ನೂರು ವರ್ಷದ ನಿಶ್ಯಬ್ದ ಭಾಗ -2..

ತೆಲುಗು ಮೂಲ : ಓಲ್ಗಾ

ಅನುವಾದಕರು : ಎ ನಾಗಿಣಿ

ಪರಿಸ್ಥಿತಿ ಕ್ರಮೇಣ ಬಿಸಿ ಏರುತ್ತಿತ್ತು. ಹುಡುಗಿ ತನ್ನ ನಿಲುವಿನ ಬಗೆಗೆ ಸೀರಿಯಸ್ ಆಗಿರುವ ವಿಷಯ ತಿಳಿದು ಮನೆಯವರೆಲ್ಲರಿಗೂ ತಲೆ ಕೆಟ್ಟಿತು.

ಶ್ರೀಕಾಕುಳಂ ಜಿಲ್ಲೆ ಎಲ್ಲಿ? ಹೈದರಾಬಾದ್ ಎಲ್ಲಿ? ಅಲ್ಲಿ ಯಾವುದೋ ಹೇಳ ಹೆಸರಿಲ್ಲದ ಹಳ್ಳಿಯಲ್ಲಿ ಈ ಹುಡುಗಿ ಬೇಸಾಯ ಮಾಡುತ್ತಾಳಾ?

‘ಅದು ಹೇಗೆ ಕಳಿಸತೇವೆ ನಿನ್ನ? ನೀನು ಅಲ್ಲಿ ಒಬ್ಬಳೇ ಇರುವಾಗ ಇಲ್ಲಿ ನಮಗೆ ನಿದ್ದೆ ಬರತ್ತಾ? ನಮ್ಮ ಬಗ್ಗೆ ಯೋಚನೆ ಮಾಡಲ್ಲವಾ ನೀನು?’

ಚಲಪತಿರಾವ್ ಮಗಳ ಮೇಲೆ ತನಗಿದ್ದ ಪ್ರೀತಿಯನ್ನೆಲ್ಲಾ ತೋರಿಸಿ ಆಕೆಯೊಂದಿಗೆ ವಾದ ಮಾಡಿ ಒಪ್ಪಿಸಬೇಕೆಂದು ನೋಡುತ್ತಿದ್ದ.

ಮಾಧವಿ ಅದನ್ನು ಗಮನಿಸಲೂ ಆಸಕ್ತಿ ಇಲ್ಲದವಳಂತೆ ‘ನಿನ್ನ ಮಾತುಗಳು ಕೇಳಿದರೆ ನಗು ಬರುತ್ತೆ ಅಪ್ಪಾ’ ಎಂದು ತಳ್ಳಿ ಹಾಕಿಬಿಟ್ಟಳು.
ಎಲ್ಲರಿಗೂ ಪಿತ್ತ ನೆತ್ತಿಗೇರಿತು.

‘ನಾವೆಲ್ಲಾ ನಿನ್ನ ಕ್ಷೇಮದ ಕುರಿತು ಯೋಚನೆ ಮಾಡುತಿದ್ದರೆ ನಿನಗೆ ನಗು ಬರುತ್ತಾ?’ ಎಂದು ಕೋಪವನ್ನೆಲ್ಲಾ ದುಃಖವಾಗಿಸಲು ಚಲಪತಿರಾವ್ ಪ್ರಯತ್ನಿಸಿದ.

‘ಅಪ್ಪಾ ಇಲ್ಲಿಗೆ ಸಾಲೂರು ೬೦೦ ಕಿಲೋಮೀಟರ್ ಇದೆ. ಆದರೆ ನೀವು ನನ್ನನ್ನ ಪರಿಚಯವೇ ಇಲ್ಲದ ಒಬ್ಬ ಗಂಡಿನ ಜೊತೆಗೆ ಸಾವಿರಾರು ಕಿಲೋಮೀಟರ್ ದೂರ ಕಳಿಸಲು ಸಿದ್ಧವಾಗಿದ್ದೀರಿ. ಆ ಭಾಷೆ, ಆ ಜನ, ಆ ಪ್ರದೇಶದ ಬಗೆಗೆ ನನಗೆ ಏನೂ ಗೊತ್ತಿಲ್ಲ. ನಾನು ಒಬ್ಬಂಟಿಯಾಗಿರಬೇಕು. ಅಲ್ಲಿ ನಾನು ಹೇಗಿರುವೆನೋ ಎಂಬ ಆತಂಕವೂ ನಿಮಗಿಲ್ಲ. ನಾನು ಹೋಗಬೇಕೆಂದುಕೊಂಡಿರುವುದು ನಮ್ಮ ಊರು, ನಮ್ಮ ಭಾಷೆ, ನಮ್ಮ ಜನ, ಅವರೊಂದಿಗೆ ಹೇಗೆ ಬೆರೆಯಬೇಕೋ ನನಗೆ ಗೊತ್ತು. ಸಮಸ್ಯೆಗಳೇನಾದರೂ ಬಂದರೆ ಹೇಗೆ ಪರಿಹರಿಸಿಕೊಳ್ಳಬೇಕು ಅಂತಾನೂ ಗೊತ್ತು. ಪರಿಸ್ಥಿತಿ ಕೈ ಮೀರಿದರೆ ಒಂದು ಫೋನ್ ಕಾಲ್‌ನಿಂದ ನೀನಾಗಲೀ, ಅಣ್ಣನಾಗಲೀ ಬರಬಹುದು. ನಾನು ದೂರದ ಅಮೇರಿಕಾಗೆ ಹೋಗಿ ನಾಲ್ಕು ಗೋಡೆಗಳ ಮಧ್ಯೆ ನಿಶ್ಯಬ್ದವಾಗಿದ್ದರೆ ಕ್ಷೇಮವಾಗಿ ಇದ್ದ ಹಾಗಾ?
‘ನೀನು ಅಲ್ಲಿ ನೌಕರಿ ಮಾಡಬಹುದಲ್ಲ. ನಾಲ್ಕು ಗೋಡೆಗಳ ನಡುವೆ ಯಾಕಿರಬೇಕು?’

‘ನಾನು ಮಾಡಲ್ಲ.’
‘ಯಾಕೆ? ಇಲ್ಲಿ ಈ ಕಷ್ಟದ ಕೆಲಸ ಮಾಡಿ ಹೈರಾಣಾಗಲು ಸಿದ್ಧವಾಗಿದೀಯ. ಅಲ್ಲಿ ನೌಕರಿ ಮಾಡೋದಿಲ್ಲ ಅಂತ ಯಾಕೆ ಅನ್ನುತ್ತೀಯ?’
‘ಯಾಕೆ? ನಾನು ಬೇಸಾಯ ಮಾಡಬೇಕೆಂದರೆ ಯಾಕೆ ನಿಮಗೆ ಅರ್ಥ ಆಗಲ್ಲ?’

‘ನಿನಗೆ ಅಮೇರಿಕಾಗೆ ಹೋಗಲು ಇಷ್ಟವಿಲ್ಲವಾ? ಹೋಗಲಿ. ಇನ್ನೊಬ್ಬ ಇಲ್ಲೇ ಇರುವ ಹುಡುಗನನ್ನು ಮದುವೆ ಆಗುವೆಯಾ? ಆಗ ಆತನನ್ನು ಒಪ್ಪಿಸಿಕೊಂಡು ಬೇಸಾಯವೋ ಮತ್ತೊಂದೋ ಮಾಡಿಕೋ’
ಚಂದ್ರಂ ಅಕ್ಕರೆಯಿಂದ ತಂಗಿಯನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಿದ.

‘ನನ್ನ ಮದುವೆಗೆ ಯಾರೂ ಸಂಬಂಧಗಳನ್ನು ನೋಡಬೇಡಿ. ನನಗೆ ಮದುವೆ ಆಗಬೇಕೆನಿಸಿದಾಗ ಆಗತೇನೆ. ಸದ್ಯಕ್ಕೆ ನನ್ನ ಪ್ರಿಯಾರಿಟಿ ಬೇಸಾಯ. ಮೊದಲು ನಾಲ್ಕೈದು ವರ್ಷಗಳ ಕಾಲ ನಾನು ಅಂದುಕೊಂಡದ್ದು ಸಾಧಿಸಿದ ಆಮೇಲೆ ಮದುವೆ ಯೋಚನೆ, ಅಷ್ಟೇ. ಈಗ ಈ ಹುಡುಗನ ಕುರಿತು ಎಲ್ಲರೂ ಮರೆತರೆ ಒಳ್ಳೆಯದು.’
ಮಾಧವಿ ಎದ್ದು ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡು ಅಳುತ್ತಿದ್ದಳು.

ಇದೆಲ್ಲಾ ಹೀಗೇ ನಡೆಯುತ್ತದೆಂದೂ, ವಿರೋಧವನ್ನು ಎದುರಿಸುವುದು ನಿಶ್ಚಿತವೆಂದು ಅವಳಿಗೆ ಮೊದಲೇ ಗೊತ್ತಿದ್ದರೂ ಸಹಿಸುವುದು ತುಂಬಾ ಕಷ್ಟವಾಗುತ್ತಿದೆ.
ಆದರೆ ಜಮೀನು, ಬೇಸಾಯದ ಯೋಚನೆ ಅವಳನ್ನು ಇನ್ನಿಲ್ಲದಂತೆ ಆವರಿಸಿದೆ.

ಕೋರ್ಸಿನ ಭಾಗವಾಗಿ ಅವಳು ಭೇಟಿ ಕೊಟ್ಟಿದ್ದ ಜಮೀನುಗಳನ್ನು ನೋಡಿದಾಗ ಆಕೆಗೆ ಆದ ಸಂತೋಷ, ಬದುಕಿನ ಕೊನೆಯವರೆಗೂ ಆ ಜಮೀನಿನಲ್ಲಿ ಇರಬೇಕೆಂದು ತನಗಾಗುತ್ತಿರುವ ತುಡಿತ ಇವುಗಳನ್ನು ಕಡೆಗಣಿಸಲು ಸಾಧ್ಯವಿಲ್ಲ.

ಕಡೆಗಣಿಸುವ ಅಗತ್ಯವಾದರೂ ಏನೆಂಬ ಪ್ರಶ್ನೆ ಆಕೆಯ ಆಂತರ್ಯವನ್ನು ಬಡಿದು ಎಬ್ಬಿಸುತ್ತಿತ್ತು. ಯಾವುದೋ ಒಂದು ನೌಕರಿ ಹಿಡಿದು, ಯಾರೋ ಗಂಡನ್ನು ಮದುವೆಯಾಗಿ ಆಕೆಯ ಸಂಬಳ ಅವನ ಸಂಬಳಕ್ಕೆ ಜೊತೆಯಾಗಿ, ಅವನ ಮಕ್ಕಳಿಗೆ ತಾಯಿಯಾಗಿ ಹಾಗೆ ಸುಖವಾಗಿ ಬದುಕುವವರು ಇರಬಹುದು. ಆದರೆ ಅಂಥ ಬದುಕು ಆಕೆಗೆ ಸುಖ ಕೊಡಲಾರದು.

ಈ ಹಾಳು ಜಗತ್ತಿನಲ್ಲಿ ಸುಖಕ್ಕೂ ಒಂದು ಮಾದರಿ ಸಿದ್ಧವಾಗಿಬಿಟ್ಟಿದೆ. ಯಾರ ಸುಖ ಅವರಿಷ್ಟವೆಂಬುದೇ ಇಲ್ಲ. ಬೇಸಾಯ ಮಾಡುವುದು ಸುಖವಲ್ಲ, ನೌಕರಿ ಮಾಡುವುದು ಸುಖ. ನಡಿಗೆ ಸುಖವಲ್ಲ, ಕಾರು ಸುಖ. ಹಣ, ವಸ್ತುಗಳು, ಬೆವರಿನ ಪ್ರಮೇಯವೇ ಇಲ್ಲದ, ಮಣ್ಣಿನ ಹಂಗೇ ಇಲ್ಲದ ಬದುಕು ಸುಖವಾದ ಬದುಕು! ಇದನ್ನು ಅಲ್ಲಗಳೆದವರು ಮೂರ್ಖರು, ಅಸಮರ್ಥರು, ಹುಚ್ಚರು, ಕೈಲಾಗದವರು.ಯಾವ ಮನೆ ಹಾಳು ಕೆಲಸ ಮಾಡಿಯಾದರೂ ಸರಿ, ಹಣ, ವಸ್ತುಗಳು ಗಳಿಸುವವರೇ ಸಮರ್ಥರು. ಗಂಡಸರು ಈ ಸಮರ್ಥನೆಯನ್ನು ಒಳ್ಳೆಯದೋ, ಕೆಟ್ಟದೋ ಯಾವುದೋ ಕೆಲಸ ಮಾಡಿ ಸಾಬೀತು ಮಾಡಿಕೊಳ್ಳುತ್ತಾರೆ.

ಹೆಂಗಸರು ಒಬ್ಬ ಗಂಡನನ್ನು ಸಂಪಾದಿಸಿಕೊಂಡು ಅವನಿಗೆ ತಕ್ಕಂತೆ ನಡೆದುಕೊಂಡರೆ ಸಾಕು- ಎಲ್ಲಾ ಸಿಕ್ಕಿಬಿಡುತ್ತವೆ.

ಎಲ್ಲರಿಗೂ ಇದೇ ಯೋಚನೆ. ಆಕೆಯ ಗೆಳತಿಯರೆಲ್ಲರೂ ಮದುವೆಗಾಗಿ ತುದಿಗಾಲ ಮೇಲೆ ನಿಂತವರೇ- ಅವರಿಗೆ ಈ ಸಂಬಂಧ ಸಿಕ್ಕಿದ್ದರೆ ಕುಣಿದು ಕುಪ್ಪಳಿಸುತ್ತಿದ್ದರು.

ರೇಷ್ಮೆ ಸೀರೆ ಉಡುತ್ತಾರೆ. ಹುಚ್ಚೆದ್ದವರಂತೆ ಅಲಂಕರಿಸಿಕೊಳ್ಳುತ್ತಾರೆ. ಕೆನ್ನೆಗೆ ರೋಜ್ ಬಳಿದು ನಕ್ಕಾಗಲೆಲ್ಲಾ ಬಿಂಕ ತೋರಿ, ನಾಚಿಕೆ ನಟಿಸುತ್ತಾರೆ ಆಕೆಗೆ ಇದೆಲ್ಲಾ ಅಲರ್ಜಿ.

ಫ್ಯಾಮಿಲಿಯನ್ನು ನೋಯಿಸುವುದು ಅವಳಿಗೂ ಕಷ್ಟವಾಗಿದೆ. ಆದರೆ ತನ್ನ ಯೋಚನೆ ತಪ್ಪೆಂದು ಅವಳಿಗೆ ಅನಿಸುತ್ತಿಲ್ಲ.

ಇದೆಲ್ಲಾ ಕೊನೆಗೊಳ್ಳುವುದು ಯಾವಾಗ? ನನಗೆ ಜಮೀನು ಸಿಗುವುದಾ? ಈ ಕಷ್ಟದ ಸಮಯಕ್ಕೆ ನನ್ನ ಬೆನ್ನಿಗೆ ಒಬ್ಬರೂ ಇಲ್ಲವಾದರಲ್ಲ ಎಂಬ ಕೊರಗೇ ಅವಳನ್ನು ಹೆಚ್ಚಾಗಿ ಕುಗ್ಗಿಸಿತ್ತು. ಎರಡು ದಿನಗಳ ಕಾಲ ಆ ಮನೆಯಲ್ಲಿ ಯಾರೂ ಯಾರೊಟ್ಟಿಗೂ ಮಾತಾಡಲಿಲ್ಲ. ಮೂರನೆಯ ದಿವಸ ರಾಮಲಕ್ಷ್ಮಿ ಬಂದು ಅಳುತ್ತಾ ‘ನಿನ್ನ ಅಪ್ಪ ಎರಡು ದಿನದಿಂದ ಊಟ ಮುಟ್ಟಲಿಲ್ಲ! ಯಾಕಿಷ್ಟು ಸತಾಯಿಸುತ್ತೀ?ಅಪ್ಪ ಹೇಳಿದಂತೆ ನಡೆದುಕೋ’ ಅಂದಳು.
‘ಅಪ್ಪ ಎರಡು ದಿವಸ ಊಟ ಬಿಟ್ಟರೆ ನಾನು ನನ್ನ ಇಡೀ ಜೀವನ ಬದಲಾಯಿಸಿಕೊಳ್ಳಲಾ ಅಮ್ಮ? ನನ್ನ ಬದುಕಿನ ಬೆಲೆ ಅಪ್ಪನ ಎರಡು ದಿನದ ಊಟಕ್ಕೆ ಸಮವಾ?’

ಮಾಧವಿಯ ಮಾತಿಗೆ ವಿಪರೀತ ಸಿಟ್ಟುಗೊಂಡ ರಾಮಲಕ್ಷ್ಮಿ ಮಗಳನ್ನು ಶಪಿಸುತ್ತಾ ಹೊರ ನಡೆದಳು.
ಮರುದಿವಸ ಚಲಪತಿರಾವ್ ಎಂದಿನಂತೆ ಊಟ ಮಾಡಿದ.

ಊಟದ ನಂತರ ಮಾಧವಿ ಯಾವ ಸಂಕೋಚವೂ ಇಲ್ಲದೇ ಕೇಳಿದಳು.

‘ನನಗೆ ಹಣ ಬೇಕು ಅಪ್ಪಾ. ಅಲ್ಲಿ ವ್ಯಾಪಾರ ಕುದುರಿದೆ. ತಿಂಗಳೊಳಗೆ ರಿಜಿಸ್ಟರ್ ಮಾಡಿಸಿಕೊಳ್ಳಬೇಕು.ʼ
ಚಲಪತಿರಾವ್ ಮಾತಾಡಲಿಲ್ಲ.

ಮತ್ತೆ ಕೇಳಿದಳು. ಅಪ್ಪ ಮತ್ತೆ ಮಾತಾಡಲಿಲ್ಲ.
‘ಅಪ್ಪಾ ಏನಾದರೂ ಮಾತಾಡು. ಹಣ ಬೇಕು’.
‘ನಿನಗೆ ಒಂದು ಪೈಸೆ ಕೂಡಾ ಕೊಡಲ್ಲ. ಏನಾದರೂ ಮಾಡಿಕೋ’ ನಿರ್ಲಕ್ಷ್ಯದಿಂದ ಹೇಳಿದ ಚಲಪತಿ.

‘ಯಾಕೆ ಕೊಡಲ್ಲ’? ಮಾಧವಿ ದೃಢವಾಗಿ ಕೇಳಿದಳು.
‘ಯಾಕೆ ಕೊಡಲಿ? ಯಾಕೆ ಕೊಡಬೇಕು? ನನಗಿಷ್ಟವಿಲ್ಲ ಕೊಡೋದಿಲ್ಲ?
‘ಅಣ್ಣಂದರಿಗೆ, ಅಕ್ಕಂದಿರಿಗೆ ಕೊಟ್ಟಾಗ ನನಗೆ ಯಾಕೆ ಕೊಡೋದಿಲ್ಲ?’
‘ಅವರು ನಾನು ಹೇಳಿದ ಹಾಗೆ ನಡೆದುಕೊಂಡರು. ಅಕ್ಕಂದಿರ ಮದುವೆಗೆ ಕೊಟ್ಟೆ. ನೀನು ಮದುವೆಯಾದರೆ ನಿನಗೂ ಕೊಡುವೆ. ಅಣ್ಣಂದಿರಿಗೆ ಮನೆ ಕೊಟ್ಟೆ.ತಗೊಳ್ಳೋದಕ್ಕೆ ಕೊಟ್ಟೆ.ʼ
‘ನನಗೆ ಜಮೀನು ತಗೊಳ್ಳೋದಕ್ಕೆ ಕೊಡುʼ.
‘ಕೊಡಲ್ಲ’

‘ಹೀಗೆ ಸಾಧ್ಯವಿಲ್ಲ ಅಂತ ಕಾಣತ್ತೆ, ಆಸ್ತಿಯಲ್ಲಿ ನನ್ನ ಪಾಲು ನನಗೆ ಬೇಕು.’
‘ನನ್ನ ಸ್ವಯಾರ್ಜಿತ. ನನ್ನಿಷ್ಟ. ನಾನು ಜೀವಂತವಾಗಿರುವವರೆಗೆ ಯಾರಿಗೂ ಕೊಡೋ ಅಗತ್ಯವಿಲ್ಲ. ಸಾಯುವಾಗ ಯಾರಿಗೆ ಬರೆದರೆ ಅವರಿಗೇ ಹೋಗುತ್ತೆ. ನಿನಗೆ ಒಂದು ಪೈಸೆ ಕೂಡಾ ಸಿಗದ ಹಾಗೆ ವಿಲ್ ಬರೆದ ನಂತರವೇ ನಾನು ಸಾಯೋದು.ʼ

‘ಯಾಕಪ್ಪಾ ನನ್ನ ಮೇಲೆ ಅಷ್ಟೊಂದು ಸಿಟ್ಟು ನಿನಗೆ?’
‘ಯಾಕಂತ ನಿನಗೆ ಚೆನ್ನಾಗಿ ಗೊತ್ತು.’
‘ಗೊತ್ತಾಗುತ್ತಿಲ್ಲ. ನಿಜಕ್ಕೂ ಗೊತ್ತಾಗುತ್ತಿಲ್ಲ. ಮೇಲಾಗಿ ನಿನ್ನ ದಡ್ಡತನಕ್ಕೆ ಆಶ್ಚರ್ಯ ಆಗುತ್ತಿದೆ.’ ಮಾಧವಿಯ ಮಾತುಗಳನ್ನು ಕೇಳಲಾಗದೆ ರಾಮಲಕ್ಷ್ಮಿ,
‘ಏನೇ? ಬಾಯಿಗೆ ಬಂದದ್ದು ಮಾತಾಡೋದಾ?ʼ ಎಂದು ಮಗಳನ್ನು ತಡೆಯಲು ಪ್ರಯತ್ನಿಸಿದಳು‌.
ಮಾಧವಿ ನಿಲ್ಲುವ ಸ್ಥಿತಿಯಲ್ಲಿರಲಿಲ್ಲ.

‘ನಿಜಕ್ಕೂ ದಡ್ಡತನವೇ ಅಮ್ಮಾ. ನನ್ನನ್ನು ಮದುವೆ ಆಗುವವನಿಗೆ ಯಾವ ಅಡ್ಡಿಯೂ ಇಲ್ಲದೆ ಲಕ್ಷಗಟ್ಟಲೆ ಹಣ ಕೊಡಲು ಸಿದ್ಧರಿದ್ದೀರಿ. ಮದುವೆ ಹಂಗಾಮಾಗೋಸ್ಕರ ಲಕ್ಷಗಟ್ಟಲೆ ಹಣವನ್ನು ಗಲೀಜು ನೀರು ಚೆಲ್ಲುವ ಹಾಗೆ ಚೆಲ್ಲೋದಕ್ಕೆ ಸಿದ್ಧವಾಗಿದ್ದೀರಿ. ಮದುವೆ ಆಗುವವನು ನನ್ನನ್ನು,ನನ್ನ ಹಣವನ್ನು ಹಾಳುಮಾಡುತ್ತಾನೆಂಬ ಅನುಮಾನ ಕೂಡಾ ನಿಮಗೆ ಬರಲ್ಲ. ನಾನು ಕೇಳಿದ್ದು ಜಮೀನು. ಭೂಮಿಯ ಬೆಲೆ ಹೆಚ್ಚಾಗುವುದೆಂದು ಗ್ಯಾರಂಟಿ ಇದ್ದರೂ ನನಗೆ ಹಣ ಕೊಡಲು ನೀವು ಸಿದ್ಧರಿಲ್ಲ. ಯಾಕೆ? ಯಾಕೆ?ʼ
ಮಾಧವಿ ಅಳುತ್ತಲೇ ಕೇಳಿದಳು.

‘ನೀನು ಹೆಣ್ಣು. ಮದುವೆಯಾಗಿ ಮಕ್ಕಳನ್ನು ಹಡೆಯಬೇಕಾದವಳು. ನಿನ್ನ ಗಂಡ ಒಪ್ಪಿದರೆ ಯಾವುದೋ ಒಂದು ನೌಕರಿ ಮಾಡಿ ಅವನಿಗೆ ಹೊಂದಿಕೊಂಡು ಬಾಳಬೇಕು. ಅದೆಲ್ಲಾ ಬಿಟ್ಟು ಮದುವೆ ಇಲ್ಲದೇ ನಿನ್ನ ಮನಸಿಗೆ ಬಂದಂತೆ ಆಡಿದರೆ ನಾವು ಸುಮ್ಮನಿರುವುದಿಲ್ಲ. ನಿನಗೆ ಹಣ ಕೊಡೋಕೆ ಸಾಧ್ಯವಿಲ್ಲ.’
ಚಲಪತಿರಾವನ ಸಿಟ್ಟಿಗೆ ಅಳಿಯಂದಿರೂ ನಿಬ್ಬೆರಗಾಗಿ ಮುದುಡಿಕೊಂಡರು. ಆದರೆ ಆತನ ಕೋಪದೊಂದಿಗೆ ಮಾಧವಿಯ ಹಟವೂ ಹೆಚ್ಚಾಯಿತು.

‘ಅಪ್ಪಾ ನನಗೆ ಈವರೆಗೆ ಮದುವೆ ಎಂದರೆ ವಿರೋಧ ಇದ್ದಿಲ್ಲ. ಅದರ ಬಗ್ಗೆ ತಲೆಕೆಡಿಸಿಕೊಳ್ಳಲೂ ಇಲ್ಲ. ಆದರೆ ಹೆಣ್ಣಿಗೆ ಮದುವೆಯೇ ಗತಿ ಎಂದು ನೀವೆಲ್ಲಾ ಹೇಳುತ್ತಿದ್ದರೆ, ಹಾಗೆ ಬದುಕುವುದು ಬಿಟ್ಟು ಉಳಿದಂತೆ ಬೇರೆ ದಾರಿಯೇ ಅವಳಿಗಿಲ್ಲವೆಂದು ನೀವು ಶಪಿಸುತ್ತಿದ್ದರೆ ಮದುವೆ ಅಂದರೇನೇ ನನಗೆ ಅಸಹ್ಯ ಆಗುತ್ತಿದೆ. ನನಗೆ ಮದುವೆಯೇ ಬೇಡ.ʼ
‘ನೀನು ಏನು ಮಾಡುತ್ತೀಯೋ ನನಗೆ ಬೇಕಾಗಿಲ್ಲ. ನನ್ನ ಕಡೆಯಿಂದ ಒಂದು ಪೈಸೆ ಕೂಡ ನಿನಗೆ ಬರಲ್ಲ. ರಾಮೂ ಅವಳ ಒಡವೆ ಎಲ್ಲಾ ವಾಪಸು ತೆಗೆದೊಕೊಂಡು ಬಿಡು’.

ಚಲಪತಿರಾವ್ ಅಲ್ಲಿಂದ ಹೋಗಿಬಿಟ್ಟ.
ರಾಮಲಕ್ಷ್ಮಿ ಅಡುಗೆ ಮನೆಯ ಹೊಸ್ತಿಲಿನ ಬಳಿ ಕೂತು ಅಳುತ್ತಿದ್ದಳು.
ಸುಮಿತ್ರ ತಟ್ಟನೆ ಬಂದು, ‘ಅಮ್ಮಾ ತಂಗಿಯ ಬಳೆ, ಸರ, ವಾಲೆ ತೆಗೆದುಕೊಂಡುಬಿಡು’ ಅಂದಳು.
ರಾಮಲಕ್ಷ್ಮಿ ಬಿಕ್ಕಳಿಸುತ್ತಲೇ ‘ಮುಚ್ಚೇ ಬಾಯಿ. ನಿನಗೆ ತಲೆಕೆಟ್ಟಿದೆ’ ಎಂದು ರೇಗಿದಳು.
‘ಹಾಗಲ್ಲ ಅಮ್ಮಾ. ಒಡವೆ ಮಾರಿ ಬದುಕಬಲ್ಲೆ ಅಂದುಕೊಂಡು ಮನೆ ಬಿಟ್ಟು ಹೋದರೆ ಏನು ಗತಿ. ಹೇಗಾದರೂ ಮಾಡಿ ಅವಳನ್ನು ತಡೆಯಬೇಕು. ಮನೆಬಿಟ್ಟು ಹೋಗಲು ಬಿಡಬಾರದು. ಅಪ್ಪ ಯಾಕೆ ಹಾಗೆ ಹೇಳಿದ ಯೋಚನೆ ಮಾಡು.’

ರಾಮಲಕ್ಷ್ಮಿಗೆ ಈಗ ಹೊಸ ಭಯ ಶುರುವಾಯಿತು. ಹುಡುಗಿ ಹಟ ಮಾಡುತ್ತಾಳೆ ಅಂದುಕೊಂಡರೆ ಈಗ ಮನೆಬಿಟ್ಟು ಕೂಡಾ ಹೋಗುತ್ತಾಳಾ?
‘ಒಡವೆ ಬಿಚ್ಚಿಕೊಡೆಂದು ಕೇಳೋಕೆ ನನಗೆ ಆಗಲ್ಲ ಕಣೇ. ಅಮ್ಮ ಕೇಳಿದಳೆಂದು ನೀನೇ ಕೇಳಿ ತೆಗೆದುಕೋ’
ಮಗಳು ಯಾವ ಅಪಾಯಕ್ಕೆ ಸಿಕ್ಕಿ ಬೀಳುತ್ತಾಳೋ ಎಂದು ರಾಮಲಕ್ಷ್ಮಿಗೆ ದಿಕ್ಕು ತೋಚುತ್ತಿಲ್ಲ.

ಶಾಂತಿ ಮಾಧವಿಯನ್ನು ಹುಡುಕಿ ಹೋಗುವ ಹೊತ್ತಿಗೆ ಮಾಧವಿ ಬಳೆ, ಸರವನ್ನು ಕಳಚಿ ವಾಲೆಗಳು ಬಿಚ್ಚುತ್ತಿದ್ದಳು.
ಸುಮಿತ್ರ ಅಲ್ಲೇ ನಿಂತು ತಟ್ಟನೆ ಅವನ್ನು ತೆಗೆದುಕೊಂಡು ತನ್ನ ಪೆಟ್ಟಿಗೆಯಲ್ಲಿ ಹಾಕಿಕೊಂಡಳು.
ಮಾಧವಿಗೆ ಒಂದು ಕ್ಷಣವೂ ಆ ಮನೆಯಲ್ಲಿ ಇರಲಾಗಲಿಲ್ಲ. ಆದರೆ ಎಲ್ಲಿಗೆ ಹೋಗಬೇಕು, ಏನು ಮಾಡಬೇಕೆನ್ನುವುದು ಮಾತ್ರ ಗೊತ್ತಾಗುತ್ತಿಲ್ಲ.

ಈ ಟೆನ್ಷನ್ ತಾಳಲಾಗದೆ, ಅಳಿಯಂದಿರು, ಸೊಸೆಯಂದಿರು ನಡುಮನೆಯಲ್ಲಿ ಅವರಿಗಿಷ್ಟವಾದ ‘ಹಮ್ ಆಪ್ಕೆ ಹೈ ಕೌನ್’ ಸಿನಿಮಾ ನೋಡುತ್ತಿದ್ದರು.

ಮಾಧುರೀ ದೀಕ್ಷಿತ್ ‘ದೀದೀ ತೇರಾ ದೇವರ್ ದಿವಾನಾ’ ಎಂದು ಹಾಡುತ್ತಿದ್ದರೆ ಅವರೆಲ್ಲರಿಗೂ ತಮ್ಮ ಬದುಕಿನಲ್ಲೂ ಆ ಘಟನೆಯನ್ನು ನೋಡಿಕೊಳ್ಳುವ ಅದೃಷ್ಟವನ್ನು ಮಿಸ್ ಮಾಡಿದ ಮಾಧವಿಯ ಮೇಲೆ ಮತ್ತೆ ಹೊಸದಾಗಿ ಸಿಟ್ಟು ಬಂದಿತ್ತು. ‘ಹಮ್ ಆಪ್ ಕೆ ಹೈ ಕೌನ್’ ಎನ್ನುವ ಪ್ರಶ್ನೆ ಅಲ್ಲಿದ್ದವರೆಲ್ಲರಿಗೂ ಕೇಳಿ ನಾನು ನಿಮಗೆ ಯಾರಿಗೂ ಏನೂ ಅಲ್ಲ. ನೀವು ಮದುವೆ ಆಟ ಆಡಬೇಕೆಂದುಕೊಂಡಾಗ ಮದುಮಗಳ ಗೊಂಬೆ. ಮದುಮಗಳಾಗಲು ಒಪ್ಪದಕ್ಕಾಗಿ ಆಟ ನಿಲ್ಲಿಸಿ ನನ್ನ ಆಚೆ ಎಸೆದುಬಿಟ್ಟಿರಿʼ ಎಂದು ಹೇಳಬೇಕೆನಿಸಿತು ಮಾಧವಿಗೆ.

ಆ ಹಾಡು, ನಗು, ಕೋಲಾಹಲಗಳಿಂದ ಹಿಂಸೆಯಾಗಿ ಹಿತ್ತಿಲಿನ ಬಾದಾಮಿ ಮರದ ಕೆಳಗೆ ಕೂತಳು. ತುಂಬಾ ಹೊತ್ತು ಹಾಗೇ ಯೋಚಿಸುತ್ತಾ ಕೂತಳು. ಅರಿವಿಲ್ಲದೆ ಜೋಂಪು ಹತ್ತಿ ಮರಕ್ಕೆ ಒರಗಿದಳು.

ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ವೆಂಕಾಯಮ್ಮ ನಿಧಾನವಾಗಿ ಕೋಲು ಹಿಡಿದು ಹೆಜ್ಜೆ ಹಾಕುತ್ತಾ ಹಿತ್ತಿಲಿಗೆ ಬಂದು ಮಾಧವಿಯನ್ನು ನೋಡಿದಳು.
ಕೋಲಿನಿಂದ ಮಾಧವಿಯ ಭುಜದ ಮೇಲೆ ತಟ್ಟಿದಾಗ, ಮಾಧವಿ ಗಲಿಬಿಲಿಯಾಗಿ ತಟ್ಟನೆ ಎದ್ದಳು. ಎದುರಿಗಿದ್ದ ಅಜ್ಜಿಯನ್ನು ನೋಡುತ್ತಲೇ ಸಾವರಿಸಿಕೊಂಡು ಕೂತಳು.

ವೆಂಕಾಯಮ್ಮ ಕೂಡ ಮೊಮ್ಮಗಳ ಪಕ್ಕದಲ್ಲೇ ಕುಸಿದು ಕುಳಿತು ‘ಇದೇನಿದು ಮದು ಮಗಳು ಹೀಗೆ ಬಿಸಿಲಲ್ಲಿ ಮಲಗಿದಿ’ ಅಂದಳು.
ಮಾಧವಿಗೆ ಸಿಟ್ಟು ಬಂದು ಆ ಮುದುಕಿಯ ಮೇಲೆ ರೇಗಿದಳು.
‘ಯಾರು ನಿನಗೆ ಹೇಳಿದ್ದು ನಾನು ಮದುಮಗಳು ಅಂತ? ನಾನು ಮದುಮಗಳಲ್ಲ. ನಾನು ಮದುವೆ ಮಾಡಿಕೊಳ್ಳಲ್ಲ. ಇನ್ನೊಂದು ಸಾರಿ ಯಾರಾದರೂ ಮದುಮಗಳು ಅಂದರೆ ಕೊಂದುಬಿಡ್ತೇನೆ’.

ವೆಂಕಾಯಮ್ಮಳ ಕಣ್ಣ ಕೆಳಗಿನ ಸುಕ್ಕಿನ ಗೆರೆಗಳು ಆಶ್ಚರ್ಯದಿಂದ ಮೇಲಕ್ಕೆದ್ದು ನೋಡಿದವು.
‘ಯಾಕೆ ಮದುಮಗ ಇಷ್ಟವಾಗಿಲ್ಲವಾ?’ ನಿಧಾನವಾಗಿ ಕೇಳಿದಳು.

‘ಮದುಮಗ ಯಾವನೋ ಯಾರಿಗೆ ಗೊತ್ತು? ನಾನು ನೋಡಿಲ್ಲ. ನನಗೆ ಮದುವೇನೇ ಬೇಡ. ನಾನು ಜಮೀನು ಖರೀದಿ ಮಾಡಿ ಬೇಸಾಯ ಮಾಡ್ತೇನೆ. ಆ ದರಿದ್ರದ ಮದುಮಗನಿಗೆ ಲಕ್ಷಗಟ್ಟಲೆ ಹಣ ಸುರಿಯೋಕೆ ಸಿದ್ಧವಂತೆ, ನನಗೆ ಒಂದು ಪೈಸೆ ಕೂಡಾ ಕೊಡೋದಿಲ್ಲವಂತೆ. ಎಲ್ಲಾ ನಿನ್ನ ಮಗನ ಸ್ವಯಾರ್ಜಿತವಂತೆ. ನಾನು ಬೀದಿ ಬೀದಿ ಅಲೆದು ಬೇಡಿಕೊಂಡು ತಿಂದರೂ ಪರವಾಗಿಲ್ಲ, ಮದುವೆ ಮಾಡಿಕೊಳ್ಳದಿದ್ದರೆ ನನ್ನನ್ನು ಮನೆಯಿಂದ ತಳ್ಳುತ್ತಾರಂತೆ. ನೋಡು ನನ್ನ ಬಳೆ, ಸರ ಎಲ್ಲಾ ಕಿತ್ತುಕೊಂಡರು’. ಎಂದೂ ತುಟಿ ಬಿಚ್ಚದ ಅಜ್ಜಿಯ ಮಡಿಲಲ್ಲಿ ತಲೆ ಇಟ್ಟು ಆ ಹುಡುಗಿ ಅಳುತ್ತಿದ್ದಳು. ಮನುಷ್ಯ ಸಾಂಗತ್ಯದ ಅನಿವಾರ್ಯತೆ ಎಷ್ಟಿದೆ ಎಂದು ಆ ಹುಡುಗಿಗೆ ಆಗ ಅರಿವಾಯಿತು.
ಈ ಮುದಿ ಜೀವದ ಸ್ಪರ್ಶವೇ ನನಗಿಷ್ಟು ಸಾಂತ್ವನ ಕೊಟ್ಟರೆ ನನ್ನನ್ನು ಅರ್ಥ ಮಾಡಿಕೊಂಡು ಬೆಂಬಲಿಸುವವರೇ ಇದ್ದಿದ್ದರೆ ಎಷ್ಟು ನಿರಾಳವಾಗಿರುತ್ತಿತ್ತು. ಈ ಗಂಡಾಂತರ ದಾಟುವುದು ಎಷ್ಟೊಂದು ಸುಲಭವಾಗುತ್ತಿತ್ತು ಎಂಬ ಯೋಚನೆ ಹುಟ್ಟಿ ಆ ಹುಡುಗಿ ಮತ್ತಷ್ಟು ಬಿಕ್ಕಳಿಸಿದಳು.

ವೆಂಕಾಯಮ್ಮಳಿಗೂ ತನ್ನವರ ಸ್ಪರ್ಶ ದೂರವಾಗಿ ವರ್ಷಗಳೇ ಕಳೆಯಿತೇನೋ ಮಾಧವಿಯ ತಲೆ ಸವರುತ್ತಾ
‘ಅಳಬೇಡ ಕಣವ್ವಾ ಅಳಬೇಡ’ ಎಂದು ತಾನೂ ಕಣ್ಣೀರಾದಳು.

| ಮುಂದುವರೆಯುವುದು |

‍ಲೇಖಕರು Admin

October 26, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: