ಬಣ್ಣಗಳ ನಂಬಿದವ
ದೇವು ಮಾಕೊಂಡ / ಸಿಂದ್ಗಿ
ಅವನು ಪ್ರಖರ ದೀಪಸ್ಥಂಭ
ನನ್ನೊಳಗೆ ಮಾತನಾಡುತ್ತಲೇ ಇದ್ದಾನೆ
ಬೆಳಕಿನ ಕಿರಣ ಒಳಚಾಚಿ
ಹೊರ ಹಣಕ್ಯಾಕಿ
ಫಕೀರ ನನ್ನೊಳಗಿನ ಎಲುಬಿನ ಹಂದರ
ಜೀವಸೆಲೆಯಾದ ಬೋನ್ ಮ್ಯಾರೊ
ಕತ್ತಲೆಗೆ ಹೂತು ಹೋಗಿರುವ ನನ್ನೆದೆಯ ಬೆಳಕು
ಆದರೆ
ಹೃದಯ ಕವಾಟದ ಕರಳು ಹಿಂಡುತ್ತಿದೆ
ಕರಾಳ ಕತ್ತಲು
ಅರುಣೋದಯದ ಕನಸಲಿ
ಬೆಳಕು ಬೆಳಗೆಂದು ಹೊರಬಂದಾಗ
ಹಗಲು ಹಡಗನೇರಿ
ಕಣ್ಣು ಹಾಯಿಸಿದೆಡೆ
ಕರಾಳ ನೀರಿನ ಸೆಲೆ
ಬೆನ್ನು ಹತ್ತಿ ಸ್ಪಟಲ ಮುರಿದಿದೆ
ಫಕೀರ
ಈ ಬದುಕೊಂದು ಸಮುದ್ರಯಾನ
ನೀ ಬಿಟ್ಟು ಹೋದ ದಾರಿಗಳ ಮೇಲೆ
ಪ್ರೀತಿಗೆ ಬರ ಬಂದಿದೆ
ಎರಡು ಕಡಲು ದಾರಿಗಳ ನಡುವೆ
ಘಟಸರ್ಪ ಬಿದ್ದಿದೆ
ಅಹಿಂಸೆ ಬೀಜ ಬಿತ್ತಲು ನೀನೊಮ್ಮೆ ಬಂದರಿಲ್ಲಿ
ಮುಳ್ಳು ಕಂಟಿಗಳ ಮೇಲೆ ನಿನ್ನ ನೋಡಬೇಕಾಗುತ್ತದೆ
ನೆತ್ತರ ಹರಿಸುವ ಗದ್ದೆಗೆ ಮುಖ ಮಾಡಿ
ಮತ್ತೆ ನಿನ್ನದೇ ಅಂಗಳದಲಿ
ನವಮಿ ಜನ್ಮಾಷ್ಠಮಿಯ ದಿನ
ಡೋಲು ನಗಾರಿ ಬಾರಿಸುವ ವಾರಿಗೆಯ ಜನರ ನಡುವೆ
ಶಬ್ದಗಳು ಕೇಳಿಸದೆ ಬಿದ್ದಿರುವೆ
ಹಸಿರು ಕೆಂಪು ಬಣ್ಣಗಳ ನಡುವೆ

ಫಕೀರ
ನನ್ನ ಈ ವಿಷಾದದ ದನಿ
ಯಾವ ಭಾಷೆಯಲಿ ಹೇಳಲಿ
ಒಂದು ಭಯ ಇನ್ನೊಂದು ಬಿಂಕ
ಕೆನ್ನಾಲಿಗೆ ಬಿದ್ದು ಧಗಧಗಸುತ್ತಿವೆ
ವಿಶ್ವಾಮಿತ್ರನ ಶಾಪಕ್ಕೆ ಸುಟ್ಟು ಹೋದ ಬಳ್ಳಿಗಳ ಹಾಗೇ
ಬಾ ಫಕೀರ
ನಿನ್ನದೇ ಸ್ವರ್ಗದಲಿ ನರಕ ತೋರಿಸುವೆ
ನಿನಗೂ ಜನ್ಮ ಕೊಟ್ಟ ನನ್ನವ್ವ
ಋತುಮತಿಯಾಗದೆ ಕುಳಿತಿದ್ದಾಳೆ
ಹಣೆಗೊಂದು ಹೊಟ್ಟೆಗೊಂದು ಕೈಯಿಟ್ಟು
ಶಿವನ ದಾರಿಯ ಹರಕೆಗೆ ಮೊರೆಯಿಟ್ಟು
ಹಾಡಾಗಿ ಬಾ ಫಕೀರ
ಒಂದು ಸ್ವರ ಇನ್ನೊಂದನ್ನು ಹಿಂಬಾಲಿಸುವ ಹಾಗೆ
ಇಲ್ಲಿ ಸ್ನೇಹವಿದೆ
ಇಲ್ಲಿ ಬಂಧನವಿದೆ
ಆದರೆ
ಪ್ರೀತಿ ಮೀಟುವ ವೀಣೆ
ಅಗೋಚರ ಹಾಡು
ತಂಬೂರಿ ನಾದ
ಎತ್ತರದಿ ಗೋಡೆ
ದೊಡ್ಡ ಗಡಿಯಾರ
ಎರಡಕ್ಕೂ ಒಂದೇ ಆಗಬೇಕಿದೆ ನೀನು
ನಿನಗೆಲ್ಲಿ ಬೇಧಭಾವ!
ಬಣ್ಣಗಳ ಅರಿತವ
ನುಂಗಿದವ!






0 Comments