ಹೂಜಿ ಮತ್ತು ಹುಡುಗಿ

ಪ್ರವರ ಕೊಟ್ಟೂರು
ಹೂವುಗಳು ಯಾವಾಗ
ಹೂಜಿ ಸೇರಿದವೋ ಗೊತ್ತಿಲ್ಲ!
ತೋಟದಿಂದ ಯಾರೋ ಅಳುವ ಸದ್ದು ಕೇಳಿಸಿತು
ಅವರ ದನಿಯನ್ನು
ಈ ಸಂಜೆಯಲ್ಲೂ ಗುರುತಿಸಬಲ್ಲೆ,
ಘಮಲು ಜಾರಿಸಿ
ಈಗಲ್ಲಿ ಕಡಲ ತಡಿಯಲ್ಲಿ ನಡೆಯುತ್ತಿರುವ
ಪ್ರೇಮಿಗಳು,
ಬೆರಳಿಗೆ ಬೆರಳು ಸ್ಪರ್ಶಿಸಿಕೊಂಡು
ಹೆಗಲಿಗೆ ಹೆಗಲು ಕೊಟ್ಟುಕೊಂಡು
ಕಣ್ಣಿಗೆ ತುಟಿ ಒತ್ತಿಕೊಂಡು
ಉರಿದುಳಿದ ಸೂರ್ಯನಂತೆ
ಅವನೂ
ಕರಗಲಾರದ ಬರ್ಫಿನಂತೆ
ಅವಳೂ
ಅಲೆಗಳು ಸುಳಿಯದ ದಂಡೆ
ಮಾತುಗಳ ನಡುವೆ ಬಚ್ವಿಟ್ಟುಕೊಂಡ
ಕೋಪ,
ಮೋಹಕತೆಯ ನಡುವೆ ಕಾಪಿಟ್ಟುಕೊಂಡ
ಒಲವು,
ತಂಡಿಯ ಸಿಪ್ಪೆಯನ್ನು ಹಚ್ಚೆ ಹುಯ್ದುಕೊಂಡ
ಸುಳಿಗಾಳಿ ಬರುವುದನ್ನೇ ಕಾಯುತ್ತವೆ
ಹೂಜಿಯ ಮೈಮೇಲೆ
ಉದ್ದ ಗಡ್ಡ ಬಿಟ್ಟ ಮನುಷ್ಯ
ಆತನ ಕಣ್ಣುಗಳು ನಿಶ್ಚಲ,
ಬಯಲ ಹೆಗಲಿ ರಾತ್ರಿಯಂತೆ
ಆತನಿಗೆ ಹೂಗಳ ಮೇಲೆ ಕಿಂಚಿತ್ತೂ
ಪ್ರೀತಿ ಇಲ್ಲ,
ಅವುಗಳನ್ಯಾವತ್ತೂ ನೋಡಿಲ್ಲ
ಮೂಸಿಲ್ಲ,
ಆ ಹೂಗಳು ಒಣಗಿ
ಕಿಡಕಿಯ ಸಂದಿಯಿಂದ ಬೀಸಿದ ಸಣ್ಣಗಿನ ಗಾಳಿಗೆ
ಪಕಳೆಗಳು ನಾಜೂಕಾಗಿ
ಮೇಜು ಮುಟ್ಟುತ್ತವೆ
ಅಂಗಾತ ಬಿದ್ದು
ಬೆನ್ನು ಹುರಿಗಳ ಲಟ ಲಟನೆ ಮುರಿದುಕೊಳ್ಳುತ್ತವೆ
ತುಂಬಾ ಹೊತ್ತಾಯ್ತು
ಹೊರಡುತ್ತೇನೆ
ಹುಡುಗಿ ಮನೆಯ ದಿಕ್ಕಿಗೆ ಮುಖ ಮಾಡಿ
ಸಣ್ಣಗೆ ಮಾತು ಹರಡುತ್ತಾಳೆ
ಭುಜ ಹಿಡಿದ ಕೈ
ಸಡಿಲಿಸಿತು,
ಹೋಗುವುದು ನಿನ್ನ ಆಯ್ಕೆ
ಇರಬೇಕಾದ್ದು ಮಾತ್ರ
ಒಲವು
ನಿಧಾನಕ್ಕೆ
ಚಳಿ ಅಡರುತ್ತದೆ,
ಕಲ್ಲು ಬಂಡೆಯ ಮೇಲೆ
ಮೈ ಮುದುಡಿಕೊಳ್ಳುತ್ತಾನೆ
ಸಂಜೆಯ ದಿಕ್ಕಿಗೆ
ನಡೆಯುತ್ತಾಳೆ
ಅವಳು ಏನೊಂದನ್ನೂ ಉಳಿಸಿ
ಹೋಗಲಿಲ್ಲ
ದಂಡೆಯೊಳಗೆ ಅವನು ಮಿಕ್ಕಿಸಿ
ಹಾಗೆ
ದಾರಿಯುದ್ದಕ್ಕೂ ಹೆಜ್ಜೆಗಳನ್ನು
ಕೋಣೆಯ ತುಂಬಾ
ಕತ್ತಲು
ಇದೇ ತಾನೆ ಭರ್ತಿಯಾಗಿದೆ,
ಈ ರಾತ್ರಿ ತುಂಬಾ
ಖಾಲಿಯಾಗುತ್ತಲೇ ಹೋಗುತ್ತಾಳೆ
ಹೂಜಿಯನ್ನು ಕೊನೆಗೂ ನೋಡುವುದಿಲ್ಲ
ಬೆನ್ನುಹುರಿ ಕಳಚಿದ
ಪಕಳೆಗಳನ್ನು ದೀಪದಂತೆ ಊದುತ್ತಾಳೆ





super bro nimma huvina kavana.