ಮಂಜು ನಾರಾಯಣ್/ ವಸಂತಸೇನೆ
ನೀವು ಕಾಗದಗಳನ್ನು ಕೇಳುತ್ತೀರಿ
ನಮ್ಮಲ್ಲಿ ಈಗಲೂ
ಪ್ರೇಮ ಪತ್ರಗಳು ಮಾತ್ರವೇ ಉಳಿದಿವೆ.
ನೀವು ಕಾಗದದ ಚೂರುಗಳಲ್ಲಿ ಬದುಕುತ್ತೀರಿ
ನಾವು ರೊಟ್ಟಿ ತುಂಡುಗಳಿಗಾಗಿ ಹುಡುತ್ತೇವೆ.
ನೀವು ಅಡ್ಡದಾರಿ, ಹೆದ್ದಾರಿಗಳಲ್ಲಿ
ಸುಖವಾಗಿ ಸಾಗುತ್ತಲೇ ಇದ್ದೀರಿ
ಕಣಿವೆಗಳ ಕವಲು ದಾರಿಗಳಲ್ಲಿ,
ಕಾಲುದಾರಿಗಳಲ್ಲಿ
ನಡೆಯಲಾಗದೇ ಈಗಲೂ
ಕನಸುತ್ತಿರುವವರನ್ನು
ನಾವು ಕಂಡು ಕರೆದು ಬರುತ್ತೇವೆ
ಸ್ವಲ್ಪ ತಾಳಿರಿ
ನಿಮಗೆ ಮನುಜರ
ತಲೆಗಳ ಎಣಿಕೆ ಮುಖ್ಯ
ನಮಗೆ ಮನಸ್ಸುಗಳ
ಕೂಡಿಕೆ ಹೊಂದಾಣಿಕೆ.
ಗೊತ್ತಿಲ್ಲ
ನೀವು ಎಲ್ಲಿಂದಲೋ ಬಂದವರಂತೆ
ಆದರೆ ಇದು ಖಂಡಿತ ಹೌದು
ನಾವು ಎಲ್ಲೆಡೆಯೂ ಇರುವವರು
ಇಲ್ಲೂ ಅಲ್ಲೂ ಎಲ್ಲೆಲ್ಲೂ
ಬಣ್ಣಗಳ ಮೆಚ್ಚಿದವರು
ಬಣ್ಣಗಳ ಹಚ್ಚಿದವರು
ಬಣ್ಣಗಳಲ್ಲಿ
ಬೇಧಗಳೆಂದೂ ಕಾಣದವರು.

ಮನುಷ್ಯರಿಗಿಂತ ನಿಮಗೆ
ಈಶ ದೇಶ ಮುಖ್ಯ
ನಮಗೆ ಭಾವನೆ, ಭಾರತಗಳೇ ಮುಖ್ಯ.
ನಾವು ಬಿಸಿಲಿನಲ್ಲಿ
ಬೆಂದವರು
ನೀವು ನೆರಳು ಶಾಶ್ವತವೆಂದು
ನಂಬಿದವರು
ಮಾನವೀಯತೆಗೆ
ನೀವು ಪೆಟ್ಟು ಕೊಡುತ್ತೀರಿ
ಗುಂಡು ಹೊಡೆಯುತ್ತೀರಿ
ನಾವು ಪ್ರೇಮದಿಂದ ಆಲಂಗಿಸಿ
ನಿಮ್ಮ ಬಂದೂಕಿನ ನಳಿಕೆಯನ್ನೂ
ಚುಂಬಿಸುತ್ತೇವೆ.
ನೀವು ಭ್ರಮಾಲೋಕಗಳಲ್ಲಿ
ಬದುಕುತ್ತೀರಿ
ಬದುಕೆಂಬುದೇ ನಮಗೆ
ಭ್ರಮೆಗಳಾಗುತ್ತಿವೆ
ನಮಗೂ ಬದುಕಲು ಬಿಡಿ
ನಾವು
ರಂಗಭೂಮಿಯವರು
ಇಡೀ ಜಗವೇ ಒಂದು
ಭೂಮಿಯೆಂದಾದಮೇಲೆ
ದ್ವೇಷ ಗಡಿಗಳ ಗೊಡವೆ ನಮಗೇಕೆ?
ನಿಮಗೆ
ದ್ವೇಷ ಆವೇಶಗಳೇ
ಆಯುಧಗಳು
ನಾವು
ದಿನವೂ ಬದಲಿಸಲೇಬೇಕಾದ
ವೇಷಗಳು ಅವು.
ನೀವು ಕಾಯ್ದೆ, ವಾಯಿದೆಗಳ
ಮೂಲಕ ಸಂವಿಧಾನ ಬದಲಿಸುತ್ತೀರಿ
ನಾವು ನಿಮ್ಮನ್ನೇ ಬದಲಿಸುತ್ತೇವೆ.
ಕಾಲ ಬರಲಿ
ಹೂಗಳು ಅರಳಲಿ
ಸಹಜವಾಗಿ
ಸ್ವಾತಂತ್ರದ ತೋಟದಲ್ಲಿ
ಸಮಾನತೆಯು ಅರಳಲಿ.






ತುಂಬಾ ಇಷ್ಟವಾಯ್ತು