ಅಮ್ಮನಿಗೆ

ಕೆರೇಕೈ ರಜನಿ ಗರುಡ
ಯಾವುದೋ ಡಬ್ಬಕ್ಕೆ ಕೈ ಹಾಕಿ
ಮತ್ತೊಂದು ಡಬ್ಬದ್ದೂ ಸೇರಿಸಿ
ಇನ್ನೇನೇನನ್ನೋ ಕೂಡಿಸಿ
ಮಂತ್ರ ದಂಡದಂತೆ ಕೈ ವಸ್ತ್ರ ಕುಣಿಸಿ
ಯಕ್ಷಿಯಂತೆ ಉದ್ದನೆಯ ಸೌಟಿಂದ ತಿರುಗಿಸುತ್ತ
ಚಟಪಟನೆ ವಗ್ಗರಣೆ ಸಿಡಿಸುತ್ತ
ಒಲೆಯ ಹಾಯುವ ನಮ್ಮನ್ನು ಬೈದು
ನೀನು ಘಮಿಘಮಿಸುವದೇನನ್ನೋ ಹಾಕುವದ
ನಿನ್ನ ಸುತ್ತ ಹರಡಿ ಕುಂತ ನಾವು
ಮೈಯೆಲ್ಲ ಬಾಯಾಗಿ ಕಾಯುತ್ತಿದ್ದೆವಲ್ಲಾ…
ತಲೆಗೊಂದು ಮಾತಾಡುತ್ತ
ಪುಟ್ಟ ಬೆರಳುಗಳನ್ನು ಬಿಡಿಸಿ-ಮಡಿಚಿ
ಇಷ್ಟೇ ಬೇಕೆಂದು ಕಾಡುವ ನಮ್ಮ
ಗದರಿ ಅಳತೆ ತಪ್ಪದಂತೆ ಹಂಚಿ
ಅಮೃತವ ಸವಿಯುವ ನಮ್ಮ
ನೋಡುತ್ತ ನಿಲ್ಲುತ್ತಿದ್ದೆಯಲ್ಲಾ…….
ಈ ಊರಿನಲ್ಲೂ
ನೀ ಮಾಡಿ ಉಣಿಸುವುದನ್ನೆಲ್ಲ
ಮಾಡೇಬಿಡಬೇಕೆಂದು
ಪಣತೊಟ್ಟು
ಬೆಳ್ಳಂಬೆಳಗಿಗೇ ಢಂ
ಎಂದು ತೆಂಗಿನಕಾಯೊಡೆದು
ನಿನಗಿಂತಲೂ ಸ್ವಲ್ಪ ಹೆಚ್ಚೇ
ಒಗ್ಗರಣೆ ಹಾಕಿ
ನೀ ಮಾಡಿದಂತಾಯ್ತೇ ಎಂದು
ನೆನಪಿಂದ ಮೂಸಿ ಮೂಸಿ ನೋಡುವೆ
ಬರುವೆ ಎಂಬಷ್ಟನ್ನೇ ಕೇಳಿ
ಡಬ್ಬ ತುಂಬುವಷ್ಟೆಲ್ಲ ಮಾಡಿ
ಎಂದೇ ಬರುವುದೂ ಎನ್ನುವುದಕೆ
ಪುರುಸೊತ್ತು ಇಲ್ಲವೆ ಈಗ
ನೊಣ ಸತ್ತ ಕಾರಣ ಕೊಡುವ
ನನ್ನ ನಂಬುವೆಯಲ್ಲಾ……
ಓ ಇವರೆ,
ಇದೊಂದಿಷ್ಟು ಅವಳಿಗೆ
ಮುಟ್ಟಿಸಿ ಬಿಡಿ
ಎನ್ನುತ್ತ ಬಸ್ಸು
ಹತ್ತಿಸಿ ಕಳಿಸಿ ಕೊಡುವ
ಪೊಟ್ಟಣದೊಳಗಿನದೆಲ್ಲ
ಗಂಟಲು ಕಟ್ಟಿ ತಿನ್ನಲಾರೆ
ಅಮ್ಮಾ…


ಅಮ್ಮನ ಅಡಿಗೆಯ ಖರಾಮತ್ತು ನಮಗೆಲ್ಲಿ ಬರುತ್ತೆ ಹೇಳಿ. ಎಲ್ಲ ಬರಿ ನೆನಪಷ್ಟೆ.