ಧಿಕ್ಕರಿಸುತ್ತೇವೆ ನಿಮ್ಮನ್ನು
– ಹೆಚ್. ಸಿ. ಭವ್ಯ ನವೀನ್
ನಮ್ಮ ಬೋಳು ಬೆನ್ನಿನಲ್ಲಿ
ನಿಮ್ಮ ಕಾಮನೆಗಳು ಕುಣಿಯುತ್ತವಾದರೆ
ಆ ಕಣ್ಣುಗಳಿಗೇ ನಕಾಬು ತೊಡಿಸಬೇಕು
ನಿಮ್ಮ ನೋಟಗಳಿಗಿಲ್ಲದ ಶೀಲ
ನಮ್ಮ ದುಬಾರಿ ವಿನ್ಯಾಸದ ಕುಪ್ಪಸಕ್ಕಾದರೂ ಯಾಕೆ ಬೇಕು
.
ಇನ್ನು ಅನುಮೋದಿಸುವುದಿಲ್ಲ
ನಿಮ್ಮ ವಿಕಾರಗಳ ಸಕಾರಣಗಳನ್ನು
ಹಾಲ ಮೊಲೆಗಳ ರಕ್ತ ಹೀರುವುದಕ್ಕೆ
ನೆಪ ಹುಡುಕುವ ನಿಮ್ಮ ಮನೋವಿಜ್ಞಾನಗಳನ್ನೂ
ಹೊರಲು ಇನ್ನಾಗುವುದಿಲ್ಲ
.
ಅಗುಳಿ ಹಾಕಿದ್ದೇವೆ,
ಕೂಡಿ ಹಾಕಿಕೊಳ್ಳುವ ಇರಾದೆ ಇಲ್ಲ, ನಮ್ಮ
ರಸ್ತೆಯ ಕತ್ತಲೆ ಸಿಗಿದು ಹಾಕುವ ಭಯಕ್ಕೆ
ಹೆಜ್ಜೆಗಳು ಹಿಂಜರಿಯುತ್ತವೆ
ಮೊದ-ಮೊದಲ ಸುಖಗಳ ನಿರೀಕ್ಷೆಗಳಿವೆ ನಿಜಾ..
ಹಾದಿಬೀದಿಯ ಸೋಂಕಿಗೆ ಬಲಿ ಬೀಳುವ
ನಿಮ್ಮವೇ ದುಃಸ್ವಪ್ನಗಳಿಂದ ಎಚ್ಚರವಾಗುತ್ತಿಲ್ಲ
.
ಇನ್ನು ಆರೋಪಿಸುವುದಿಲ್ಲ
ನಿಮ್ಮ ಪಾಪಗಳಿಗೆ ನಮ್ಮ ಮೌನಗಳನ್ನು
ಮತ್ತೇನಲ್ಲದಿದ್ದರೂ ನೋವಿಗೆ-ಅಪಮಾನಗಳಿಗೆ
ಮಾತು ಕಲಿಸುತ್ತೇವೆ
ಧಿಕ್ಕರಿಸುತ್ತೇವೆ ನಿಮ್ಮ..
.
ಜೋಪಾನ
ನಮ್ಮ ಕರುಳುಗಳಲ್ಲಿ ನಿಮ್ಮ ಮಕ್ಕಳ
ಹೃದಯ ಬಡಿಯುತ್ತದೆ
ನಿಮ್ಮ ಎದೆ ಬಡಿತಗಳನ್ನು ಬೆಳೆಸಿಕೊಟ್ಟ
ನೆಲದ ಮೇಲೆ ಕಾಮದ ಕೆಸರು ಚೆಲ್ಲುವಾಗ
ನೆನಪಿಸಿಕೊಳ್ಳಿ, ನಮ್ಮದೂ ನಿಮ್ಮ ಅಮ್ಮಂದಿರ ವರಸೆ







ಉತ್ತಮವಾದ ಕವಿತೆ.ಅತ್ಯಾಚಾರವನ್ನು ಯಾರು ಸಹಿಸಿಕೊಳ್ಳಲು ಸಾದ್ಯ? ಅದನ್ನು ನೋಡುವುದರಲ್ಲಿ ಸ್ವಲ್ಪ ತಪ್ಪು ಮಾಡುತ್ತಿದ್ದೇವೆ ಅನ್ನಿಸುತ್ತಿದೆ.ದಯಮಾಡಿ (ಭವ್ಯ ನಿಮ್ಮ ನವಿರಾದ ಕವಿತೆಯಿಂದ ಅತ್ಯಾಚಾರ ಉರಿದು ಹೋಗಲಿ)
Bhavya, padya maarmikavagide, tivra vishada huttisattade. Shubhavagali
tejashree
ಕವಿತೆ ಚೆನ್ನಾಗಿದೆ ಭವ್ಯ.
very effective lines. Nice.
ditta kavite..
ನೆನಪಿಸಿಕೊಳ್ಳಿ, ನಮ್ಮದೂ ನಿಮ್ಮ ಅಮ್ಮಂದಿರ ವರಸೆ – ಇಷ್ಟನ್ನು ನೆನಪಿಟ್ಟು ಗೌರವಿಸುವವ ವಿಕೃತನಾಗಲಾರ… ಒಳ್ಳೆಯ ಕವಿತೆ ಭವ್ಯ ಅಕ್ಕ… 🙂
Good one!!