ರೂಪಶ್ರೀ ಕಲ್ಲಿಗನೂರು
ಬಹಳಷ್ಟು ಬಾರಿ ಎನ್ನುವುದಕ್ಕಿಂತಲೂ ಒಂದು ನಾಲ್ಕೈದು ಬಾರಿಯಾದರೂ ಬದುಕಿನ ಬಗ್ಗೆ ಒಳಗೊಳಗೆ ದೂರಿದ್ದೇನೆ. ಒಂದಷ್ಟು ವಿಷಾದಗಳು ಎದೆಯ ತುಂಬ ಹರಡಿಕೊಂಡಿಲ್ಲದಿದ್ದರೂ ಒಂದು ಮೂಲೆಯನ್ನು ಮಾತ್ರ ಗಟ್ಟಿಯಾಗಿ ಹಿಡಿದು ಕುಳಿತಿವೆ. ಆದರೂ ಹಾಗೆ ದೂರಿದ ಕೆಲವೇ ನಿಮಿಷಗಳಲ್ಲಿ ‘ಆಗೋದೆಲ್ಲ ಒಳ್ಳೇದಕ್ಕೆ ಅಲ್ವಾ’ ಅಂತ ಅಂದುಕೊಂಡಿದ್ದೇನೆ. ಅದು ನನ್ನನ್ನೇ ಸಂತೈಸಿಕೊಳ್ಳುವುದಕ್ಕಂತಲೂ ಅಲ್ಲ. ನನಗೆ ಅದರ ಸಾಕಷ್ಟು ಅನುಭವಗಳಿಗೆ. ಪ್ರತಿಯೊಂದು ಸೋಲೂ ಮಹತ್ತರವಾದ ಗೆಲುವಿನ ನಾಂದಿಯಾಗಿದೆ. ಹಾಗಾಗಿ ಎಂಥ ಸಂದರ್ಭದಲ್ಲೂ ನಾನು ಸೋಲನ್ನು ಬೈದುಕೊಳ್ಳುವುದಿಲ್ಲ. ನಿಜ ಹೇಳಬೇಕೆಂದರೆ ಎರಡು ಅದ್ಭುತ ಸೋಲುಗಳೇ ನನ್ನನ್ನು ನಿರಂತರವಾಗಿ ಬರೆಯುವಂತೆ ಮಾಡಿವೆ. ಅವುಗಳಿಂದಲೇ ನನ್ನ ಬರವಣಿಗೆಯಲ್ಲಿ ಒಂದಿಷ್ಟು ಸುಧಾರಣೆ ಕಂಡದ್ದು ಹಾಗೂ ಜಗತ್ತನ್ನು ಬೇರೇ ರೀತಿಯಾಗಿ ನೋಡಲು ಸಾಧ್ಯವಾಗಿದ್ದು. ಈಗ ದಿನವೊಂದಕ್ಕೆ ಕನಿಷ್ಠ ಹತ್ತು ಪುಟ ಓದದೇ ನಿದ್ದೆ ಬರುವುದಿಲ್ಲ. ಅದು ನನಗೆ ಸೋಲುಗಳು ಕಲಿಸಿದ ಅದ್ಭುತ ಪಾಠ.
ಸಾಮಾನ್ಯವಾಗಿ ನಾವು ಏನೆಲ್ಲವನ್ನು ದೂರುತ್ತೇವೆ ಎಂದು ಯೋಚಿಸುತ್ತಾ ಹೋದರೆ ಆರೋಪದ ಪಟ್ಟಿ ಮೀಟರುದ್ದದ ಸರಮಾಲೆಯಾಗಿ ಬೆಳೆಯುತ್ತದೆ. ಈ ಲೇಖನ ಬರೆಯುವುದಕ್ಕೂ ಅದೇ ಸ್ಪೂತರ್ಿ. ತಿಂಗಳ ಹಿಂದೆ ಅನಿವಾರ್ಯ ಕಾರಣವೊಂದಕ್ಕೆ ನಮ್ಮ ಮನೆಯನ್ನು ಬೆಂಗಳೂರಿನ ಇನ್ನೊಂದು ಭಾಗಕ್ಕೆ ಬದಲಾಯಿಸಿದಾಗ, ಎಂದೂ ಅಷ್ಟೆಲ್ಲ ಓಡಾಡಿ ಅಭ್ಯಾಸವಿರದೇ ಇದ್ದ (ಅಂದರೆ ಬಸ್ಸಿನಲ್ಲಿ) ನಾನು ಆಗಿನಿಂದ ದಿನಕ್ಕೆ ಕನಿಷ್ಠ 45 ಕಿಲೋ ಮೀಟರ್ ಓಡಾಡುವಂತಾದ ಕಾರಣ ಒಂಚೂರು ಅಸಮಾಧಾನಗೊಳ್ಳುತ್ತಿದ್ದೆ. ನಾನು ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಕಾರಣ ಹಾಗೆಲ್ಲ ನನ್ನ ತೊಂದರೆಗೋ, ಸ್ವಾರ್ಥಕ್ಕೋ ಕೆಲಸಕ್ಕೆ ಇದ್ದಕ್ಕಿದ್ದಂತೆ ತಿಲಾಂಜಲಿಯಿಟ್ಟುಬಿಡಲಾಗುವುದಿಲ್ಲ. ಮಕ್ಕಳ ಪರೀಕ್ಷೆಗಳು ಮುಗಿಯುವವರೆಗೂ ಕಾಯಲೇಬೇಕು. ಆ ಶಾಲೆ ಸಹಕಾರ ನಗರದಲ್ಲಿರುವುದರಿಂದ, ಹೆಬ್ಬಾಳದ ಮೇಲೇಯೇ ಅಲ್ಲಿಗೆ ಹೋಗಬೇಕು. ಆದರೆ ಆ ರಸ್ತೆ ಬೆಂಗಳೂರಿನಲ್ಲಿ ಅತ್ಯಂತ ಹೆಚ್ಚು ಅಪಘಾತ ಸಂಭವಿಸುವ ರಸ್ತೆಯೆಂದು ಕುಖ್ಯಾಥಿಯನ್ನು ಪಡೆದುಕೊಂಡದ್ದು. ಅದರಲ್ಲೂ ಸ್ವತಃ ನಾನೇ ಎರಡು ಬಾರಿ ಗಾಡಿಯಿಂದ ಬಿದ್ದು ಹೈರಾಣಾಗಿದ್ದ ಕಾರಣ ಅಷ್ಟು ದೂರಕ್ಕೆ ಗಾಡಿ ತೆಗೆದುಕೊಂಡುಹೋಗುವಂಥ ಸಾಹಸಕ್ಕೆ ಕೈ ಹಾಕುವಂತಿರಲಿಲ್ಲ.
ಆದ್ದರಿಂದ ಒಂದು ಕಾಲು ದಾರಿ ಬಿ.ಎಂ.ಟಿ.ಸಿ ಹಾಗೂ ನಂತರದ್ದು ಶಾಲೆಯ ವಾಹನದ ಮುಖಾಂತರ ಓಡಾಟ ಶುರುವಾಯಿತು. ನಿಜವಾದ ತೊಂದರೆಯೇ ಇಲ್ಲಿರುವುದು, ನಾನು ಬಸ್ಸಿನಲ್ಲಿ ಓಡಾಡಿದ್ದು ತೀರ ಕಡಿಮೆಯೇ. ಘಂಟೆಗಟ್ಟಲೇ ನಿಂತು ಬಸ್ಸಿಗೆ ಕಾಯುವ ಆಸಾಮಿಯಲ್ಲ ನಾನು. ಹತ್ತು ಹದಿನೈದು ನಿಮಿಷಕ್ಕೆ ಬಸ್ಸು ಬರಲಿಲ್ಲವೆಂದರೆ ನಾನಂದುಕೊಳ್ಳುವ ಮೊದಲೇ ಕಾಲುಗಳು ಆಟೋದತ್ತ ಹೆಜ್ಜೆ ಹಾಕಿರುತ್ತದೆ. ಹಾಗೇ ಮೊನ್ನೆ ಕಾರ್ಪೊರೇಷನ್ನಿಗೆ ಬಸ್ಸಿನಲ್ಲಿ ಹೋಗಿ, ಒಂದಿಷ್ಟು ಉದ್ದಕ್ಕೆ ನಡೆದು ಶಾಲೆಯ ಬಸ್ಸನ್ನೇರಿದ ಮೇಲೆ ಉಸ್ಸಪ್ಪಾ ಎಂದು ಸೀಟಿನಲ್ಲಿ ಕುಳಿತು ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ಶಾಹೀದ್ ಫರ್ವೇಜರ ಸಿತಾರಿನಲ್ಲಿ ಯಮನಿ ನುಡಿಸಾಣೆಕೆಯನ್ನು ಕೇಳತೊಡಗಿದ ಮೇಲೆ ಅರೆಜೀವವಾಗಿ ತೊಳಲಾಡುತ್ತಿದ್ದ ಮನಸ್ಸು ಒಂದಿಷ್ಟು ಹಗುರವಾಗಿ ಮುಚ್ಚಿದ್ದ ಕಣ್ಗಳು ತಾವೇ ತೆರೆದುಕೊಂಡವು. ಕಣ್ತೆರೆದ ತಕ್ಷಣ ಕಿಟಕಿಯತ್ತ ಹೊರಳಿದ ನೋಟಕ್ಕೆ, ಮೈತುಂಬಾ ತಿಳಿಗುಲಾಬಿ ವರ್ಣದ ಟಬೇಬುಯಾ ರೋಸಿಯಾ ಹೂಗಳನ್ನು ಅರಳಿಸಿಕೊಂಡು ನಿಂತಿದ್ದ ಮರ ಅರೆಕ್ಷಣ ಕಂಡು, ಹಿಂದಕ್ಕೆ ಹೋಯಿತು. ತಕ್ಷಣ ಕಿಟಕಿಯ ಸಮೀಪಕ್ಕೆ ಕತ್ತನಲುಗಿಸಿ ಹಿಂದೆ ನೋಡಿದೆ. ಆ ಮರ ಮತ್ತಷ್ಟು ಹಿಂದೆ ಹಿಂದೆ ಹೋಗುತ್ತಾ, ಇಡೀ ಮರ ಗುಲಾಬಿ ಬಣ್ಣದ ಲಾಲಿಪಾಪ್ ರೀತಿಯಲ್ಲಿ ಕಾಣಿಸುತ್ತಿದ್ದ ರೀತಿಗೆ ಮನಸ್ಸಿಗೆ ಇನ್ನಿಲ್ಲದ ಉಲ್ಲಾಸ ಬಂದಿತ್ತು.
ಕತ್ತು ತಿರುಗಿಸುವ ಮುನ್ನವೇ ಮತ್ತೊಂದು ಮರ ಹಿಂದಕ್ಕೋಡಿದಂತೆ ಮತ್ತಷ್ಟು ಖುಷಿ. ಮತ್ತಷ್ಟು ಹೂಮರಗಳನ್ನು ನೋಡುವ ಬಯಕೆಗೆ ಕಿಟಕಿಯ ಸರಳಿನ ಮೇಲೆ ಗದ್ದವಿರಿಸಿ, ನಿರೀಕ್ಷೆಯ ಕಣ್ಣುಗಳಲ್ಲಿ ಹಾದು ಹೋಗುತ್ತಿದ್ದ ಹಾದಿ ಬದಿಯನ್ನು ನೋಡುತ್ತಲೇ ಇದ್ದೆ. ತಿಳಿಗುಲಾಬಿ ಹೂಗಳಷ್ಟೇ ಅಲ್ಲ ಹಳದಿ, ಗುಲಾಬಿ, ಬಿಳಿ, ಪರ್ಪಲ್ ಬಣ್ಣದ ಹಲವು ತಳಿಯ ಮರಗಳೆಲ್ಲ ಬಳಿ ಸುಳಿದು ಹಿಂದಕ್ಕೋಡಿದಂತೆ, ಆಯಾಸವೆಲ್ಲೋ ನಾಪತ್ತೆಯಾಗಿಹೋಗಿತ್ತು. ಮತ್ತಷ್ಟು ಮುಂದೆ ಹೋದದ್ದೇ ತಡ ಸ್ಯಾಂಕಿ ಕೆರೆ ಸಿಕ್ಕಿತ್ತು. ಬಸ್ಸು ಅದರ ಹಿಂಭಾಗದ ರಸ್ತೆಗಂಟಿಕೊಂಡು ಒಂದಿಷ್ಟು ಮುಂದೆ ಹೋಗಿದ್ದಿಲ್ಲ. ಒಂದು ಪುಟ್ಟ ಕಲ್ಯಾಣಿಯಂತಿರುವ ಚೌಕಾಕಾರದ ಕೊಳ ಕಂಡಿತು. ತೀರಾ ಸ್ಯಾಂಕಿಯನ್ನು ಎಂದೂ ಸುತ್ತುವರೆದು ನೋಡಿಲ್ಲವಾದ್ದರಿಂದ, ಈ ಹಿಂದೆ ಆ ಕೊಳವನ್ನು ಕಂಡದ್ದು ನೆನಪಿಗೆ ಬರಲಿಲ್ಲ. ಇಲ್ಲಿ ವಿಶೇಷತೆಯೆಂದರೆ ಬರೀ ಕೊಳದ್ದಲ್ಲ. ಆ ಕೊಳದ ಮೆಟ್ಟಿಲು ಹಾಗೂ ಅದರ ಸುತ್ತ ಬಂದು ಕುಳಿತುಕೊಳ್ಳುವ ಪಾರಿವಾಳಗಳ ಹಿಂಡಿನದ್ದು. ಅಬ್ಬಾ ಎಷ್ಟು ಚಂದ ಆ ನೋಟ. ಯಾರ್ಯಾರೋ ಪ್ರೀತಿಯಿಂದ ಕಾಳು ತಂದು ಹಾಕುತ್ತಿದ್ದರೆ, ಪಟಪಟನೇ ಅತ್ತಿತ್ತ ಕತ್ತಲುಗಿಸಿ, ಹೆಕ್ಕಿ ಹೆಕ್ಕಿ ತಿನ್ನುವುದನ್ನು ನಿಂತು ನೋಡಬೇಕೆನ್ನಿಸುತ್ತದೆ. ಆದರೆ ಇಷ್ಟೆಲ್ಲ ನೋಟಗಳು ಬರೀ 3-4 ಸೆಕೆಂಡುಗಳದ್ದು ಮಾತ್ರವೇ. ಅದು ಶಾಲೆಯ ವಾಹನವಲ್ಲದೇ ನನ್ನದೇ ಗಾಡಿಯಾಗಿದ್ದಿದ್ದರೆ, ಬಹುಶಃ ನಾನು ಶಾಲೆಗೆ ಹೋಗುವ ಬದಲು, ಅಲ್ಲೇ ಬಸ್ಸಿಳಿದು ಹಕ್ಕಿಗಳನ್ನು ನೋಡುತ್ತ ಕೂತುಬಿಡುತ್ತಿದ್ದೆ ಅಂತ ಕಾಣಿಸುತ್ತೆ. ಅಷ್ಟು ಆಹ್ಲಾದಕರ ಅನ್ನಿಸುತ್ತೆ ಆ ನೋಟ.

ಅಲ್ಲದೇ ಕಾರ್ಪೋರೇಷನ್ ಬಳಿ ಸಿಗುವ, ನಾನೆಂದೂ ಅಲ್ಲಿ ಕಾಲಿಡಲು ಬಯಸದ ಕೃಷ್ಣರಾಜ ಮಾರುಕಟ್ಟೆಯ ಬಗ್ಗೆಯಂತೂ ಹೇಳಲೇಬೇಕು. ಬೆಳ್ಳಂಬೆಳಗ್ಗೆ ಅದೇ ರಸ್ತೆಯಲ್ಲಿ ಬಸ್ಸು ಹಾದುಹೋಗುವಾಗ ಆ ಮಾಕರ್ೆಟ್ಟಿನಲ್ಲಿ ಸಿಗುವ ಹೂವಿನ ರಾಶಿಯನ್ನು ನೋಡುವುದು ಮತ್ತೊಂದು ಸಂಭ್ರಮ. ಒಂದಿಷ್ಟು ಜನ ಮಲ್ಲಿಗೆ, ಸೇವಂತಿಗೆ, ಕನಕಾಂಬರ, ಕಣಗಿಲೆ ಹೂಗಳ ಮಾಲೆಗಳನ್ನು ಹಿಡಿದು ನಿಂತು, ಅವುಗಳ ಬೆಲೆ ಕೂಗುತ್ತ ನಿಂತರೆ ಕೊಳ್ಳಲು ಬಂದವರು ಹೂವಿನ ಬೆಲೆಯನ್ನು ನೆಲದಗುಂಟ ಇಳಿಸಿ ಚೌಕಾಸಿ ಮಾಡುತ್ತಿರುತ್ತಾರೆ. ಒಂದಿಷ್ಟು ದೂರಕ್ಕೆ ಬರೀ ಗುಲಾಬಿಗಳದ್ದೇ ಸಂತೆ. ಅದರಲ್ಲೂ ನೋಡಿದರೆ ಮೈ ಪುಳಕಗೊಳ್ಳುವ ಕೆಂಪು ಗುಲಾಬಿಗಳ ರಾಶಿಯನ್ನು ನೋಡಬೇಕು. ಅಬ್ಬಾ! ಸಾವಿರಾರು ಹೂಗಳನ್ನು ಒಟ್ಟಿಗೇ ನೋಡುತ್ತಿದ್ದರೆ ಮನಸ್ಸಿಗೆ ಖುಷಿಯಾಗದೇ ಇರಲಾರದು. ಅದರಲ್ಲೂ ಕೆಂಗುಲಾಬಿಗಳ ದರ್ಬಾರನ್ನು ಅಕ್ಷರ ರೂಪಕ್ಕಿಳಿಸಲಾಗುವುದಿಲ್ಲ. ಒಮ್ಮೆ ನೋಡಿಯೇ ಸಂಭ್ರಮಿಸಬೇಕು. ಅಲ್ಲಿನ ಎಲ್ಲ ಹೂಗಳನ್ನು ಒಟ್ಟಿಗೇ ಜೋಡಿಸಿಟ್ಟರೆ ಬಹುಶಃ ನಾಲ್ಕಡಿಯಷ್ಟಿನ ಒಂದಿಷ್ಟು ಉದ್ದಕ್ಕೆ ಹೂವಿನದ್ದೇ ಗೋಡೆಯನ್ನು ನಿರ್ಮಿಸಬಹುದು. ಅಷ್ಟು ಹೂಗಳು.
ಯಾರೊಬ್ಬರೂ ಕಿಟಕಿಯಳತೆಯಿಂದ ಕಣ್ಕಿತ್ತಲಾಗುವುದಿಲ್ಲ, ಆ ಬೀದಿ ಮುಗಿಯುವವರೆಗೆ. ಹಾಗೆ ಬಸ್ ಪ್ರಯಾಣವನ್ನು ಬೈದುಕೊಳ್ಳುತ್ತಿದ್ದವಳಿಗೆ ಇವನ್ನೆಲ್ಲ ಕಂಡ ಮೇಲೆ, ಬಸ್ಸಿನಲ್ಲೇ ನಿತ್ಯ ಸಂಚರಿಸುವ ಆಸೆ ಚಿಗುರಿತ್ತು (ಮುಂಜಾನೆ ಮಾತ್ರ) ಜೊತೆಗೆ ಕಿವಿಯಲ್ಲಿ ಶಾಹೀದ್ ಪವರ್ೇಜರ ಸಿತಾರಿನಲ್ಲಿ ಒಮ್ಮೆ ಯಮನಿ ನುಡಿದರೆ ಮತ್ತೊಂದು ಘಳಿಗೆ ಫಯಾಝ್ ಖಾನರ ದನಿಯಲ್ಲಿ ಬಾಗೇಶ್ರೀ ನದಿಯಾಗಿ ಹರಿಯುತ್ತಿದ್ದಳು. ದೃಶ್ಯ ಹಾಗೂ ಶ್ರಾವ್ಯದ ರಸದೌತಣಗಳ ಹೂರಣದಲ್ಲಿ ಮೀಯುತ್ತಿದ್ದ ನನ್ನ ಕಣ್ಣುಗಳು ಸುಖದಿಂದ ಆಯಾಸಗೊಂಡು ಕಣ್ಣುಗಳು ತಾವಾಗೇ ಮುಚ್ಚಿಕೊಂಡವು. ಅರಿವಿಲ್ಲದಂತೆ ಸೀಟಿಗೆ ತಲೆಯಾಯಿನಿಸಿ ಘಳಿಗೆಯಾಗಿರಲಿಲ್ಲ, ಬಸ್ಸು ಧಡಕ್ಕನೇ ನಿಂತಿತು. ಏಕೆಂದರೆ ಆಶ್ಚರ್ಯದಿಂದ ಕಣ್ತೆರೆದಾಗ ಫುಟ್ಪಾತ್ ಮೇಲೆ ನಿಂತಿದ್ದ ಕೊರಿಯನ್ ವ್ಯಕ್ತಿಯೊಬ್ಬರು ಅಪ್ಪನ ಪ್ರೀತಿಯ ತುಂಬು ಭಾವದಿಂದ ತನ್ನ ಪುಟಾಣಿ ಮಗಳನ್ನು ಬಸ್ ಹತ್ತಿಸುತ್ತಿದ್ದದ್ದು ಕಂಡು ಬಂತು. ಗಲ್ಲದ ನಡುವೆ ಪುಟ್ಟ ಮಚ್ಚೆಯಿರುವ ಆ ಪುಟಾಣಿಗೆ ಆ ಅಪ್ಪ ತಮ್ಮದೇ ಭಾಷೆಯಲ್ಲಿ ಅದೇನನ್ನೋ ಹೇಳಿ ಟಾ ಟಾ…. ಎಂದು ಮುದ್ದುಮದ್ದಾಗಿ ಹೇಳುತ್ತಿದ್ದಂತೆ ಆ ಪುಟಾಣಿ ನಕ್ಕು ತನ್ನ ಸೀಟಿಗೆ ಬಂದು ಕುಳಿತ ಮೇಲೆ, ಆಯಾ ಆ ಮಗುವಿಗೆ ಸೀಟ್ ಬೆಲ್ಟ್ ಹಾಕುವುದನ್ನು ನೋಡಿದ ಮೇಲೆ ಅವರು ಹೊರಟರು. ಬಸ್ಸು ಮುಂದಕ್ಕೆ ಚಲಿಸಿದಂತೆ ಮತ್ತೆ ಸೀಟಿಗೆ ತಲೆಯಾನಿಸಿದಾಗ, ಅದರ ಹಿಂದಿನ ರಾತ್ರಿ ಸ್ನೇಹಿತರೊಬ್ಬರ ಜೊತೆ ಬೆಂಗಳೂರಿನ ಸಹವಾಸವನ್ನು ಕುರಿತು ಆಡಿದ ಮಾತುಗಳು ನೆನಪಿಗೆ ಬಂದವು.
ಇತ್ತಿಚ್ಚಿನ ಕೆಲ ವರ್ಷಗಳಿಂದ ನನಗೆ ಬೆಂಗಳೂರನ್ನು ಬಿಟ್ಟು ನೆಮ್ಮದಿಯಾಗಿ ಹಳ್ಳಿಯಲ್ಲದಿದ್ದರೂ ತೀರಾ ಹಳ್ಳಿಯೂ ಅಲ್ಲದ ಪಟ್ಟಣವೂ ಅಲ್ಲದ ಒಂದಷ್ಟು ಕಾಡುಮೇಡು ಇರುವಂಥಾ ಊರಿಗೆ ಹೋಗಿದ್ದುಬಿಡಬೇಕೆಂದು ಅನ್ನಿಸುತ್ತಿದ್ದೆ. ಅದನ್ನೇ ನನ್ನ ಸ್ನೇಹಿತರು ಕೂಡ ಮಾತನ್ನಾಡುತ್ತಿದ್ದಂತೆ ಇಲ್ಲಿನ ಟ್ರಾಫಿಕ್ಕು, ಜನಸಂದಣಿ, ನಿಭರ್ಾವುಕ ಮನಸ್ಥಿತಿಗಳ ಬಗ್ಗೆ ವಿಷಾದಿಸಿ, ಆದಷ್ಟು ಬೇಗ ಈ ಮಹಾನಗರದಿಂದ ಹೆಜ್ಜೆ ಕಿತ್ತು, ಬಸವನಹುಳುವಿನಂತೆ ನಿಧಾನವಾಗಿ, ಯಾವೊಂದೂ ಅವಸರವಿಲ್ಲದೇ ಬದುಕುವ ಕನಸನ್ನು ಹಂಚಿಕೊಂಡದ್ದು ನೆನಪಾಯಿತು. ಆದರೆ ಅಂದು ಹೂಮರ, ಸ್ಯಾಂಕಿ ಕೆರೆ ಎಲ್ಲ ನೋಡಿದ ಮೇಲೆ, ಹೌದಲ್ಲ ಹಾಗೆ ನೆಮ್ಮದಿಯ ಬದುಕಿನ ಬುನಾದಿಗೆ ಈ ಓಟದ ತಿರುಗುಣಿಗೆ ತಿರುಗಲೇಬೇಕಲ್ಲವೇ? ಹಾಗಿಲ್ಲದೇ ನೆಮ್ಮದಿಯಿಂದ ಬದುಕುವ ಕನಸನ್ನು ಕಾಣಲಾಗುತ್ತದೆಯೇ? ಅಥವಾ ಈಗಲೇ ಅಂಥದದ್ದೊಂದು ಸ್ಥಳಕ್ಕೆ ಹೋಗಿ ಬದುಕು ಕಟ್ಟಿಕೊಳಲಾಗುತ್ತದೆಯೇ? ಖಂಡಿತ ಇಲ್ಲ. ನಮ್ಮೆಲ್ಲ ಕನಸುಗಳಿಗೆ ನೀರೆರೆಯುತ್ತಿರುವುದು ಇದೇ ಮಹಾನಗರವಾದ್ದರಿಂದ ಇದಕ್ಕೆ ಋಣಿ ನಾನು. ಮತ್ತೆಂದೂ ಬೈದುಕೊಳ್ಳಬಾರದು ಇದನ್ನು ಎಂದುಕೊಂಡೆ ಮನಸ್ಸಿನಲ್ಲಿ.
ಬಸ್ಸು ಮುಂದಕ್ಕೆ ಚಲಿಸಿದಂತೆ, ಆವರೆಗೂ ಕಂಡ ಆ ದೃಶ್ಯಗಳನ್ನು ಮೆಲಕು ಹಾಕುತ್ತಾ, ನಕ್ಕು ಸಹಜವಾಗಿ ನನ್ನ ಬಲಗಡೆ ತಿರುಗಿದಾಗ, ಒಂದು ಸೀಟು ಹಿಂದೆ ಕುಳಿತಿದ್ದ ನಿಹಾಲ್, ನನ್ನನ್ನು ಕಂಡವಳೇ, ‘ಹಾಯ್ ಮಿಸ್’ ಎಂದು ನನ್ನತ್ತ ಕೈ ಬೀಸಿದಳು. ಅವಳಿಗೆ ಹಾಯ್ ಎಂದಾಗಲೂ ಅದೇ ನಗು ಇತ್ತು ಆದರೆ ನನ್ನೊಳಗೆ ಆ ಹುಡುಗಿಯ ಬಗೆಗಿದ್ದ ವಿಷಾದದ ಮೂಟೆಯ ದಾರ ಸಡಿಲಗೊಂಡಿತ್ತು.
ನಾನು ನಿಹಾಲ್ಳನ್ನ ಆ ಶಾಲೆಗೆ ಸೇರಿದ ದಿನವೇ ನೋಡಿದ್ದೆನಾದರೂ, ಯಾಕೋ ಅವಳು ನನ್ನ ತರಗತಿಗೆ ಬರುವುದಕ್ಕೆ ಮನಸ್ಸು ಸಂಪೂರ್ಣ ಒಪ್ಪಿಗೆ ಸೂಚಿಸಿರಲಿಲ್ಲ. ಅವಳನ್ನು ನೋಡಿದ ದಿನ ವಿಚಿತ್ರ ಸಂಕಟದಿಂದ ನರಳಿದ್ದೆ. ಏಕೆಂದರೆ ನಿಹಾಲ್ ಎಲ್ಲರಂಥಲ್ಲದ ಮಗು. ಅಂದು ನಾನು ಶಾಲೆಗೆ ಹೋದ ಮದಲ ದಿನ ಮೂರು ಪಿರಿಯಡ್ಗಳ ನಂತರ ಹದಿನೈದು ನಿಮಿಷಗಳ ವಿರಾಮವಿತ್ತು. ಒಟ್ಟು ಮೂರು ದೊಡ್ಡ ದೊಡ್ಡ ಕಟ್ಟಡಗಳಿರುವ ಶಾಲಾ ಆವರಣದಲ್ಲಿ ಕೊನೆಯದ್ದು ನಮ್ಮ ಹೈಸ್ಕೂಲಿನದ್ದು. ಅವೆಲ್ಲಕ್ಕೂ ಮೀರಿದ ದೊಡ್ಡದಾದ ಹಚ್ಚ ಹಸಿರಿನ ಮೈದಾನವೂ ಇತ್ತು. ಅದರ ತುಂಬ ಅಲ್ಲದಿದ್ದರೂ ಎರಡು ಮೂರು ಗುಂಪುಗಳ ಮಕ್ಕಳು ಬೇರೆ ಬೇರೆ ಆಟಗಳನ್ನು ಆಡುವುದರಲ್ಲಿ ತಲ್ಲೀನರಾಗಿದ್ದರು. ಆ ಹೊತ್ತಿಗೆ ಮಿಕ್ಕ ಶಿಕ್ಷಕರಿಗೆ ಬೆಳಗ್ಗಿನ ಮೀಟಿಂಗ್ನಲ್ಲಿ ಒಬ್ಬರನ್ನೊಬ್ಬರಿಗೆ ಹಾಯ್ ಎಂದದ್ದನ್ನು ಬಿಟ್ಟರೆ ಯಾರೂ ಪರಿಚಯ ಅಂತ ಆಗಿರಲಿಲ್ಲ. ಮತ್ತೆ ಹೋಗಿ ಮಾತನಾಡಿಸುವಂತಿರಲಿಲ್ಲ ಅವರ ಐಟಿ ಛಾಯೆಯ ಕೃತಕ ನಗು. ಹಾಗಾಗಿ ಒಬ್ಬಳೇ ಮೆಟ್ಟಿಲ ಮೇಲೆ ಕೂತು ಮಕ್ಕಳು ಆಟವಾಡೋದನ್ನು ನೋಡುತ್ತ ಕುಳಿತಿದ್ದೆ. ಜೊತೆಗೆ ಆ ಕಟ್ಟಡದಿಂದ ಈ ಕಟ್ಟಡಕ್ಕೆ ಹೋಗಿ ಬರುವ ಮಕ್ಕಳನ್ನೆಲ್ಲ ನೋಡುತ್ತ, ಅಷ್ಟೊಂದು ಮಕ್ಕಳ ಸನಿಹದಲ್ಲಿರುವುದನ್ನು ಸಂಭ್ರಮಿಸುತ್ತಿದ್ದೆ. ಹೌದು ನನಗೆ ಮಕ್ಕಳೆಂದರೆ ಎಲ್ಲಿಲ್ಲದ ಸಂಭ್ರಮ. ಎಲ್ಲಿ ಯಾವ ಮಗು ಕಂಡರೂ ಮಾತನಾಡಿಸದೇ ಇರಲು ಸಾಧ್ಯವೇ ಇಲ್ಲ. ಗಾಡಿಯಲ್ಲಿ ಹೋಗುವಾಗ ಸಿಗ್ನಲ್ನಲ್ಲಿ ಮಕ್ಕಳನ್ನ ಕಂಡರೂ, ಹೆಲ್ಮೆಟ್ನ ಗಾಜನ್ನು ತೆಗೆದು ಕನಿಷ್ಠ ಮೂಕ ಭಾಷೆಯಲ್ಲಿ ಸಂವಹನ ಮಾಡುತ್ತೇನೆ.
ಚಿಕ್ಕ ಮಕ್ಕಳು ಪೇಪರ್ ಹಿಡಿದುಕೊಂಡು ಓಡಾಡುವುದನ್ನು ಕಂಡರಂತೂ ಯಾವುದೋ ಒಂದು ಪೇಪರ್ ಕೊಳ್ಳದೇ ಮುಂದೆ ಹೋದನೆಂದರೆ, ನನ್ನನ್ನು ನಾನೇ ಬೈದುಕೊಳ್ಳುತ್ತೇನೆ. ಮನೆ ಕಟ್ಟೋಕಂತ ಎಲ್ಲೆಲ್ಲಿಂದಲೋ ಬರೋ ಮಕ್ಕಳಂತೂ ನನ್ನನ್ನ ಅದೆಷ್ಟು ಸಮ್ಮೋಹನಗೊಳಿಸ್ತಾರೆ ಅಂದ್ರೆ, ಅತ್ತ ಅವರ ಅಪ್ಪ-ಅಮ್ಮ ಇನ್ಯಾರದ್ದೋ ಮನೆಗೆ ಕಲ್ಲು ಮಣ್ಣುಗಳನ್ನು ಹೊರುತ್ತಿದ್ರೆ ಇವರು ಅದೇ ಮರಳಿನಲ್ಲಿ ತಮಗಾಗಿ ಅಂತ ಪುಟ್ಟ ಗೂಡು ಕಟ್ತಾರಲ್ಲ ಅದನ್ನ ನೋಡಿದ ಮರುಕ್ಷಣವೇ ‘ಲೈಫ್ ಇಸ್ ಬ್ಯೂಟಿಫುಲ್’ ಅನ್ನೋ ಮಾತು ಮೈಮನವನ್ನು ಆವರಿಸುತ್ತೆ. ಹಾಂ ನಿಹಾಲ್ ಬಗ್ಗೆ ಹೇಳ್ತಿದ್ದೆನಲ್ವಾ ನಿಮಗೆ, ಹಾಗೆ ಅಂದು ಹೊರಗೆ ಕೂತು ಮಕ್ಕಳ ಆಟವನ್ನು, ಓಡಾಟವನ್ನು ನೋಡುತ್ತ ಕುಳಿತಿದ್ದ ನನಗೆ ಬಲಗಡೆಯಿಂದ ಬಂದ ಹುಡುಗಿಯೊಬ್ಬಳು ಕೊಂಚ ದಂಗುಬಡಿಯುವಂತೆ ಮಾಡಿದ್ದಳು. ಅವಳನ್ನು ನೋಡಿ ಅಕ್ಷರಶಃ ಬೆಚ್ಚಿದ್ದೆ. ಆದರೆ ಪುಣ್ಯಕ್ಕೆ ಸುಪ್ತಸ್ಥಿತಿಯಲ್ಲಿನ ಯಾವುದೋ ಎಚ್ಚರಿಕೆಯ ಸಹಾಯದಿಂದ ಅದಾವ ಭಾವವನ್ನೂ ನಾನು ಆ ಹುಡುಗಿಯ ಮುಂದೆ ತೋರಿಸಲಿಲ್ಲ. ನಿಲರ್ಿಪ್ತವಾಗೇ ಉಳಿದುಕೊಂಡಿದ್ದೆ. ಆದರೆ ಅವಳು ಹಾಗೆ ನನ್ನನ್ನು ಬಳಸಿಕೊಂಡು ಕಟ್ಟಡದ ಒಳಗೆ ಹೋದ ಮೇಲೆ ಒಂದುಕ್ಷಣ ಕಣ್ಮುಚ್ಚಿಕೊಂಡು ಸಾವರಿಸಿಕೊಂಡೆ. ಸ್ವಲ್ಪ ಬೆಚ್ಚಿದ್ದ ಮನಸ್ಸು ಕಣ್ಮುಚ್ಚಿದಾಗಲೇ ತಿಳಿಯಾದದ್ದು. ಸುಟ್ಟಂತೆ ಕಾಣುತಿದ್ದ ಆ ಹುಡುಗಿಯ ಇಡೀ ಮೈಯ ಚರ್ಮ ಬಹಳಷ್ಟು ಸುಕ್ಕುಸುಕ್ಕಾಗಿತ್ತು. ಅದೂ ಅಲ್ಲದೇ ಆ ಚರ್ಮದ ಬೆಳವಣಿಗೆಯ ವೇಗ ಹೆಚ್ಚಿದ್ದ ಕಾರಣ, ಆ ಚರ್ಮ ಸದಾ ಸುಲಿಯುತ್ತಿರುತ್ತೆ. ತೆಳು ಮೈಯ ಆ ಹುಡುಗಿಯ ಕಣ್ಣುಗಳಂತೂ ಇನ್ನೇನು ರಕ್ತಕಾರಬಹುದು ಎನ್ನಿಸುವಷ್ಟು ಭೀಕರ. ಹಾಗಾಗಿಯೇ ನಾನೂ ಬೆಚ್ಚಿದ್ದು. ಅಷ್ಟೇ. ಆದರೆ ಅದಕ್ಕಾಗಿ ಬಹಳಷ್ಟು ವಿಷಾದಿಸಿದ್ದೇನೆ.
ಅದಾದ ನಂತರ ನಾನು ನನ್ನ ಕ್ಲಾಸ್ ರೂಮಿಗೆ ಮರಳಿದ್ದೆ. ಅದು ಮೊದಲನೇ ದಿನವಾದ್ದರಿಂದ ಹೆಚ್ಚು ಮಕ್ಕಳಿರಲಿಲ್ಲ, ಅದರಲ್ಲೂ ಇಲ್ಲಿ ಕಲೆಯನ್ನೂ ಸಿಲೆಬಸ್ನ ಪ್ರಕಾರವೇ ಕಲಿಸಬೇಕಾಗಿದ್ದರಿಂದ, ಇಷ್ಟ ಬಂದವರು ಮಾತ್ರ ಕಲೆಯನ್ನು ಆಯ್ದುಕೊಳ್ಳಬಹುದಿತ್ತು. ಹಾಗೆ ಕಲೆಯನ್ನು ಆರಿಸಿಕೊಂಡ ವಿದ್ಯಾಥರ್ಿಗಳ ಪಟ್ಟಿ ಇನ್ನೇನು ನನ್ನ ಕೈಗೆ ಬರುವುದರಲ್ಲಿತ್ತು. ಆಗ ಯಾಕೋ ‘ಆ’ ಹುಡುಗೀನೂ ಆಟರ್್ನ ಆರಿಸಿಕೊಂಡಿದ್ರೆ?! ಅಂತ ಮನಸ್ಸಲ್ಲೊಂದು ತೊಳಲಾಟ ಆರಂಭವಾಗಿತ್ತು. ಒಂದು ಕಡೆ ಛೆ! ನಾ ಯಾಕೆ ಹೀಗೆ ಯೋಚಿಸ್ತಿದ್ದೀನಿ ಆ ಮಗೂ ಬಗ್ಗೆ ಅನ್ನಿಸಿದ್ರೆ ಮತ್ತೊಂದುಕಡೆ, ಅವಳು ನನ್ನ ಕ್ಲಾಸ್ ರೂಮಿಗೆ ಬಂದೇಬಿಟ್ರೆ ಏನ್ ಮಾಡೋದು, ಅವಳನ್ನ ಹೇಗೆ ಮಾತಾಡಿಸೋದು ಎಂಬ ಗೊಂದಲಕ್ಕೀಡಾಗಿ, ಒಂದು ಥರದ ಖಿನ್ನತೆಗೆ ಒಳಗಾಗಿಹೋಗಿದ್ದೆ. ತನ್ನದಲ್ಲದ ತಪ್ಪಿಗೆ ಹಾಗೆ ರೂಪ ಪಡೆದುಕೊಂಡ ಮಗುವಿನ ಬಗ್ಗೆ ಎರಡನೇಯ ಭಾವನೆ ಬೆಳೆದದ್ದೇ ಅದಕ್ಕೆ ಮುಖ್ಯ ಕಾರಣವಾಗಿತ್ತು. ಅದಾಗಿ ತಾಸಿನ ಬಳಿಕ, ಕೋ ಆಡರ್ಿನೇಟರ್ ಒಬ್ಬರು, 9ನೇ ತರಗತಿಯಿಂದ 12ನೇ ತರಗತಿಯವರೆಗಿನ ಕಲೆಯನ್ನು ಆಯ್ದುಕೊಂಡ ಮಕ್ಕಳ ಪಟ್ಟಿಯನ್ನು ತಂದುಕೊಟ್ಟಾಗ, ಮೊದಲು ಎಲ್ಲ ಹೆಸರುಗಳನ್ನೊಮ್ಮೆ ಓದಿಕೊಂಡೆ. ಎಲ್ಲೋ ಒಂದು ನಿರಾಳ ಭಾವ. ಬಹುಶಃ ಆ ಹುಡುಗಿ ಕಲೆ ಮತ್ತು ವಿನ್ಯಾಸವನ್ನು ತಗೊಂಡಿರಲಿಕ್ಕಿಲ್ಲ ಎಂದುಕೊಂಡೆ.
ವೇಳಾ ಪಟ್ಟಿಯ ಪ್ರಕಾರ ಮುಂದೆ 9ನೇ ತರಗತಿಯಲ್ಲಿ ಕಲೆಯನ್ನು ಆಯ್ದುಕೊಂಡಿದ್ದ, ಇಬ್ಬರೇ ಮಕ್ಕಳನ್ನು ನೋಡುವ ಹಾಗೂ ಸಂಧಿಸುವುದಕ್ಕಾಗಿ ಕಾತರಳಾಗಿ ಕುಳಿತಿದ್ದೆ. ಮೊದಲು ಬಂದವನು ಲೀ. ದಕ್ಷಿಣ ಕೊರಿಯಾದ ಮುದ್ದುಮುದ್ದು ಹುಡುಗ. ಅವನನ್ನು ಪರಿಚಯ ಮಾಡಿಕೊಂಡವಳೇ ‘ಇನ್ನೊಬ್ಬ ಹುಡುಗಿ ಬರಬೇಕಲ್ಲ, ಯಾರು ಅದು’ ಎಂದಾಗ ‘ಶಿ ಇಸ್ ಕಮಿಂಗ್ ಮಿಸ್’ ಎಂದು ಮಾತು ಮುಗಿಸುವಷ್ಟರಲ್ಲಿ ನನ್ನ ಕ್ಲಾಸ್ ರೂಮಿನೊಳಗೆ ಕಾಲಿಟ್ಟಳು ನಿಹಾಲ್. ಅವಳನ್ನು ಕಂಡವಳೇ ಒಮ್ಮೆ ದೀರ್ಘ ಉಸಿರನ್ನು ತೆಗೆದುಕೊಂಡು ಅವಳ ಕೈ ಕುಲುಕಿ, ‘ಹೆಲ್ಲೋ ನಿಹಾಲ್…’ ಎಂದು ಮಾತನಾರಂಭಿಸಿದ್ದೆ. ಅದೇ ಹುಡುಗಿಯೇ ನಿಹಾಲ್. ಎರಡೇ ದಿನ ಸ್ವಲ್ಪ ಕಷ್ಟವೆನಿಸಿತ್ತು. ಆದರೆ ಬರುಬರುತ್ತಾ, ಮಿಕ್ಕೆಲ್ಲ ವಿದ್ಯಾಥರ್ಿಗಳಿಗಿಂತ ನಿಹಾಲ್ ತನ್ನ ವಿಶೇಷ ಗುಣಗಳಿಂದ ನನ್ನನ್ನು ಬಹಳಷ್ಟು ಸೆಳೆಯತೊಡಗಿದಳು. ಆಮೇಲಂತೂ ನಾನು ಅವಳನ್ನೂ ಅವಳು ನನ್ನನ್ನು ತೀರಾ ಹಚ್ಚಿಕೊಂಡವರಂತೆ ಮತ್ತೆ ಮತ್ತೆ ಭೆಟ್ಟಿಯಾಗತೊಡಗಿದೆವು. ಊಟದ ಹೊತ್ತಿಗೆ ಅವಳು ಇರಲೇಬೇಕಿತ್ತು ನನಗೆ. ಅವಳು ಸಾಮಾನ್ಯವಾಗಿ ಮದ್ಯಾಹ್ನದ ಊಟ ತರುತ್ತಿರಲಿಲ್ಲವಾದ್ದರಿಂದ, ಮನೆಯಿಂದ ಒಂದು ಹೆಚ್ಚಿಗೆ ಚಪಾತಿ ಹಾಕಿಸಿಕೊಂಡು ಅವಳಿಗೆ ಕೊಡುತ್ತಿದ್ದೆ. ಬಿಡುವಿನ ಸಮಯ ಸಿಕ್ಕಾಗಲೆಲ್ಲ ನನ್ನ ಕೋಣೆಗೆ ಬರುತ್ತಿದ್ದಳು. ಇಲ್ಲವೆಂದರೆ ನಾನೇ ಅವಳನ್ನ ಹುಡುಕಿಕೊಂಡು ಹೋಗುತ್ತಿದ್ದೆ. ಅದಕ್ಕೇನು ಕಾರಣ ಅಂತ ಇಂದಿನವರೆಗೂ ನನಗೆ ಗೊತ್ತಾಗಿಲ್ಲ.
ಅವಳ ಜೀವನ ಪ್ರೀತಿಯನ್ನು ಹೇಳಬೇಕು ನಿಮಗೆ. ಈ ನಿಹಾಲ್ ಹುಟ್ಟಿದಾಗಿನಿಂದ ಹೀಗೆ ಇದ್ದ ಮಗುವಲ್ಲ. ಮೊದಮೊದಲು ಎಲ್ಲರಂತೆಯೇ ಇದ್ದವಳು ನಂತರದಲ್ಲೇ ಹೀಗಾದದ್ದು ಎಂದು ಅವಳ ಸ್ನೇಹಿತೆಯೊಬ್ಬಳಿಂದ ತಿಳಿಯಿತು. ಯಾವುದೋ ಒಂದು ವೈಜ್ಞಾನಿಕ ಕಾರಣವಿದ್ದಿರಬಹುದು ಆ ವೈಪರಿತ್ಯಕ್ಕೆ. ಅದೇನೆಂದು ನನಗಿನ್ನೂ ಹುಡುಕಲಾಗಿಲ್ಲ. ಅವಳಿಗಿರೋ ಜೀವನ ಪ್ರೀತಿಯ ಬಗ್ಗೆ ಹೇಳ್ತಿದ್ದೆ. ಒಮ್ಮೆ ತರಗತಿ ನಡೆಯುವಾಗ ನಿಶಾ ಹಾಗೂ ಡೇವಿಡ್ ಮಾತಾಡಿಕೊಂಡದ್ದನ್ನ ಕೇಳಿದ್ದೆ. ಅವಳಿಗೆ ಪಬ್ಲಿಕ್ ಆಫಿಸರ್ ಆಗುವ ಬಯಕೆಯಂತೆ! ಅಬ್ಬಾ ಎಂದುಕೊಂಡೆ ಒಮ್ಮೆ. ಒಂದಿಷ್ಟು ದಪ್ಪಗಾದರೋ ಇಲ್ಲ ಜಾಸ್ತಿ ತೆಳ್ಳಗಾದೆವೆಂದೋ ಖಿನ್ನತೆಗೆ ಒಳಗಾಗುವ ಹುಡುಗಿಯರಿಗೆ ನಿಹಾಲ್ ಒಬ್ಬ ಮಾದರಿ ಎನ್ನಿಸಿದಳು ಅವತ್ತು. ಏಕೆಂದರೆ ಅವಳಲ್ಲಿ ಎಂದೂ ತನ್ನ ರೂಪದ ಬಗ್ಗೆ ಕೀಳರಿಮೆ ಕಂಡಿಲ್ಲ ನಾನು. ಅವಳ ಪ್ರತೀ ಮಾತಿನಲ್ಲೂ ವಿಶ್ವಾಸದ ಗುರುತು ಹಚ್ಚಬಹುದು. ಹಾಗೆಯೇ ಇಡೀ ಶಾಲೆಯಲ್ಲಿ ಯಾರೂ ಅವಳನ್ನು ಸುಮ್ಮನೇ ಅತ್ತಿತ್ತ ತಿರುಗಾಡಿಕೊಂಡೋ ಅಥವಾ ಎಲ್ಲೋ ಮೂಲೆಯಲ್ಲಿ ಕುಳಿತುಕೊಂಡಿರುವುದನ್ನು ನೋಡಿರಲು ಸಾಧ್ಯವೇ ಇಲ್ಲ. ಏಕೆಂದರೆ ಸದಾ ಅವಳ ಕೈಯಲ್ಲೊಂದು ಪುಸ್ತಕವಿದ್ದೇ ಇರುತ್ತದೆ. ವಾರಕ್ಕೆ ಕನಿಷ್ಟ ಅಂದರೂ ಎರಡು ಪುಸ್ತಕಗಳನ್ನು ಓದಿ ಮುಗಿಸುತ್ತಾಳೆ. ಈಗಾಗಲೇ ನಮ್ಮ ಶಾಲೆಯಲ್ಲಿನ ಎಲ್ಲ ಕತೆ ಕಾದಂಬರಿ ಹಾಗೂ ಸ್ಪೂತರ್ಿ, ಪ್ರೇರಣೆಗಳಿಗೆ ಸಂಬಂಧಪಟ್ಟ ಎಲ್ಲ ಪುಸ್ತಕಗಳನ್ನೂ ಓದಿ ಮುಗಿಸಿದ್ದಾಳೆ. ನಾನು ಕುತೂಹಲಕ್ಕೆ ಯಾವ ಪುಸ್ತಕ ಇದು ಅಂತ ಕೇಳಿದರೇ ಸಾಕು! ಅಲ್ಲಿಯವರೆಗೂ ಓದಿರುವುದನ್ನು ಒಳ್ಳೆಯ ನಿರೂಪಣೆಯಲ್ಲಿ ಕಥೆಮಾಡಿ ಹೇಳುತ್ತಿದ್ದರೆ ನನ್ನ ಮುಖದಲ್ಲೊಂದು ಪ್ರೀತಿಯ ನಗು ಅರಳುತ್ತದೆ. ಅವಳು ಬರೀ ಓದೋದಾಗಿದ್ರೆ ಅಷ್ಟು ವಿಶೇಷ ಇರುತ್ತಿರಲಿಲ್ಲೇನೋ. ಆದರೆ ಪುಟ್ಟ ಪುಟ್ಟ ಕತೆ, ಕವನಗಳನ್ನು ಬರೆಯುತ್ತಿರುತ್ತಾಳೆ. ಒಮ್ಮೊಮ್ಮೆ ಓದಿ ಹೇಳುತ್ತಾಳೆ.
ಅವರ ತಂದೆತಾಯಿಯನ್ನು ನೋಡಿದರೆ 65 ದಾಟಿರುವ ಹಾಗಂತೂ ಸ್ಪಷ್ಟವಾಗಿ ಕಾಣುತ್ತದೆ. ಇವರಿಗೆ ಇಷ್ಟು ಚಿಕ್ಕ ಮಗಳೇ? ಎಂದುಕೊಂಡಿದ್ದೆನಾಗ. ಗೋವಾ ಮೂಲದ ಇವರು ಇದ್ದದ್ದೆಲ್ಲ ಬೆಂಗಳೂರಿನಲ್ಲೆ. ಕೋಟ್ಯಾದಿಪತಿಗಳೇ. ಅಮ್ಮ ವೈದ್ಯೆ ಹಾಗೂ ಅಪ್ಪ ಯಾವುದೋ ವ್ಯವಹಾರದಲ್ಲಿದ್ದವರು. ಮೊದಲ ಶಿಕ್ಷಕರು ಹಾಗೂ ಪೋಷಕರ ಸಭೆಯಲ್ಲಿ ಭೆಟ್ಟಿಯಾದಾಗ, ಮಾತನಾಡುತ್ತ ಅವಳಿಗೆ ದೂರ ದೃಷ್ಟಿ ದೋಷ ಇರುವುದು ಗೊತ್ತಾಯಿತು. ಯಾವುದೇ ವಸ್ತು ಅನತಿ ದೂರದಲ್ಲಿದ್ದರೂ ಅವಳಿಗೆ ಕಾಣಿಸುವುದಿಲ್ಲ. ಅವಳ ಪ್ರೊಗ್ರೆಸ್ ಬಗ್ಗೆ ಮಾತನಾಡುತ್ತ, ಮನೇಲಿ ಏನಾದ್ರೂ ಮಾಡಿಸಬಹುದಾ? ಹಾಗೇನಾದ್ರೂ ಇದ್ರೆ ಮೊದಲೇ ಮೇಲ್ ಮಾಡಿಬಿಡಿ, ಸಮಯ ಸಿಕ್ಕಾಗ ಮಾಡಿಸ್ತೀವಿ ಎಂದಾಗ, ಅಯ್ಯೋ ಇರೋ ಒಬ್ಬ ಮಗಳಿಗೆ (ನಂತರದಲ್ಲಿ ಗೊತ್ತಾದದ್ದು ಅವಳಿಗೆ ಇಬ್ಬರು ಅಕ್ಕಂದಿರು ಹಾಗೂ ಇಬ್ಬರು ಅಣ್ಣಂದಿರೂ ಇದ್ದಾರೆಂದು) ಸಮಯ ಕೊಡೋಕಾಗುವುದಿಲ್ಲ ಅಂದ್ರೆ ಏನು? ಅದೂ ದುಡ್ಡಿನ ಕೊರತೆ ಅಂತೇನೂ ಅಲ್ಲದವರು ಹೀಗಿರುವ ಮಗಳ ಕಾಳಜಿ ಮಾಡದೇ ಮತ್ತಿಷ್ಟು ಇನ್ನಷ್ಟು ಎಂದು ದುಡಿಯುವ ಅಗತ್ಯತೆ ಏನಿದೆ ಎಂದು ನನಗೆ ತಿಳಿಯಲಿಲ್ಲ. ಆದರೆ ನಿಹಾಲ್ ಅದಾವುದಕ್ಕೂ ತಲೆ ಕೆಡಿಸಿಕೊಳುವವಳಲ್ಲ. ಅದೇ ವಿಶ್ವಾಸದಿಂದ ಅವಳನ್ನು ಮಾತನಾಡಿಸುವವರೊಂದಿಗೆ ಮಾತನಾಡ್ತಾಳೆ. ಅವಳ ಉತ್ಸಾಹ ಹಾಗೂ ಆತ್ಮಸ್ಥೈರ್ಯವನ್ನು ನೋಡಿದಾಗಲೆಲ್ಲ ನನ್ನೊಳಗೆ ಏನೋ ಒಂದು ಖುಷಿ ಮೂಡುತ್ತದೆ. ಸಣ್ಣಪುಟ್ಟ ವಿಷಯಗಳಿಗೆ ಬದುಕನ್ನು ಬೈದುಬಿಡುವ ಮನಸ್ಸುಗಳಿಗೆ ನಿಹಾಲ್ ಎಂಬ ಪುಟ್ಟ ಹುಡುಗಿ ನಿಜಕ್ಕೂ ಆದರ್ಶಪ್ರಾಯಳು ಎನ್ನುವಲ್ಲಿ ಹೆಚ್ಚುಗಾರಿಕೆಯೇನಿಲ್ಲ.






E barahada modala 5 salugalu jagattina yalla barahagarara abipraya agirbahudu anno mattige taakidavu. super madam.
Very good narration. Liked it. We too shifted to new area, even though I roam a lot, walk a lot, but as there is no direct bus to my office, it is very difficult to reach in time. After changing 2 to 4 buses and reaching late to office. I really used to curse myself for shifting too far. But my friend sent me this website to read articles. I just opened website and saw ur photo, recognised u, and read up article. After reading the article actually.. really I don’t know the same long distance I used to travel became nearer. I stopped cursing myself started looking the same road with eye opened widely.