ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೆನಪ ಸುಲಿವ ಸಂಜೆಗಳು..

ಚೈತ್ರಾ ಹೆಗ್ಡೆ 
——-

ಆಗೆಲ್ಲ ಸಂಜೆಯಾಗುತ್ತಿದ್ದಂತೆ
ತೊಗರು ಮೆತ್ತಿದ ಕೈಗಳನು
ಲುಂಗಿಗೊರೆಸುತ್ತ
ಅಪ್ಪ ಅಂಗಳಕೆ ಲೈಟು
ಮಾಡುತ್ತಿದ್ದ,
ಮೇಲಿನ ಕೇರಿಯ ಹೆಂಗಸರು
ತಂಡ ತಂಡದಲಿ ಬಂದು
ಮೆಟಗತ್ತಿ ಹಾಕುತ್ತಿದ್ದರು.

ಖಾಯಂ ಮಲ್ಲಿಗೆ ಗಿಡದ
ಬುಡದಲೇ ಕೂರುವ ಹಾಲಿ
ಅದ್ಯಾವಾಗ ಹೂ ಕೊಯ್ಯುತ್ತಿದ್ದಳೋ?
ಮುಡಿಯಲ್ಲೊಂದು
ಮಾಲೆ ನೇತಾಡುತ್ತಿತ್ತು,
ಹಗಲು ಶಾಲೆಗೆ ಹೋಗಿ
ರಾತ್ರಿ ಲಗು ಲಗೂನೇ ಗಿಡ್ನ
ತುಂಬಿಸುವ
ದ್ಯಾವನ ಮಗಳು ‘ಅವ್ವನತ್ರ
ಲಿಂಬೆ ಕಡಿ ತಕೊ ಬಾ’
ಎಂದು
ಪಿಸುಗುಡುತ್ತಿದ್ದಳು,
ಗೌರಿ ಕೊನೆಗೊಂದಾದರೂ
ಅರಸನ ಸುಲಿದು ಎಲ್ಲರಿಂದ
ಒಂದೊಂದು ಬೊಗಸೆ ಅಡಿಕೆ
ಇಸಿದುಕೊಂಡು ನಗುತ್ತಿದ್ದಳು.

ಅಪ್ಪ ಗದರಿದರೂ ಮಲಗದೇ,
ಸಿಪ್ಪೆಯಲಿ ಕಾಲಾಡಿಸುತ್ತ,
ಬೆಂಕಿ ಕಾಯಿಸುತ್ತ,
ಯಾರದು ಎಷ್ಟು ಡಬ್ಬಿಯಾಯಿತೆಂದು
ಇಣುಕುತ್ತ, ಅಮ್ಮ ಅವಲಕ್ಕಿ
ಕಲೆಸಲು ಹಳೆ ಪುಸ್ತಕಗಳ
ಹಾಳೆ ಹರಿವುದೊಂದು
ಸಂಭ್ರಮ ನಮಗೆ,
ಮಧ್ಯರಾತ್ರಿಯಲಿ ಅವರೆಲ್ಲ
ಬ್ಯಾಟರಿ ಹಿಡಿದು ಗುಡ್ಡ
ಹತ್ತುವಾಗ ಏನನ್ನೋ
ಕಳೆದುಕೊಂಡವರಂತೆ
ನಿಲ್ಲುತ್ತಿದ್ದೆವು..

ಮೊದಲಸಲ ಮುಟ್ಟಾಗಿ
ಕೂತ ಸಂಜೆ
ಅಂಗಳಕ್ಕಿಳಿಯದೆ, ತಂಗಿ ಬಾ
ಎಂದು ಹಟ ಮಾಡಿ
ಕೈ ಎಳೆವಾಗ
ದೂರ ಸರಿದು, ಅದೇ ಹೆಂಗಸರ
ಪಿಸಿ ಪಿಸಿ ಮಾತಿಗೆ ಕಂಪಿಸಿ,
ಹೊದಿಕೆ ಸಾಲದೆ ಚಳಿಯಲ್ಲಿ
ನರಳಿದ್ದು, ಮದುವೆಯ ಸಂಜೆ
ಸರಬಳೆ ಕಿಂಡಿಯಲಿಣುಕುವ
ಅವರ ನೋಡಲಾಗದೆ ನಾಚಿದ್ದು,
ಹೊರಡುವಾಗ ಕೈ ಬೀಸುತ್ತ
ನಿಂತ ಅವರನೆಲ್ಲ ಹನಿಗಣ್ಣಲ್ಲೇ
ತುಂಬಿಕೊಂಡಿದ್ದು..
‘ಕೊನೆಕೊಯ್ಲಲಿ ರಂಗೋಲಿ
ಹಾಕಬಾರದೇ’ಎಂದು
ಮುಖ ಹಿಂಡುವ ಅಮ್ಮನ
ಮಾತೂ ಅಷ್ಟರ ನಂತರವೇ
ಅರ್ಥವಾಗಿದ್ದು..

ಈಗಲೂ ಯಾಕೋ
ಹಳೆ ಲೆಕ್ಕ ಪುಸ್ತಕ
ತೆಗೆದು ಅವರ ಹೆಸರನೆಲ್ಲ
ಮೆಲಕುವ ಚಟ,
ಆ ಸಂಜೆಗಳಲ್ಲಿ ಈ ಕ್ಷಣವ
ಅದ್ದಿಕೊಳ್ಳುವ ಸುಖ,

ಅದ್ಯಾಕೋ ಅಪ್ಪ ಹೋದ
ಮೇಲೆ ಅಂಥ ಸಂಜೆಗಳೇ ಆಗಿಲ್ಲ..

ಅಮ್ಮನ ನೆಂಟರ್ಯಾರೋ
ಕೊಟ್ಟ ಬೋನ್ಸಾಯ್ ಗಿಡಗಳು
ಚಿಗುರೊಡೆದ ಮೇಲೆ
ಮಲ್ಲಿಗೆ ಅರಳಲೇ ಇಲ್ಲ..

‍ಲೇಖಕರು admin

5 January, 2017

8 Comments

  1. mm shaik

    aa sanjegaLli ee ksNava addikoLLuva samaya uttama saalugagaLu uttama kavite…

  2. Ahalya Ballal

    ಅಮ್ಮನ ನೆಂಟರ್ಯಾರೋ
    ಕೊಟ್ಟ ಬೋನ್ಸಾಯ್ ಗಿಡಗಳು
    ಚಿಗುರೊಡೆದ ಮೇಲೆ
    ಮಲ್ಲಿಗೆ ಅರಳಲೇ ಇಲ್ಲ..

    ohhhh! ಮಲ್ಲಿಗೆ ಅರಳದೆಯೂ ಬಿರಿದ ಪಕಳೆಗಳಂತಹ ಸಾಲುಗಳು….

  3. ಚೈತ್ರಿಕಾ

    ಧನ್ಯವಾದಗಳು

  4. Pradeep Hegde

    Nice

  5. Raghavendra

    Fantastic !!

  6. Deepak MN

    Super dear..U know how to put emotions in your lines…..

  7. Shreedhar Bhat

    ವೆರಿ ಬ್ಯೂಟಿಫುಲ್ 🙂 ಮಲೆನಾಡಿನ ನಿತ್ಯ ಬಾಲ್ಯವನ್ನ ಹೇಳ್ತಾ, ದಿನಚರಿಯಲ್ಲೂ ಮುಗ್ಧತೆಯನ್ನ‌ ಕಾಪಾಡಿಕೊಳ್ತಾ, ಸಣ್ಣ ಸಣ್ಣ ಸಂಗತಿಗಳಲ್ಲಿನ ಅವಶ್ಯಕತೆಗಳನ್ನ‌ ಮನಗಂಡು, ಮಾರ್ಪಾಡಾಗುವ ಮನಃ ಸ್ಥಿತಿಯ ಪ್ರತೀಕವಾದ ಬೋನ್ಸಾಯ್ ಗಿಡಗಳು ಚಿಗುರೊಡೆದಾಗ ಮಲ್ಲಿಗೆ ಅರಳಲೇ ಇಲ್ಲ‌ ಅನ್ನೋ ಸಮಯಕ್ಕೆ ನಿಟ್ಟುಸಿರೊಂದು ಗೊತ್ತಿಲ್ಲದೇ ಕಂತುಹೋಗುತ್ತದೆ ! ಸೊಗಡು ಮತ್ತು ಕಾಡುವ ವಸ್ತು ಜೊತೆಯಾದಾಗ ಇಂತಹ ರಚನೆಗಳು ಕಾಣಸಿಗುತ್ತವೆ 🙂 ನೆನಪುಗಳನ್ನ ಸುಲಿಯುವ ಸಂಜೆಗಳು ಅನ್ನೋವಾಗ, ಅಲ್ಲಿ ಎಲ್ಲರ ಭೂತಕಾಲ‌ ಬಿಚ್ಚಿಕೊಳ್ಳುತ್ತದೆ, ಸಮರ್ಥವಾದ ಶೀರ್ಷಿಕೆಯಾಗಿಯೂ ಇದು ಗಟ್ಟಿತನ ಒದಗಿಸಿದೆ 🙂 ಇನ್ನಷ್ಟು ಇಂತಹ ಕವಿತೆಗಳನ್ನ‌ ತಮ್ಮಿಂದ ಓದೋ ಹಾಗ್ ಆಗ್ಲಿ 🙂 🙂 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading