ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೋವಿಗೆಷ್ಟು ಕಣ್ಣು ?

ರಮ್ಯಾ ಶ್ರೀಹರಿ

ನೋವಿಗೆಷ್ಟು ಕಣ್ಣು ?

ಮಳೆಗೆ ಒದ್ದೆ ಮುದ್ದೆಯಾದ ನಿದ್ದೆ

ರಾತ್ರಿಯ ರಗ್ಗು ಹೊದ್ದು ಬೆಚ್ಚಗಾಗುತ್ತಿದ್ದಂತೆ

ಗಾಢ ಕತ್ತಲೆ ಸೀಳಿ ಬಂತು

ಸಿಡಿಲಿನಂಥ ಬೆಕ್ಕಿನ ಅಳು

ಈಗ ಮಗುವಿನಂತೆಯೇ ಅಳುತ್ತಿದ್ದ ಅದು

ಆಗ ಹೊಂಚು ಹಾಕಿದ್ದು ಯಾರ ಮಗುವನ್ನು ಕದ್ದೊಯ್ಯಲು ?

 

ಯಾವ ಮಾಟಗಾತಿಯ ಸಖಿ

ಯಾವ ಪ್ರೇತದ ಪ್ರತೀಕ

ಈ ಕೊಲೆಪಾತಕಿ ?

ಕನಸಲ್ಲಿ ಕನ್ನಡಿ ನೋಡಿಕೊಂಡರೆ

ಮುಖವೆಲ್ಲ ಪರಚಿದ ಗುರುತು

ಕತ್ತಲಲ್ಲಿ ಕಂಡ ಗುರುತುಗಳೆಲ್ಲ ಅಯೋಮಯ

ಈಗ ಹೇಗೆ ಹುಡುಕಲಿ ನಾನು

ಬಿಟ್ಟು ಬಂದ ಕಂದನನ್ನ ?

 

ಅಡುಗೆ ಮನೆಯಲ್ಲೇನೋ ಸಪ್ಪಳ

ದುರದುರನೆ ದಿಟ್ಟಿಸುತ್ತಿತ್ತು ನನ್ನನ್ನೇ

‘ಕಂಡವರ ಕೂಸಿಗೆ ಕೇಡು ಬಗೆಯುವ ಮಾರಿ

ಅನುಭವಿಸು ಇದೇ ಕರ್ಮದ ರೀತಿ’

ಶಾಪದ ನುಡಿಗೆ ಬೆಕ್ಕು ಮಿಯಾವ್ ಎಂದಾಗ

ಎಂಥದೋ ನಿಗೂಢ ಪಾಪಭೀತಿ.

 

ಹಾಲು ಕುಡಿಯುವ ನೆವದಿ

ಹಸುಳೆಯ ತೊಟ್ಟಿಲು ಹುಡುಕುತ್ತಿತ್ತೇ?

ಇಲ್ಲ, ನನ್ನನ್ನೇ ಅನುಮಾನಿಸುತ್ತಿತ್ತೆ?

ಕಳ್ಳ ಬೆಕ್ಕಿನ ಸುಳ್ಳು ವಿಳಾಸ ನಂಬದೆ

ಮಳ್ಳ ಹೆಜ್ಜೆಯಿಂದ ಹಿಂಬಾಲಿಸೆ

ತಿರುಗಿ ನೋಡಿದ ಅದರ ವಿಷಾದದ ಕಣ್ಣಿನಲ್ಲಿ

ಕಳೆದು ಹೋದದ್ದೆಲದರ ಬಿಂಬ,

 

ಕರುಳು ಕತ್ತರಿಸುವ ನೋವಿಗೆ

ಕಣ್ ಕಣ್ ಬಿಟ್ಟಾಗ

ಬೆಕ್ಕಿನೆದೆಯ ಕರಕರೆಯ ಕರೆಗೆ ಹನಿಯಾಗಿದ್ದ

ಪುಟ್ಟನ ಕಂಗಳಲ್ಲಿ ಮೂಡಿದ್ದು ಯಾರ ಪ್ರತಿಬಿಂಬ?

 

——————————————————————————–

 

ಜೀವದ ಕಣ್ಣು

 

ನೋಟಗಳ ಕದ್ದು ಬಸಿರಾಗುವ ಹೊತ್ತು

ಇಳಿ ಸಂಜೆ ಸೂರ್ಯನ ಮುತ್ತು

ಕಿಟಕಿ ಸರಳುಗಳ ಮೇಲಿಂದ ಹಾರಿ,ತೂರಿ,ಸೋರಿ

ಮೂಲೆ ಮೂಲೆಗೂ ಒಂದೊಂದು ಹಳದಿ ಮೊಟ್ಟೆ.

ಮೊಟ್ಟೆಯೊಳಗಿನ ಮುತ್ತುಗಳಿಗೆಲ್ಲಾ ಕಣ್ಣುಗಳಾಗುವ ತವಕ

ಥಟ್ಟನೆ ಸಿಡಿದ ಮೊಟ್ಟೆಯೊಳಗಿಂದ

ಕತ್ತಲ ಸಮಾಗಮದ ಸುತ್ತ ಬೆಳಕಿನ ಪುಳಕ

ಕಲರ್ ಕಲರ್ ಕಣ್ಣುಗಳ ಫಳಫಳದ ಮೇಲೆಲ್ಲಾ

ಸೋಪಿನ ಗುಳ್ಳೆಗಳ ದೋಣಿ ವಿಹಾರ

ಒಡೆದಷ್ಟೇ ಬೇಗನೆ ನೊರೆನೊರೆಯಾಗಿ ಸೂರೆಯಾದ ಸೊಬಗು

ರೆಪ್ಪೆ ಬಡಿತದ ಸದ್ದಿಗೇ ಸೃಷ್ಟಿ,ಸ್ಥಿತಿ,ಲಯ.

ನೋಟದ ಬಲೆಗೆ ಸಿಕ್ಕ ಕಾಣ್ಕೆಗಳೆಷ್ಟೋ

ಸಿಗದ ಸಿಕ್ಕುಗಳೆಷ್ಟೋ ಬಲೆಯ ತುಂಬಾ

ಕಣ್ಣೊಳಗೆ ನೀರೊ,ನೀರೊಳಗೆ ಕಣ್ಣೋ

ಕಣ್ಣ ಕೊಳದ ತುಂಬಾ ಕನ್ನಡಿಯ ಸಂಚು

ಸಂಚು ಹೊಂಚಿಗೆ ಸಿಲುಕಿ

ಎಲ್ಲಿಯ ಬೆಳಕೋ, ಎಲ್ಲಿಯ ಬಿಂಬವೋ

ಮುತ್ತಿಟ್ಟು, ರಮಿಸಿ, ಬಿಸಿಯುಸಿರಿಗೆ ತೆರೆದ ಕೂಡಲೇ

ಬಿಂಬದ ಒಳಗೆಲ್ಲ ಬೆಳಕಿನ ಹೂಬಾಣ

ಆಗಸದ ಒಡಲಲ್ಲಿ ಸಪ್ತರ್ಷಿ ಮಂಡಲ,

ಕಣ್ಣಿನೆದೆಯ ತುಂಬಿದೆ ಬೆಳದಿಂಗಳ ಹಾಲು

ಹಾಲಿನ ಹಾದಿಯಲ್ಲೆಲ್ಲ ಈಗ ಮುತ್ತಿನದೇ ಮಾತು.

‍ಲೇಖಕರು AdminS

24 August, 2019

1 Comment

  1. Ramya srihari

    Thank you avadhi

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading