'ಜನಗಣತಿ ಎಂಬ ಸಾಮಾಜಿಕ ನ್ಯಾಯ' – ಜಿ ಪಿ ಬಸವರಾಜು

ಜಿ ಪಿ ಬಸವರಾಜು

ಒಂದು ಅಪರೂಪದ ಜನಗಣತಿ ಕರ್ನಾಟಕದಲ್ಲಿ ಈ ತಿಂಗಳು ನಡೆಯಲಿದೆ. ವ್ಯಕ್ತಿಯ ಜಾತಿ, ಶಿಕ್ಷಣದ ಹಿನ್ನೆಲೆ, ಆರ್ಥಿಕ ಸ್ಥಿತಿಗತಿಯ ಸುತ್ತ ನಡೆಯುವ ಈ ಜನಗಣತಿ ವಿವಿಧ ಕಾರಣಗಳಿಂದಾಗಿ ಬಹಳ ಮಹತ್ವ ಪಡೆದಿದೆ. ಈ ಬಗೆಯ ಜನಗಣತಿ ನಮ್ಮಲ್ಲಿ ನಡೆದೇ ಇಲ್ಲ. ನಮ್ಮ ಸಂವಿಧಾನದ ಹಕ್ಕಾಗಿ ನೀಡಲಾಗುತ್ತಿರುವ ಮೀಸಲಾತಿ, 1931 ರಷ್ಟು ಹಿಂದೆಯೇ ಬ್ರಿಟಿಷರು ಮಾಡಿದ್ದ ಜನಗಣತಿಯನ್ನೇ ಆಧರಿಸಿದೆ. ಅಲ್ಲಿಂದ ಇಲ್ಲಿಯವರೆಗೆ ಅಂದರೆ ಸುಮಾರು 85 ವರ್ಷಗಳಷ್ಟು ಸುದೀರ್ಘ ಅವಧಿಯಲ್ಲಿ ನಮ್ಮಲ್ಲಿ ಈ ಮಾದರಿಯ ಜನಗಣತಿ ನಡೆದೇ ಇಲ್ಲ ಎಂಬುದು ಅನೇಕ ಸಂಗತಿಗಳ ಮೇಲೆ ಬೆಳಕು ಚೆಲ್ಲುತ್ತದೆ. ಯಾವುದನ್ನೂ ವ್ಯವಸ್ಥಿತವಾಗಿ ಮಾಡಲಾಗದ ನಮ್ಮ ವ್ಯವಸ್ಥೆಯ ದುರವಸ್ಥೆಯನ್ನೂ ಅದು ಹೇಳುತ್ತದೆ. ಸ್ವಾತಂತ್ರ್ಯಾನಂತರವೂ ನಾವು ಇಂಥ ಸಂಗತಿಗಳ ಕಡೆಗೆ ಗಮನಕೊಡದೇ ಇರುವುದು ನಮ್ಮ ರಾಜಕೀಯ ನಿರಾಸಕ್ತಿಯನ್ನೂ ತೋರಿಸುತ್ತದೆ.
ಕರ್ನಾಟಕ ಸರ್ಕಾರ ಒಂದು ಮಹತ್ವದ ಹೆಜ್ಜೆಯಾಗಿ ಈ ಜನಗಣತಿಯನ್ನು ಕೈಗೆತ್ತಿಕೊಳ್ಳುತ್ತಿದ್ದಂತೆಯೇ ವಿರೋಧಗಳು ಕಾಣಿಸಿಕೊಂಡಿವೆ. ವಿರೋಧ ಯಾಕಾಗಿ ಮತ್ತು ಯಾರಿಂದ ಎಂಬುದನ್ನೂ ಗಮನಿಸಬೇಕಾಗಿದೆ. ಕರ್ನಾಟಕದ ಪ್ರಧಾನ ಕೋಮುಗಳು ಮತ್ತು ಅವುಗಳನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿರುವ ಶಕ್ತಿಗಳು ಇಂಥ ಜನಗಣತಿ ನಡೆಯಬಾರದೆಂದು ಅಪಸ್ವರ ಎತ್ತಿವೆ. ಪ್ರಧಾನ ಜಾತಿಗಳಿಗೆ ಈ ಜನಗಣತಿ ಬೇಕಾಗಿಲ್ಲ. ಸಂವಿಧಾನ ದತ್ತವಾದ ಮೀಸಲಾತಿಯನ್ನು ಈ ಜಾತಿಗಳೇನೂ ಅನುಭವಿಸುತ್ತಿಲ್ಲ. ಸಹಜವಾಗಿಯೇ, ಜಾತಿ, ಆರ್ಥಿಕ ಸ್ಥಿತಿಗತಿ ಮತ್ತು ಶೈಕ್ಷಣಿಕ ಹಿನ್ನೆಲೆಯನ್ನು ಆಧರಿಸಿದ ಜನಗಣತಿಯ ಬಗ್ಗೆ ಈ ಪ್ರಧಾನ ಜಾತಿಗಳಿಗೆ ಆಸಕ್ತಿ ಇಲ್ಲ. ಆದರೆ ಉಳಿದ ಜಾತಿಗಳಿಗೆ ಇದು ತುಂಬ ಮಹತ್ವದ ಜನಗಣತಿ. ಜಾತಿಯ ಅಂಕಿ ಅಂಶಗಳನ್ನು ಸರಿಯಾಗಿ ಗುರುತಿಸಿಕೊಳ್ಳಲು ಪ್ರತಿ ಹತ್ತುವರ್ಷಕ್ಕೊಮ್ಮೆ ಇಂಥ ಜನಗಣತಿ ನಡೆಯಬೇಕು ಎಂದು ಸುಪ್ರೀಂ ಕೋರ್ಟ್ ನಿದೇಶನ ನೀಡಿದ್ದರೂ ರಾಜ್ಯ ಸರ್ಕಾರಗಳು ಇದನ್ನು ಸರಿಯಾಗಿ ಪಾಲಿಸಿಕೊಂಡು ಬರುತ್ತಿಲ್ಲ. ನಮ್ಮ ರಾಜ್ಯದಲ್ಲಂತೂ ಈ ನಿರ್ದೇಶನದ ಪಾಲನೆ ಎಂದೋ ಆಗಬೇಕಾಗಿತ್ತು. ಅದಕ್ಕಾಗಿಯೇ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಈ ಜನಗಣತಿಗೆ ಮುಂದಾಗಿದೆ. ಈಗಲಾದರೂ ನಾವು ಇದನ್ನು ಅರ್ಥಮಾಡಿಕೊಂಡು ಸರಿಯಾದ ರೀತಿಯಲ್ಲಿ ಸ್ಪಂದಿಸಬೇಕಾಗಿದೆ.
ಮೀಸಲಾತಿಯನ್ನು ಸ್ವಾತಂತ್ರ್ಯಾನಂತರದ 68 ವರ್ಷಗಳಿಂದ ಹಲವು ಜಾತಿಗಳು ಪಡೆಯುತ್ತಿದ್ದರೂ, ಇನ್ನೂ ಮೀಸಲಾತಿಯ ಪ್ರಯೋಜನಕ್ಕೇ ಮುಖಮಾಡದ ಜಾತಿಗಳ ಸಂಖ್ಯೆ ನಮ್ಮಲ್ಲಿ ದೊಡ್ಡದಾಗಿಯೇ ಇದೆ. ಮೀಸಲಾತಿಯ ಪ್ರಯೋಜನ ಎಲ್ಲ ಅರ್ಹರಿಗೂ ದಕ್ಕಬೇಕು. ಈ ಪ್ರಯೋಜನವನ್ನು ಪಡೆದುಕೊಂಡವರು, ಪಡೆಯದವರ ಪಾಡನ್ನು ಕಣ್ಬಿಟ್ಟು ನೋಡಲು ಸಾಧ್ಯವಾಗಬೇಕು. ಸಮಾನತೆಯನ್ನು ಸಾಧಿಸುವ ದಿಕ್ಕಿನಲ್ಲಿ ಪ್ರತಿಯೊಬ್ಬರ ಹೊಣೆಗಾರಿಕೆಯೂ ಇದೆ. ಅದನ್ನು ಪಾಲಿಸಲು ಇಂಥ ಜನಗಣತಿ ಸಹಕಾರಿ.

ಜನಗಣತಿಯನ್ನು ನಡೆಸುವಾಗ ‘ನಿಮ್ಮ ಜಾತಿಯಂತೆಯೇ ನಿಮ್ಮ ಧರ್ಮ ಯಾವುದು ಎಂಬುದನ್ನೂ ಹೇಳಿ’ ಎಂದು ಕೇಳಲಾಗುವುದು. ಅದಕ್ಕಾಗಿಯೇ ಒಂದು ಕಾಲಂ ಇದೆ. ಇದನ್ನು ಕೂಡಾ ನಾವು ಎಚ್ಚರದಿಂದ ಗಮನಿಸಬೇಕಾಗಿದೆ. ಯಾಕೆಂದರೆ ಹಿಂದುಳಿದ ಜಾತಿಗಳಿಂದ ಬೇರೆಯ ಧರ್ಮಗಳಿಗೆ ಮತಾಂತರ ಹೊಂದಿದ ಅನೇಕ ಕುಟುಂಬಗಳು ಇಂದಿಗೂ ಹಿಂದುಳಿದ ಸ್ಥಿತಿಯಲ್ಲಿಯೇ ಇರಬಹುದು. ಅಂಥವರು ಕೂಡಾ ತಮ್ಮ ಮೂಲ ಧರ್ಮವನ್ನು ಅಂದರೆ ಜಾತಿಯನ್ನು ದಾಖಲಿಸಬೇಕಾದ ಅಗತ್ಯವಿದೆ. ಇದಕ್ಕೂ ಈ ಜನಗಣತಿಯಲ್ಲಿ ಅವಕಾಶವಿದೆ.
ಹಿಂದುಳಿದ ವರ್ಗಗಳ ಆಯೋಗ ರಾಜ್ಯದಲ್ಲಿ 1357 ಜಾತಿಗಳನ್ನು ಪಟ್ಟಿಮಾಡಿದೆ. ಈ ಪಟ್ಟಿಯನ್ನೂ ಸೇರದ ಜಾತಿಗಳು ನಮ್ಮಲ್ಲಿ ಇರುವ ಸಾಧ್ಯತೆ ಇದೆ. ಈ ಜಾತಿಗಳು, ಉಪಜಾತಿಗಳು ಅಥವಾ ಬೇರೆ ಹೆಸರಿನಿಂದ ಕರೆಯಲಾಗುತ್ತಿರುವ ಜಾತಿಗಳು ತಮ್ಮ ಜಾತಿಯನ್ನು ದಾಖಲಿಸಬೇಕು. ಇದಕ್ಕೂ ಈ ಜನಗಣತಿಯಲ್ಲಿ ಜಾಗವಿದೆ.
ಈ ಜನಗಣತಿಯನ್ನು ವಿರೋಧಿಸುವವರು ಹೇಳುವ ಕೆಲವು ಮಾತುಗಳಿವೆ. ಮೇಲುನೋಟಕ್ಕೆ ಈ ಮಾತುಗಳು ದೊಡ್ಡ ಸಿದ್ಧಾಂತವನ್ನೇ ಪ್ರತಿಪಾದಿಸುವಂತೆ ಕಾಣಿಸುತ್ತವೆ. ‘ನಮ್ಮದು ಜಾತ್ಯತೀತ ದೇಶ. ಜಾತಿ ಜನಗಣತಿ ಎಂಬುದು ಸಮಾಜವನ್ನು ಒಡೆದು ಹಾಕುತ್ತದೆ’ ಎಂಬ ಮಾತು ವೀರಶೈವ ಮಹಾಸಭಾದ ನಾಯಕ ಭೀಮಣ್ಣ ಖಂಡ್ರೆ ಅವರದು. ‘ಜಾತಿ ಜನಗಣತಿಯಿಂದ ಸಾಮರಸ್ಯ ಹಾಳಾಗುತ್ತದೆ. ಸಾರ್ವಜನಿಕ ಹಣ ಪೋಲಾಗುತ್ತದೆ. ಈ ಹಣ ಮತ್ತು ಮಾನವ ಸಂಪನ್ನೂಲಗಳನ್ನು ಶಿಕ್ಷಣಕ್ಕೆ, ಅಭಿವೃದ್ಧಿಯ ಕಾರ್ಯಗಳಿಗೆ ಬಳಸಬೇಕು. ಅಲ್ಲದೆ ಈಗಾಗಲೇ ಸಮಾಜದಲ್ಲಿ ಸಾಕಷ್ಟು ಅಂತಜರ್ಾತೀಯ ವಿವಾಹಗಳು ನಡೆಯುತ್ತಿವೆ. ಹೀಗಾಗಿ ಯುವ ಪೀಳಿಗೆ ಇಂಥಾ ಜಾತಿಗಣತಿಯನ್ನು ಒಪ್ಪುವುದಿಲ್ಲ’ ಎಂದು ಹೇಳುವವರು ಒಕ್ಕಲಿಗರ ಸಂಘದ ನಾಯಕ ಅಪ್ಪಾಜಿಗೌಡರು. (ನೋಡಿ: ಗೌರಿಲಂಕೇಶ್ ಪತ್ರಿಕೆ, ಡಿಸೆಂಬರ್ 17, 2014). ಒಕ್ಕಲಿಗ ಮತ್ತು ವೀರಶೈವ ಜಾತಿಗಳು ಕನರ್ಾಟಕದಲ್ಲಿ ಪ್ರಧಾನ ಜಾತಿಗಳು ಮತ್ತು ಪ್ರಬಲ ರಾಜಕೀಯ ಶಕ್ತಿಗಳು. ಇನ್ನೊಂದು ಅಂಶವನ್ನೂ ಇಲ್ಲಿ ಗಮನಿಸಬೇಕಾಗಿದೆ: ಜಾತ್ಯತೀತ ತತ್ವವನ್ನು ಹೇಳುವ ಈ ನಾಯಕರು ಜಾತಿ ಸಂಘಟನೆಗೇ ತಮ್ಮನ್ನು ಬಿಗಿದುಕೊಂಡವರು ಎಂಬ ವ್ಯಂಗ್ಯವೂ ಇಲ್ಲಿದೆ. ಜಾತ್ಯತೀತ ತತ್ವದಲ್ಲಿ ಇವರಿಗೆ ನಿಜವಾಗಿಯೂ ನಂಬಿಕೆಯಿದ್ದರೆ ಇವರು ತಮ್ಮ ಜಾತಿ ಸಂಘಟನೆಗಳನ್ನು ವಿಸರ್ಜಿಸಬೇಕು ಇಲ್ಲವೇ, ಅಂಥ ಸಂಘಟನೆಗಳಿಂದ ಹೊರಬರಬೇಕು.
ಹಿರಿಯ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಅವರಂತೂ ಹತ್ತಾರು ವರ್ಷಗಳಿಂದ ಹೇಳುತ್ತ ಬಂದಿರುವ ಒಂದು ಘೋಷಣೆಯಿದೆ: ‘ಹಿಂದೂ ಎಂದರೆ ವೀರಶೈವ, ವೀರಶೈವ ಎಂದರೆ ಲಿಂಗಾಯಿತ, ಆದ್ದರಿಂದ ಲಿಂಗಾಯಿತ ಎಂದರೆ ಹಿಂದೂ.’ ಜನಗಣತಿಯ ಸಂದರ್ಭದಲ್ಲಿ ವೀರಶೈವರು ತಮ್ಮ ಧರ್ಮವನ್ನು ಹಿಂದೂ ಧರ್ಮ ಎಂದೇ ದಾಖಲಿಸಬೇಕು ಎಂಬುದು ಚಿದಾನಂದಮೂರ್ತಿಯವರ ಮನವಿ. ಹಿಂದೂ ಎಂದರೆ ಏನು ಎಂಬುದನ್ನು ಕನರ್ಾಟಕದಲ್ಲಿನ, ಅಷ್ಟೇಕೆ ಭಾರತದಲ್ಲಿನ ಮತದಾರರಿಗೆ ವಿವರಿಸಬೇಕಾದ ಅಗತ್ಯವಿಲ್ಲ. ಬಿಜೆಪಿ, ಆರ್ಎಸ್ಎಸ್, ಭಜರಂಗದಳ ಮತ್ತು ಸಂಘ ಪರಿವಾರದ ಎಲ್ಲ ಶಕ್ತಿಗಳೂ ಈ ‘ಹಿಂದೂ’ ಎಂಬ ಶಕ್ತಿ ಸಂಚಯದಿಂದಲೇ ಅಧಿಕಾರ ಸೂತ್ರವನ್ನು ಕೈಗೆತ್ತಿಕೊಂಡದ್ದು ಮತ್ತು ಬಾಬ್ರಿ ಮಸೀದಿಯನ್ನು ನಾಶಮಾಡಿದ್ದು. ಇದು ಕೇವಲ ಬಾಬ್ರಿ ಮಸೀದಿಯ ಪ್ರಶ್ನೆಯಲ್ಲ; ಜಾತ್ಯತೀತ ತತ್ವದ ಮೇಲೆ ನಿಂತಿದ್ದ ಒಂದು ರಾಷ್ಟ್ರದ ಸಾಮರಸ್ಯವನ್ನು ಹಾಳುಮಾಡಿದ್ದು ಈ ‘ಹಿಂದೂ’ ಶಕ್ತಿಯೇ ಎಂಬುದನ್ನು ಮರೆಯಬಾರದು. ಇದನ್ನು ಕೂಡಾ ಜನಗಣತಿಯ ಸಂದರ್ಭದಲ್ಲಿ ನೆನಪಿಗೆ ತಂದುಕೊಳ್ಳುವುದು ಒಳ್ಳೆಯದು. ‘ಹಿಂದೂ’ ಎಂದು ಧರ್ಮದ ಕಾಲಂನಲ್ಲಿ ಬರೆದರೆ ಎಂಥ ಅಪಾಯ ಮುಂದಿನ ದಿನಗಳಲ್ಲಿ ಎದುರಾಗಬಹುದು; ಯೋಚಿಸಿ ನೋಡಿ.
ಪ್ರಬಲ ಜಾತಿಗಳು, ಪ್ರಬಲ ಕೋಮುಗಳು, ಪ್ರಬಲ ಧರ್ಮಗಳು ಅಟ್ಟಹಾಸದಿಂದ ಮೆರೆಯಲು ಆರಂಭಿಸಿದರೆ ಸಣ್ಣಪುಟ್ಟ ಜಾತಿಗಳು, ಬುಡಕಟ್ಟುಗಳು ನಲುಗುತ್ತವೆ; ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತವೆ. ಎಲ್ಲರ ಸಮಾನತೆಯನ್ನು ಬಯಸುವ ನಮ್ಮ ಪ್ರಜಾಪ್ರಭುತ್ವ ಯಾರ ಆತ್ಮವಿಶ್ವಾಸವನ್ನೂ ನಾಶಮಾಡಲು ಬಯಸುವುದಿಲ್ಲ; ಆತ್ಮವಿಶ್ವಾಸವನ್ನು ಕಳೆಯುವ ಪ್ರಜಾಪ್ರಭುತ್ವಕ್ಕೆ ಅರ್ಥವಿಲ್ಲ.
ಜಾತ್ಯತೀತರು, ಮತಧರ್ಮ ನಿರಪೇಕ್ಷ ತತ್ವದಲ್ಲಿ ನಂಬಿಕೆ ಇಟ್ಟಿರುವವರು ಈ ಜನಗಣತಿಯ ಸಂದರ್ಭದಲ್ಲಿ ತಪ್ಪದೆ ಮಾಡಬೇಕಾದ ಕೆಲಸವೆಂದರೆ: ‘ನಮಗೆ ಯಾವ ಧರ್ಮದಲ್ಲಿಯೂ, ಜಾತಿಯಲ್ಲಿಯೂ ವಿಶ್ವಾಸವಿಲ್ಲ. ನಮ್ಮ ಸಂವಿಧಾನದಲ್ಲಿ ನಂಬಿಕೆ ಇಟ್ಟಿರುವವರು ನಾವು. ಸಂವಿಧಾನ ಪ್ರತಿಪಾದಿಸುವ ಜಾತ್ಯತೀತ ತತ್ವದಲ್ಲಿಯೇ ನಮಗೆ ವಿಶ್ವಾಸ. ಆದ್ದರಿಂದ ನಾವು ‘ಜಾತ್ಯತೀತರು’, ‘ಧರ್ಮಾತೀತರು’ ಎಂದು ದಾಖಲಿಸಬೇಕು. ಆದರೆ ಮೀಸಲಾತಿಯ ಪ್ರಯೋಜನದ ಹತ್ತಿರವೂ ಬಾರದಿರುವ ಅಸಂಖ್ಯ ಜಾತಿ, ಪಂಗಡಗಳು ತಮ್ಮ ಜಾತಿಗಳನ್ನು, ಪಂಗಡಗಳನ್ನು ದಾಖಲಿಸಬೇಕು. ಆ ಮೂಲಕ ಸಂವಿಧಾನ ನೀಡಿರುವ ಮೀಸಲಾತಿ ಸೌಲಭ್ಯವನ್ನು ಪಡೆದುಕೊಳ್ಳಬೇಕು. ಇದು ಅವರ ಹಕ್ಕು. ಆದರೆ ಧರ್ಮವನ್ನು (ಹಿಂದುಳಿದ ಜಾತಿ, ಪಂಗಡಗಳಿಗೆ ಮನುಷ್ಯಧರ್ಮವನ್ನು ಬಿಟ್ಟು ಬೇರೆ ಯಾವ ಧರ್ಮವಿದೆ?) ‘ಧರ್ಮಾತೀತರು’ ಎಂದೇ ಹೇಳಬೇಕು.
ಈ ಜನಗಣತಿಯ ಹಿಂದೆ ಒಂದು ಒಳ್ಳೆಯ ಉದ್ದೇಶವಿದೆ; ಸಾಮಾಜಿಕ ನ್ಯಾಯದ ಪರಿಕಲ್ಪನೆಯಿದೆ. ಇದು ಅರ್ಥವಾದರೆ ಸಣ್ಣಪುಟ್ಟ ಜಾತಿಗಳು, ಪ್ರಜಾಪ್ರಭುತ್ವದ ಲಾಭದಿಂದ ವಂಚಿತವಾಗಿರುವ ಸಮುದಾಯಗಳು ನೆಮ್ಮದಿಯಿಂದ ಉಸಿರಾಡಬಹುದು. ಅದಕ್ಕೆ ಅವಕಾಶ ಒದಗಿಸಿಕೊಡುವುದು ಎಲ್ಲ ಪ್ರಜಾಪ್ರಭುತ್ವ ಪ್ರೇಮಿಗಳ ಕರ್ತವ್ಯ.
 

‍ಲೇಖಕರು G

April 13, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

2 ಪ್ರತಿಕ್ರಿಯೆಗಳು

  1. C. N. Ramachandran

    ಪ್ರಿಯ ಜಿ. ಪಿ. ನಿಮ್ಮ ಲೇಖನ ಸಕಾಲಿಕವಾಗಿದೆ, ಗಂಭೀರವಾಗಿದೆ; ಮತ್ತು ಆ ಕಾರಣಕ್ಕಾಗಿಯೇ ’ಜಾತ್ಯಾತೀತ’ ಪಕ್ಷಗಳ, ಸಮುದಾಯಗಳ, ಮತ್ತು ವ್ಯಕ್ತಿಗಳ ಢೋಂಗಿತನವನ್ನು ಬಯಲು ಮಾಡುತ್ತದೆ. ನೀವು ಹೇಳುವ ವಿಚಾರಗಳೆಲ್ಲವೂ ಸ್ವೀಕಾರಾರ್ಹವಾಗಿವೆ. ಅಭಿನಂದನೆಗಳು.
    ಸಿ. ಎನ್. ರಾಮಚಂದ್ರನ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: