ನೋವು, ನಲಿವಿನ ಬಿಸಿಲು-ನೆರಳಿನಾಟ…

ದಿನ ದಿನದ ಸುಖ, ಸಂತೋಷ ನಾವು ಬಾಳನ್ನು ನೋಡುವ ದೃಷ್ಟಿಯಲ್ಲಿರತದೆ ಅಂತ ಬಲವಾಗಿ ನಂಬಿದವಳು ನಾನು. ಯಾವುದನ್ನೂ ಕಷ್ಟ ಇದು, ಆಗಲಾರದ್ದು ಇದು ಅನ್ನೋ ಮನೋಭಾವ ಸ್ಥಲ್ಪ ಕಡಿಮೆ. ಹೇಗಪ್ಪಾ ಈಗ ಅನ್ನೋ ಪ್ರಶ್ನೆ ನನ್ನಿಂದ ದೂರಾನೇ. ಹಾಡು ನನ್ನ ಹುಚ್ಚು.

ಎಂಥದೇ ಗೊಂದಲದ ಪರಿಸ್ಥಿತಿಯಲ್ಲೂ ಒಂಚೂರು ಹಾಡು ಗುನುಗಿದ್ರೆ ಮನಸು ಹಗುರ. Tension ಮಾಡ್ಕೋಳ್ಳದೇ energy save ಮಾಡ್ಕೋ ಅನ್ನುವಾಕೆ ನಾ. ಈ ಹಾಡಿನ ಹುಚ್ಚು ಅದಕ್ಕೆ ಇನ್ನಷ್ಟು ಗಟ್ಟಿತನ ಮೂಡಿಸುವಲ್ಲಿ ಹಿರಿದು ಪಾತ್ರ ವಹಿಸ್ತೋ ಏನೋ ಅನಕೋತಿನಿ ಹಲವು ಸಲ. ಒಟ್ಟಲ್ಲಿ ತಂಪು ಮನದಿಂದ ನಿವಾಂತವಾಗಿ ವಿಚಾರ ಮಾಡೋದು ಮುಖ್ಯ ತೊಂದರೆ ಎದುರಾದಾಗ. ಅಂದರೆ ದಾರಿ ಕಂಡೀತು.

ಇಲ್ಲೂ ಅಂದರೆ ಬಂಕಾಪುರದಲ್ಲೂ ಕೂಡ ಅದೇ policy ನಂದು. ಟೆನ್ಶನ್ ಬಿಟ್ಟು ಕೂಲಾಗಿ ವಿಚಾರ ಮಾಡಲೇಬೇಕಲ್ಲ. ಬೇರೆ ದಾರಿ ಏನಿದೆ? ಹೀಗಾಗಿ ಅಲ್ಲಿ ಬಂಕಾಪುರದಲ್ಲಿ ನಮ್ಮ ದಿನಗಳು ಹೇಗೆ ಓಡ್ತು ತಿಳೀಲೇ‌ ಇಲ್ಲ. ನೋವು ನಲಿವಿನ ಬಿಸಿಲು-ನೆರಳಿನಲಿ, ಒಮ್ಮೆ ನಗುತ್ತಾ, ಒಮ್ಮೆ ಕಣ್ಣು ತೇವವಾದ್ರೂ ಆಚೆ ತುಳುಕದಂತೆ ಎಚ್ಚರಿಕೆ ವಹಿಸುತ್ತಾ.
ನೋಡ ನೋಡುತ್ತಿದ್ದಂತೆ ಮೊನ್ನೆ ಮೊನ್ನೆ ಸ್ಕೂಲ್ ಸೇರಿದಂತಿದ್ದ ನನ್ನ ದೊಡ್ಡ ಮಗ ನಾಲ್ಕನೇ ಕ್ಲಾಸ್ ಮುಗಿಸಿ ಐದನೇ ಕ್ಲಾಸ್ ಗೆ ಬಂದಾಯ್ತು.

ಮಗಳು ಮೂರನೇ ಕ್ಲಾಸ್ ನಲ್ಲಿ. ಚಿಕ್ಕ ಮಗ ಶಿಶು ವಿಹಾರ ಅಂದರೆ ನರ್ಸರಿ. ಅಲ್ಲಿ ಸ್ಕೂಲ್ ಅಷ್ಟಕ್ಕಷ್ಟೇ. ಸ್ಕೂಲ್ ಮುಗಿದ ಒಂದು ಗಂಟೆಯ ನಂತರ ಶಿರಹಟ್ಟಿ ಮಾಸ್ತರು ಬಂದು ಒಂದೆರಡು ಗಂಟೆ ಟ್ಯೂಶನ್ ಹೇಳಿ ಹೋಗೋರು ಮೂರೂ ಮಕ್ಕಳಿಗೆ. ನಾಲ್ಕನೇ ಕ್ಲಾಸ್ ವರೆಗೂ ನಡೀತು. ಮುಂದೆ ಹೇಗೆ ಎಂಬ ಪ್ರಶ್ನೆ ಬಲು ಗಡಚಾಗಿ ಬಿಟ್ತು. ಈಗ ನನಗೆ ಒಂದು ಗಟ್ಟಿ ನಿರ್ಧಾರ ಮಾಡಲೇ ಬೇಕಾದ ಸಮಯ ಬಂತು.

ನನ್ನ ತೌರೂರಿನಲ್ಲಿಯ ಹೈಸ್ಕೂಲ್ ತುಂಬಾ ಚೆನ್ನಾಗಿತ್ತು. ಅಲ್ಲಿಯೇ ತಾಯಿ ಮನೆಯಲ್ಲೇ ಆತನನ್ನು ಬಿಟ್ಟು ಅಲ್ಲಿನ ಸ್ಕೂಲ್ ಗೆ ಸೇರಿಸೋದು ಅಂತ ನಿರ್ಧರಿಸಿದ್ರೂ ನನ್ನ ತಾಯಿ ಕರುಳಿಗೆ ಇದೊಂದು ದೊಡ್ಡ ಸವಾಲಾಗಿತ್ತು. ಎಷ್ಟೇ ಪ್ರಯತ್ನಿಸಿದರೂ, ನನ್ನ ನಂಬುಗೆ, ನನ್ನ ಮನೋಭಾವಗಳ ಮೊರೆ ಹೊಕ್ಕರೂ ಯಾವೂ ನನ್ನ ಕರುಳ ಸಂಕಟಕ್ಕೆ ಉತ್ತರ ಕೊಡಲಿಲ್ಲ.

ಬರೀ 9 ವರ್ಷದ ಮಗುನ ಅಷ್ಟು ದೂರದ ತೌರಿನಲ್ಲಿ ಬಿಟ್ಟು ಬಂದೆ, ನನ್ನ ತಂದೆ ತಾಯಿ ಹತ್ರ. ಆ ದಿನಗಳನ್ನು ನೆನೆಯುವುದು ತುಂಬಾ ಕಷ್ಟ ಎನಿಸ್ತಿದೆ ನಂಗೆ. ಆಗಲೇ ನಿರ್ಧರಿಸಿ ಬಿಟ್ಟೆ. ಇನ್ನು ಈ ಇಬ್ಬರು ಮಕ್ಕಳನ್ನು ಎಲ್ಲಿಯೂ ಬೇರೆಡೆ ಕಳಿಸೋದಿಲ್ಲ ಅಂತ.

ಮಗನನ್ನು ಅಲ್ಲಿ ಬಿಟ್ಟು ಬಂದ ಮೇಲೆ ನನಗೆ ಸುಧಾರಿಸಿ ಕೊಳ್ಳಲು ಸಮಯ ಬೇಕಾಯ್ತು. ಈ ಚಿಕ್ಕ ಮಕ್ಕಳ ಮುಂದೆ ಕಣ್ಣೀರು ಹಾಕೋ ಹಾಗಿಲ್ಲ. ಅವರು ಸ್ಕೂಲ್ ಗೆ ಹೋದ ಸಮಯದಲ್ಲಿ ಮಾತ್ರ ಅದೆಲ್ಲ. ಆದರೂ ನನ್ನ ಮಗಳ ಪ್ರಶ್ನೆಗೆ ಉತ್ತರ ಕೊಡೋದು ಬಲು ಕಷ್ಟದ ಕೆಲಸ ಆಗಿತ್ತು ನನಗೆ ನಾನು‌.

ಯಾವಾಗಲೂ ಹಾಡು ಗುನುಗೋದು ಗೊತ್ತು ಆಕೆಗೆ. ಹೀಗ್ಯಾಕೆ ಹೀಗೆ? ಅದ್ಕೇ ‘ಅಮ್ಮಾ ಹಾಡ್ಯಾಕೆ ಹಾಡ್ತಾ ಇಲ್ಲ ನೀನು’ ಇದು ಅವಳ ಪ್ರಶ್ನೆ. ‘ಇಲ್ಲ ಪುಟ್ಟಾ ನಂಗೆ ಗಂಟಲು ನೋವು ಅಂತ ಹೇಳಿ ಸುಮ್ಮನಾಗಿಸಿದರೂ ಅವಳು ನನ್ನ ಮುಖ ನೋಡುತ್ತಲೇ ನನ್ನ ಹಿಂದೆ ಮುಂದೆ ಸುಳಿದಾಡೋಳು. ಪ್ರತೀ ಆರು ವಾರಕ್ಕೊಮ್ಮೆ ಈ ಎರಡೂ ಮಕ್ಕಳನ್ನು ಕರೆದುಕೊಂಡು ಅಷ್ಟು ದೂರ ಹೋಗಿ ಬರುತ್ತಿದ್ದೆ. ಶುಕ್ರವಾರ ರಾತ್ರಿ ವಸತಿ ಹುಬ್ಬಳ್ಳಿಯಲ್ಲಿ. ಶನಿವಾರ ಬೆಳಗ್ಗೆ 5.30ಕ್ಕೆ ಬೆಂಗಳೂರಿನಿಂದ ನನ್ನೂರಿಗೆ ಹೋಗುವ ಬಸ್ಸು ಹುಬ್ಬಳ್ಳಿಗೆ ಬರ್ತಿತ್ತು.

ಅಲ್ಲಿ ಅದನ್ನು ಹಿಡಿದು ನನ್ನೂರಿಗೆ ಹೋಗ್ತಿದ್ದೆ. ಅದು 10 ಗಂಟೆಗೆ ಹೋಗ್ತಿತ್ತು. ಆದಷ್ಟು ಬೇಗ ಹೋಗುವ ಹುಚ್ಚು ಹಂಬಲ. ಅಲ್ಲಿ ಅವನ ಜೊತೆ 2-3ದಿನ ಇದ್ದು ಬರ್ತಾ ಇದ್ವಿ. ನನ್ನ ಗಟ್ಟಿಯಾಗಿ ಹಿಡಿದುಕೊಂಡು ಮಲಗೋ ಅವನ್ನ ನೋಡಿ ನನಗೆ ಸಂಕಟ, ಕಣ್ತುಂಬ ಗಂಗಾ ಭಾಗೀರಥಿ. ಆ ಮಗುಗೂ ತುಂಬ ಕಷ್ಟವಾಗ್ತಿತ್ತು ನಮ್ಮೆಲ್ಲರನ್ನೂ ಬಿಟ್ಟಿರೋದು ತ್ರಾಸದಾಯಕ ಆಗಿತ್ತು ಅಜ್ಜ ಅಜ್ಜಿ ಯರ ಪ್ರೀತಿಯ ನೆರಳಿನಲ್ಲಿ ಇದ್ರೂ. ನಾ ಹೊರಡೋವಾಗ ಆತ ಮನೇಲಿ ಇರ್ತಾನೇ ಇರಲಿಲ್ಲ. ತನ್ನ ಗೆಳೆಯರ ಜೊತೆ ಹೋಗಿ ಬಿಡ್ತಿದ್ದ ಆತ.

ಈ ನೋವಿನ ಎಳೆ ಇನ್ನೂ ನನ್ನ ಮನದ ಯಾವ ಮಾತೂ ಕೇಳದೇ, ಮಾಸಿ ಹೋಗದೇ ಹಾಗೇ ಉಳಿದಿದೆ. ಯಾವ‌ದಾದರೂ ದೊಡ್ಡ ಊರಲ್ಲಿದ್ದಿದ್ರೆ ಈ ಪ್ರಸಂಗ ಬರತಿರಲಿಲ್ಲ ಎಂಬುದನ್ನು ಮನದಿಂದ ಕಿತ್ತಲು ಆಗ್ತಾನೇ ಇಲ್ಲ ಇಂದಿಗೂ. ಅವನು ಪಿಯುಸಿಗೆ ಬರೋಷ್ಟ್ರಲ್ಲಿ ನಾವು ಧಾರವಾಡ ಹತ್ರಾನೇ ಇರೋ ಗರಗ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದ್ವಿ.

ಇನ್ನಿಬ್ಬರು ಮಕ್ಕಳನ್ನು ಮಾತ್ರ ಎಲ್ಲೂ ಕಳಿಸಲಿಲ್ಲ ನಾ. ಬಂಕಾಪುರದಿಂದ ಹಾನಗಲ್ಲ ತಾಲೂಕಿನ ತಿಳವಳ್ಳಿಗೆ ಟ್ರಾನ್ಸ್ಫರ್ ಆಯ್ತು. ಇನ್ನೂ ಅಧ್ವಾನ್ನ ಅದು. ಯಾವ ದೊಡ್ಡ ಊರೂ ಹತ್ರ ಇರ್ಲಿಲ್ಲ. ಆದರೆ ಮಕ್ಕಳ ಸ್ಕೂಲ್ ತುಂಬ ಚೆನ್ನಾಗಿತ್ತು. ಹೀಗಾಗಿ ಆ ಸಮಸ್ಯೆ ಇಲ್ಲಾಗಲಿಲ್ಲ. ಈ ನೋವಿನ ಅನುಭವ ಮರೀಲಾರೆ ನಾ. ಈಗ ಆತ ಅಮೆರಿಕಾದಲ್ಲಿ, ದೂರಾನೇ. ದೊಡ್ಡ ಊರುಗಳಲ್ಲಿ ಪಕ್ಕದ ಮನೆಯಲ್ಲಿ ಯಾರಿದ್ದಾರೆ ಎಂಬುದೂ ಗೊತ್ತಿರೋದಿಲ್ಲ ಕೆಲವೊಮ್ಮೆ.

ಏನೋ ಒಂದು ಅಹಂ ಅಥವಾ ಔದಾಸೀನ್ಯವೋ ಕಾಣೆ. ಆದರೆ ಈ ಪುಟ್ಟ ಪುಟ್ಟ ಗ್ರಾಮಗಳಲ್ಲಿ ಹಾಗಲ್ಲ. ನೀವೇ ಮಾತಾಡಬೇಕು ಅಂತ ಕಾಯೋದಿಲ್ಲ ಅವರು. ಎಲ್ಲರೂ ತಮ್ಮವರೇ ಅನ್ಕೊಂಡು ಸಲೀಸಾಗಿ ತಮ್ಮ ಒಳ, ಹೊರಗನ್ನು ಬಿಚ್ಚಿಡೋರು, ನಮಗೆ ಅವರಾರ ಪರಿಚಯವು ಅಷ್ಟಾಗಿ ಇರದಿದ್ರೂ. ಡಾಕ್ಟರ್, ಡಾಕ್ಟರ ಪತ್ನಿ ಎಂಬ ಭಾವನೆಯೋ ಏನೋ. ಅಲ್ಲಿ ಮುಸ್ಲಿಂ ಜನವಸತಿಯೂ ಬಹಳ. ಅದರಿಂದ ಯಾವ ವ್ಯತ್ಯಾಸವೂ ಕಾಣಲಿಲ್ಲ ನನಗೆ.

ಎಲ್ಲರೂ ಒಂದೇ ಎಂಬ ಹಾಗೆ ಹೊಂದಿಕೊಂಡು ಹೋಗುವ ಆ ರೀತಿ ನೋಡಿ ಬಹುಶಃ ಇದು ಹಳ್ಳಿಗಳ ವಿಶಿಷ್ಟತೆ ಅನಕೋತಿದ್ದೆ ನಾನು. ಅವರ ಈ ವಿಶಿಷ್ಟ ಗುಣವೇ ಅವರ ಜೀವನದ ಸೂಕ್ಷ್ಮಾತಿ ಸೂಕ್ಷ್ಮ ವಿಚಾರಗಳನ್ನೂ ಅರಿಯುವ ರಹದಾರಿ ಅಂದರೆ ಏನೂ ತಪ್ಪಿಲ್ಲ. ಹೀಗಾಗಿ ಅಲ್ಲಿ ಬರುವ ಪ್ರತಿ ಪೇಷಂಟ್ ಗಳ ಕಥೆ ಒಂದೊಂದು ರೀತಿಯದು ಎಂಬ ಮಾತು ಗಟ್ಟಿ ಮನವರಿಕೆ ಆಗಿ ಬಿಟ್ಟಿತ್ತು. ಕೆಲವಂತೂ ಮನದ ಮೂಲೆಯಲ್ಲಿ ಒಂದು ಮರೆಯದ ನೋವಿನ ಗೆರೆ ಮೂಡಿಸುತ್ತಿದ್ದು ಅದನ್ನು ನೆನಪಿಸಿಕೊಂಡಾಗ ಈಗಲೂ ಕಣ್ಣಂಚು ತೇವವಾಗೋದು ನಿಕ್ಕೀನೇ.

ಒಂದೆರಡೇ ಘಟನೆಗಳ ಬಗ್ಗೆ ಹೇಳ್ತೀನಿ:
ನಾನು ಈಗ ಹೇಳ್ತೀರೋದು ಒಬ್ಬ ತರುಣಿಯ ಬಗ್ಗೆ. ಊರಲ್ಲಿಯ ಪ್ರತಿಷ್ಠಿತ ಕುಟುಂಬದ ಮಗ ತನ್ನ ಹೆಂಡತಿಯನ್ನು ನನ್ನ ಪತಿಯ ಹತ್ರ ತಪಾಸಿಸಲು ಕರಕೊಂಡು ಬರೋನು. ಅವಳಿಗೆ ಏನೋ ತಿಳಿಯದ ಸಮಸ್ಯೆ. ಅಂದರೆ ತನ್ನ ತೊಂದರೆ ಏನೆಂದು ಹೇಳಲೇ ಗೊತ್ತಾಗ್ತಿರಲಿಲ್ಲ ಆಕೆಗೆ. ನೋಡಲು ಚೆನ್ನಾಗಿಯೇ ಇದ್ಲು. ಆರೋಗ್ಯವಾಗೇ ಕಾಣ್ತಿದ್ಲು. ಆದರೆ ಆರೋಗ್ಯದ ಯಾವಾಗಲೂ ತಕರಾರು.

ಆ ದಿನ ಆಸ್ಪತ್ರೆಯಲ್ಲಿ ತೋರಿಸಿಕೊಂಡು ನಮ್ಮನೆಗೆ ಬಂದು ಆತ ‘ಬಾಬೀ ಒಂದರ್ಧಾ ತಾಸ ಇಲ್ಲಿರಲ್ರಿ ಈಕಿ .ನಾ ಒಂಚೂರ ಇಲ್ಲೇ ಹೋಗಿ ಬರತೀನ್ರಿ. ಸ್ವಲ್ಪ ಕೆಲಸ ಐತ್ರಿ. ‘ಅಂತ ನನ್ನಲ್ಲಿ ಬಿಟ್ಟು ಹೋದ ತನ್ನ ಹೆಂಡತಿಯನ್ನು. ನಾನು ಟೇಪರೆಕಾರ್ಡರ್ ನಲ್ಲಿ ಹಳೇ ಹಿಂದಿ ಮೂವಿಯ ಹಾಡು ಕೇಳ್ತಾ ಇದ್ದೆ. ಮಧ್ಯೆ ಮಧ್ಯೆ ಮಾಮೂಲಿನಂತೆ ಹಮ್ಮಿಂಗ್ ನೂ ನಡೆದಿತ್ತು. ಆಕೆ ಜೊತೆ ಮಾತಾಡುವಾಗ ಇದೆಲ್ಲ ಯಾಕೆ ಅಂತ ಅದನ್ನು ನಿಲ್ಲಿಸಲು ಹೋದಾಗ ‘ಬ್ಯಾಡ ಅಕ್ಕಾ, ಇರಲಿ. ನನ್ನ ಮನಸ್ಸಿಗೆ ಸಮಾಧಾನ ಅನಸ್ತತ್ರಿ’ ಅಂದ್ಲು. ಪಟ್ಟನೇ ತಿರುಗಿ ನೋಡಿದಾಗ ಆಕೆ ಕಣ್ಣು ತುಂಬಿ ಬಂದಿತ್ತು.

‘ನಿಮಗೂ ಹಾಡು ಸೇರತಾವೇನ್ರೀ’ ಅಂದೆ ನಾ. ‘ಹೂಂನ್ರೀ ಅಕ್ಕಾ. ಆದರ ನನ್ನ ಗಂಡನ ಮನ್ಯಾಗ ಇದೆಲ್ಲಾ ನಡ್ಯೂ ಹಾಂಗಿಲ್ರೀ. ಅದೇನ ಆ ಹಾಡ ಕೇಳ್ತೀ. ದೇವರ ಧ್ಯಾನಾ ಮಾಡು ಅಂತಾರ್ರೀ’ ಅಂದ್ಲು. ಆಕೆಯ ಮುಖ ದಿಟ್ಟಿಸಿ ನೋಡಿದೆ. ಆ ಮುದ್ದಾದ ಮೊಗದ ತುಂಬಾ ನೋವಿನ ಗೆರೆಗಳು, ಆ ಸುಂದರ ಬೊಗಸೆಗಂಗಳು ಯಾತನೆಯ ಗೂಡು. ಸುಮಾರು 22-23 ವರುಷದ ತರುಣಿ ಆಕೆ. ‘ನಿನ್ನ ತೌರುಮನೆ ಯಾವ ಊರು ಅಂದೆ. ಆಕೆ ರಾಣೆಬೆನ್ನೂರು ಅಂತ ಹೇಳಿ ‘ನಮ್ಮಲ್ಲಿ ಹಿಂಗೆಲ್ಲಾ ಇಲ್ರೀ ಅಕ್ಕಾ. ನೀವು ಸಿನೇಮಾಕ್ಕ ಹೋಕ್ಕೀರಿ?’ ಅಂದ್ಲು. ‘ಹೂಂ ಸಾಧ್ಯ ಆದಾಗ ಹುಬ್ಬಳ್ಳಿಗೆ ಹೋಗಿ ಬರ್ತೀವಿ’ ಅಂದೆ.

ಅವಳ ಮುಖದ ಮೇಲೆ ಮ್ಲಾನತೆಯ ಗಾಢ ಛಾಯೆ. ಹಣೆ ಮೆತ್ತಗೆ ಒತ್ತಿ ಕೊಂಡಳು. ‘ಯಾಕ ಏನಾಯ್ತು’ ಅಂದೆ. ‘ತಲೀ ಭಾಳ ನೋಯಾಕ್ಹತ್ತೇತ್ರೀ. ಹೂಂ ಅದರೀ ನಮ್ಮನ್ಯಾಗ ಅದೂ ಇಲ್ಲರೀ. ಸಿನೇಮಾ ನೋಡಿದಾವರು ಹಾದಿ ಬಿಡ್ತಾರಂತ್ರೀ ಹೌದರೀ ಅಕ್ಕಾ? ಹಗಲ ಹೊತ್ತಿನ್ಯಾಗ ಗಂಡನ ಜೋಡಿ ಮಾತಾಡಬಾರದಂತ್ರಿ ಅಕ್ಕಾ,” ಅಂದ್ಲು.

‘ಮತ್ತ ಈಗ ಬಂದೀರಲ್ಲಾ’ ಅಂದೆ. ‘ದವಾಖಾನೀಗ ಹೋಗಲಿಕ್ಕಷ್ಟs ಬಿಡ್ತಾರ್ರೀ’ ಅಂದ್ಲಾಕೆ ‘ನಿಮಗಿದೆಲ್ಲಾ ಗೊತ್ತೈತ್ರೀ ಅಕ್ಕಾ?’ ಕೇಳಿದ್ಲಾಕೆ ಚಿಕ್ಕ ಮಗುವಿನಂತೆ! ಏನು ಹೇಳಲಿ ನಾ ಆಕೆಗೆ? ಮನದಲ್ಲಿ ಸಹಜವಾಗಿ ತುಂಬಿ ಕೊಂಡ ನೂರು ಕನಸುಗಳು, ಹಕ್ಕಿಯಂತೆ ಹಾರಾಡುವ ಮನಸ್ಸು ವಯಸ್ಸು! ಅದನ್ನೆಲ್ಲ ಅದುಮಿಟ್ಟಾಗ ರೊಚ್ಚಿಗೆದ್ದ ಮನಸ್ಸಿನ ಪ್ರತಿಭಟನೆ ಈ‌ ಅನಾರೋಗ್ಯವೇ? ಅದ್ಕೇ ಯಾವಾಗಲೂ ಆರೋಗ್ಯದ ತಕರಾರೋ ಏನೋ! ಹೌದು ಅನಿಸಿ ಆಕೆಯ ಸಮಸ್ಯೆ ನಿಚ್ಚಳವಾಗಿ ಕಣ್ತೆರೆದು ನಿಂತು ಎದುರಿಗೆ. ಹೆದರಿಸಿತು ನನ್ನ.

ನನ್ನ ಪತಿಗೂ ಹೇಳಿದೆ ಸೂಕ್ಷ್ಮವಾಗಿ. ಆದರೂ ಯಾಕೋ ಎದೆಯಲ್ಲಿ ಕಳಕ್ ಅಂದ ಹಾಗಾಯ್ತು. ಮುದುರೀತಾ ಆಕೆಯ ಬಾಳು ಎನಿಸಿ ಅವ್ಯಕ್ತ ಸಂಕಟ! ಆ ಮುಗ್ಧ ಎಳೆ ತರುಣಿ ಆಗಾಗ ಕಣ್ಣಮುಂದೆ ಸುಳಿದು ವೇದನೆ ಉಂಟು ಮಾಡ್ತಾಳೆ. ಅದೆಷ್ಟು ಸರಳವಾಗಿ ಆಕೆ ನನ್ನ ಮುಂದೆ ಆ ಅರ್ಧ ಗಂಟೆಯಲ್ಲಿ ಎಲ್ಲಾ ಹೇಳಿಕೊಂಡಳಲ್ಲಾ, ನಾನು ಹೇಳದಿರೋದು ಇನ್ನೂ ಉಂಟು ಅಂತ ಅಚ್ಚರಿ ನನಗೆ ಈಗಲೂ!

ಈಗ ಹೇಳ್ತೀರೋ ಘಟನೆಯಂತೂ ನಾ ನನ್ನ ಜೀವನಪರ್ಯಂತ ಮರೆಯಲು ಸಾಧ್ಯವೇ ಇಲ್ಲ. ಆ ದಿನ ಬೆಳಗ್ಗೆ ಸುಮಾರು ಏಳು ಗಂಟೆ, ಕಾಲಿಂಗ್ ಬೆಲ್ ಬಿಟ್ಟೂ ಬಿಡದೆ ಒತ್ತಿದಾರೆ ಯಾರೋ. ಅಡಿಗೆ ಮನೆಯಿಂದ ಬರಲು ಒಂದೆರಡು ನಿಮಿಷವಾದ್ರೂ ಬೇಕಲ್ಲ. ನನ್ನ ಪತಿ ಬಾಥ್ ರೂಂ ನಲ್ಲಿ ಹಲ್ಲುಜ್ತಿದ್ರು. ಅವರೂ ಗಡಬಡಿಸಿ ಹೊರಗೆ ಬರೋಷ್ಟ್ರಲ್ಲಿ ಬಾಗಿಲ ಮುಂದೆ ಐದಾರು ಜನ. ಕಣ್ಣೀರು ಸುರಿಸುತ್ತಿದ್ದ ತಾಯಿ- ಆಕೆಯ ಕೈಯಲ್ಲಿ ದುಪ್ಪಟಿಯಲ್ಲಿ ಸುತ್ತಿದಂತಿದ್ದ ಸುಮಾರು ಒಂದು ವರ್ಷದ ಮಗು.

‘ಏನಾಯ್ತು’ ಕೇಳಿದ್ರು ನನ್ನ ಗಂಡ.’ ಕೂಸಿಗೆ ಎರಡು ಮೂರು ದಿನದಿಂದ ಜ್ವರಾ, ವಾಂತಿ ಇತ್ರಿ. ಈ ಹೊತ್ತ ಯಾಕೋ ಕಣ್ಣs ಬಿಡವಲ್ಲತ್ರೀ ಯಪ್ಪಾ’ ಹೇಳಿದ್ಲು ಒಬ್ಬಾಕೆ. ‘ಇಷ್ಟ ದಿನಾ ಏನ ಮಾಡ್ತಿದ್ರಿ? ಲಗೂನ ಆಸ್ಪತ್ರೆಗೆ ಕರಕೊಂಡ ಯಾಕ ಬರಲಿಲ್ಲ?’ ಅಂತ ಜಬರಿಸಿ, ತಾಯಿ ತೊಡೆಯ ಮೇಲಿದ್ದ ಆ ಕೂಸಿನ್ನ ತಪಾಸಿಸಿ ನೋಡ್ತಿದ್ದ ಇವರ ಮುಖದಲ್ಲಿ ಯಾಕೋ ಒಂದು ನಮೂನೆ ಅರ್ಥವಾಗದ ಬದಲಾವಣೆ! ಅಲ್ಲೇ ಇದ್ದ ನನಗ್ಯಾಕೋ ಗಾಬರಿ. ಒಳಬಾಗಿಲಲ್ಲಿದ್ದ ನಾ ಆ ಚೌಕಟ್ಟನ್ನು ಗಟ್ಟಿಯಾಗಿ ಹಿಡಕೊಂಡೆ.’ ರಾಶಿ ನಡದಿತ್ರಿ ಯಪ್ಪಾ. ಅದಕ ಬರಾಕಾಗಲಿಲ್ರಿ. ಈಗ ಹೆಂಗೈತಿ? ಆರಾಮ ಆಕ್ಕೇತಲಾ ‘ಅಂತ ಕೇಳಿದ ಒಬ್ಬ ರುಮಾಲು ಸುತ್ತಿದ ಮನುಷ್ಯ.’ ಹೋದ ಮ್ಯಾಲs ತಗೊಂಡ ಬಂದೀರಿ….’ ಇನ್ನೂ ಮಾತು ಇವರ ಬಾಯಲ್ಲೇ ಇತ್ತು, ಆ ಕೂಸಿನ (ಹೆಣವನ್ನು) ಎತ್ತಿ ಅವಚಿಕೊಂಡ ಆ ತಾಯಿ ಚೀರುತ್ತಾ ಧಡಾರನೇ ಎಲ್ಲಾರನೂ ದೂಕಿ, ಬಾಗಿಲು ದಾಟಿ ಧಡಧಡ ಮುಂದಿನ ಮೆಟ್ಟಿಲಿಳಿದು ಇದಿರಿಗಿದ್ದ ಬಾವಿಯ ಕಡೆಗೆ ಓಡಿದ್ಲು! ಅನಿರೀಕ್ಷಿತ ಘಟನೆ! ಅಷ್ಟ್ರಲ್ಲಿ ಆ ಕಡೆಯಿಂದ ಬರುತ್ತಿದ್ದ ಹೆಲ್ತವರ್ಕರ ಒಬ್ಬನಿಗೆ “ಆಕೀನ್ನ ಹಿಡಿ” ಅಂತ ಕೂಗಿ ಹೇಳಿದ್ರು ಸುರೇಶ.

ಆತ ಓಡಿ ಹೋಗಿ ಅವಳನ್ನು ಹಿಡಿದ್ರೂ ಬಿಡಿಸಿಕೊಂಡು ಓಡಿದ್ಲು. ಮೂರ್ನಾಲ್ಕು ಜನ ಕೂಡಿ ಹೇಗೋ ಆಕಿನ್ನ ಕರಕೊಂಡು ಹೋಗಿ ಆಸ್ಪತ್ರೆಯಲ್ಲಿ ಕೂಡಿಸಿದ್ರು. ಆ ಮೇಲೆ ತಮ್ಮೂರಿಗೆ ಹೋದ್ರು ಅನಕೋತೀನಿ. ನಾ ಗರ ಬಡೆದ ಹಾಗೆ ನಿಂತಲ್ಲೇ ನಿಂತು ಬಿಟ್ಟಿದ್ದೆ. ಆ ತಾಯಿ ಸಂಕಟ ಯಾತನೆ ಇಂದಿಗೂ ನೆನಪಾದ್ರೆ ನನ್ನ ಕರುಳು ಕಿವುಚಿದಂತಾಗ್ತದೆ. ಈ ಥರದ ನೋವಿನ ಘಟನೆಗಳನ್ನು ಮರೆಸಿ ನಗು ಉಕ್ಕಿಸುವ ಸಂಗತಿಗಳಿಗೇನೂ ಬರ ಇರಲಿಲ್ಲ ಅಲ್ಲಿ.

ಅಲ್ಲಿ ಬರುವ ಪೇಷಂಟ್ ಗಳ, ಜನರ ಯಾವುದೇ ಗೊಂದಲ, ಅಳುಕು ಇಲ್ಲದ ನೇರ ನಡೆ ನುಡಿ ನನಗೆ ನಿಜಕ್ಕೂ ಒಂಥರಾ ಮುದ ನೀಡ್ತಿತ್ತು, ಕೆಲವೊಮ್ಮೆ ಇರಿಸು ಮುರಿಸೂ ಆಗ್ತಿತ್ತು ಅನ್ನೋದನ್ನ ಅಲ್ಲಗಳೆಯುವಂತಿಲ್ಲ. ಒಮ್ಮೆ ನನ್ನ ಪತಿ ಯಾವುದೋ divisional ಮೀಟಿಂಗ್ ಗೆ ಹೋಗಿದ್ರು. ಅವರ ದವಾಖಾನೆಯ ಬ್ಯಾಗ್ ತಂದು ಸೋಮಣ್ಣ ಅಲ್ಲೇ ವ್ಹೆರಾಂಡಾದಲ್ಲಿ ಚೇರ್ ಮೇಲೆ ಇಟ್ಟು ಹೋಗಿದ್ದ. ಸಂಧ್ಯಾ ಆ ದಿನ ಬೇಗ ಅಂದರೆ ಐದು ಗಂಟೆಗೆ ಬಂದಿದ್ರು.

ಮಾತಾಡ್ತಾ ಕೂತಿದ್ವಿ. ಒಬ್ಬ ಹೆಣ್ಮಗಳು ಗಡಾಬಡಾ ಬಂದ್ಲು. ಸುಮಾರು ಐವತ್ತು ವರ್ಷ ಇರಬಹುದು ಆಕೆಗೆ. ‘ಯವ್ವಾ, ಅಪ್ಪಾರ ಇಲ್ಲೇನ? ದವಾಖಾನಿ ಹಾಸಿ ಹೊಚಗೊಂಡ ಮಲಗಿದ್ಹಾಂಗ ಕಾಣಾಕ್ಹತ್ತೆತಿ ಯವ್ವಾ’ ಅಂದ್ಲು. “ಅವರಿಲ್ಲವಾ. ಮೀಟಿಂಗ್ ಗೆ ಹೋಗ್ಯಾರ. ಬರೂದು ರಾತ್ರೀನವಾ” ಅಂದೆ. ‘ಅಯ್ಯ ಸುಳ್ಳ ಸುಳ್ಳ ಹೇಳ್ತೀಯೇನಬೇ! ಇಲ್ಲೇ ಐತಿ ಅಪ್ಪಾರ ಡಬ್ಬಿ’ ಅಂದ್ಲಾಕೆ. ‘ಇಲ್ಲವಾ, ಖರೇನ. ಅದನ ಯಾತಕ ಒಯ್ತಾರವಾ ಮೀಟಿಂಗ್ ಗೆ. ಖರೇ ಇಲ್ಲವಾ ಅವರು’ ಅಂದ್ರೆ ಕೇಳಲಿಕ್ಕೆ ತಯಾರೇ ಇಲ್ಲ ಅವಳು! “ಗೊತ್ತೈತಿ ಬಿಡ ಯವ್ವಾ ಆಶಾಡ್ತಿ ಏನಬೇ ಯವ್ವಾ?” ಅಂತ ನಕ್ಕಳು.

ನನಗ ಈ ಶಬ್ದ ‘ಆಶಾಡ್ತಿ’ ಹೊಸದು. ಏನೂಂತ ಗೊತ್ತಿಲ್ಲ. ಸ್ವಲ್ಪ ತಲೆ ಓಡಿಸ್ದೆ-ಹಂಗಂದ ನಕ್ಕಾಳ ಆಕೀ. ಅಂದ್ರೆ ಬಹುಶಃ ‘ಹಾಸ್ಯ ಮಾಡ್ತಿ’ ಇದರ‌ ಅಪಭ್ರಂಶ, ಈ ಮಂದಿ ಬಾಯಾಗ ‘ಆಶಾಡ್ತಿ’ ಆಗಿದೆ ಅನ್ಕೊಂಡೆ. ಇಲ್ಲವಾ ಅಂದೆ ನಗು ತಡೀದೇ ನಕ್ಕೋತ. ‘ನೋಡ, ನಗಾಕುಂತಿ! ಮತ್ತ ನಾ ಹೇಳಿದ್ದು ಖರೆ ಹಂಗಾರ. ಎಲ್ಲಿ ಮುಚ್ಚಿಟ್ಟಿಬೇ ಅಪ್ಪಾರನ?’ ಸಂಧ್ಯಾ (ICDS MO ರ ಪತ್ನಿ) ಗೆ ಇದರ ತಲೆಬುಡ ತಿಳಿದೇ ನನ್ನ ಆಕೀನ್ನ ನೋಡಕೋತ ಸುಮ್ಮನೆ ಕೂತಿದ್ರು. ಅವರು ಅಚ್ಚ ಮರಾಠಿ. ಕನ್ನಡದ ಗಂಧ-ಗಾಳೀನೂ ಗೊತ್ತಿಲ್ಲ ಅವರಿಗೆ!

ಆಕೆ, “ಅಪ್ಪಾ ರನ್ನು” ಹುಡುಕ್ತಿದ್ದ ಆ ಹಳ್ಳಿ ಹೆಣ್ಮಗಳ ಹುಡುಕಾಟದ ಆಟ ನೋಡಿ ಮಾತು ಕೇಳಿ ಮತ್ತಷ್ಟು ನಗು ನಂಗೆ. ನನ್ನ ಅಲ್ಲೇ ಕೂಡಿಸಿ ಮನೆ ಎಲ್ಲಾ ಒಂದು ಸುತ್ತು ಹುಡುಕಿ ಬಂದ್ಲು. ‘ಆತ ಬಿಡ ಯವ್ವಾ. ಆಸ್ಪತ್ರಿ ಒಳಗ ಕೂತೀರತೀನಿ. ಅಪ್ಪಾರ ಬಂದ ಮ್ಯಾಕ ಗಡಾನ ಕಳಸಬೇ’ ಅಂತ ಹೇಳಿ ಹೋದ್ಲು. ದೊಡ್ಡೂರಲ್ಲಿ ಇಷ್ಟು ಸಹಜವಾಗಿ ಒಳ ಹೊಕ್ಕು ನೋಡಲಾದೀತಾ? ನಾನೂ ಅವರೊಳಗೆ ಒಬ್ಬಳಾದೆನೋ ಏನೋ ಅನ್ಕೊಂಡೆ. ಪಕ್ಕದ ಮನೆಯಲ್ಲಿದ್ದ ಸಿಸ್ಟರ್ ನ ಕರೆದು ಸುದ್ದಿ ಹೇಳಿದೆ. ಅವರು ‘ನಾ ಹೋಗಿ ಕೇಳಿ ಲೇಡಿ ಡಾಕ್ಟರ್ ಗೆ ಹೇಳ್ತೀನಿ ಬಿಡ್ರಿ ವೈನಿ’ ಅಂತ ಹೋದ್ರು.

ಮಂಗಳವಾರ ಅಲ್ಲಿ ವಾರದ ಸಂತೆ ದಿನ. ಮಾಸಣಕಟ್ಟೆ ಪಕ್ಕದ ಹಳ್ಳಿ. ಅಲ್ಲಿನ ಒಬ್ಬ ಅಜ್ಜಿ ವಾರಕ್ಕೊಮ್ಮೆ ತಾಜಾ ಬೆಣ್ಣೆ ತಂದು ಕೊಡ್ತಿದ್ಲು. ಎರಡು ಸೇರು ತಗೋತಿದ್ದೆ. ಅವರು 400gmsನ ಒಂದೊಂದು ಉಂಡೆ ಮಾಡಿರತಿದ್ರು. ಅದು ಒಂದ ಸೇರು. ಆ ವಾರ ತುಪ್ಪ ಇನ್ನೂ ಬಹಳ ಇತ್ತು. ಹಳತಾದ ತುಪ್ಪ ಯಾಕೆ ಅಂತ ಬೇಡ ಅಂದಿದ್ದು. ಆದರೆ ಆಕೆ ‘ಹಂಗನಬ್ಯಾಡ ಯವ್ವಾ.. ಒಂದ ಸೇರರs ತಗೋ. ಮಗಳs ನೀ ಬೋಣಗೀ ವ್ಯಾಪಾರ ಮಾಡ್ದಿ ಅಂದ್ರ ನನ ಬುಟ್ಟಿ ಗಡಾನ ಖಾಲಿ ಆಗ್ತೇತಿ. ಅದಕ ಯವ್ವಾ ಒಂದ ಸಣ್ಣ ಉಂಡೀನಾರ ತಗೋ. (ಅಂದ್ರೆ ಅರ್ಧ ಸೇರು – 200 gms) ಅಂದ್ಲು.

‘ಶಾಣ್ಯಾಕಿ ನೋಡ ಅಮ್ಮಾ ನೀ’ ಅಂದೆ ನಾ ನಗುತ್ತ. ‘ಸುಳ್ಳ ಅಲ್ಲವಾ ನಾ ಹೇಳೋದು. ನಿಸ್ಸೀಮಪ್ಪನ ಆಣಿ ಯವ್ವಾ’ ಅಂದ್ಲು ಆಕೆ. (ನಿಸ್ಸೀಮಪ್ಪ ಅಲ್ಲೇ ಬೆಳಗಾಲಪೇಟೆ, ಬಂಕಾಪುರದಿಂದ ಸುಮಾರು 20 ಕಿ ಮೀ ದೂರ ಇರುವ ಒಂದು ಪುಟ್ಟ ಹಳ್ಳಿಯಲ್ಲಿರುವ ಈಶ್ವರ. ಸುಂದರ ದೇವಾಲಯ ಪ್ರಶಾಂತ ವಾತಾವರಣದಲ್ಲಿ. ಆತ ಸುತ್ತಮುತ್ತಲಿನ ಹಳ್ಳಿಗಳ ಆರಾಧ್ಯ ದೈವ) ಎಷ್ಟು ಸರಳ ಈ ಜನ ಅನ್ಕೊಂಡೆ.


ಇಂಥ ನೂರಾರು ಘಟನೆಗಳು! ಪಟ್ಟಣ ಜನಗಳ ಮನೆಯಲ್ಲಿನ ಸಂಬಂಧಗಳೇ ಲೆಕ್ಕಾಚಾರದ ಮೇಲೆ ನಡೆಯುವಾಗ ಅಲ್ಲಿನ ಜನರ ಈ ಆಪ್ತತೆ ತುಂಬಾ ಆಪ್ಯಾಯಮಾನ ಎನಿಸುತ್ತಿತ್ತು ನನಗೆ. ಈಗ ಅಲ್ಲೂ ಬದಲಾವಣೆಯ ಗಾಳಿ ಬೀಸಿದೆ. ಆದರೆ ನಾವಿದ್ದಾಗ ಅಲ್ಲಿ ಬದಲಾವಣೆ ದಾಂಗುಡಿ ಇಟ್ಟಿರಲಿಲ್ಲ. ಸಮಾಜ, ಅದು ಹಳ್ಳಿನೇ ಇರಲಿ, ಪಟ್ಟಣವೇ ಇರಲಿ, ಜನ, ವಾತಾವರಣ ಹಾಗೂ ಹೀಗೂ ಇರೋದೇ.

ನಮಗ್ಯಾವುದು ಬೇಕೋ ಅದನ್ನು ತಗೊಂಡು ಇನ್ನುಳಿದದ್ದನ್ನು ಅಲ್ಲಿಯೇ ಅದರ ಜಾಗದಲ್ಲಿಯೇ ಬಿಟ್ಟು ಹೊರಡುವ ಮನೋಭಾವವೇ ಗಟ್ಟಿತನದ ಬುನಾದಿ ಅನಕೋತೀನಿ. ಇಂಥ ಆಪ್ಯಾಯಮಾನಕರ ಪರಿಸರ, ಘಟನೆಗಳೇ ಮಗನನ್ನು ದೂರದ ನನ್ನ ತೌರಿನಲ್ಲಿ ಬಿಟ್ಟು ಬಂದ ನೋವನ್ನು ಮರೆಯಲು ಸ್ವಲ್ಪ ಮಟ್ಟಿಗೆ ಸಹಾಯಕವಾಯ್ತೋ ಏನೋ!


ಆ ಹಳ್ಳಿ ಜನರ ಸರಳತೆ, ಅಸಹಾಯಕ ಅಜ್ಞಾನತೆಯ ಬಗ್ಗೆ ಒಂದು ಮಹತ್ವದ, ಎಲ್ಲರೂ ಓದಿ ತಿಳಿಯಲೇಬೇಕಾದ ಒಂದು ಸಂಗತಿ ಹೇಳಿ ಈ ಕಂತನ್ನು ಮುಗಿಸ್ತೀನಿ.
ಆ ಜನರ ಸರಳತೆ, ಆಪ್ತತೆ ಯಾವಾಗಲೂ ಆಪ್ಯಾಯಮಾನವೇ. ಎರಡು ಮಾತಿಲ್ಲ. ಆದರೆ ಅಷ್ಟೇ ಅಪಾಯಕಾರಿ ಆ ಜನರ ಅಜ್ಞಾನತೆ, ನಿರ್ಲಕ್ಷ್ಯತೆ ಅವರ ವಿಷಯಕ್ಕೆ. ಅದೂ ಅವರ ಅಸಹಾಯಕ ಪರಿಸ್ಥಿತಿಗೆ ಕನ್ನಡಿ ಹಿಡಿದಂತೆ ಅಂದರೆ ಅತಿಶಯೋಕ್ತಿ ಅಲ್ಲ. ಈ ಭಯಾನಕ ಘಟನೆ ನನ್ನನ್ನು ಇದಕ್ಕೆ ಯಾರು ಹೊಣೆ ಎಂಬ ಗೊಂದಲದಲ್ಲಿ ಕೆಡವಿದ್ದಂತೂ ನಿಜ.

ಅಲ್ಲಿ ಬಂಕಾಪುರದಲ್ಲಿ‌ ನಾರುಹುಣ್ಣಿನ ಪೇಷಂಟ್ಗಳು ಬಹಳ. ನಾನು ಮೊದಲೇ ಹೇಳಿದಂತೆ ಅಲ್ಲಿ ನೀರಿನ ತಾಪತ್ರಯವೂ ಬಹಳ. ನಲ್ಲಿ ನೀರಿನ ವ್ಯವಸ್ಥೆಯಂತೂ ಅಸ್ತವ್ಯಸ್ತ. ಹೀಗಾಗಿ ಜನ ಇಡೀ ಊರಿಗೀರೋ ಒಂದೇ ಒಂದು ಸಿಹಿನೀರಿನ ಬಾವಿ, ಅದೂ ಹೊಕ್ಕು ತುಂಬುವ ಬಾವಿ, ಅಲ್ಲಿಂದಲೇ ಕುಡಿಯುವ ನೀರು ತರೋ ಪರಿಸ್ಥಿತಿ. ಅದೇ, ಆ ಬಾವಿಯೇ ನಾರುಹುಣ್ಣಿನ ತವರು. ಸ್ಕೂಲ್ ನಲ್ಲಿದ್ದಾಗ ಬುಕ್ ನಲ್ಲಿ ಓದಿದ ನಾರುಹುಣ್ಣಿನ ವಿಷಯ ಇಲ್ಲಿ ಪ್ರತ್ಯಕ್ಷ ಕಾಣುವಂತಾಯಿತು.

ಒಂದಂತೂ ತೀರಾ ಭಯಾನಕ ಕೇಸ್ ಬಂದಿತ್ತು, ಈ ನಾರುಹುಣ್ಣಿನದು. ಒಬ್ಬ ಮುಸ್ಲಿಂ ಮಹಿಳೆ ಗರ್ಭಿಣಿಯಾಕೆ. ಆಕೆಯ ಸ್ತನಕ್ಕೇ ನಾರುಹುಣ್ಣು ಆಗಿತ್ತು! ವಿಚಿತ್ರ ಅನ್ನಿಸೋ ಕೇಸು. ಆಕೆ ಆಸ್ಪತ್ರೇಲಿ ತೋರಿಸಿಕೊಂಡು ನಮ್ಮ ಮನೆಗೆ ಬಂದು “ಸ್ವಲ್ಪ ಕುಡ್ಯಾಕ ನೀರ ಕೊಡ ಯವ್ವಾ” ಅಂದ್ಲು. ನೀರು ಕೊಟ್ಟು ಆಕೆ ನರಳಾಟ ನೋಡಲಾಗದೆ ಏನಾಗಿದೆ ಅಂತ ಕೇಳಿದಾಗ ಆಕೆ ತನ್ನ ಎದೆ ತೋರಿಸಿ, ‘ಇಲ್ಲಿ ನಾರಹುಣ್ಣ ಆಗೇತೇ ಯವ್ವಾ” ಅಂದ್ಲು. ನಾ ಬವಳಿ ಬಂದು ಬೀಳುವುದೊಂದೇ ಬಾಕಿ.

ಸುರೇಶ ಅವರು ಈ ನಾರು ಹುಳದ ಕಬಂಧ ಬಾಹುಗಳ ಹಿಡಿತದ ಬಗ್ಗೆ ಹೇಳ್ತಾನೇ ಇದ್ರು. ಅಂಗಾಲು, ಹಿಮ್ಮಡಿ ಇಂಥಲ್ಲಿ ಆದರೆ ಮೊಣಕಾಲು ಗಡ್ಡೆಗಟ್ಟಿದಂತಾಗಿ ಕಾಲು ಸೆಟೆದು ಬಿಡೋದು. ಆದರೆ ಇಲ್ಲಿ ಈ ಗರ್ಭಿಣಿ ಮಹಿಳೆಯ ಎದೆ ನೋಡಿದಾಗ ಆ ನಾರುಹುಳ ಪೈಶಾಚಿಕ ಘಟಸರ್ಪ ಎನಿಸ್ತು ನಂಗೆ!

ದೇವರ ದಯೆ ಎನ್ನಬೇಕು- ಮಾರನೇ ದಿನವೇ ಶಿಗ್ಗಾವಿಗೆ ಆರೋಗ್ಯ ಮಂತ್ರಿಗಳು ಯಾವುದೋ ಕಾರ್ಯಕ್ರಮಕ್ಕೆ ಬಂದ್ರು. ಆಗ ನನ್ನ ಪತಿ ತಕ್ಷಣ ಆ ಗರ್ಭಿಣಿ ಮಹಿಳೆಯೊಂದಿಗೆ ಇನ್ನೂ ನಾಲ್ಕು ನಾರುಹುಣ್ಣಿನ ರೋಗಿಗಳನ್ನು ಜೀಪ್ ನಲ್ಲಿ ಕರೆದು ಕೊಂಡು ಹೋಗಿ ತೋರಿಸಿ, ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಿ, ಆ ಗರ್ಭಿಣಿ ಹೆರಿಗೆ ನಂತರ ಮಗುಗೆ ಹಾಲು ಕುಡಿಸಲಾಗದ ಅಸಹಾಯಕ ಸ್ಥಿತಿ ನಿರ್ಮಾಣವಾಗಿದೆ ಅಂತ ಹೇಳಿದಾಗ ಮಂತ್ರಿಗಳೂ ಗರಬಡಿದರಂತೆ.

ತಕ್ಷಣ ಬಂಕಾಪುರಕ್ಕೆ ಬೋರ್ವೆಲ್ ಮಂಜೂರು ಮಾಡಿ, ಮುಂದೆ ಒಂದು ವಾರದಲ್ಲಿಯೇ ಸಿಹಿ ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆ ಆಯ್ತು. ಆ ಬಾವಿಯನ್ನು ಬೇಲಿ ಹಾಕಿ , ಬಂದ್ ಮಾಡಿ ಬಿಟ್ರು. ಆ ಅಸಹಾಯಕ, ನಿರ್ಲಕ್ಷ್ಯಕ್ಕೆ ಗುರಿಯಾದ ಜನತೆ ಇನ್ನಾದರೂ ಎಚ್ಚೆತ್ತುಕೊಂಡು ತಮ್ಮನ್ನು ರಕ್ಷಿಸಿಕೊಳ್ಳಲಿ ಆ ಪಿಶಾಚ ಘಟಸರ್ಪದ ಹಿಡಿತದಿಂದ ಅಂತ ಪ್ರಾರ್ಥಿಸಿದೆ ಆ ದೇವರಲ್ಲಿ!

‍ಲೇಖಕರು Avadhi

November 22, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. K Ramesh Babu

    ಶ್ರೀಮತಿ ಪಡಸಲಗಿ ಅವರ ಗ್ರಾಮೀಣ ಜೀವನದ ಅನುಭವಗಳು ತುಂಬಾ ರೋಚಕವಾಗಿವೆ. ನಾನೂ ಒಬ್ಬ ವೈದ್ಯನಾದರೂ, ನನ್ನ ವೃತ್ತಿ ಜೀವನವೆಲ್ಲವನ್ನೂ ವೈದ್ಯಕೀಯ ಶಿಕ್ಷಕನಾಗಿ ನಗರ ಪ್ರದೇಶಗಳಲ್ಲಿಯೇ ಕಳೆದಿದ್ದೇನೆ. ನಾನೇದರೂ ಗ್ರಾಮೀಣ ಪ್ರದೇಶಗಳಲ್ಲಿದ್ದು ಲೇಖಕಿಯರು ಎದುರಿಸಿದಂತಹ ಸಂದರ್ಭಗಳನ್ನು ನಾನೂ ಕಂಡಿದ್ದರೆ ನಾನು ಖಂಡಿತಾ ಎದೆಗುಂದುತ್ತಿದ್ದೆ. ಲೇಖಕಿಯರ ಮತ್ತು ಅವರ ಪತಿಯವರ ಮನೋಧರ್ಮಕ್ಕೆ ನನ್ನ ಅಪಾರ ಮೆಚ್ಚುಗೆಯನ್ನು ತಿಳಿಸಬಯಸುತ್ತೇನೆ. ಲೇಖಕಿಯರ ಲೇಖನ ಶೈಲಿಯೂ ತುಂಬಾ ಮನೋಙವಾಗಿದೆ. ಅವರಿಗೆ ಅಭಿನಂದನೆಗಳು!

    ಪ್ರತಿಕ್ರಿಯೆ
  2. Sarojini Padasalgi

    ಅನಂತ ಧನ್ಯವಾದಗಳು ಸರ್! ನಮ್ಮ ಅನುಭವಗಳ ಖಜಾನೆ ತುಂಬ ಇಂಥ ನೂರಾರು ಘಟನೆಗಳು.ಆ ದಿನಗಳಲ್ಲಿ ಈ ಪುಟ್ಟ ಹಳ್ಳಿಗಳ ವಸತಿ ಒಂದು ದೊಡ್ಡ ಸವಾಲಿನ ವಿಷಯವಾಗಿತ್ತು.ಈಗ ನನಗೆ ನಾನೇ ಕೇಳಿಕೊಳ್ಳುತ್ತೇನೆ ಒಮ್ಮೊಮ್ಮೆ- ಹೇಗೆ ನಿಭಾಯಿಸಿದಿ ಅದನ್ನೆಲ್ಲ ಅಂತ.ತಿಳವಳ್ಳಿಯಲ್ಲಿನ ಅನುಭವಗಳು ಇನ್ನೂ ಅದ್ಭುತ! ಅವಕಾಶ ಸಿಕ್ಕಾಗ ಖಂಡಿತ ಅವನ್ನೂ ಹಂಚಿಕೋತೀನಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: