ಪಟ್ಟಾಭಿಷೇಕವೆಂಬ 'ಖಾಸಗೀ ದರ್ಬಾರು' – ಜಿ ಪಿ ಬಸವರಾಜು

ಜಿ ಪಿ ಬಸವರಾಜು

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಂತರ ಮೈಸೂರು ಅರಮನೆಯ ಉತ್ತರಾಧಿಕಾರಿಯಾಗಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಗದ್ದುಗೆ ಏರಿದ್ದಾರೆ. ಆಧುನಿಕ ಶಿಕ್ಷಣವನ್ನು ಪಡೆದಿರುವ ಯದುವೀರ, ಪ್ರಜಾಪ್ರಭುತ್ವದ ಅರ್ಥ ಮತ್ತು ಮಹತ್ವವನ್ನೂ ತಿಳಿದಿರಬಹುದು. ಮೈಸೂರು ಅರಸರ ಪಾಲಿಗಿರುವುದು ಈಗ ಆಸ್ತಿ ಮಾತ್ರ ಎಂಬ ಸತ್ಯವೂ ಅವರಿಗೆ ಗೊತ್ತಿರಬಹುದು. ಆಸ್ತಿಯ ಜೊತೆಗೇ ಬಂದಿರುವ ಮತ್ತು ಬರಲಿರುವ ಸಾಲಗಳು, ತೀರಿಸಬೇಕಾದ ತೆರಿಗೆಗಳು, ಕೋಟಿಯ ಲೆಕ್ಕದಲ್ಲಿ ಎದುರಾಗಲಿರುವ ಹಣಕಾಸಿನ ಸವಾಲುಗಳು, ಆಸ್ತಿವಿವಾದಕ್ಕೆ ಸಂಬಂಧೀಸಿದಂತೆ ನ್ಯಾಯಾಲಯದಲ್ಲಿರುವ ಪ್ರಕರಣಗಳು ಇತ್ಯಾದಿ ಎಲ್ಲ ಸಂಗತಿಗಳನ್ನೂ ಅವರು ತಿಳಿದಿರಬಹುದು. ಇಲ್ಲವಾದರೆ ಸಂಬಂಧಿಸಿದವರು ತಿಳಿಸುತ್ತಾರೆ. ಹಾಗೆ ತಿಳಿಯದಿದ್ದರೆ ಉತ್ತರಾಧಿಕಾರಿಯಾಗಿ ಅವರು ಮುಂದುವರಿಯುವುದು ಕಷ್ಟ.
ಶ್ರೀಕಂಠದತ್ತರಂತೆ ಯದುವೀರರ ಬಳಿ ಹಲವಾರು ಕಾರುಗಳಿವೆ. ಕಾರಿನ ಹುಚ್ಚು ಅವರಿಗಿದೆ. ಹಾಗೆಯೇ ಬೆಲೆಬಾಳುವ ವಾಚುಗಳನ್ನು ಸಂಗ್ರಹಿಸುವ ಹವ್ಯಾಸವೂ ಅವರಿಗಿದೆ ಎಂದು ಮಾಧ್ಯಮಗಳು ಸಾರಿವೆ. ಆಧುನಿಕ ಕಾಲದ ಕೊಡುಗೆಯಾಗಿ ಬಂದಿರುವ ‘ಫಿಟ್ನೆಸ್’ ಪಾಠಗಳನ್ನೂ ಅವರು ಕಲಿತಿದ್ದಾರೆ. ರಾಜಕೀಯ ಹಂಬಲವೂ ಅವರಿಗಿದ್ದಂತಿದೆ. ಇದನ್ನು ಅವರು ನೇರವಾಗಿ ಹೇಳಿಕೊಂಡಿಲ್ಲ. ಆದರೆ ಜನಸೇವೆಯ ಮಾತನ್ನು ಅವರು ಆಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಸೇವೆ ಮಾಡಲು ಇರುವ ದಾರಿ ರಾಜಕೀಯವೇ. ಅದಲ್ಲದೆಯೂ ಜನಸೇವೆಗೆ ದಾರಿಗಳಿವೆಯಾದರೂ ಅವೆಲ್ಲ ಯುವಕರನ್ನು ಸೆಳೆಯಲಾರವು.
ಜನಮನದಲ್ಲಿ, ವಿಶೇಷವಾಗಿ ಹಳೆಯ ಮೈಸೂರು ಭಾಗದ ಜನರಲ್ಲಿ ಮೈಸೂರು ಮಹಾರಾಜರ ಮುದ್ರೆ ಬಹಳ ಹಿಂದಿನಿಂದಲೂ ಅಚ್ಚೊತ್ತಿದೆ. 1399 ರಿಂದ ಈ ಅರಸು ಮನೆತನ ನಿರಂತರವಾಗಿ ಅಧಿಕಾರವನ್ನು ಹಿಡಿದು ಮೈಸೂರು ರಾಜ್ಯವನ್ನು ಆಳುತ್ತಲೇ ಬಂದಿದೆ. ಮೊದಲು ವಿಜಯನಗರ ಸಾಮ್ರಾಜ್ಯದ ಅಧೀನದಲ್ಲಿ, ನಂತರ ಹೈದರ್ ಮತ್ತು ಟಿಪ್ಪು ಅವರ ಕೈಕೆಳಗೆ, ಮುಂದೆ ಬ್ರಿಟಿಷರಿಗೆ ನಜರು ಸಲ್ಲಿಸುತ್ತ ಅರಸೊತ್ತಿಗೆಯನ್ನು ಉಳಿಸಿಕೊಂಡು ಬಂದ ಯದುವಂಶದ ದೊರೆಗಳು ದುಷ್ಟರಾಗಿರಲಿಲ್ಲ. ಈ ಕಾರಣಕ್ಕಾಗಿಯೇ ಜನ ಈ ವಂಶಕ್ಕೆ ಗೌರವ ಸಲ್ಲಿಸುತ್ತಲೇ ಬಂದಿದ್ದಾರೆ. ಸುಮಾರು 600 ವರ್ಷಗಳ ಆಳ್ವಿಕೆಯ ಇತಿಹಾಸವನ್ನು ಉಳಿಸಿಕೊಂಡು, ಭಾರತದ ಚರಿತ್ರೆಯಲ್ಲಿಯೇ ಸುದೀರ್ಘ ಕಾಲ ಬಾಳಿದ ರಾಜಮನೆತನ ಎನ್ನುವ ಕೀತರ್ಿ ಮೈಸೂರು ಅರಸರಿಗಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರವಷ್ಟೇ ಈ ರಾಜಮನೆತನದ ಆಳ್ವಿಕೆ ಕೊನೆಗೊಂಡದ್ದು.

ಸ್ವಾತಂತ್ರ್ಯ ಬಂದನಂತರವೂ ನಮ್ಮ ಪ್ರಜಾಪ್ರಭುತ್ವ ಈ ಮನೆತನವನ್ನು ಗೌರವದಿಂದಲೇ ನೋಡಿಕೊಂಡಿದೆ. ಆಗ ಸಿಂಹಾಸನದಿಂದ ಕೆಳಗಿಳಿದ, ಯದುವಂಶದ 25ನೇ ಅರಸರಾಗಿದ್ದ ಜಯಚಾಮರಾಜ ಒಡೆಯರ್ ಅವರನ್ನು ಮೊದಲು ರಾಜಪ್ರಮುಖರನ್ನಾಗಿ ಮಾಡಿದ್ದು, ನಂತರ ಕನರ್ಾಟಕದ ರಾಜ್ಯಪಾಲರ ಹುದ್ದೆ, ಮುಂದೆ ಮದ್ರಾಸ್ ರಾಜ್ಯದ ರಾಜ್ಯಪಾಲರು ಹೀಗೆ ಪ್ರಜಾಪ್ರಭುತ್ವದಲ್ಲಿಯೂ ಅವರಿಗೆ ತಕ್ಕ ಸ್ಥಾನವನ್ನು ನೀಡಿ ಗೌರವಿಸಲಾಗಿದೆ.
ಯದುವಂಶದ ದೊರೆಗಳು ಮೊದಲಿನಿಂದಲೂ ಸಾಹಿತ್ಯ, ಸಂಗೀತ, ಕಲೆಯ ಪಕ್ಷಪಾತಿಗಳಾಗಿದ್ದರು, ಅವರ ಅಭಿರುಚಿ ಉನ್ನತ ಮಟ್ಟದ ಅಭಿರುಚಿಯಾಗಿತ್ತು ಎಂಬುದನ್ನು ಅಳೆಯಲು ಮೈಸೂರು ರಾಜ್ಯದಲ್ಲಿ ಹಲವು ಪುರಾವೆಗಳು ಸಿಕ್ಕುತ್ತವೆ. ಮೈಸೂರಿಗರ ಸನ್ನಡತೆ, ಸದಭಿರುಚಿ, ಗುಣಸಂಪನ್ನತೆಗಳ ಹಿಂದೆ ಮೈಸೂರು ಅರಸರ ಕೊಡುಗೆ ಇದೆ ಎಂಬುದನ್ನು ಮರೆಯುವಂತಿಲ್ಲ. ತಮಿಳ್ನಾಡಿನಿಂದ ಅನೇಕ ಕಲಾವಿದರು, ವಿದ್ವಾಂಸರು, ಸಂಗೀತಗಾರರು, ನೃತ್ಯಪಟುಗಳು ಮೈಸೂರು ಸಂಸ್ಥಾನವನ್ನು ಅರಸಿ ಬಂದಿದ್ದರ ಹಿಂದೆ ಈ ಅರಸರ ಉದಾರತೆ ಮತ್ತು ಕಲೆಯ ಬಗೆಗಿನ ಮೋಹವೂ ಕಾರಣವಾಗಿದೆ. ಮೈಸೂರಿನ ಖ್ಯಾತ ಪೈಲ್ವಾನರು ಕೂಡಾ ರಾಜಮನೆತನದ ಕೀತರ್ಿಯನ್ನೇ ಮೆರೆಸುತ್ತಾರೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಅನೇಕ ಮಹತ್ವದ ಕೆಲಸಗಳನ್ನು ಮಾಡಿದರೆಂಬುದನ್ನು ಇತಿಹಾಸ ಹೇಳುತ್ತದೆ. ಇವರನ್ನು ಗಾಂಧೀಜಿಯೇ ‘ರಾಜಷರ್ಿ’ ಎಂದು ಕರೆದು ತಮ್ಮ ಮೆಚ್ಚುಗೆಯನ್ನು ಸೂಚಿಸಿದ್ದರು. ರಾಜನ ಗುಣ ಮತ್ತು ಋಷಿಯ ಗುಣ ಎರಡನ್ನೂ ಪಡೆದಿದ್ದ ಕೃಷ್ಣರಾಜರ ಕಾಲದಲ್ಲಿ ಜನಹಿತದ ಅನೇಕ ಕಾರ್ಯಕ್ರಮಗಳು ನಡೆದವು. ಸಮಾಜ ಸುಧಾರಣೆಗಾಗಿ ಕೃಷ್ಣರಾಜ ಒಡೆಯರ್ ರೂಪಿಸಿದ ಹಲವು ಯೋಜನೆಗಳು ಮೈಸೂರು ಅರಸು ಮನೆತನಕ್ಕೆ ಶಾಶ್ವತ ಕೀತರ್ಿಯನ್ನು ತಂದುಕೊಟ್ಟವು. ಇಷ್ಟಾದರೂ ಕೃಷ್ಣರಾಜ ಒಡೆಯರ್ ಜಗತ್ತಿನ ಶ್ರೀಮಂತರ ಸಾಲಿನಲ್ಲಿ ನಿಲ್ಲುವಷ್ಟು ಸಂಪತ್ತನ್ನು ಕೂಡಿಹಾಕಿದ್ದರು. 1940 ರಲ್ಲಿ ಅವರು ತೀರಿಕೊಂಡಾಗ ಮೈಸೂರು ಅರಸರ ಸಂಪತ್ತಿನ ಬೆಲೆ 400 ದಶಲಕ್ಷ ಡಾಲರ್; ಅಂದರೆ 2010ರಲ್ಲಿ ಇದರ ಮೌಲ್ಯ 56 ಬಿಲಿಯನ್ ಡಾಲರ್ ಆಗುತ್ತದೆ.
ಮೈಸೂರು ಅರಸರ ಆಸ್ತಿ ಮೈಸೂರು, ಬೆಂಗಳೂರುಗಳಲ್ಲದೆ ಊಟಿಯಲ್ಲಿಯೂ ಇತ್ತು; ಈಗಲೂ ಸ್ವಲ್ಪಭಾಗ ಉಳಿದುಕೊಂಡಿದೆ. ಲಂಡನ್ನಲ್ಲಿಯೂ ಇವರ ಆಸ್ತಿ ಇತ್ತು ಎಂದು ಹೇಳಲಾಗುತ್ತಿದೆ. ಇಂಥ ದೊಡ್ಡ ಮನೆತನ ಸ್ವಾತಂತ್ರ್ಯಾನಂತರ ಕಳಾಹೀನವಾದದ್ದಕ್ಕೆ ಕಾರಣಗಳೇನು? ಹಾಗೆ ನೋಡಿದರೆ ಜಯಚಾಮರಾಜೇಂದ್ರ ಒಡೆಯರ್ ಪ್ರಜಾಪ್ರಭುತ್ವದಲ್ಲಿಯೂ ಉನ್ನತ ಸ್ಥಾನದಲ್ಲಿಯೇ ಇದ್ದರು. ಅವರ ಮಗ, ಯದುವಂಶದ 26ನೇ ರಾಜ-ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಅಭ್ಯಥರ್ಿಯಾಗಿ ಚುನಾವಣೆಗಳನ್ನು ಎದುರಿಸಿದರು. ಎರಡು ಬಾರಿ ಸೋತರೂ, ಮೂರು ಬಾರಿ ಗೆದ್ದು ಲೋಕಸಭೆಯಲ್ಲಿ ಮೈಸೂರು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದರು. ಒಡೆಯರ್ ಗೆಲುವಿಗೆ ಮುಖ್ಯ ಕಾರಣ ಈ ಕ್ಷೇತ್ರದ ಜನತೆ ರಾಜಮನೆತನದ ಬಗ್ಗೆ ಇಟ್ಟುಕೊಂಡಿದ್ದ ಗೌರವ ಮತ್ತು ಪ್ರೀತಿ. ಇದಕ್ಕೆ ಪ್ರತಿಯಾಗಿ ಒಡೆಯರ್ ಮಾಡಿದ್ದು ಹೇಳಿಕೊಳ್ಳುವಂಥ ಕೆಲಸವಲ್ಲ. ಸಂಸತ್ ಸದಸ್ಯರಾಗಿ ಅವರೇನು ಮಾಡಿದರು; ಲೋಕಸಭೆಯಲ್ಲಿ ಅವರು ಜನಹಿತಕ್ಕೆ ಸಂಬಂಧಿಸಿದಂತೆ ಯಾವ ಪ್ರಶ್ನೆ ಕೇಳಿದರು; ಎಂಥ ಹೋರಾಟ ಮಾಡಿದರು ಎಂದೆಲ್ಲ ಪ್ರಶ್ನೆಗಳನ್ನು ಹಾಕಿದರೆ ಸಿಕ್ಕುವ ಉತ್ತರ ಸೊನ್ನೆಯೇ.
ಒಡೆಯರ್ಗೆ ಅವರ ನಿಜವಾದ ಆಸಕ್ತಿ ಬೇರೆಯೇ ಇದ್ದಂತಿತ್ತು: ಫ್ಯಾಷನ್ ಡಿಸೈನಿಂಗ್, ಇಂಟೀರಿಯರ್ ಡೆಕೋರೇಷನ್, ಮೈಸೂರು ರೇಷ್ಮೆ ಸೀರೆಗಳ ‘ರಾಯಲ್ ಸಿಲ್ಕ್ ಆಫ್ ಮೈಸೂರ್’ನ ಪ್ರೊಮೋಷನ್, ಕ್ರಿಕೆಟ್ಗೆ ಉತ್ತೇಜನ ಇತ್ಯಾದಿ ಹಲವು ಕ್ಷೇತ್ರಗಳಲ್ಲಿ ಅವರು ದುಡಿಯಲು ಮುಂದಾದರು. ಅದು ಹಣಗಳಿಕೆಯ ದಾರಿಯೋ ಅಥವಾ ಆಸಕ್ತಿಯ ಫಲವೋ ಹೇಳುವುದು ಕಷ್ಟ. ಇಷ್ಟಾದರೂ ಶ್ರೀಕಂಠದತ್ತ ಹಲವಾರು ಇಕ್ಕಟ್ಟುಗಳಲ್ಲಿ ಸಿಕ್ಕಿಹಾಕಿಕೊಂಡದ್ದು ಸ್ಪಷ್ಟವಾಗಿತ್ತು. ಅಪಾರವಾದ ಆಸ್ತಿ ನಿಧಾನಕ್ಕೆ ಕರಗುತ್ತಿತ್ತು. ಪ್ರಜಾಪ್ರಭುತ್ವದಲ್ಲಿ ಇಂಥ ಆಸ್ತಿಪಾಸ್ತಿಯನ್ನು ಕಾಪಾಡಿಕೊಳ್ಳುವುದು ಸುಲಭದ ಕೆಲಸವಾಗಿರಲಿಲ್ಲ. ಕಟ್ಟಬೇಕಾದ ತೆರಿಗೆಗಳ ಮೊತ್ತವೇ ದೊಡ್ಡದಿತ್ತು; ರಾಜಧನ ರದ್ದುಪಡಿಸಿದ್ದರಿಂದ ಉದ್ಭವಿಸಿದ ಆಥರ್ಿಕ ಬಿಕ್ಕಟ್ಟು, ಕಾಲಕಾಲಕ್ಕೆ ಸಕರ್ಾರಗಳು ತರುತ್ತಿದ್ದ ಸುಧಾರಣೆಗಳ ಎದುರಿಗೆ ಅಪಾರ ಆಸ್ತಿಯನ್ನು ಉಳಿಸಿಕೊಳ್ಳಬೇಕಾದ ಕಷ್ಟ, ನ್ಯಾಯಾಲಯದ ಮುಂದಿದ್ದ ವಿವಾದಗಳು ಇತ್ಯಾದಿ ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಕ್ಕು ಶ್ರೀಕಂಠದತ್ತ ಉಬ್ಬಸಪಡುತ್ತಿದ್ದರು. ಹೊರದಾರಿಯೂ ಅವರಿಗೆ ತಿಳಿದಂತಿರಲಿಲ್ಲ. ಜೊತೆಗೆ ಕೈಕೊಡುತ್ತಿದ್ದ ಆರೋಗ್ಯ.
ನಮ್ಮ ಪ್ರಜಾಪ್ರಭುತ್ವದಲ್ಲಿ ಸಮಾನತೆಗೆ ಒತ್ತಿದೆ. ಒಬ್ಬ ಸಾಮಾನ್ಯ ಮನುಷ್ಯ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯೋ, ಪ್ರಧಾನಿಯೋ ಆಗಿ ಅಧಿಕಾರ ಸ್ವೀಕರಿಸುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆಯೇ ಹೊರತು, ಖಾಸಗೀ ದಬರ್ಾರನ್ನು ನಡೆಸಿ ಅಲ್ಲಿ ಸಿಂಹಾಸನ ಏರುವುದು ಒಂದು ಪ್ರಹಸನದಂತೆ ಕಾಣಿಸುತ್ತದೆ. ಇದೆಲ್ಲ ಗೊತ್ತಿದ್ದೂ ನಮ್ಮ ಮಾಧ್ಯಮಗಳು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಸಿಂಹಾಸನಾರೋಹಣಕ್ಕೆ ನೀಡಿದ ಪ್ರಚಾರ ವಿವೇಚನಾರಹಿತವಾಗಿತ್ತು.
ಇದೀಗ ಸಿಂಹಾಸನದ ಮೇಲೆ ಕುಳಿತಿರುವ ಯದುವೀರ ಅವರಿಗೆ ಈ ಸತ್ಯ ತಿಳಿಯಬೇಕು ಮತ್ತು ನಮ್ಮ ಪ್ರಜಾಪ್ರಭುತ್ವ ಮತ್ತು ಸಂವಿಧಾನಗಳ ಆಶಯಗಳೂ ಅರ್ಥವಾಗಬೇಕು. ಆಗ ಅವರಿಗೆ ಹೆಚ್ಚಿನ ನಿರಾಶೆಯಾಗುವುದಿಲ್ಲ. ಅವರ ಉತ್ಸಾಹ ಮತ್ತು ಕಾರ್ಯತತ್ಪರತೆಗೂ ಬೇರೆಯ ಮಾರ್ಗಗಳು ಹೊಳೆಯಬಹುದು.
 

‍ಲೇಖಕರು G

June 8, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

2 ಪ್ರತಿಕ್ರಿಯೆಗಳು

  1. ಎಚ್.ಎಸ್.ವೆಂಕಟೇಶಮೂರ್ತಿ

    ಪ್ರಿಯ ಬಸವರಾಜು,
    ನೀವು ಬರೆದಿರುವುದು ಯುಕ್ತವಾಗಿದೆ. ಮೈಸೂರು ಅರೆಸುಮನೆತನದ ಉತ್ತರಾಧಿಕಾರಿ, ನೀವು ಮತ್ತು, ಬೇರೊಂದು ಕಡೆ ಕೆ.ಪಿ.ಸುರೇಶ್ ಸೂಚಿಸಿರುವಂತೆ ಸಮಾಜೋಪಯೋಗಿಯಾದ ಯೋಜನೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಮನೆತನಕ್ಕೆ, ಗೌರವ ತರಬಹುದು. ಜನೋಪಯೋಗಕ್ಕಾಗಿ ತಮ್ಮ ಆಸ್ತಿ ಪಾಸ್ತಿ ಸಂಪತ್ತನ್ನು ಸದ್ವಿನಿಯೋಗ ಮಾಡುವುದು ಅಗತ್ಯವಾದ ನಡವಳಿಕೆ. ತಮ್ಮ ಐಲುಗಳಿಗೆ ನಿಧಿಯನ್ನು ಬಳಸುವುದು ದುರ್ವಿನಿಯೋಗ. ನಿಯುಕ್ತ ನಾಮಕಾವಸ್ತೆ ದೊರೆಯು ತಮ್ಮ ಆಸ್ತಿಯ ಸ್ವಲ್ಪ ಭಾಗವನ್ನಾದರೂ ಇಂಥ ಸಮಾಜಮುಖೀ ಸೇವೆಗಾಗಿ ಮೀಸಲಿಡಬೇಕು. ಆಗ ಮಾತ್ರ ಜನತೆ ಅವರಿಗೆ ಮಾನವ್ಯದ ನೆಲೆಯಲ್ಲಿ ನೀಡಬಹುದಾದ ಕನಿಷ್ಠ ಗೌರವವನ್ನಾದರೂ ಕೊಡುವುದು. ಯದುವೀರರು ತಮ್ಮ ಭವ್ಯ ಪರಂಪರೆಗೆ ಸಲ್ಲಿಸಬಹುದಾದ ಋಣಭಾರವಿದು. ಅವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರೇ ದಿವ್ಯಾದರ್ಶವಾಗಬೇಕು. ಅರಮನೆಯ ಹೊರಗೆ ನಡೆಯ ಬೇಕಾದ ಬೇಚರಾಕು ರಸ್ತೆಗಳು ಅನೇಕ ಇವೆ. ಅರಸರ, ಮತ್ತು ನವಾರಸರಾದ ಮಹೋದ್ಯಮಿಗಳ ಸವಾರಿ ಚಿತ್ತೈಸೋಣವಾಗಲಿ. ಸಂವಿಧಾನವನ್ನು ಆರಾಧಿಸುವ ಪ್ರಜಪ್ರಭುತ್ವವಾದಿ ವೈಚಾರಿಕರು ವಂದಿಮಾಗಧರನ್ನು ಸ್ಥಾನಪಲ್ಲಟಮಾಡಬೇಕಾದ ಅಹತ್ಯವಿದೆ. ಯದುವೀರರಿಗೆ ಜನ ಶರಣರ ನುಡಿಗಡಣವೇ ಕಡೆಗೀಲಾಗಲಿ ರಾಮನಾಥ!
    -ಎಚ್.ಎಸ್.ವಿ.

    ಪ್ರತಿಕ್ರಿಯೆ
    • Anonymous

      ಪ್ರಿಯ ವೆಂಕಟೇಶ ಮೂರ್ತಿ ಅವರಿಗೆ,
      ಯದುವೀರರು ಇನ್ನೂ 22ರ ಯುವಕರು; ಆಧುನಿಕರು. ವಿದೇಶದಲ್ಲಿ ಓದುತ್ತಿರುವ ವಿದ್ಯಾರ್ಥಿ. ಅವರಿಗೆಷ್ಟು ಅರ್ಥವಾಗುತ್ತದೋ ತಿಳಿಯದು. ಕಾದು ನೋಡೋಣ. ನಿಮ್ಮ ಅಭಿಪ್ರಾಯಕ್ಕೆ ವಂದನೆ.
      -ಬಸವರಾಜು, ಜಿ.ಪಿ.

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: