ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೆರಳೊಂದು ಮೇಲೇಳುವುದು..

ಮೂಲ – ಅಸದ್ ಜೈದಿ

ಹಿಂದಿ ಭಾಷೆಯ ಕವಿ ಅಸದ್ ಜೈದಿ ಮೊದಲು ಒಲಿದದ್ದು ಸಣ್ಣ ಕತೆ ಹಾಗೂ ಕಾದಂಬರಿ ಪ್ರಕಾರಕ್ಕೆ. ಕಾವ್ಯದ ಒಂದು ರೀತಿಯ ಸ್ವಚ್ಛಂದ ಭಾವ ಹೆಚ್ಚು ಆಪ್ತವೆನಿಸಿ ಕವನ ರಚನೆಗೆ ತೊಡಗಿಕೊಂಡರು. ಜೈದಿಯವರು ಪತ್ರಿಕೋದ್ಯಮ, ಅನುವಾದದಲ್ಲಿ ತೊಡಗಿಕೊಂಡಿದ್ದು ಈಗ ಸ್ವತಂತ್ರ ಪ್ರಕಾಶನ ಸಂಸ್ಥೆ ನಡೆಸುತ್ತಿದ್ದಾರೆ. ಇವರು Falsa ಹೆಸರಿನ ಸಾಹಿತ್ಯ ವಾರ್ಷಿಕದ ಸಂಪಾದಕರೂ ಆಗಿದ್ದಾರೆ. ರಾಜಕೀಯ ವಿಡಂಬನೆ, ಕೋಮುವಾದದ ವಿಕೃತಿ, ಸಮಾಜದಲ್ಲಿ ನೈತಿಕ ಅಧಃಪತನ ಇವು ಹೆಚ್ಚಾಗಿ ಇವರ ಕವನಗಳ ವಸ್ತುವಾಗಿವೆ. ಗಾಢ ವಿಷಾದ, ಹರಿತವಾದ ವಿಡಂಬನೆ, ವಿಶಿಷ್ಟ ಲಯ ಇವರ ಕಾವ್ಯದ ಪ್ರಮುಖ ಲಕ್ಷಣವಾಗಿದೆ.

ಕನ್ನಡಕ್ಕೆ – ಸಿ ಎಚ್ ಭಾಗ್ಯ

ಇಲ್ಲ, ಇದೆಂದೂ ಆಗಲಿಲ್ಲ
ಮನುಷ್ಯ ಹಾಗೂ ಪಾರಿವಾಳ
ಎಂದೂ ಪರಸ್ಪರ ನೋಡಲಿಲ್ಲ
ಹೆಂಗಸರಿಗೆ ಖಾಲಿತನವೆಂದೂ ಅರಿವಿಗೆ ಬರಲಿಲ್ಲ
ಇಲ್ಲ, ನೀರೆಂದೂ ಇಲ್ಲಿ ಕೆಳಗೆ ಹರಿಯಲಿಲ್ಲ
ನೆಲವನೆಂದೂ ಉಜ್ಜಿ ಒರೆಸಲಿಲ್ಲ.

ಮಬ್ಬು ಕತ್ತಲಲ್ಲಿ
ಆಕೃತಿಯೊಂದು ಪುಟಿಯುವುದು
ಕೆಲ ಹಲ್ಲುಗಳು ಹೊಳೆಯುವುವು
ನೆರಳೊಂದು ಮೇಲೇಳುವುದು
ಆಮೇಲೇನನ್ನೋ ಅದು ಪಾರು ಮಾಡಿ
ಹೊರಟು ಹೋಗುವುದು.

ಯಾವ ಮಗುವೂ ಇಲ್ಲಿ ಕತ್ತಿಕಾಯಿ ಹಿಡಿದುಕೊಂಡು
ಕೋಳಿಯ ಬೆನ್ನು ಹತ್ತಲಿಲ್ಲ

ಕಪಿಗಳ ಹಿಂಡು
ಕಟ್ಟಪ್ಪಣೆ ಕೇಂದ್ರಸ್ಥಾನವನ್ನೆಂದೂ
ತಮ್ಮ ಮನೆಯಾಗಿಸಿಕೊಳ್ಳಲಿಲ್ಲ

ದುರಾಸೆ, ಗದ್ದಲ, ಸಾಮಾಜಿಕ ಒಂಟಿತನಕ್ಕೆ
ನನಗೆಂದೂ ಕೇಬಲ್ ಸಂಪರ್ಕ ಒದಗಲಿಲ್ಲ

ಇಲ್ಲ, ಗಾಲಿಬ್ ನನ್ನು ಉದ್ಧರಿಸುವುದನ್ನು ನಾನು ಮರೆಯಲಿಲ್ಲ

ಇಲ್ಲ, ನನಗೆ ಥರೇವಾರಿ ಜಾತಿ ಗಳು ಗೊತ್ತಾಗಲೇ ಇಲ್ಲ
ನಾನು ಕೇಳಬಯಸಿದುದನೆಂದೂ ಕೇಳಲೇ ಇಲ್ಲ
ನನ್ನಲ್ಲಿ ಹುಟ್ಟುವುದು ಎಷ್ಟೊಂದು ಉಳಿದಿದೆ

ಇಲ್ಲ, ಚಕ್ರವೆಂದೂ ತಿರುಗಲೇ ಇಲ್ಲ
ಇಲ್ಲ‌, ಎಂದೂ ಸಮಾನತೆಯ ಮಾತು ಇರಲಿಲ್ಲ (ಅದು ಇರುವುದೂ ಇಲ್ಲ)

ಉರ್ದು ಒಂದು ಭಾಷೆಯೇ ಆಗಿರಲಿಲ್ಲ

ಅಮೀರ್ ಖಾನಿ ಒಂದು ಶೈಲಿಯೂ ಆಗಿರಲಿಲ್ಲ

ಮಿರ್ ಬಾಖಿ ಕಟ್ಟಿದ ಮಸೀದಿ ಯಾವತ್ತೂ ಇರಲಿಲ್ಲ

ಇಲ್ಲ, ನಿನ್ನ ಕಣ್ಣುಗಳಲ್ಲೆಂದೂ ಸಂಚು ಇರಲೇ ಇಲ್ಲ.

‍ಲೇಖಕರು Admin

2 December, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading