ಎನ್ ಸಂಧ್ಯಾರಾಣಿ

ಗೀಟು ಅಳಿಸಿದರೆ ಗೋಡೆಗಳು ಕುಸಿಯುತ್ತವೆ
ಉಸಿರ ಬಿಸುಪಿಗೂ ಕರಗುವ ಗೀಟು
ಅಲ್ಲಾಡುವುದಿಲ್ಲ ಒಂಟಿ ಕೈಯ ಮೊರೆಗೆ
ಈ ನದಿಗೆ ನೆನ್ನೆಗಳಿಲ್ಲ,
ಆ ದಡಗಳಿಗೆ ನಾಳೆಗಳಿಲ್ಲ
ಗೀಟೂ ಅಳಿಸದ ಊರಿನಲ್ಲಿ
ನಂಬಿಕೆಗಳು ಕುಸಿದದ್ದು ಈಗ ಇತಿಹಾಸ
ಸೇತುವೆಗಳ ಕಟ್ಟುವಾಗ ಒಂದೊಂದೇ ಕಟ್ಟಿಗೆ
ಜೋಡಿಸುವಾಗ ಒಂದೊಂದೇ ಇಟ್ಟಿಗೆ
ಕಡೆಗೆ ಯಾಕೆ ಬೀಳುತ್ತವೆ ಹೀಗೆ ಉಸಿರು ಬಿಟ್ಟಂತೆ?
ಇದ್ದೇ ಇಲ್ಲದಂತೆ, ಶಾಪಕ್ಕೆ ಬಿದ್ದಂತೆ
ಸತ್ತದ್ದೆಲ್ಲವೂ ಕೊಳೆಯುವುದಿಲ್ಲ
ಮುಗಿದದ್ದೆಲ್ಲವೂ ಮರೆಯಾಗುವುದೂ ಇಲ್ಲ
ಕುಳಿತೇ ಇರುತ್ತದೆ ಹೆಗಲ ಮೇಲೆ
ಸಿಂದಾಬಾದನ ಭೂತವಾಗಿ
ಕಾಯುತ್ತಲೇ ಇರುತ್ತದೆ ತಾಳ್ಮೆಯಿಂದ
ಕಾಟು ಹಾಕಲು ಆಗೊಮ್ಮೆ ಈಗೊಮ್ಮೆ
ಬೆನ್ನ ಮೇಲಿಂದ ಜಾರಿ, ದೇಹ ತೊಟ್ಟು
ಎದುರಾಗುತ್ತದೆ ಆಗೀಗ
ಗಾಳಿ ಸುಳಿಯದ ಊರಲ್ಲಿ
ಉಸಿರ ಚಡಪಡಿಕೆಯಂತೆ
ಕತ್ತೆತ್ತಿ ನೋಡುತ್ತೇವೆ, ಅಪರಿಚಿತರಂತೆ
ಬಿಂಬದಾಚಿಗಿನ ಕತ್ತಲಲ್ಲಿ ನಿನ್ನೆಗಳ ಹುಡುಕುತ್ತಾ..
ಕತ್ತಲು ಇಳಿಯುತ್ತದೆ ಒಳಗೂ ಹನಿ ಹನಿಯಾಗಿ
ಇಟ್ಟಹೆಜ್ಜೆಗಳಲ್ಲಿ ನೆಲಕ್ಕೆ ಬಿದ್ದ
ಮೀನಿನ ರೆಕ್ಕೆ ಪಟಪಟಿಸುತ್ತದೆ
ನಾಳೆಗಳ ಗಾಳಿಪಟದ ದಾರ ಕತ್ತರಿಸಿದ್ದ್ಯಾರು?
ತಲೆಬಗ್ಗಿಸಿ ಮಡಿಲ ಜಾರಿ ಇಳಿದ ಚಿಂದಿಬಟ್ಟೆಯ
ಹೊಲೆಯುತ್ತವೆ ಬೆರಳುಗಳು,
ಬಟ್ಟೆಯ ಚುಚ್ಚುತ್ತಾ, ಗಾಯವ ಮುಚ್ಚುತ್ತಾ..
ಹೊಲಿಗೆ ಹಾಕಬೇಕೆಂದರೂ ಒಡಲ ಇರಿಯಬೇಕು
’ನೀರೊಳಗೆ ವೀಣೆ ಮಿಡಿದಂತೆ ಆಡಿದ ಮಾತು’
ಜಾತ್ರೆ ಮುಗಿದ ಊರಿನಲಿ ಎತ್ತಿಡಲು ಏನೂ ಇಲ್ಲ
ಜಾತ್ರೆ ಮೈದಾನದಲಿ ಜೀವ ಮೊಳೆಯುವುದಿಲ್ಲ
ಆಡಲು ಮಾತಿಲ್ಲದ, ಎತ್ತಿಡಲು ನೆನಪಿಲ್ಲದ ಬಯಲು
ಹೆಜ್ಜೆ ಕಿತ್ತಿಡುತ್ತೇನೆ, ಬೆನ್ನ ಮೇಲೆ ಮತ್ತೆ ಒಂದು ಕಾಟು
ನೆನಪು ಬೆನ್ನಿಗಂಟಿದ ಸಿಂದಾಬಾದನ ಬುತ್ತಿ






beautiful marvelous, ಅದ್ಭುತ ಕವನ ಮೇಡಂ ಜಿ
ಧನ್ಯವಾದಗಳು ಸರ್ 🙂
ಪ್ರಿಯ ಸಂಧ್ಯಾರಾಣಿ ಅವರಿಗೆ:
ನಿಮ್ಮ ’ನೆನಪಿನ ಬುತ್ತಿ’ ತುಂಬಾ ಅರ್ಥಪೂರ್ಣವಾಗಿದೆ; ಅಂತರಾಳದ ಭಾವನೆಗಳಾದುದರಿಂದ ತುಂಬಾ ಹೃದಯಸ್ಪರ್ಶಿಯಾಗಿದೆ.
ಸತ್ತದ್ದೆಲ್ಲವೂ ಕೊಳೆಯುವುದಿಲ್ಲ ಮುಗಿದದ್ದೆಲ್ಲವೂ ಮರೆಯಾಗುವುದೂ ಇಲ್ಲ
ಕುಳಿತೇ ಇರುತ್ತದೆ ಹೆಗಲ ಮೇಲೆ ಸಿಂದಾಬಾದನ ಭೂತವಾಗಿ
ಕಾಯುತ್ತಲೇ ಇರುತ್ತದೆ ತಾಳ್ಮೆಯಿಂದ ಕಾಟು ಹಾಕಲು ಆಗೊಮ್ಮೆ ಈಗೊಮ್ಮೆ
ಈ ಸಾಲುಗಳು ಮತ್ತೆ ಮತ್ತೆ ಕಾಡುತ್ತವೆ. ಅಭಿನಂದನೆಗಳು. ಸಿ. ಎನ್. ರಾಮಚಂದ್ರನ್
ಸರ್,
ನಮಸ್ತೆ, ನೀವು ನನ್ನ ಕವಿತೆ ಓದಿದ್ರಿ ಅನ್ನೋದೇ ಸಂತೋಷ ನನಗೆ. ಥ್ಯಾಂಕ್ಯೂ ಸರ್ 🙂 ನಿಮ್ಮ ಆಶೀರ್ವಾದ ಹೀಗೇ ಇರಲಿ…
ಮೊದಲ ಸ್ಟಾಂನ್ಜ ತುಂಬ ಮತ್ತು ನಾಲ್ಕನೆಯ ಸ್ಟಾಂನ್ಜ ಹೃದಯಸ್ಪರ್ಷಿ.ತುಂಬ ಚೆನ್ನಾಗಿದೆ ಕವನ.
ಓದಿದ್ದೆಲ್ಲವೂ ಮರೆಯುತ್ತಿಲ್ಲ..!
ಬರಹ ಪೆನ್ನಿಗಂಟಿದ ಸಿಂದಾಬಾದನ ಬುತ್ತಿ.!
ಈ ನದಿಗೆ ನೆನ್ನೆಗಳಿಲ್ಲ,
ಆ ದಡಗಳಿಗೆ ನಾಳೆಗಳಿಲ್ಲ
ಕವಿತೆಯೆಂದರೆ ಧ್ಯಾನವಾದರೆ ಮಾತ್ರ ಹೀಗೆ ಬರೆಯಲು ಸಾಧ್ಯ…ಫೀಲಿಂಗ್ ಮೆಡಿಟೇಷನ್
ಆಹಾ…ಹೊಗಳುವುದಲ್ಲ..ಅನುಭವಿಸಿದೆ…