ಸಾಂಬಶಿವನಿಗೊಂದು ಶೋಕಗೀತೆ
ನಾ ಬಾಲಕೃಷ್ಣ

1
ಮನದ ಮರೆವಿನಂಗಳದಲ್ಲಿ ಸುಳಿದು ಮರೆಯಾದ
ಎಳೆಹರೆಯದ ಗೆಳೆಯ, ಸಹಪಾಠಿ ಸಾಂಬಶಿವ
ಸಲಿಗೆ ಅಕ್ಕರೆಯ ಸಾಂಬು
ವಾರಿಗೆಯ ಕುಹಕ ಕೀಟಲೆಗಷ್ಟೆ ರುದ್ರ ತಾಂಡವದ ಶಿವ
ಕೊರಳಿಗೆ ಕರಡಿಗೆ, ಕಿವಿಗೆ ದಾಸವಾಳ
ಹಣೆಬೂದಿ ನಡುವೆ
ದೊಡ್ಡಕಾಸಗಲ ಕಡುಗೆಂಪು ಬೊಟ್ಟು
ತೀಡಿ ಬಾಚಿದ ತಲೆಗೂದಲಿಗೊಂದು ಗಂಟು
ಬಗಲಲ್ಲಿ ಇಳಿಬಿಟ್ಟ ಹೊರೆಗಂಟ ತೂಗುಚೀಲ
ಬರಿಗಾಲ ನಡೆಯಲ್ಲಿ ದಿನಕೆಂಟು ಮೈಲಿ ದೂರ
ಹಸಿದ ಹೊಟ್ಟೆಗೆ ತುತ್ತು ಕೂಳಿನ ಬುತ್ತಿ
ಉಪ್ಪೆಸರು ಮುದ್ದೆ ಹೊರಳಿಸಿ ನುಂಗಿ
ಕಲಿತ ಬರಹದ ಬಿರಿದ ಮೊಳಕೆಯ
ಕನಸ ಸುಗ್ಗಿಗೆ ತುಂಬು ಭರವಸೆ
ನಾಲಿಗೆಯ ತಿರುವಲ್ಲಿ ಮುಗ್ಗರಿಸಿ
ತನಗೊಗ್ಗದ ಹಿಂದಿ ಇಂಗ್ಲೀಷು ತಿದ್ದಿ
ಉದ್ದಗಲ ಸಮಾಜಕ್ಕೆ ಅಡಿಯಿಟ್ಟ
ಕಾಲೇಜುವಾಸಕ್ಕೆ ತಲೆಗೆದರಿ ಬಂದ ಕ್ರಾಪು
ಕ್ಯಾಂಪಸ್ಸಿನ ಕಿಷ್ಕಿಂದೆಯಲ್ಲಿ ಖಚಿತವಾಗದ ದಾರಿ
ತನ್ನದೇ ಹಾದಿ ಹುಡುಕಿ ಹೊರಟ.
2
ಹುಸಿ ಭರವಸೆ ಸಿಕ್ಕು ಸುರುಳಿ
ಜಂಜಡದ ಗೊಡವೆ ನರವೆಲ್ಲಾ ನರಳಿ
ತಲೆ ಮಾಸಿ ಕಿವಿಮಕೇಳದಾ ಸಮಯ
ಅಪ್ಪಳಿಸಿ ಬಂತು ಬರಸಿಡಿಲ ಸುದ್ದಿ:
ತಾ ಕಂಡ ತೆರದಲ್ಲಿ ಹೋರಿ
ಹೈರಾಣಾದ ಸಾಂಬಶಿವ
ಉಗ್ರನಾದ ಶಿವರುದ್ರ
ಬೆಟ್ಟದಡವಿಯ ತುತ್ತತುದಿಯಲ್ಲಿ
ಗುತ್ತಿಗೆಯ ಜನತಂತ್ರವಿಕ್ಕಿದ್ದ
ನಿಷ್ಕರುಣಿ ಸಿಡಿಗುಂಡು ತಾಗಿ
ಹುರಿದ ಬಾಡಾಗಿ ಹುಳ ಹುಪ್ಪಟೆಗೆ ಕೂಳಾದ
ದೊಡ್ಡವರ ವೇದಿಕೆಯ ಸ್ತುತಿಗೆ ಸಿಕ್ಕದೆ
ನೊಂದವರ ಕಣ್ಣ ಹನಿಯಲ್ಲಿ ಬರೆದ
ಶೋಕ ಕವನದ ಒಂದು ಸಾಲಾದ





0 Comments