ಪಟಪಟಿ ಸರ್…

ನಾನು ಕಲಿತ ಮೊದಲ ‘ಜೀವನ ಪಾಠ’

ಡಾ ಸದಾಶಿವ ದೊಡಮನಿ

ಪಟಪಟಿ ಸರ್ ಪಟಪಟಿ ಮ್ಯಾಲ ಕುಂತು ಸಾಲಿ ಮುಂದಿಂದ ನಾಲ್ಕೆಂಟು ಮಾರು ದೂರ ಇದ್ದ ಇಂಡಿ ದಾರಿತನಕ ಇಳಿಕಲ್ದಾಗ ಕಾಲೀಲೆ ಒತ್ತಕೊಂತ ಹೋಗಿ, ಧೋತ್ರ ಹತ್ತೀಗಿ ಇಟಗೊಂಡು, ಕ್ವಾರಿ ಮೀಸೀನ ಎಡಗೈಯಿಂದ ಹುರಿ ಹೊಡದ ಎಜಡಿ ಪಟಪಟಿನ ಚಾಲು ಮಾಡಿದರು. ಗಾಡಿ ಬಡ್ಡಡ್ ಬಡ್ಡಡ್ ಅಂತ ಜೋರಗ ಶಬ್ದ ಮಾಡಿ, ಸೈಲ್ನಸರದಾಗಿಂದ ಹುಗಿಬಿಡಾಕತ್ತಿತ್ತು. ನಾನು ಎಡಗೈಯ್ಯಾನ ಪಾಟಿ ಚೀಲ ಬೆನ್ನ ಹಿಂದ ಹಾಕೊಂಡು, ಬಲಗೈಯಿಂದ ಹಿಂದ ಗಾಡಿ ಹಿಡಿದು, ಹುಗಿ ಬಿಡೋ ನಳಿಕಿಗೆ ಕಾಲು ಇಟಗೊಂಟು ಹುಗಿದರಿಸೀಲೆ ಬರುವ ಕಂಪನ, ಕಾವಿನ ಮಜಾ ತೋಗೋಂತಾ ನಿಂತಿದ್ಯಾ. ಪಟಪಟಿ ಸರ್ ತಮ್ಮ ಸುರುತಿಯೊಳಗ ತಾವು ಇದ್ದು, ಗಾಡಿಗೆ ಜೋರ್ ಎಕ್ಸಿಲೇಟರ್ ಕೊಟ್ರು. ಗಾಡಿ ಬುದುಗ್ನ ಅಂತ ಮುಂದ ಹೋಗಿ, ಬೇಪಾನ ಜೋರ ಹೊಂಟ್ತು.

ನಾನು ಗಾಡೀಗಿ ಹಿಡಿದ ಕೈ ಬಿಡಾಕೂ ಆಗಲಾರದ, ಹಿಡಿಯಾಕೂ ಆಗಲಾರದ, ಗಾಡಿ ಹಿಂದ ಓಡಾಕೂ ಆಗಲಾರದ ಓಡ್ತಾ ಇದ್ದೆ. ಮುಂದ ನೋಡಿ ಗಾಡಿ ಹೊಡಿತ್ತಿದ್ದ ಪಟಪಟಿ ಸರ್, ತಮ್ಮ ವಾರಿಗಣ್ಣಿನಿಂದ ತುಸು ಹಿಂದ ನೋಡಿದ್ರು. ನಾನು ಹಿಂದ ಗಾಡಿ ಹಿಡಕೊಂಡು ಓಡಿ ಬರೋದ ನೋಡಿದ ಪಟಪಟಿ ಸರ್, ಜೋರ್ ಹೋಗೋ ಗಾಡೀನ್ ಗಕ್ಕನೆ ಬ್ರೇಕ್ ಹಾಕಿ ನಿಲ್ಲಿಸಿದ್ರು. ನಿಲ್ಲಸ್ ನಿಲ್ಲಸ್ತಾನೇ ಗಾಡಿ ಮ್ಯಾಲ ಕುಂತಕೊಂಡೇ… ‘ಏಯ್ ಆ ಮಗನ್ ಹಿಡಕೊಂಡು ಬರೆಲೇ…’ ಅಂತ ಪಟಪಟಿ ಸರ್ ಬಾಯಿಯಿಂದ ಮಾತು ಹೊರಗ ಬರೋದರೊಳಗೆ ನಾನು ಗಾಡಿ ಬಿಟ್ಟು ಹಿಂದಕ್ಕ
ಓಡಾಕತ್ತಿದ್ಯ.

ನನ್ನ ಹಿಂದ ಅದ ಸಾಲಿ ಬಿಟ್ಟು ಬರಾಕತ್ತಿದ್ದ ಸಣ್ಣ-ದೊಡ್ಡ ಹುಡುಗರು ಪಟಪಟಿ ಸರ್ ಮಾತು ವೇದವಾಕ್ಯ ಅಂತ ಅನಕೊಂಡು ನನ್ನ ಹಿಡಿಯಾಕ್ ಬೆನ್ನ ಹತ್ತಿದ್ರು. ನಾನು ನನ್ನ ಶಕ್ತಿ ಮೀರಿ ಓಡದ್ಯಾ… ಓಡದ್ಯಾ… ಆದ್ರ ‘ಓತಿಕಟ್ಟಿನ ಓಟ ಎಲ್ಲಿತನಕ ಅಂದ್ರ ಬೈಲಿತನಕ ಅನ್ನುವಂಗ’ ನಾನು ಹತ್ತಿಪ್ಪತ್ತು ಮಾರು ಹೋಗುವುದ್ರಾಗ ಮೂರ್ನಾಲ್ಕು ನನ್ನಕ್ಕಿಂತ ದೊಡ್ಡ ಹುಡುಗುರು ನನ್ನಕ್ಕಿಂತ ಜಿಗರ್ ಓಡ್ಯೋಡಿ ಬಂದು, ನನ್ನ ಹಿಡದ ಬಿಟ್ರು. ನಾನು ಒಂದೇ ಸಮನೆ ಜೋರಾಗಿ ಒದರಾಡಿ ಅಳ್ಳಾಕತ್ಯ. ನನ್ನ ಅಳು ಸಾಲೀಗಿ ಬಡದು ಪ್ರತಿಧ್ವನಿ ಆಗಾಕತ್ತೀತು. ಆದ್ರ ನನ್ನ ಹಿಡಿದ ಹುಡುಗರಿಗೆ ಅದು ಕೇಳಲೇ ಇಲ್ಲ. ಹುಡುಗರಿಗೆ ಪಟಪಟಿ ಸರ್ ಮಾತು ಮಾತ್ರ ಕೇಳಸ್ತಾ ಇತ್ತು. ಪಟಪಟಿ ಸರ್… ‘ಆ ನನ್ನ ಮಗನ್ನ ಇಲ್ಲಿ ಎಳಕೊಂಡು ಬರೇಲೇ… ಬಿಡಬ್ಯಾಡ್ರಿ… ಅವನ ಚರ್ಮಾ ಸುಲೀತೀನಿ…’ ಅಂತ ದವಡಿ ಕಚ್ಚಿದ್ರು.

ಯಮನ ಸೇವಕರು ಯಮಧರ್ಮನ ಆಜ್ಞೆ ಪಾಲಿಸುವಂಗ ಹುಡುಗರು ನನ್ನ ಬಿಡಲಾರದೇ…. ದರದರ ಎಳಕೊಂಡು, ಹೊತಗೊಂಡು ಹೋದ್ರು…. ಪಟಪಟಿ ಸರ್ ಅಂಗಿ ತೋಳ ಏರಿಸಿ… ನನ್ನ ಎಡಗೈ ಹಿಡಿದು ‘ಮಗನ, ಗಾಡಿ ಬಾಯಾಗ ಬಿದ್ದು ಸಾಯಬೇಕಂತ ಮಾಡಿ ಏನ್… ಬಿದ್ದ ಸತ್ಯಂದ್ರ… ನಿಮ್ಮವ್ವ ನಿಮ್ಮಪ್ಪ ನನ್ನ ಹೆಣದ ಮ್ಯಾಲ ಅಳತಾರ’ ಅಂದವ್ರ… ಒಂದೆರಡು ಬೆನ್ನ ಮ್ಯಾಲ ರಪ್…ರಪ್… ಅಂತ ಬಾರಿಸಿದ್ರು….ನಾನು ‘ಇಲ್ಲ ಸರ್… ಇನ್ನೊಮ್ಮೆ ಮಾಡಗಿಲ್ಲ’ ಅಂತ ಅನ್ನೊದರೊಳಗ…ನನಗ ಗೊತ್ತ ಇಲ್ಲದಂಗ್ಹ ನನ್ನ ಚೊಣ್ಣ ಹಸಿಯಾಗಿತ್ತು. ‘ಇನ್ನೊಮ್ಮೆ ಇಂಥಾ ಕೆಲಸ ಮಾಡ್ತಿ ಏನ್ ಮಗನ’ ಅಂತ ಪಟಪಟಿ ಸರ್ ಎರಡೂ ಕಣ್ಣ ಕೆಂಪಗ ಮಾಡಿ ಎರಡೂ ಕಿವಿ ಜೋರಾಗಿ ಹಿಂಡಿದ್ರು.

ಕಿವಿ ಸಂದ್ಯಾಗ ಬೆಂಕಿ ಇಟ್ಟಾಂಗ ಆತು. ನಾನು ‘ಅಯ್ಯಪ್ರೋ…. ಅಯ್ಯಪ್ರೋ… ಅಂತ ಜೋರಗ ಅಳಕೊಂತ ಒಂದ ಕೈ ಬಾಯೀಗಿ… ಇನ್ನೊಂದು ಕೈ ಕಿವಿಗಿ ಹಿಡಕೊಂಡು ಒದ್ದಾಡಕತ್ಯ…ಸರ್… ‘ಮಗನ ಮೊಲದಂದಗ್ಹ ನಿನ್ನ ಕಿವೀನೇ ಕಿತ್ತತೀನಿ… ನನ್ನ ಅಂದ್ರ ಏನ್ ಅಂತ ತಿಳಕೊಂಡಿದಿ… ಇನ್ನೊಮ್ಮೆ ಮಾಡತಿ ಏನ್ ಮಗನ’ ಅಂತ ಮತ್ತೊಂದು ಬಾರಿಸಿ, ‘ಹೋಗ ಮಗನ…’ ಅಂತ ನುಂಗಿಸಿಗೊಟ್ರು… ನಾನು ಕೈ ಬಿಟ್ರ ಸಾಕಪಾ ಅನ್ನುವಂಗ ಹುಲಿ ಬಾಯಿಂದ ಜಿಂಕಿ ಬಿಡಿಸಿಕೊಂಡು ಓಡುವಂಗ ಒಂದ ಕೈ ಚೊಣ್ಣಕ್ಕ ಇನ್ನೊಂದು ಕೈ ಪಾಟಿ ಚೀಲ ಬೆನ್ನಿಗೆ ಹಾಕೊಂಡು ಮನಿ ಕಡೆ ಒಂದೇ ಸಮನೆ ಓಡಾಕತ್ಯ…. ಜನಾಜಾತ್ರಿಯಂಗ ನೆರದ ಹುಡುಗರು ಇದೆಲ್ಲವನ್ನು ಕೆಲವರು ಬಿಟ್ಟ ಕಣ್ಣ ಪಿಳಕಸದ ನೋಡತ್ತಿದ್ರ, ಇನ್ನೂ ಕೆಲವರು ಹೆದರಿ ಹಿಪ್ಪಿ ಆಗಿದ್ದರು.

ಇನ್ನೂ ಕೆಲವರು ನಿಂತು ನೋಡಿ ಮಜಾ ತೋಗೋತಾ ಇದ್ರು…. ನಾನು ಹುಡುಗುರೊಳಗ ಹಾಯ್ಸಿ… ಓಡ್ತಾ ಇದ್ದೆ. ಅಳು ಒತ್ತರಿಸಿ ಇನ್ನೂ ಜೋರಾಗಿ ಬರಾಕತ್ತಿತ್ತು. ಅಳ್ತಾನೇ ಓಡ್ತಾ ಇದ್ದೆ. ಹುಡುಗರೆಲ್ಲ ಹಿಂದ ಉಳಿದಿದ್ರು…. ನಾನು ಓಡ್ತಾನೇ ಇದ್ದೆ. ಮಗ್ಗಲ ಗಾಡಿ ಸಪ್ಪಳ ಆತು… ಯಾರದು ಇರಬೇಕು ಅಂತ ಹೊಳ್ಳಿ ನೋಡಿದ್ಯಾ… ಪಟಪಟಿ ಸರ್ ಗಾಡಿ ಇತ್ತು… ಗಾಡಿ ಸಣ್ಣ ಮಾಡಿ, ‘ಬಾ ಮಗನ ಮತ್ತ ಹಿಡಿ ಬಾ’ ಅಂತ ಅಂದು ಮುಂದ ಬರ್ರನ ಹೋದ್ರು…. ಆದ್ರ… ಭಯ ಮಾತ್ರ…. ನನ್ನ ಬಿಟ್ಟು ಹೋಗಲಿಲ್ಲ…. ಈ ಸುದ್ದಿ ಹ್ಯಾಂಗೋ ಅಪ್ಪ, ಅವ್ವನ ಕಿವಿಗಿ ಬಿತ್ತು. ‘ಅಪ್ಪ … ಈ ಮಗನ ಚರಮಾ ಉರಪಾಟಿ ಸುಲಿಬೇಕಾಗಿತ್ತು. ನಾ ಇದ್ರ ಮಸ್ತಾರಗ ಹಂಗ ಹೇಳತ್ತಿದ್ಯ’ ಅಂದ್ರು. ಅಪ್ಪ ಮಾಸ್ತಾರಗಿಂತಲೂ ಇಂತಹ ವಿಷಯದಲ್ಲಿ ಕಟ್ಟುನಿಟ್ಟು.

ಈ ಘಟನೆ ನಡೆದ ವರ್ಷ ಒಪ್ಪತ್ತಿನಲ್ಲಿ ಭೀಕರ ಬರಗಾಲ ಬಿತ್ತು. ಅವ್ವ, ಅಪ್ಪ ಮುಂಬೈಗೆ ದುಡಿಯಲು ಹೊರಡಲು ಸಿದ್ಧರಾದರು. ‘ನೀನೊಬ್ಬ ಸಾಲಿ ಕಲಿ’ ಅಂತ ನನ್ನನ್ನು ನನ್ನ ತಾಯಿ ತನ್ನ ತವರಮನೆಯಾದ ಗೊಳಸಂಗಿಗೆ ತಂದು ಬಿಟ್ಟಳು. ‘ಆಯಿ, ಮುತ್ಯಾ, ಮಾಮಾಗೋಳ ಇರತಾರ ನಮಗ ನೆನೆಸಬ್ಯಾಡ. ನೀ ಇಲ್ಲೇ ಇದ್ದು ಸಾಲಿ ಕಲಿ’ ಅಂತ ಹೇಳಿ ಹೋದಳು. ನನ್ನ ಸಾಲಿ ಎರಡನೆಯ ತರಗತಿಯಿಂದ ಗೊಳಸಂಗಿಯ ‘ಚೆಂದವಳ್ಳಿಯ ತೋಟ’ದಿಂದ ಸುರುವಾಗಿ ಇಲ್ಲಿಗೆ ಬಂದು ತಲುಪಿದೆ.

ನಾನು ನಾಲ್ಕೋ… ಐದೋ ತರಗತಿಯಲ್ಲಿ ಓದುತ್ತಿರಬೇಕು. ಅವತ್ತು ಅಗಸ್ಟ್ ಪಂದ್ರಾ ತಾರೀಖು. ಸುದ್ಧಿ ಬಂತು. ಪಟಪಟಿ ಸರ್ ಬೈಕ್ ಅಪಘಾತದಲ್ಲಿ ತೀರಿಕೊಂಡ್ರು ಅಂತ. ಮನಸೀಗೆ ಬಹಳ ಖೇದವೆನಿಸಿತು. ಕಣ್ಣ ಮುಂದ ಪಟಪಟಿ ಸರ್ ಹಾದು ಹೋದಂಗಾತು. ಪಟಪಟಿ ಸರ್ ಅನ್ನೋದು ಅವರ ಹೆಸರ ಆಗಿರಲಿಲ್ಲ. ಅವರ ಹೆಸರು ಬಸಣ್ಣ ಮಾಸ್ತಾರ ಅಂತ ಇತ್ತು. ಆದ್ರ ಅವರು ಎಜಡಿ ಗಾಡಿ ಮ್ಯಾಗ ಬರೋದರಿಂದ ದೊಡ್ಡ ಹುಡುಗರೆಲ್ಲ ಪಟಪಟಿ ಸರ್ ಅಂತ ಕರೀತ್ತಿದ್ರು. ಅದಕ್ಕ ನಾವೂ ಹಂಗ ಕರೀತ್ತಿದ್ವಿ.

ಇನ್ನೊಬ್ಬರು ಸೈಕಲ್ ಸರ್ ಅಂತ ಇದ್ರು. ಅವರು ಸೈಕಲ್ ಮೇಲೆ ಬರತ್ತಿದ್ರು. ಅವರನ್ನ ಸೈಕಲ್ ಸರ್ ಅಂತ ಕರಿತ್ತಿದ್ವಿ. (ಅವರ ಬಗ್ಗೆ ಇನ್ನೊಂದು ಸಲ ಬರೆಯುವೆ) ಪಟಪಟಿ ಸರ್ ಬಹಳ ಸ್ಟ್ರಿಕ್ಟ್ ಇದ್ದರು. ನಾವೆಲ್ಲ ಬರೀ ಅವರನ್ನು ನೋಡಿದರೇನೇ ಹೆದರುತ್ತಿದ್ದೇವು. ನಾನು ತಪ್ಪು ಮಾಡಿದಾಗ ಅವರು ಬಡೆದು, ತಿದ್ದಿ, ಬುದ್ಧಿ ಹೇಳಿದ ಮಾತು ನಾನು ಕಲಿತ ಮೊದಲ ‘ಜೀವನ ಪಾಠ’. ನನ್ನ ಜೀವನದಲ್ಲಿ ಇಂತಹ ಅನೇಕ ಜೀವನ ಪಾಠದಂತಹ ಪ್ರಸಂಗಳು ಎದುರಾಗಿ, ಒಬ್ಬ ಮನುಷ್ಯನನ್ನಾಗಿ ರೂಪಿಸಿವೆ. ಇಂತಹ ಪ್ರಸಂಗಗಳನ್ನು ಮತ್ತೆ ಒಂದೊಂದಾಗಿ ಬರೆಯುವೆ.

‍ಲೇಖಕರು Admin

November 14, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: