ನೆಲಕ್ಕೆ ಜಾದೂ ಬರುತ್ತದೆ ಕಣ್ರೀ!
(ಜಮೀಂ ಕೊ ಜಾದೂ ಆತಾ ಹೈ)
ಅನು : ಲಕ್ಷ್ಮೀಕಾಂತ ಇಟ್ನಾಳ
ಮೂಲ : ಗುಲ್ಜಾರ್ ಸಾಹಬ್
ನನ್ನ ಹೂದೋಟದ ಈ ಮಣ್ಣಲ್ಲಿ ಒಂದೇನೊ ಇದೆ
ಇದು ಜಾದುವಿನ ನೆಲವಿದೆಯೇನೋ
ನೆಲಕ್ಕೆ ಜಾದೂ ಬರುತ್ತದೆ, ಕಣ್ರೀ!
ನಾನೊಂದು ವೇಳೆ ಪೇರಲ ಬಿತ್ತಿದರೆ, ಅದು ಪೇರಲ ನೀಡುತ್ತದೆ
ನೇರಳೆಯ ಬೀಜ ಊರಿದರೆ ನೇರಳೆಯನ್ನೇ ಕೊಡುತ್ತದೆ
ಹಾಗಲವಾದರೆ ಹಾಗಲ …….ನಿಂಬೆಯಾದರೆ ನಿಂಬೆ!
ನಾನೊಂದು ವೇಳೆ ಹೂ ಬೇಡಿದರೆ, ಗುಲಾಬಿಯನ್ನೇ ನೀಡಿ ಬಿಡುತ್ತದೆ!
ನಾನೇನು ಬಣ್ಣ ನೀಡಿದರೂ ಅದಕೆ, ಅದೇ ವರ್ಣ ಮರಳಿಸುತ್ತದೆ,
ಇವೆಲ್ಲ ಬಣ್ಣಗಳನ್ನು, ಅದು ಮಣ್ಣಲ್ಲಿ ಬಚ್ಚಿಟ್ಟುಕೊಂಡಿದೆಯೇನು?
ಬಲು ಅಗೆದೆ ನಾನೂ, ಆದರೂ ಸಿಗಲಿಲ್ಲ ಏನೂ …..!
ನೆಲಕ್ಕೆ ಜಾದೂ ಬರುತ್ತದೆ ಕಣ್ರೀ !
ನೆಲಕ್ಕೆ ಜಾದೂ ಬರುತ್ತದೆ

ಬಲು ಕೈಚಳಕ ತೋರುವುದು
ಈ ಉದ್ದನೆಯ ಎತ್ತರದ ತಾಳೆಮರಗಳನ್ನು ತುದಿ ಬೆರಳಲ್ಲಿ ಎತ್ತುವುದು
ಆದರೆ, ಬೀಳಗೊಡುವುದಿಲ್ಲ ಅದು!
ಈ ತುಂಟ ಗಾಳಿ ಅಲುಗಿಸಿದರೂ, ಬೀಳದಂತೆ ಹಿಡಿಯುವುದು ಅದು!
ಶರ್ಬತ್, ಹಾಲು ನೀರು ಕೈಯಿಂದ ಜಾರಿದರೆ,
ಎಲ್ಲವನ್ನೂ ಕುಡಿದೇ ಬಿಡುತ್ತದೆ
ಇದೆಷ್ಟೊಂದು ನೀರು ಕುಡಿಯುತ್ತದಪ್ಪ!
ಎಷ್ಟು ಹಾಕಿದರೂ ‘ಗಟಕ್’ ಅಂದೇ ಬಿಡುತ್ತದೆ!
ಲೋಟದಲ್ಲಿ, ಬಕೆಟ್ನಲ್ಲಿ , ಬೇಕಿದ್ದರೆ ನಳವನ್ನು ಖುಲ್ಲಾ ಇಡಿ, ದಿನವಿಡೀ
ವಿಚಿತ್ರ, ವಿಲಕ್ಷಣವಪ್ಪಾ ಇದು, ಇದರದು ಹೊಟ್ಟೆ ತುಂಬುವುದೇ ಇಲ್ಲಬಿಡಿ,
ಕೇಳಿರುವೆ, ನದಿಯನ್ನೂ ಕೂಡ ಹೊಟ್ಟೆಯಲ್ಲಿ ಬಚ್ಚಿಟ್ಟುಕೊಳ್ಳುವುದಂತೆ ಇದು!
ನೆಲಕ್ಕೆ ಜಾದೂ ಬರುತ್ತದೆ ಕಣ್ರೀ,
ನೆಲಕ್ಕೆ ಜಾದೂ ಬರುತ್ತದೆ!
ಈ ನೆಲದ ಒಡಲಲ್ಲಿ ಸಕ್ಕರೆಯ ಖಣಿಗಳಿವೆಯೇನು?
ಹುಳಿಯ ಬಂಡೆಗಳೂ ಹೌದೇನು?
ಹಣ್ಣುಗಳಲ್ಲಿ ಸಿಹಿಯನ್ನು ಮಡುಗುತ್ತದೆ ಈ ನೆಲವಿದು, ಅದೆಲ್ಲಿಂದ ತರುತ್ತದೋ ಅದನ್ನು?
ಮೋಸಂಬಿ, ಬೋರೆ, ಮತ್ತೆ ಮಾವು, ಸೇಬುಗಳಲ್ಲಿ
ಸಿಹಿಗಳೆಲ್ಲ ಒಂದೊಂದು ತರಹ,
ಎಲೆ ತಿಂದರೆ ವಗರು, ಆದರೆ ಅದರದೇ ಹಣ್ಣು ಸಿಹಿ ಹೇಗೊ
ಮೋಸಂಬಿ ಸಿಹಿಯಾದರೆ, ಲಿಂಬೆ ಹುಳಿ ಹೇಗೊ!
ಖರೆ ಏನೆಂದರೆ, ನೆಲಕ್ಕೆ ಜಾದೂ ಬರುತ್ತದೆ, ಕಣ್ರೀ!
ಬೊಂಬು, ರಸಗಂಧ ರಹಿತ ಸಪ್ಪೆ, ಕಬ್ಬಿನಲ್ಲಿ ಸಿಹಿ ಸಿಪ್ಪೆ ಹೇಗೊ?
ನೆಲದ ಹೊಟ್ಟೆಯಲ್ಲಿ ಚುಂಬಕದ ತುಣುಕೊಂದನ್ನು ಇಟ್ಟಿದೆ ಏನು?
ಅದೇನು ಬಿದ್ದರೂ ತನ್ನ ಹತ್ತಿರವೇ ಸೆಳೆಯುತ್ತದೆ
ಹಕ್ಕಿ ಇರಲಿ, ಉಲ್ಕೆ ಇರಲಿ, ಏನೆಲ್ಲಾ!
ನೆಲಕ್ಕೆ ಜಾದೂ ಬರುತ್ತದೆ ಕಣ್ರೀ!
ನೆಲಕ್ಕೆ ಜಾದೂ ಬರುತ್ತದೆ!






nice sir
ತುಂಬಾ ಚೆನ್ನಾಗಿದೆ. ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನುವಂತೆ. ನನಗೇಕೆ ಇದು ಮೊದಲೇ ಹೊಳೆದಿಲ್ಲ ಎನಿಸಲಾರಂಭಿಸಿದೆ. ಅನುವಾದ ಮಾಡಿಕೊಟ್ಟ ಇಟ್ನಾಳ ಸಾಹೇಬರಿಗೆ ವಂದನೆಗಳು.
ಮೆಚ್ಚುಗೆಗೆ ಧನ್ಯವಾದಗಳು ನಾಗರಾಜ್ ಕಾಂಬಳೆ, ಹಾಗೂ ಆರ್ ಎಸ್ ನಾಯಕ ರವರೇ…ವಂದನೆಗಳು
Nice line good concept sir