ನೂತನ ದೋಶೆಟ್ಟಿ ಹೊಸ ಕವಿತೆ – ಅಮ್ಮ ಅರ್ಥ ಆಗಲು…

ನೂತನ ದೋಶೆಟ್ಟಿ

ಶಾಲೆಗೆ ಟೈಮಾಯ್ತು ಏಳು
ಅಮ್ಮ ಎಬ್ಬಿಸುತ್ತಿದ್ದಾಗ
ಅವಳ ಮೇಲೆ ನಿದ್ದೆ ಕೆಡಿಸಿದ ಕೋಪ.
ಸ್ಕೂಟಿಯಲ್ಲಿ ಗಡಬಡಿಸಿ
ಮಗನ ಶಾಲೆ ತಲುಪಿದಾಗ
ಮನೆಯ ಬಾಗಿಲಲ್ಲೇ
ನೇತಾಡುತ್ತಿದ್ದ ಕೀಲಿಕೈಯಲ್ಲಿ
ತರಕಾರಿ ಅರ್ಧ ಹೆಚ್ಚಿ ಗಡಬಡಿಸಿ ಬಂದು
ಏಳು ಮುಕ್ಕಾಲು ಆಯ್ತು
ಅಮ್ಮ ಕೊಟ್ಟ ಕೊನೇ
ವಾರ್ನಿಂಗ್ ಸಿಲುಕಿ ಅಣಕಿಸಿತ್ತು

ಅಮ್ಮನ ಧಸಭಸ ಬೈಯ್ಗಳು
ಹಬ್ಬಗಳಲ್ಲೂ ಕಣ್ಣೀರಾಡಿಸಿತ್ತು.
ಗಂಡನ ವರಾತ
ಕಷ್ಟಕ್ಕಾಗದ ಕುಟುಂಬ
ಸೀರೆಯಂತೆ ಉಟ್ಟ ಜವಾಬ್ದಾರಿಯಲ್ಲಿ
ಅಮ್ಮನ ಅಸಹಾಯಕತೆ ಅಳುತ್ತಿತ್ತು

ದನ ಕರು, ಮನೆ
ಮುಸುರೆ ಮಕ್ಕಳು
ಅಡಿಗೆ ಶಾಲೆ ಖರ್ಚು
ಕಳೆದು ಉಳಿದ ಅವಳ ಸುಖಕ್ಕೆ
ಆಗಾಗ ಅಮೃತಾಂಜನ್ ಉಜ್ಜುತ್ತಿದ್ದ ನನಗೆ
ಅಮ್ಮನ ತಲೆಬೇನೆಗೆ ಕಾರಣ
ಅಪ್ಪನೇ? ಮಕ್ಕಳೆ ?
ಗೊಂದಲವಿತ್ತು.
ಕೆಲಸ ಕಾರ್ಯವೇನು ಮಹಾ !
ಮಿಡಿವ ಮನಸಿನ ಹಂಬಲ
ಹೇಗಿದ್ದೀಯಾ ಎಂದೂ ಕೇಳಲಾರದ
ಬಿಡಲಾರದ ಸಂಬಂಧ ಸ್ನೇಹ
ಹಗಲು ರಾತ್ರಿಗಳ ಹೈರಾಣು ಮಾಡಿದಾಗ
ತಲೆನೋವು ಗುಳಿಗೆ ತಿನ್ನಬಾರದೆಂದು
ನಿರ್ಧಾರ ಮಾಡಿದ್ದು.

ದಿನವಿಡೀ ಅಟ್ಟು, ಇಕ್ಕಿ, ಉಂಡು
ಸುಖವನ್ನು , ಉಡುವ ಸೀರೆಯಲ್ಲೋ
ತೊಡುವ ಬಂಗಾರದಲ್ಲೋ
ಕಂಡಿದ್ದು ಬೇರೆ ವಿಧಿಯಿಲ್ಲದೇ.
ಬಸಿರು, ಹೆರಿಗೆ , ಬೇನೆ, ಚಾಕರಿ
ರಸಹೀರಿದ ಕಬ್ಬಿನ ಸಿಪ್ಪೆಯಂತೆ
ಒಣಗಿಸಿ ಬಿಸುಟಿದರೂ
ಆ ಮುಖದ ತೇಜಸ್ಸು
ಉತ್ಸಾಹದ ಆಯಸ್ಸು
ಎಂದೂ ಕಳೆಗುಂದಲಿಲ್ಲ
ಅಸಹನೆಗಾದರೂ ಪುರುಸೊತ್ತೆಲ್ಲಿ?
ಅಮ್ಮನ ನಗುವಿನ ಹಿಂದಿನ
ಎಲ್ಲ ದೊಂಬರಾಟ
ಈಗ ತಿಂಗಳ ಸಂಬಳದಲ್ಲಿ ಕುಣಿಯುತ್ತದೆ.

ಅಮ್ಮ ಏನೆಂದು ಅರಿವಾಗಲು
ಹೆಣ್ಣು ತಾಯಾಗಬೇಕು
ಮಕ್ಕಳು ಎದೆಯುದ್ದ ಬೆಳೆಯಬೇಕು
ಇಲ್ಲವೇ ಮುಪ್ಪು ಆವರಿಸಬೇಕು
ಅಮ್ಮನನ್ನು ಅರಿಯುವುದಕ್ಕೆ
ತಲಾಂತರಗಳು ಉರುಳಬೇಕು

ದೇವರಿಗೆ ಹೋಲಿಸಬೇಕಿನ್ನಿಸುವುದಿಲ್ಲ
ಅಮ್ಮನನ್ನು
ಭೂಮಿ ಆಕಾಶಕ್ಕೂ..
ಒಡನಿದ್ದು
ಬೆಳೆಸಿ, ಕಲಿಸಿ, ಬಲಿಸಿ
ಬಿಡುತ್ತಾಳಲ್ಲ ಗೆಲ್ಲಲು
ಸೋಲಿಗೆ ಸೆಟೆದು ನಿಲ್ಲಲು
ಕಾಣದ ಅವನಿಗಿಂತ ಒಂದು ಕೈ ಮೇಲಿವಳು.
ಜಗವೆಲ್ಲ ಅಮ್ಮನಾಗಲಿ.

‍ಲೇಖಕರು Admin

May 10, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: