ಪಂಜುರ್ಲಿ ಯಾರು?..

ಉಷಾ ಕಟ್ಟೆಮನೆ

ಟೀವಿಯಲ್ಲಿ ಮಿಂಚುತ್ತಿದ್ದ ಆಯುರ್ವೇದ ಪಂಡಿತರೊಬ್ಬರು ಆನಂತರದಲ್ಲಿ ತಾವೊಬ್ಬ ಸ್ವಾಮೀಜಿ ಎಂದು ಬಿಂಬಿಸಿಕೊಂಡು ಇದೀಗ ಜಾನಪದ ಸಂಶೋದಕರಾಗಲು ಹೊರಟು ಪಂಜುರ್ಲಿ ಬೂತದ ಹುಟ್ಟಿನ ಬಗ್ಗೆ ವಿಡಿಯೋ ಒಂದನ್ನು ಹರಿಬಿಟ್ಟಿದ್ದನ್ನು ಸೋಷಿಯಲ್ ಮೀಡಿಯಾದಲ್ಲಿ ಆಲಿಸಿದೆ. ಅವರ ಆವೇಶದ ಮಾತುಗಳನ್ನು ನೋಡಿ ನಗು ತಡೆದುಕೊಳ್ಳಲಾಗಲಿಲ್ಲ. ಅವರ ಪ್ರಕಾರ ಪಂಜುರ್ಲಿ ಬೂತ ವರಹಾವತಾರದ ವರಾಹನಂತೆ. ಅಂದರೆ ವಿಷ್ಣುವಂತೆ. ಪಂಜುರ್ಲಿಗೂ ಶಿವನಿಗೂ ಸಂಬಂಧವೇ ಇಲ್ಲವಂತೆ. ಹಾಗಾಗಿ ಇದನ್ನು ಬರೆಯಲು ಹೊರಟೆ.

ದೇವರು ಮತ್ತು ದೈವಗಳ ಬಗ್ಗೆ ಮಾತಾಡುವಾಗ ಒಂದು ಬಹುಮುಖ್ಯ ವಿಚಾರವನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು; ದೈವಗಳೇ ಬೇರೆ, ದೇವರೇ ಬೇರೆ. ದೈವಗಳು ಜನಪದರಿಗೆ ಅಂದರೆ ಇಲ್ಲಿಯ ಮೂಲನಿವಾಸಿಗಳಿಗೆ, ಈ ಭೂಮಿಗೆ ಸಂಬಂಧಪಟ್ಟವು. ದೈವ ಮತ್ತು ದೇವರುಗಳಿಗೆ ಭೂಮಿ ಮತ್ತು ಆಕಾಶಗಳ ಅಂತರವಿದೆಯೆಂಬುದು ನಾವು ಮೊದಲು ಮನಗಾಣಬೇಕು- ಯಾವುದನ್ನು ನಾವು ದೇವರು ಎಂದು ಪೂಜಿಸುತ್ತೆವೆಯೇ ಅವುಗಳು ಆಕಾಶದಿಂದ ಅವತರಿಸಿದ ಅವತಾರಗಳು. ಅವುಗಳು ಭೂಲೋಕಕ್ಕೆ ಸಂಚಾರಕ್ಕೆ ಬಂದವರು. ಅವರು ಮನುಷ್ಯ ಸ್ಪರ್ಶಕ್ಕೆ ನಿಲುಕುವುದಿಲ್ಲ ಮತ್ತು ತಮ್ಮನ್ನು ಮನುಷ್ಯರಿಂದ ಮುಟ್ಟಿಸಿಕೊಳ್ಳುವುದಿಲ್ಲ. ಅವು ಆಕಾಶವಾಣಿಗಳು. ದೇವಭಾಷೆಯಲ್ಲೇ ಮಾತಾಡುತ್ತವೆ.

ದೇವತೆಗಳ ಆಹಾರ ಪದ್ದತಿ ಜನಸಾಮಾನ್ಯರಿಗಿಂತ ತುಂಬಾ ಭಿನ್ನವಾದುದು. ಜನಪದ ನಂಬಿಕೆಯ ಭೂಮಿದೈವಗಳು. ಸ್ಥಳೀಯ ಭಾಶೆಯಲ್ಲಿ ಮಾತಾಡುತ್ತವೆ. ಜನಪದರು ತಾವು ಏನನ್ನು ಉಣ್ಣುತ್ತಾರೆಯೋ ಅದನ್ನೇ ದೈವಕ್ಕೆ ಭಾರಣೆಯನ್ನಾಗಿ ನೀಡುತ್ತಾರೆ. ಆ ದೈವಗಳು ಮನುಷ್ಯನಲ್ಲೇ ಅವಾಹನೆಗೊಳ್ಳುತ್ತವೆ. ನಂಬಿದವರ ತಲೆಮುಟ್ಟಿ ಆಶಿರ್ವದಿಸುತ್ತವೆ. ಮುಖ್ಯವಾಗಿ ಸ್ಪರ್ಶಕ್ಕೆ ಸಿಗುತ್ತವೆ. ವರಾಹ ಅನ್ನುವುದುದೇವರು. ಪಂಜುರ್ಲಿ ಅನ್ನುವುದು ದೈವ.

ಪ್ರತಿಯೊಂದು ದೇವರಿಗೂ ಒಂದು ಪುರಾಣ್ದ ಹಿನ್ನೆಲೆಯಿರುತ್ತದೆ. ಹಾಗೆಯೇ ತುಳುನಾಡಿನ ಬೂತಗಳಿಗೂ ಒಂದು ಜಾನಪದ ಕಥೆಯಿರುತ್ತದೆ. ಅದರ ಸುತ್ತ ನಂಬಿಕೆಯ ಜಗತ್ತೊಂದು ಬೆಳೆದಿರುತ್ತದೆ. ಜನಪದರಿಗೆ ಅಕ್ಷರಜ್ನಾನವಿರಲಿಲ್ಲ. ಹಾಗಾಗಿ ಅವರು ಹಾಡುಗಳನ್ನು ಲಾವಣಿಗಳನ್ನು ಕಟ್ಟಿ ಹಾಡುತ್ತಾ ಪೀಳಿಗೆಯಿಂದ ಪೀಳಿಗೆಗೆ ದಾಟಿಸುತ್ತಾ ಬಂದರು ತುಳುನಾಡಿನ ಬೂತಗಳ ಕಥೆ ಕೂಡಾ ‘ಪಾಡ್ದನ’ವೆಂಬ ಹಾಡಿನ ರೂಪದಲ್ಲಿ ಪರಂಪರೆಯಿಂದ ಪರಂಪರೆಗೆ ದಾಟುತ್ತಾ ಬಂದಿದೆ.

ಕಳೆದ ಅವತ್ತು ಅರುವತ್ತು ವರ್ಷಗಳಂದೀಚೆಗೆ ತುಳುನಾಡಿನ ಅನೇಕ ವಿದ್ವಾಂಸರು ಊರೂರು ಅಲೆದಾಡಿ ಇಂತಹ ಪಾಡ್ದಾನಗಳನ್ನು ಸಂಗ್ರಹಿಸಿ ನಮ್ಮ ಜನಪದ ರಂಗಭೂಮಿಯನ್ನು ಹೊಸ ಕಣ್ಣಿನಿಂದ ನೋಡಲು ಆರಂಬಿಸಿದರು. ಇಂತಹ ಪ್ರಸಿದ್ದ ವಿದ್ವಾಂಸರೊಬ್ಬರು ಸಂಗ್ರಹಿಸಿದ ಪಾಡ್ದನದಿಂದ ಸಂಗ್ರಹಿಸಿದ ಪಂಜುರ್ಲಿಯ ಹುಟ್ಟಿನ ಕಥೆಯನ್ನು ಈಗ ನಾನು ನಿಮಗೆ ಹೇಳ್ತಾ ಇದ್ದೇನೆ.

ಪಂಜುರ್ಲಿಯ ಒಟ್ಟು ಹನ್ನೆರಡುಪಠ್ಯಗಳಿವೆ [Text] .ಅದರಲ್ಲಿ ಹೆಚ್ಚು ಪ್ರಸ್ತುತ ಎಂಬ ಕಥೆಯನ್ನು ಹೇಳುತ್ತೇನೆ. ಮತ್ತು ಆ ಹನ್ನೆರಡು ಕಥೆಗಳಲ್ಲಿ ಒಂದರಲ್ಲಿ ಮಾತ್ರ ಗೆಸ್ಟ್ ಅಪಿರಿಯನ್ಸ್ ನಂತೆ ವಿಷ್ಣು ಕಾಣಿಸಿಕೊಳ್ಳುತ್ತಾನೆ ಎಂಬುದನ್ನೂ ನಿಮ್ಮ ಗಮನಕ್ಕೆ ತರುತ್ತೇನೆ.

‘ಇದು ನಿಮ್ಮ ಕಲ್ಪಿತ ಕಥೆ’ ಎಂದು ಹೇಳುವ ಜನರು ಇರುತ್ತಾರೆಂದು ನನಗೆ ಖಂಡಿತಾ ಗೊತ್ತು.. ಅವರ ಅವಗಾಹನೆಗಾಗಿ; ಆ ವಿದ್ವಾಂಸರು ತಮ್ಮ ಪಿಎಚ್ಡಿ ಪದವಿಗಾಗಿ ಹತ್ತಾರು ವರ್ಷ ಅಲೆದಾಡಿ ವಿಷಯ ಸಂಗ್ರಹಿಸಿ ಡಾಕ್ಟರೇಟ್ ಪಡೆದುಕೊಂಡಿದ್ದರು. 1985ರಲ್ಲಿ ಆ ಮಹಾಪ್ರಬಂಧ ಪ್ರಕಟವಾಯ್ತು.

ಈಗ ಪಂಜುರ್ಲಿ ಭೂತದ ಕಥೆಗೆ ಬರೋಣ; ಘಟ್ಟದ ಮೇಲೆ [ತುಳುನಾಡಿನ ಬೌಗೋಳಿಕ ಅರಿವಿಲ್ಲದವರಿಗಾಗಿ; ಕರಾವಳಿಯ ಮೂರೂ ಬದಿ ಪಶ್ಚಿಮಘಟ್ಟ ಆವರಿಸಿದ್ದರೆ ಇನ್ನೊಂದು ಬದಿ ನೀಲ ಕಡಲಿದೆ] ಒಂದು ಹೆಣ್ಣು ಹಂದಿಯು ಅವಳಿ ಮರಿಗಳಿಗೆ ಜನ್ಮ ಕೊಟ್ಟಿತು.ಅದರಲ್ಲಿ ಒಂದು ಹೆಣ್ಣು, ಇನ್ನೊಂದು ಗಂಡು. ಅವುಗಳು ಘಟ್ಟ ಇಳಿದು ಸುಬ್ರಾಯ ದೇವರು ಇರುವಲ್ಲಿಗೆ [ಈಗಿನ ಕುಕ್ಕೇ ಸುಬ್ರಹ್ಮಣ್ಯ] ಬರಲು ನಿರ್ಧರಿಸಿದವು. ಅಲ್ಲಿಗೆ ಬಂದು ಸ್ನಾನ ಮಾಡಿ ದೇವರ ಆಶೀರ್ವಾದವನ್ನು ಪಡೆದುಕೊಂಡವು. ಪೂರ್ವ ಧ್ವಾರದಿಂದ ಪಶ್ಚಿಮ ಧ್ವಾರಕ್ಕೆ ಬಂದು ಹೀಗೆಂದು ಅರಿಕೆ ಮಾಡಿಕೊಂಡವು. ‘ ಇದುವರೆಗೆ ನಾವು ಅಣ್ಣ-ತಂಗಿ ಆಗಿದ್ದೆವು.ಘಟ್ಟ ಇಳಿಯುವಾಗ ಗಂಡ ಹೆಂಡತಿ ಆಗಬೇಕೆಂದು ನಿರ್ಧರಿಸಿದ್ದೇವೆ.’ ದೇವರು ಇದಕ್ಕೆ ಒಪ್ಪಿಗೆಯನ್ನು ನೀಡಿದರು.

ಹೆಣ್ಣು ಹಂದಿ ಗರ್ಭಿಣಿಯಾಗಿ ಎರಡು ಮರಿಗಳನ್ನು ಹೆತ್ತಿತು. ಆ ಹಂದಿ ಮತ್ತು ಅದರ ಮರಿಗಳು ತುಳುನಾಡಿನಲ್ಲಿರುವ ಈಶ್ವರನ ನಂದನವನವನ್ನು ಪ್ರವೇಶಿಸಿ ಅಲ್ಲಿದ್ದ ಗಿಡಮರಗಳನ್ನು ಹಾಳು ಮಾಡಿ ತೋಟವನ್ನು ಧ್ವಂಸ ಮಾಡಿದವು. ಸುದ್ದಿ ತಿಳಿದೊಡನೆ ಈಶ್ವರನು ತನ್ನ ಆಳುಗಳೊಡನೆ ಬಂದು ಆ ಹೆಣ್ಣು ಮತ್ತು ಗಂಡು ಹಂದಿಗಳನ್ನು ಕೊಂದು ಹಾಕಿದ. ಅನಾಥವಾದ ಎರಡು ಮರಿಗಳನ್ನು ತನ್ನ ಅರಮನೆಗೆ ಕೊಂಡು ಹೋಗಿ ತನ್ನ ಪತ್ನಿ ಪಾರ್ವತಿಗೆ ನೀಡಿದ.

ಈಶ್ವರನ ಹೆಂಡತಿ ಪಾರ್ವತಿಗೆ ಮಕ್ಕಳಿರಲಿಲ್ಲ. ಅವಳು ಈ ಹಂದಿ ಮರಿಗಳನ್ನು ಬಹಳ ಪ್ರೀತಿಯಿಂದ ಸಾಕಿದಳು. ಕೆಲವು ಕಾಲ ಕಳೆದಾಗ ಈ ಹಂದಿಮರಿಗಳು ಕೂಡಾ ಈಶವರನ ತೋಟವನ್ನು ಹಾಳು ಮಾಡಲು ಶುರುಮಾಡಿದವು. ಈಶವರನು ಅವುಗಳ ಉಪಟಳ ತಡೆಯಲಾರದೆ ಅವುಗಳನ್ನು ಕೊಲ್ಲಲು ಮುಂದಾದ. ಪಾರ್ವತಿ ಪ್ರತಿಭಟಿಸಿದಳು. ಅತ್ತು ಗೋಗೆರೆದಳು. ಈಶ್ವರ ಕರಗಲಿಲ್ಲ. ಕೊನೆಗೆ ತನ್ನ ಕಣ್ಣ ಮುಂದೆ ಅವುಗಳನ್ನು ಕೊಲ್ಲಬಾರದು ಎಂದು ಪಾರ್ವತಿ ಬೇಡಿಕೊಂಡಳು. ಆಗ ಈಶ್ವರನು ಹಂದಿಗಳಿಗೆ ‘ನೀವು ಈ ಜಾಗವನ್ನು ತೊರೆದು ಕೆಳಗಿನ ನಾಡಿಗೆ ಹೋಗಿ. ಅಲ್ಲಿ ನೀವು ಹಂದಿಗಳಲ್ಲ. ‘ಪಂಜುರ್ಲಿ’ ಎಂಬ ಹೆಸರನ್ನು ಪಡೆದು ಜನರಿಂದ ಪೂಜೆಗೊಳ್ಳಿ’ ಎಂದು ಶಾಪವಿತ್ತನು.

ಈರೀತಿಯಾಗಿ ಈಶ್ವರನಿಂದ ಶಾಪಕ್ಕೊಳಗಾದ ಹಂದಿ ಮರಿಗಳೇ ಪಂಜುರ್ಲಿ ದೈವಾಗಿ ತುಳುನಾಡಿನಲ್ಲಿ ನೆಲೆಗೊಂಡವು. ಪಂಜಿದ ಕುರುಳಿ ಅಂದರೆ ಹಂದಿಯ ಮರಿ. ಅದುವೇ ಪಂಜುರ್ಲಿ.

‍ಲೇಖಕರು Admin

October 20, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: