ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೆರಿಕೆ ಗೋಡೆಗೆ ಚಿತ್ರ ನೇಯುವುದು ಮುಗಿದಿಲ್ಲ..

ಎನ್.ರವಿಕುಮಾರ್ ಟೆಲೆಕ್ಸ್

ಕಡುಮೋಹಿ ಅಂತ ಗೊತ್ತು
ತೆವಳುತ್ತಿದ್ದ ನೀನು ಅದ್ಯಾವ ಮಾಯೆಯಲ್ಲಿ
ರೆಕ್ಕೆ ಮೈಗೂಡಿಸಿಕೊಂಡು ಹಾರಿದ್ದು
ಗೊತ್ತಾಗಲೇ ಇಲ್ಲ..
ನಾನೋ.. ನೆರಿಕೆ ಗೋಡೆಗೆ
ರಂಗು ರಂಗಿನ ಚಿತ್ತಾರ ನೇಯುತ್ತಿದ್ದೆ
ತೊಟ..ತೊಟ ತೊಟ್ಟಿಕ್ಕುವ ಸೂರಿಗೆ
ಮಳೆ ಜೊತೆಗೆ ನಿಖಾಲಿ ಕುಸ್ತಿಯ ಜಿದ್ದು
ಆ ಇರುಳು ಮನೆ ಮುಂದಿನ ಬೇಲಿ
ಹೂವಿಗೆ ಒಸ್ಗೆ
ಹಸಿವ ತಟ್ಟಿ ನಿದ್ರೆಗೆ ದೂಡುವಾಗ
ಕೋಣೆಯೊಳಗೆ ನೀನು ಬಸಿರ ಕಸ ಕಳಚಿ
ರೆಕ್ಕೆ ಕಟ್ಟಿಕೊಳ್ಳುವುದಾ ಗಮನಿಸಲೇ ಇಲ್ಲ
**

ಜೋತು ಬಿದ್ದ ಸ್ವಾರೆಯ ತುಂಬಾ
ಗಾಳಿ ತುಂಬಿದೆ
ಹಸಿವಾದಾಗ ಅದನ್ನು‌ ಕುಡಿಯುತ್ತೇನೆ
ಮುಗಿಲ ಮಾಯೆಗೆ ಮರುಳಾದ
ನಿನ್ನೊಂದಿಗೆ ರೆಕ್ಕೆ ತಳೆದು ಹಾರಲು ಶಕ್ತಿಬೇಕಲ್ಲ;l
ಕಂಟ ಒಡೆದ ಮುದ್ದೆ‌ ಮಡಿಕೆಗೆ
ನಂಟು ಬಿಗಿದದ್ದು ಚರಿತ್ರೆ – ವರ್ತಮಾನ ಕೂಡ
ಗವ್ವನೆ ಕತ್ತಲೊಳಗೆ ಉಸಿರು- ಬೆವರು- ಕನಸುಗಳ ಮುದ್ದೆ ತಿರುವುತ್ತಿದ್ದಾಳೆ ಅವ್ವ
ಬೆಂದ ಬೂದಿ ಭಸ್ಮರೂಪಾಗಿ
ಅಂಗಾಂಗ ಏರಿ‌ ಧನ್ಯವಾಯಿತೇನೋ ಸರಿ,
ಸಗ್ಗದ ದಾರಿಗಳೀಗ ಅವಳ ಕಣ್ಣೀರ ಮೆಳೆ ಹೊದ್ದಿವೆ.
ಅವಳಿಗೆ ನಿನ್ನ ಮಾಯಾ ರೂಪದ ಬಗ್ಗೆ
ಹೇಳಲಾರೆ ಬಿಡು
**

ನಿನ್ನ ಒಳಗೆ ಕುದಿವ ಕಾಮರೂಪಕ್ಕೆ
ಸದಾ ಚಿಮ್ಮುವ ಹದಿಹರಯವೇ..
ಕನಸುಗಳ ಸುಡುವ ಉರಿಯಲ್ಲಿ
ಕೆಂಡಗಳು ಪ್ರೇಮ ಉಂಡು ಸುಖಿಸುತ್ತಿವೆ
ನೆರಿಕೆ‌ ಕಂಡಿಯಿಂದ ಸುರಿವ
ಬೆಳಕಿನ ಕೋಲುಗಳೆ ಒಲೆ ಕೊಳ್ಳಿಯಾಗಿ
ಬೇಳಕೀಯುವುದೂ ಒಲವ ಚಹರೆಯೇ
ಬೋಧಿ ಜಗುಲಿಯ ಮೇಲೆ
ಧ್ಯಾನ ಕುಳಿತ ಪ್ರೇಮವೆಂದರೆ ನಿನಗೇನು ಗೊತ್ತು;?

**

ಅದಾವ ದೀಪದ ಹರಣ ಕುಡಿದು
ಸುಖಿಸುತ್ತಿದ್ದಿಯೋ‌.. ತನ್ನ ತಾನೆ ದಹಿಸಿಕೊಳ್ಳುತ್ತಾ
ಶೋಕ ಸೂತಕವೊಂದು ಬಿಕ್ಕಿದಂತಾತು
ತಳ ಹರಿದ ಬಿದಿರ ತೊಟ್ಟಿಲು ನಿದ್ದೆ ಸುಯ್ಯುತ್ತಿತ್ತು
ಹಾರಿ ಹೋದ ದಾರಿ ದಿಕ್ಕಿನಲ್ಲಿ ನಿಶ್ಯಬ್ದ – ನೀರವ
ಇಳಿಸಂಜೆಯಲ್ಲಿ ಸೂರು ಸಂಧಿಯಲ್ಲಿ ಮಿಂಚುಹುಳ ಶಕುನ‌ ನುಡಿಯಿತು;
‘ಕಾಲದ ಗೋಡೆಗೆ ಮತ್ತಿ ಹೋದ ಪ್ರೇಮ
ಎಂದೂ ಸಾಯಲಾರದು’
ಬೇಲಿಯಲ್ಲಿ ಮತ್ತೆ ಹೂ ಅರಳುತ್ತಿದೆ
ನೇರಿಕೆ ಗೋಡೆಗೆ ಚಿತ್ರ ನೇಯುವುದು
ಮುಗಿಯುತ್ತಲೆ ಇಲ್ಲ….

‍ಲೇಖಕರು avadhi

29 March, 2019

2 Comments

  1. prathibha nandakumar

    very good

    • N.Ravikumar

      Thanks mdm

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading