ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀವು ಇದ್ದಿದ್ದು ಹಾಡಿನ ಹಾಗೆಯೇ..

Shridhar Murthy_N S jayagopal

ಎನ್.ಎಸ್. ಶ್ರೀಧರ ಮೂರ್ತಿ

ಆರ್ ಎನ್ ಜಯಗೋಪಾಲ್ ನೆನಪಿನಲ್ಲಿ

ಮಾತು ಮಾತಿನ ನಡುವೆ
ಕವಿತೆ ಅರಳುವುದು
ಅದಕ್ಕೆ ನಾದದ ಸ್ಪರ್ಶ ಸಿಕ್ಕು ಹಾಡಾಗುವುದು
ಎಲ್ಲಕ್ಕೂ ಬೇಕು ಯೋಗಾ ಯೋಗ
ಸ್ವರಗಳ ಆಸರೆಯಲ್ಲಿ ಅಡಗಿ ಕುಳಿತ ಜಗ.

ಬಿರಿದ ಭೂಮಿಗೆ ಎಸೆದ ಬೀಜಗಳೆಲ್ಲ
ಬೇರು ಬಿಟ್ಟು ಆಕಾಶದತ್ತ ಮುಖ ನೆಟ್ಟು
ಸುಖದ ಸ್ವಪ್ನಗಾನವಾದದ್ದು ನಮ್ಮ ಕಾಲದ ಕೌತುಕವೇ!

ಪದಗಳ ಸಂತೆಯಲ್ಲಿ ಕುಳಿತ ಸಂತ ನೀವು
ನೊಟೇಷನ್ ಗಳ ಅಳತೆಗೆ
ಅಮೃತವಾಹಿನಿಯ ತುಂಬಿ ಹರಿಸಿದಿರಿ
ಹೂವಲಿ ಬೆರೆತ ಗಂಧದ ಹಾಗೆ
ಶೃತಿಯಲಿ ಬೆರೆತ ನಾದದ ಹಾಗೆ
ದೇಹದಿ ಕುಳಿತ ಆತ್ಮದ ಹಾಗೆ
ಹಾಡಿನ ಬೆರಗಲ್ಲಿ ನಮ್ಮನ್ನೇ ಮರೆಯುವಂತೆ ಮಾಡಿದಿರಿ.
ಪವಾಡವೆಂಬಂತೆ
ನಾದ ನರ್ತಕಿಯ ಸಂಭ್ರಮವನ್ನು
ಸ್ವರ್ಗದಿಂದ ಭೂಮಿಗೆ ತಂದು ಬಿಟ್ಟಿರಿ.

ನೀವು ಇದ್ದಿದ್ದೂ ಹಾಡಿನ ಹಾಗೆಯೇ
ಸಿಕ್ಕಿತೆಂದರೆ ಸಿಗದೇ ಹೋಗುವ
ಮಾಯೆಯ ಹಾಗೆ,
ರಾಗವಿಲಾಸದ ಕಡಲಲ್ಲಿ
ತೇಲಿಸುತ್ತ ಇಹದ ಹೊಸ್ತಿಲ
ದಾಟಿಸುವ ಜೋಗಿಯ ಹಾಗೆ.

ಜನಾರ್ಧನನ ಜೊತೆಯಲ್ಲಿ
ಲೀನವಾಗುವ ಲೀಲೆಯಲ್ಲಿ
ನೀವು ಬಿಟ್ಟಿದ್ದು ಅಪಾರ ಕೀರ್ತಿಯ ಅಸಂಖ್ಯ ಕುಸುಮಗಳನ್ನು
ಒಟ್ಟಿಗೇ ಸಂಭವಿಸಿದ ಹಲವು ಅವತಾರಗಳನ್ನು.

ನಿಮ್ಮ ಪಲ್ಲವಿ-ಅನುಪಲ್ಲವಿಯಲ್ಲಿ
ಇತಿಹಾಸ ವರ್ತಮಾನಗಳು ತೆಕ್ಕೆ ಹಾಕಿಕೊಂಡಿದ್ದವು
ಜೀವಂತ ಪ್ರತಿಮೆಗಳು ಎಲ್ಲಂದರಲ್ಲಿದ್ದವು
ಆದರೆ
ವಿವಾದಗಳ ಅಫೀಮು ಕುಡಿದು ಮತ್ತೇರಿದವರಿಗೆ
ಹಾಡಿನ ಜಾಡು ಸಿಕ್ಕಲಿಲ್ಲ
ನಿಮ್ಮ ಹೃದಯ ಪಲ್ಲವಿಗಳಲ್ಲಿದ್ದ
ಅವಳ ಅಂತರಂಗ ಅರಿವಾಗಲಿಲ್ಲ.
ದೇವತೆಗಳ ಜೊತೆ ಕಾಡು ಮೃಗಗಳು ಕೂಡ
ಕಾಲೆರಡ ಧರಿಸಿ
ಕಾರ್ಖಾನೆಯ ಪಾಳಿಗೆ ಸಿದ್ದರಾದರೂ
ನೀವು ಧ್ಯಾನ ಬಿಡಲಿಲ್ಲ
ಅಕ್ಷರದ ಗೆರೆ ಕೊರೆದ ಕಡೆ
ನಾದದ ಹೊನಲ ತಪ್ಪಿಸಲಿಲ್ಲ.

ಹಾಗಿದ್ದರೂ ಗುರುವೇ!
ರಾಮಾಯಣದ ಹೆಸರಿನಲ್ಲಿ
ನಿಮ್ಮ ಸುತ್ತ ಸೇರಿ ಬಿಟ್ಟರಲ್ಲ ರಾವಣರು
ಜಿಂಕೆಯ ಕತೆ ಹೇಳಿ ನಿಮ್ಮ ದಿಕ್ಕು ತಪ್ಪಿಸಿಬಿಟ್ಟರಲ್ಲ
ಮಾಲೆ ಹಾಕುವ ಮೊದಲೇ
ಮದುವೆ ಮಂಟಪವ ಹಾಳುಗೆಡವಿದರಲ್ಲ.

ಬೆಳಕನ್ನು ಕತ್ತಲೆ ಆವರಿಸಿ ಬಿಟ್ಟಿತು
ಮೂರನೆಯ ಕಣ್ಣಿಗೂ ಮಾಯೆ ಮುಸುಗಿತು
ತಲ್ಲಣದಲ್ಲಿ ಗಾಳಿ ಕಂಪಿಸಿತು
ಅಷ್ಟರಲ್ಲಿ ಆಗೋ ಮಿಂಚು
ಅದರ ಪರಿವಾರ ಗುಡುಗು
ಎಂದಿನ ಸಂಭ್ರಮದೊಂದಿಗೆ ಮಳೆ
ನಿಮ್ಮ ಬೃಂದಾವನದ ಸಂಭ್ರಮದಲ್ಲೀಗ ಇಳೆ.

‍ಲೇಖಕರು admin

31 July, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading