ನೋಡಲೇಬೇಕಾದ ಸಿನಿಮಾ ‘19.20.21’

ಒಳ್ಳೆಯ ಸಿನಿಮಾ ಸಂಸ್ಕೃತಿಯನ್ನು ಪ್ರತಿನಿಧಿಸುವ ‘19.20.21’

ಮ ಶ್ರೀ ಮುರಳಿ ಕೃಷ್ಣ

ಮಂಸೋರೆ ನಿರ್ದೇಶನದ ನಾಲ್ಕನೆಯ ಕನ್ನಡ ಚಲನಚಿತ್ರ 19.20.21 ಕಳೆದ ವಾರ ಬಿಡುಗಡೆಯಾಗಿದೆ. ಸಾಮಾಜಿಕ ವಲಯದ ಗಂಭೀರ ವಿಷಯಗಳನ್ನು ವಸ್ತುವಾಗಿರಿಸಿಕೊಂಡು ತಾವೊಬ್ಬ ಸಂವೇದನಾಶೀಲ ನಿರ್ದೇಶಕ ಎಂಬುದನ್ನು ಅವರ ಈ ಕೃತಿ ತೋರಿಸಿಕೊಡುತ್ತದೆ. ಊಹಿಸಿದಂತೆ ಇದರ ಬಗೆಗೆ ಹಲವು ಸ್ತರಗಳಲ್ಲಿ ಚರ್ಚೆಗಳು ಜರಗುತ್ತಿವೆ. ವಸ್ತುಸ್ಥಿತಿಯ ವಿದ್ಯಮಾನಗಳುಳ್ಳ ಒಂದು ಗಹನ ಸಿನಿಮಾ ವಿಚಾರ ವಿನಿಮಯಗಳಿಗೆ ಗ್ರಾಸವಾಗುತ್ತದೆ ಎಂಬುದು ಸ್ವಾಗತಾರ್ಹ ವಿಚಾರವೇ ಸರಿ.

ನೈಜ ಘಟನೆಗಳನ್ನು ಆಧರಿಸಿದ ಈ ಸಿನಮಾ ಡಾಕ್ಯುಡ್ರಾಮ ಜಾನರ್(Genre)ಗೆ ಸೇರಿಸಬಹುದು ಎಂದೆನಿಸಿತು. ಇತ್ತೀಚೆಗೆ ಪತ್ರಕರ್ತ ನವೀನ್‌ ಸೂರಿಂಜೆ ಅವರ ʼ ಕೂತ್ಲೂರು ಕಥನ ʼಎಂಬ ಕೃತಿ ಬಿಡುಗಡೆಯಾಯಿತು. ಇದರಲ್ಲಿ ಆದಿವಾಸಿ ವಿಠ್ಠಲ ಮಲೆಕುಡಿಯನ ಮನಮಿಡಿಯುವ, ದಾರುಣ ವೃತ್ತಾಂತಗಳು ಪ್ರಧಾನ ಭೂಮಿಕೆಯಲ್ಲಿವೆ. ನಕ್ಸಲರಿಗೆ ಬೆಂಬಲವನ್ನು ನೀಡುತ್ತಿದ್ದಾರೆ ಎಂಬ ಅನುಮಾನದಡಿ ಆದಿವಾಸಿ ಮಲೆಕುಡಿಯ ಸಮುದಾಯದ ಮೇಲೆ ಜರುಗಿದ ಪೊಲೀಸರು-ನಕ್ಸಲ್‌ ನಿಗ್ರಹ ಪಡೆಯ ನಾನಾ ಅಮಾನವೀಯ ಕೃತ್ಯಗಳು, ಆದಿವಾಸಿಗಳು ಅನುಭವಿಸಿದ ಹಿಂಸೆ, ಅನೇಕ ಕಷ್ಟ ಕೋಟಲೆಗಳು, ತಮ್ಮ ಹಕ್ಕುಗಳಿಗಾಗಿ ಅವರು ಹೂಡಿದ ಹೋರಾಟಗಳು, ಪ್ರಭುತ್ವದ ದಮನಕಾರಿ ದೃಷ್ಟಿಕೋನಗಳು, ಆದಿವಾಸಿಗಳ ಹೋರಾಟಗಳಿಗೆ ಬೆನ್ನೆಲುಬಾಗಿದ್ದ ಪ್ರಜಾತಾಂತ್ರಿಕ, ಎಡ ಸಂಘಟನೆಯ ಕಾರ್ಯಕರ್ತ, ಸಮಾಜಮುಖಿ ಪತ್ರಕರ್ತ ಮತ್ತು ಜನಪರ ವಕೀಲನ ಮುಂದಾಳತ್ವದಲ್ಲಿ ಜರುಗಿದ ಕಾರ್ಯಚರಣೆಗಳು ಇತ್ಯಾದಿಗಳನ್ನು ಈ ಕೃತಿ ಅನಾವರಣಗೊಳಿಸುತ್ತದೆ. ಸಿನಿಮಾ ಕೂಡ ಮೂಲ ಘಟನೆಗಳಿಗೆ ಚ್ಯುತಿಯಾಗದಂತೆ ಚಿತ್ರಿತಗೊಂಡಿದೆ.

ಸಮಾಜದ ನಾನಾ ತೆರನಾದ ಆಗುಹೋಗುಗಳಿಗೆ ಸ್ಪಂದಿಸುವ ಸಮಷ್ಠಿ ಹಿತದ ಮಂದಿಗೆ- ಕಾರ್ಯಕರ್ತರಿಗೆ ವಿಠ್ಠಲ ಮಲೆಕುಡಿಯನ ವೃತ್ತಾಂತ ತಿಳಿದಿರುವ ಸಾಧ್ಯತೆಗಳೇ ಹೆಚ್ಚು. ಈ ಸಿನಿಮಾದಲ್ಲಿ ಪ್ರೊಟೊಗಾನಿಸ್ಟ್‌ ಆದಿವಾಸಿ ಮಂಜು (ಮೂಲ :ವಿಠ್ಠಲ್‌ ಮಲೆಕುಡಿಯ) ಮತ್ತು ಬಸ್ಸಿನಲ್ಲಿ ಪಯಣಿಸುವ ಪೊಲೀಸ್‌ ಇನ್ಸ್ಪೆಕ್ಟರ್‌ ಮೂಲಕ non-linear ಬಗೆಯಲ್ಲಿ ನಿರೂಪಣೆಯನ್ನು ಪ್ರಸ್ತುತಪಡಿಸಲಾಗಿದೆ. ಅಂತ್ಯ ತಿಳಿದಿದ್ದರೂ, ಸಿನಿಮಾ ಕುತೂಹಲವನ್ನು ಉಳಿಸಿಕೊಂಡು ಮುನ್ನಡೆಯುವಂತೆ ಚಿತ್ರಕಥೆಯನ್ನು ಹೆಣೆಯಲಾಗಿದೆ. ಕೆಲವು ವೀಕ್ಷಕರಿಗೆ ಈ ಹೆಣಿಗೆ ಸ್ವಲ್ಪ ಗೋಜಲಾಗಿ ಗೋಚರಿಸಬಹುದು. ಇರಲಿ….

ಈ ಸಿನಿಮಾದಲ್ಲಿ ಪ್ರಭುತ್ವದ ಅಂಗಗಳಾದ ಸರ್ಕಾರ, ಪೊಲೀಸ್‌ ಇಲಾಖೆ. ನಕ್ಸಲ್‌ ನಿಗ್ರಹ ಪಡೆ ಮುಂತಾದುವುಗಳ cold blooded executionಗಳನ್ನು ಪರಿಣಾಮಕಾರಿಯಾಗಿ ಬಿಂಬಿಸಲಾಗಿದೆ. ಅತೀವ ಭಾವೋದ್ವೇಗದ, ಮೆಲೊಡ್ರಾಮಾದ ದೃಶ್ಯಗಳಿಲ್ಲ( ಮಂಸೋರೆಯವರ ಹಿಂದಿನ ಸಿನಮಾ ʼ ACT 1978 ʼ ನಲ್ಲಿ ಮೆಲೊಡ್ರಾಮ ಸ್ವಲ್ಪ ಜಾಸ್ತಿ ಎಂದೆನಿಸಿತ್ತು). ತುಳು ಭಾಷೆಯನ್ನು ಅಲ್ಲಲ್ಲಿ ಬಳಸಿರುವುದು ಸಿನಮಾಗೆ ಪ್ರಾದೇಶಿಕ ಸೊಗಡನ್ನು ನೀಡಿದೆ. ತಮ್ಮ ಹಕ್ಕಗಳೇನು? ಅವುಗಳನ್ನು ಹೇಗೆ ಪಡೆಯಬೇಕು, ಜತನ ಮಾಡಬೇಕು ಎಂಬಿತ್ಯಾದಿ ವಿಚಾರಗಳ ಬಗೆಗೆ ಅರಿವನ್ನು ಮೂಡಿಸುವಲ್ಲಿ ಶಿಕ್ಷಣವು ವಹಿಸುವ ಪಾತ್ರವನ್ನು ಈ ಸಿನಿಮಾ ಮನದಟ್ಟು ಮಾಡುತ್ತದೆ. ಸಂವಿಧಾನ ಯಾರಿಗಾಗಿ? ಅದರ ವಾರಸುದಾರರು ಯಾರು? ಇತ್ಯಾದಿ ವಿಷಯಗಳ ಬಗೆಗೂ ಕ್ಷಕಿರಣವನ್ನು ಬೀರುತ್ತ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುತ್ತದೆ. UAPAನಂತಹ ಕರಾಳ ಕಾನೂನನ್ನು ದುರೋಪಯೋಗಿಸಿ ವಿಠ್ಠಲ ಮಲೆಕುಡಿಯನಂತಹ ಅನೇಕ ಅಮಾಯಕರು ಅನೇಕ ವರ್ಷಗಳಿಂದ ಜೈಲುಗಳಲ್ಲಿ ಕೊಳೆಯುತ್ತಿರುವ ನಗ್ನ ಸತ್ಯ ನಮ್ಮೆದುರಿಗಿದೆ. ಇಂತಹ ಕಾನೂನುಗಳು ಕೂಡ ನಮ್ಮ ಸಂವಿಧಾನದ ಭಾಗವಾಗಿಯೇ ಇವೆ ಎಂಬುದನ್ನು ಮರೆಯುವಂತಿಲ್ಲ!

ಒಳ್ಳೆಯ ಸಿನಿಮಾಗಳು ತಯಾರಾಗುವ ಮತ್ತು ಉತ್ತಮ ಸಿನಿಮಾ ಸಂಸ್ಕೃತಿ ಊರ್ಜಿತಗೊಳ್ಳುವ ನಿಟ್ಟಿನಲ್ಲಿ ವೀಕ್ಷಕರ ಪಾತ್ರ ದೊಡ್ಡದು ಹಾಗೂ ಮಹತ್ವದ್ದು. ಮುಖ್ಯವಾಹಿನಿ ಸಿನಿಮಾಗಳ ಚೌಕ್ಕಟ್ಟಿನೊಳಗೇ ಕೆಲವು ಪ್ರಯೋಗಗಳು ಜರಗುವಂತೆ ವೀಕ್ಷಕರ ಸದಭಿರುಚಿ ಒಂದು ನಿರ್ಣಾಯಕ ಪಾತ್ರವನ್ನು ವಹಿಸಬಲ್ಲದು! ಮೇಲೆ ಪ್ರಸ್ತಾಪಿಸಿರುವ ಕಾರಣಗಳಿಂದ 19.20.21 ಸಿನಿಮಾ ಒಳ್ಳೆಯ ಸಿನಿಮಾ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ.

ಈ ಸಣ್ಣ ಟಿಪ್ಪಣಿಯನ್ನು ಬರೆಯುವ ಸಮಯದಲ್ಲಿ ಆತಂಕವೂ ಆವರಿಸಿದೆ. ಅದು – ಒಂದು ವಾರದಾಚೆಗೆ ಈ ಸಿನಿಮಾ ಥಿಯೇಟರುಗಳಲ್ಲಿ ಮುಂದುವರೆಯುವುದೇ ಎಂಬ ಪ್ರಶ್ನೆ!

ಮೊಲ್ಲಿ ಹಸ್ಕೆಲ್‌ (Molly Haskell) ಎಂಬ ಅಮೆರಿಕಾದ ಒಬ್ಬ ಫೆಮಿನಿಸ್ಟ್ ಸಿನಿಮಾ ವಿಮರ್ಶಕಿಯ “ಎರಡು ಸಿನಿಮಾಗಳಿವೆ: ನಾವು ವೀಕ್ಷಿಸಿರುವ ಸಿನಿಮಾಗಳು ಮತ್ತು ಅವುಗಳ ಬಗೆಗಿನ ನೆನಪುಗಳು” ಎಂಬ ಮಾರ್ಮಿಕವಾದ ಹೇಳಿಕೆಯಿದೆ. 19.20.21 ಸಿನಿಮಾ ನೆನಪಿನಲ್ಲಿ ಉಳಿಯುವಂತಹದ್ದು ಎಂದರೆ ಅತಿಶಯೋಕ್ತಿಯಾಗಲಾರದು!

ಇದು ಈ ಸಿನಿಮಾದ ವಿಮರ್ಶೆಯಲ್ಲ. ಒಬ್ಬ ಸಿನಿಮಾರಸಿಕನ ತಕ್ಷಣದ ಸ್ಪಂದನ, ಅಷ್ಟೇ……

‍ಲೇಖಕರು Admin

March 7, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: