ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೆಪ ಮಾತ್ರಕ್ಕೆ ಅವನ ನೆನಪು..

ಅರ್ಚನಾ.ಎಚ್
ಈ ರಾತ್ರಿಗಳೇಕೆ ಹೀಗೆ?
ಎದೆಯ ದುಮ್ಮಾನಗಳನ್ನೆಲ್ಲಾ ಧುತ್ತನೆ
ಬಡಿದೆಬ್ಬಿಸಿ ತಾನೂ ನಿದ್ರಿಸದೆ ನನ್ನನೂ
ಬಿಡದೆ ವಿಕ್ರಮನ ಬೇತಾಳದಂತೆ
ಬೆಂಬಿಡದೆ ಕಾಡುವುದು..!?
ನೆಪ ಮಾತ್ರಕ್ಕೆ ಅವನ ನೆನಪುಗಳು
ಬಂದು ಹೋಗುವುದಿದ್ದರೆ ಎಷ್ಟು ಚೆಂದಿತ್ತು!?
ನಿದಿರೆಗೆಡಿಸಿ ಕರುಳ ಹಿಂಡಿ;
ಎದೆ ಬಗೆವಷ್ಟು, ಪಕ್ಕೆಲುಬುಗಳ ಮುರಿದಷ್ಟು
ನೋವಿಡುವುದ್ಯಾವ ನ್ಯಾಯ?
ಇರುಳಗರ್ಭದಲಿ ಸುರಿದ ಕಣ್ಣೀರು
ಮರುಭೂಮಿಯ ಮರೀಚಿಕೆಯಷ್ಟೇ..!
ಆಂತರ್ಯದ ಆರ್ತನಾದ
ಬೀಗಜಡಿದ ದ್ವಾರಗಳಂತೆ
ಆತನಿಗೆಂದು ನಿರ್ಬಂಧ..!
ಅತಿಕ್ರಮಿಸುವ ಹುನ್ನಾರ ನಿರಂತರ..
ಹರಡಿದ ಹೆರಳು ಒದ್ದೆಯಾದದ್ದು
ತಾಪಮಾನದಿಂದಲ್ಲ…!
ತೇವದ ತಲೆದಿಂಬು
ಮಗ್ಗಲು ಬದಲಿಸುವಾಗ
ಕೆನ್ನೆ ತಂಪಿರಿಸಿದ್ದು; ನೆಂದ ಕಣ್ಣೀರಿನಲಿ..!!
ಅದೆಷ್ಟು ನೋವುಗಳ ಹುದುಗಿಸಿತ್ತೋ ಅದು!?
ಇರುಳ ಆಪ್ತ ಸಂಗಾತಿ..!!
ಬೋರೆ ಬಿದ್ದು ಅವಡುಗಚ್ಚಿ
ಅವುಚಿದ ಮುಖ, ಹುದುಗಿದ್ದು ಅದರೊಳಗೆ….!
ಕಣ್ಣೀರ ಹೀರಿ; ಒಡಲ ಬೆಚ್ಚಗಪ್ಪುಗೆ
ನೀಡುತ್ತಾ.. ಮತ್ತವನ ಸಖ್ಯ ಜ್ಞಾಪನ!!
ಅಶ್ರುತರ್ಪಣದಲಿ ಎಳ್ಳು-ನೀರು ಬಿಟ್ಟ ಭವಬಂಧ..
ಉಸಿರ ಏರಿಳಿತ ಹೃದಯದ ಬಡಿತ
ಗದ್ಗದಿತ ಕಂಠ, ಎಡೆಬಿಡದೆ ಬಿಕ್ಕುತ್ತಾ..
ಇರುಳ ಬೆರಳುಗಳು ಎದೆಗಾನಿಸಿ
ಎಂದೂ  ಸಾಂತ್ವನಿಸಿಲ್ಲ..
ಕಣ್ಣೀರ ಒರೆಸಿಲ್ಲ..
ಆದರೂ
ಮನದ ದುಗುಡಗಳಿಗೆ ಕಾರಿರುಳ ವ್ಯಾಮೋಹ..!!
ಹುಸಿಯಾಸೆಗಳ ವಿಜೃಂಭಣೆಯಲಿ
ಇರುಳ‌ ಮೆರವಣಿಗೆ..!!
ಹಗಲ ಜಂಜಟಗಳಿಗೆ
ರಾತ್ರಿಗಳ ನೇವರಿಕೆ…!

‍ಲೇಖಕರು avadhi

18 September, 2019

3 Comments

  1. shivanand karur math

    supper madam,

  2. ಶ್ರೀಕಾಂತ್

    ನೆಪಮಾತ್ರಕ್ಕೆ ಅವನಲ್ಲ ನೆಪದ ಗುಂಗಲ್ಲಿ ನೀಡಿರುವಿರಿ ನಿಮ್ಮ ಮನದ ಕೂರುಹುಗಳಲ್ಲಿ ಅವನಿದ್ದಾನೆ.

    • Archana H

      ಧನ್ಯವಾದಗಳು ಸರರ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading