಪಡ್ಡಾಯಿ’ಗದು ಅಡ್ಡಿಯಲ್ಲಾ!)

‘ಪಡ್ಡಾಯಿ’ ಚಿತ್ರಕತೆಯ ಭಾಷಾ ಪರಿಷ್ಕರಣದ ಕುರಿತ ನನ್ನ ಟಿಪ್ಪಣಿ ನಿಮಗೆ ತಿಳಿದೇ ಇದೆ

(ಇಲ್ಲದವರು ಈಗಲೂ ಓದಿಕೊಳ್ಳಬಹುದು: ಪಡ್ಡಾಯಿ, ಹೊಸ ತುಳು ಸಿನಿಮಾದುದ್ದಕ್ಕೆ.. ಇಲ್ಲಿ ಕ್ಲಿಕ್ಕಿಸಿ 

ಕಡಲಿನ ಬಹುತೇಕ ನಿರಂತರ ಮೊರೆತದಲ್ಲಿ ಮನುಷ್ಯ ಸದ್ದುಗಳಿಗೆ, ಮುಖ್ಯವಾಗಿ ಭಾಷೆಗೆ ನಾವು ಭ್ರಮಿಸಿದ ಮಹತ್ವ ಮತ್ತೆ ಸಾಹಿತ್ಯಿಕ ಮಡಿಯೂ ಇಲ್ಲ.

ಪಡ್ಡಾಯಿಯಲ್ಲಿ ಒಟ್ಟಾರೆ ಮಾತುಗಳು ತುಂಬಾ ಕಡಿಮೆಯೇ ಇವೆ. (ಮಂಸೋರೆಯವರು ತುಂಬ ಚೆನ್ನಾಗಿ ಹೇಳಿದಂತೆ, ಇದು “ರೂಪಕಗಳ ಜುಗಲ್ಬಂಧಿ”)

ಮಾತು ಇದ್ದಲ್ಲೂ ತುಳು ಬಾರದವರೂ ಸ್ವತಂತ್ರವಾಗಿ ಸನ್ನಿವೇಶ ಮತ್ತು ದೃಶ್ಯಕ್ಕೆ ಸುಂದರ ಅರ್ಥ ಕಟ್ಟುವಲ್ಲಿ ದೃಶ್ಯದ ಜತೆ ಬರುವ ಮುದ್ರಿತ ಇಂಗ್ಲಿಷ್ ಅನುವಾದ ನಿಸ್ಸಂದೇಹವಾಗಿ ಸಹಕರಿಸುತ್ತದೆ.

ವರ್ಗೀಕರಣದ ಅನುಕೂಲಕ್ಕೆ ‘ಕಥಾಚಿತ್ರ’ ಎಂದರೂ ಒಳ್ಳೆಯ ಸಿನಿಮಾ ಬರಿಯ ಕತೆ ಹೇಳುವುದರಲ್ಲಿ ನಿಲ್ಲುವುದಿಲ್ಲ. ಇದನ್ನು ಸಮರ್ಥಿಸುವಂತೆ ಪಡ್ಡಾಯಿಯಲ್ಲಿ ಏನೂ ಮಾತಿಲ್ಲದ ಎರಡು ಪೋಷಕ ಪಾತ್ರಗಳು ಬರುವುದು ಗಮನೀಯ.

ಪಡ್ಡಾಯಿಗೆ ಪ್ರೇರಕ ನಾಟಕವಾದ ಮಾಕ್ಬೆತ್ ನಲ್ಲಿ ಇಲ್ಲದ ‘ರಾಣಿ’ (ವಾಣಿ ಪೆರಿಯೋಡಿ) ಇಲ್ಲಿ ಇದ್ದೂ ಮೂಕಿಯಾಗಿ ಕಾಣಿಸಿಕೊಳ್ಳುತ್ತಾಳೆ. ಆ ವಿಕಲಚೇತನದ ಮುಖಭಾವ ನಿಸ್ಸಂದೇಹವಾಗಿ ಪ್ರೇಕ್ಷಕನ ಅರ್ಥವಿಸ್ತರಣೆಗೆ ಬಹುದೊಡ್ಡ ಕೊಡುಗೆ.

ಮ್ಯಾಕ್ಬೆತ್ತಿನಲ್ಲಿ ಮಹತ್ತರ ಘಟನೆಗಳ ಮುನ್ನುಡಿಯುವ ಅಥವಾ ಅವಕ್ಕೆ ಪ್ರೇರಕ ಶಕ್ತಿಯಾಗಿಯೇ ಕಾಣಿಸುವ ಮೂವರು ಮಾಟಗಾತಿಯರಿದ್ದಾರೆ. ಆ ಬಾಹ್ಯ ಶಕ್ತಿ, ಪರೋಕ್ಷವಾಗಿ ಒಟ್ಟು ಕತೆಯನ್ನೇ ಗ್ರಹಿಸುತ್ತವೆ ಎಂದರೆ ತಪ್ಪಾಗದು.

ಪಡ್ಡಾಯಿಯ ಅಲೌಕಿಕ ಶಕ್ತಿ (ದೈವಾರಾಧನೆಯ ಭಾಗವಾದ ಭೂತ) ಅಷ್ಟು ಅನ್ಯವಲ್ಲ; ಸಾಂಸ್ಕೃತಿಕ ಭಾಗವೇ ಆಗಿದೆ. ಹಾಗಾಗಿ ‘ಕತೆ’ಗೆ ಬೇಕಾದಲ್ಲಿ ದೈವದ ಕಣಿ ವಾಸ್ತವವಲ್ಲ, ಪಾತ್ರದ ಕಲ್ಪನೆ ಎನ್ನುವುದನ್ನು ಚಿತ್ರ ಸ್ಪಷ್ಟವಾಗಿ ಕಾಣಿಸುತ್ತದೆ.

ವಾಸ್ತವದ ನೆಲೆಯಲ್ಲಿ ಘಟನೆಗಳನ್ನು ಗ್ರಹಿಸುವ ಕಣ್ಣಾಗಿ, ಘಟನಾ ಸರಣಿಯ ಭಾಗವಾಗಿಯೇ ಮೂಡಿ ಬಂದ ಪಾತ್ರ – ಐತ (ಪ್ರಭಾಕರ ಕಾಪೀಕಾಡ್). ಈತ ಮೂಕನಲ್ಲ, ಆದರೆ ಸಿನಿಮಾದುದ್ದಕ್ಕೆ ಇವನಿಗೆ ಮಾತೂ ಇಲ್ಲ.

ಹೀಗೆ ಮಾತು ಮೀರಿದ ಧಾತು ಇರುವುದಕ್ಕೇ ಪಡ್ಡಾಯಿ ಭಾಷೆಯನ್ನು ಮೀರಿ ನಿಲ್ಲುತ್ತದೆ.

##

ಮತ್ಸ್ಯಗಂಧಿಗೆ ಯೋಜನಗಂಧಿತ್ವದ ಶಾಪ

ಮಹಾಭಾರತದ ಮಹಾಮಾತೆ ಸತ್ಯವತಿ ಕುಲವೃತ್ತಿಯಲ್ಲಿ ಮೀನವಾಸನೆಯವಳು (ಮತ್ಸ್ಯಗಂಧಿ). ಪರಾಶರ ಮುನಿಯ ಸಂಸರ್ಗದ ಆಕಸ್ಮಿಕದಿಂದ ಈಕೆ ಸುಗಂಧಿಯೇ ಆಗುವ (ಯೋಜನಗಂಧಿ) ವರವನ್ನು ಪಡೆಯುತ್ತಾಳೆ. ಆದರೆ ಇದು ಪರಿಣಾಮದಲ್ಲಿ ಆಕೆಯ ಜೀವನಶೈಲಿಯನ್ನು ಉನ್ನತ ಸ್ತರಕ್ಕೇರಿಸಿದಂತೆ ತೋರುವ ಶಾಪವಾಗುತ್ತದೆ. ವಾಸನಾಪಲ್ಲಟ ಮಹಾಭಾರತ ದುರಂತದ ಆದಿಬಿಂದುವೆಂದೇ ಹೇಳಿದರೆ ತಪ್ಪಾಗದು.

ಪುರಾಣ ಕಾಲಮಾನವನ್ನೇ ಮುಂದುವರಿಸಿದರೆ, ಯುಗ ಬದಲಿದ ಮೇಲೂ (ದ್ವಾಪರದಿಂದ ಕಲಿಗೆ) ಆಕಸ್ಮಿಕದ ವಾಸನಾಪಲ್ಲಟ, ವ್ಯಕ್ತಿ ಉನ್ನತಿಕೆಗೆ ತತ್ಕಾಲೀನ ಸೂಚನೆ ಮಾತ್ರ. ಪಡ್ಡಾಯಿಯಲ್ಲಿ ‘ಸಿರಿವಂತಿಕೆ’ಯ ವಾಸನೆಯ ಬೆನ್ನು ಹಿಡಿದಾಕೆ ಸುಗಂಧಿ (ಬಿಂದು ರಕ್ಷಿದಿ). ಈಕೆ ಸ್ವಂತ ಮನೋವಿಕಲ್ಪಗಳಲ್ಲಿ ಭವ್ಯ ಭವಿಷ್ಯವನ್ನೇ ಕಲ್ಪಿಸಿಕೊಳ್ಳುತ್ತ, ಅದನ್ನು ನಿಜವಾಗಿಸಲು ಪ್ರಯತ್ನಿಸುತ್ತ, (ಮಹಾಭಾರತದಂತೇ) ಸರ್ವನಾಶ ಕಾಣುವುದು ಪಡ್ಡಾಯಿಯ ಒಂದು ಪ್ರಬಲ ಅಂತಃವಾಹಿನಿ.

ಶೇಕ್ಸ್ಪಿಯರ್ ಮ್ಯಾಕ್ಬೆತ್ತಿನಲ್ಲಿ ರಂಗವಾಸ್ತವವನ್ನು ಮರೆಯದೆ, ‘ರಕ್ತದ ವಾಸನೆ’ ಮತ್ತು ‘ಅರೇಬಿಯಾದ ಸುಗಂಧದ್ರವ್ಯ’ಗಳ ಮಾತನ್ನಷ್ಟೇ ತರುತ್ತಾನೆ. ‘ಪಡ್ಡಾಯಿ’ಯಲ್ಲಿ ಸಿನಿಮಾವಾಸ್ತವದ ಬಲದಿಂದ ವಾಸನಾವೈವಿಧ್ಯ, ರಕ್ತಸಿಕ್ತ ಹಸ್ತದ ಭ್ರಮೆ ಕಾಣಿಸುವುದೂ ಸಾಧ್ಯವಾಗಿದೆ. ಇದು ‘ಪಡ್ಡಾಯಿ’ಯನ್ನು ಹೆಚ್ಚು ಪರಿಣಾಮಕಾರಿಯಾಗಿಸಿದೆ.

‍ಲೇಖಕರು avadhi

27 April, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading