ನೀಲಿ ಮೂಗಿನ ನತ್ತು

ಎಚ್ ಆರ್ ಸುಜಾತ 

“ರಂಗವ್ವಾರೇ, ರಂಗವ್ವಾರೇ”

ದನ ಕೊಟ್ಟಿಗೆಗೆ ಬಂದಿದ್ವು . ಆ ಸದ್ದಲ್ಲಿ ಮುಂದ್ಗಡೇ ಚಾವಡಿ ಮೇಲಿಂದ ನೀಲಿ ಕೂಗಿದ್ದು ಅವರಿಗೆ ಕೇಳಲಿಲ್ಲ. ಸಾಯಂಕಾಲ ಆಗೋಗಿತ್ತು. ಕತ್ತಲು ಮನೆ ವಳಕೆ ಬರದಿಕ್ಕೆ, ಆಗ್ಲೆ ಹೊಂಚು ಹಾಕತಿತ್ತು. ಬಾವಿ ತಕೆ ಏನಾರ ಹೋಗೋವ್ರಾ? ಅಯ್ಯೋ ಶಿವನೆ ಅನ್ನಕಂದು ನೀಲಿ ಒಂದೇ ಉಸ್ರಿಗೆ ಮತ್ತದೇ ರಾಗದಲ್ಲಿ ಇನ್ನೊಸಿ ಧಡತ್ತಾಗಿ ಕೂಗ ಹಾಕಿದ್ಲು.

Nammuru-1ಸೌದೆ ಕೊಟ್ಟಿಗೇಲಿ ದಪ್ಪ ಸೌದೆ, ಅದರ ಮೇಲೆ ಸಣ್ಣ ಸೌದೆ ಇಟ್ಟಕಂಡು, ಅವಕ್ಕೆ ಬೆಂಕಿ ಹೊತ್ತಸೋಕೆ ಅಂತಲೇ ಪುಳ್ಳೆ ಪುಸ್ಕ ಮುರ್ದು ಜೋಡುಸ್ಕಂತಿದ್ದ ರಂಗವ್ವಾರ್ಗೆ ದನದ ಕೊಟ್ಟಿಗೆ ಸದ್ದನೂ ಮೀರಿದ ಈ ರಾಗ ಅದರೊಳಗಿದ್ದ ಗಾಢ ದುಖದ ಒಂದು ಎಳೆನೂ ಎಳಕಂಡುಬಂದು ಅವರೆದೆಗೆ ತಂದು ತಾಕಿಸದಂಗಾಯತು. ದಿನಾ ಬೆಳಗಾದ್ರೆ, ಹಸುಗಳು ಕರುಗಳನ್ನ ಮನೇಲೆ ಬುಟ್ಟು ಊರಾಚೆಗೆ ಮೇಯೋಕೆ ಹೋಗುವಾಗ, ಅವೆರಡನ್ನೂ ಅಗಲಿಸೋ ಆ ಕ್ಷಣಕ್ಕೆ ಇವರು ಕೊರಡಿನಂಗೆ ಸಾಕ್ಷಿಯಾಗಿ ನಿಲ್ಲೋರು. ದನಗಳು ಮೇಯೋಕೆ ಹೊರಟಾಗ ಕರುಗಳನ್ನ ಹಿತ್ತಲಿಗೆ ಕೂಡು ಹಾಕರಾ? ಪಾಪ! ಹಸುಗಳು ಬಿಟ್ಟಿರನಾರದೆ ಅವ ನೆಕ್ಕಿ, ಎರಡೂ ಒಂದಕ್ಕೊಂದು ಅಂಬೇ…. ಅನ್ನಕಂದು ಹೊರಟ್ರೂವೆ, ತಾಯ ಹಸಗಳು ದನದ ಗುಂಪಲ್ಲಿ ಹಿಂದೆಹಿಂದೆ ಉಳಕಳವು.

ಸಾಯಂಕಾಲ ದನ ಬರೊವಾಗ ಅವು ಎಲ್ಲಾ ದನಕ್ಕಿಂತ ಮುಂದಲೇ ಬಂದು, ಹಿತ್ತಲ ಬೇಲಿಯ ಕಂಡಿ ಮಾಡಕಂಡು ಒಳಿಕೆ ನುಗ್ಗಕ್ ನೋಡತಿರವು. ಕೆಚ್ಚಲಲ್ಲಿ ಕಟ್ಟಕಂಡಿರೊ ಹಾಲನ್ನ ತನ್ನ ಕರುಗಳ ಬಾಯಿಗೆ ಹರಿಬಿಟ್ಟು ಕೆಚ್ಚಲು ಭಾರ ಕರುಗಸಕೆ ಅವು ಪಾಪಾ! ಹಂಗೇ ಪರದಾಡತಿರವು. ಹಾಲ ಕರಕಳವಾಗ ಮೂತಿ ಮುಂದೆ ನಿಲ್ಲಸ್ಕಂಡಿರೊ ಕರುವ ಅಂಗೆ ತಮ್ಮ ತರತರಿಯಾಗಿರೊ ತಾಯಿ ನಾಲಿಗೆಲಿ ನೆಕ್ಕಿ ಹಾಕಬುಡವು. ಕರುಗಳು ಬಾಲ ಮೇಲಕ್ಕೆತ್ತಿ ನಿಂತಕಂದ್ರೆ, ಹಸ ಅನ್ನದು ಅಂಡು ಕುಂಡಿ ಯೆಲ್ಲನೂವೆ, ತನ್ನ ಜೊಲ್ಲಲ್ಲೆ ಸ್ನಾನ ಮಾಡುಸ್ತಿದ್ರೆ, ತನ್ನಕೂಸ ತಿರುಗುಸ್ಕಂಡು ಹೊಳ್ಳುಸ್ಕಂಡು ತನ್ನ ಆಸೇಲಿ ಮೀಯುಸ್ತಿದ್ರೆ, ಮನಸೊಳಗೆ ತನ್ನದು ಅಂತ ಉಕ್ಕುರ್ಸ ಈ ಜಗತ್ತಿನ ಆಸೆ

ಅನ್ನದ ಕಂಡು, ಅಂಗೆ ಬುರಬುರನೆ ಊದಿ ಉಸ್ರುಬುರಡೆಯ ವಡೆದಂಗೆ ಬೀಗಿ, ಮಾತಲ್ಲೇ ಅದ  ಒಡೆದು ಈರ ತಮಾಶೆ ಮಾಡನು.

“ಓಹೊಹೋ….ಸೀಮೆಗಿಲ್ಲದ ಅವ್ವ ಮಕ್ಕಳು ಕನಪ್ಪಾ ಇವು.” ಅಂದಾಗೆಲ್ಲಾ, ಹಾಲು ಕರಿತಾ ಕೂತಿದ್ದ ಗೌಡಮ್ಮರು ತನ್ನ ಮಕ್ಕಳು ಬಂದಾಗ ತಾನು ಹೆಚ್ಚಗಟ್ಲೆ ಮಾಡಿ ತಿನ್ಸಿ, ಉಣ್ಣಸಿ, ಹಾಸನದ ಕೋಟೆಗೆ ಮಕ್ಕಳ ಹೊರಡಸೋದನ್ನ  ಹೊಟ್ಟೆ ವಳಗೇ ನೆನಕಳರು.

ಹಾಲ ಕರಿತಿರುವಾಗ ಹಸಿನ ಮೊಲೆಲಿ ಸೊರ ಬಿಟ್ಟಕಂಡು, ತುಂಬಿ ತೊನೆಯೋ ಹಾಲಿನ ಧಾರೆ ಅನ್ನದು ರಂಗವ್ವರ ಕೈ ತಾಕಿ, ಹಿತ್ತಾಳೆ ಚೊಂಬೊಳಗೆ ಚೊರ್ರಾ,ಚೊರ್ರಾ… ಅಂತ ಸದ್ದು ಮಾಡತಾ ನೊರೆ ಗುಳ್ಳೆ ಉಕ್ಕುಸ್ತಾ…. ಚೊಂಬಲ್ಲಿ ಹಾಲು ತುಳುಕಾಡತಾ ಹೋಗದು. ತುಂಬಕತಾ… ತುಂಬಕತಾ….ಆ… ಸದ್ದು ಕಡ್ಮೆ ಆಗದು.  ಹಂಗೆ ಇವರೆದೆ ವಳಗೂವೆ ರಜಕ್ಕೆ ಅಂಥ ಬಂದ ಮಕ್ಕಳು ತಿರುಗಿ ನೋಡತಾ ನೋಡತಾ, ಗುಡ್ಡದ ತೆಗ್ಗಲ್ಲಿ  ಅವರಪ್ಪನ ಜೊತೆಲಿ ಮಕ್ಕಳು ಇಳುದು ಹೋಗತಾ ಇರೋವಾಗ, ಹಾಸನದ ದಿಕ್ಕಲ್ಲಿ ಕಣ್ಮರೆ ಆಗಿ ದೂರಾದಾಗ, ಅದುವರ್ಗೂ ಕೆಲಸದ ವಳಗೆ, ತಡೇ ಹಿಡದಿದ್ದ ಮಮತೆ ಅನ್ನದು ಕಣ್ಣೀರಾಗಿ ತುಳಕಾಡದು. ಊರಿನ ಕಣ್ಣಿಗೆ ಅದ ಬೀಳದಂಗೆ ಸೆರಗಲ್ಲೇ ಅದ ಇಂಗ್ಸಿ ಕಳಸಕ್ ಬಂದ ತನ್ನ ವಾರಗಿತ್ತೀರ ಜತಿಗೆ ಇವ್ರೂ ಮನಿಗೆ ಬರರು. ನನ್ನ ಅಳಲ ಏನಾರ ಮಕ್ಕಳು ಕಣ್ಣಿಗೆ ತೋರುಸ್ದೆ ಅಂದ್ರೆ, ಮಕ್ಕಳು ಕರುಳಬಳ್ಳಿಯ ಇಳೆಬುಟ್ಕಂಡು, ಹೋಗಕುಲ್ಲ….. ಅಂಥ ಚಂಡಿ ಊರುಬುಡತಾವೆ,  ಅಂತ ಅನ್ನಕಂದು, ಅವರು ವಳಗೆ… ಸಂಕಟ ಅನುಭವ್ಸೋರು.

ವಿದ್ಯೆ ಅಂದ್ರೆ ಸುಮ್ಮನಾಯ್ತಾ? ಏಳೂರ ಕೆರೆ ನೀರ ಕುಡಿಬೇಕು. ಇಲ್ಲಾಂದ್ರೆ….. ನಮ್ಮಂಗೆ ಬೆಳಗಿಂದ ಸಾಯಂಕಾಲದವರ್ಗೂ ತಿಕಕ್ಕೆ ಹುಲ್ಲ ಗಿಡಕಂಡು, ಇದ್ದ ಕಡೇಲೆ ಗಾಣಕ್ಕೆ ಕಟ್ಟದ ಎತ್ತಿನಂಗೆ ಗೇಯತಲೇ ಇರಬೇಕು. ನಮ್ಮಕ್ಕ ಹಾಸನದ ಕೋಟೆ ಸೇರಿರಳು. ಇತ್ಲಾಗೆ ಮನೇಲಿ ಆಳುಕಾಳನೂ ಇಟ್ಕಂದು, ಬಾಯಿಗೆ ಬೇಕಾದ್ದ ಅಡಿಗೆ ಮಾಡಕಂದು, ಅತ್ಲಾಗೆ ಬ್ರಾಮರ ಎಂಗಸ್ರು ಜತಿಗೆ ಹಾಡುಹಸೆ ಅನ್ನಕಂದು, ಹಾಸನದ ದನದ ಜಾತ್ರೆಲಿ ಟೆಂಟ್ ಹಾಕೊ ಗುಬ್ಬಿ ಕಂಪನಿ ನಾಟಕವಾ ನೋಡಕಂದು, ಬಾಳಿನ ಪಡಿಪಾಟಳು ಅನ್ನದ ಎಂಗೆ ಮರತಕತಾವಳೆ. ಅಂಗೆ… ಒಂದಿನ ನನ್ನ ಮಕ್ಕಳೂ ಪ್ಯಾಟೆ ಸೇರಕಂಡು ನಿಸೂರಾಗಿರಲಿ ದೇವ್ರೇ…. ಇಲ್ಲಾಂದ್ರೆ ಒಂದಿನ ಅವೂ ನನ್ನಂಗೆ ಸಗಣಿಯ ಕಾಲಲ್ಲಿ ತುಳಕಂಡು, ಮಡಕೆ ತಳದ ಕರೆ ಮಸಿ ತಿಕ್ಕಂಡು, ಮನೆ ತುಂಬ ಜೀತ ಮಾಡೂರ್ಗೆ ಬೇಯಸಹಾಕ್ಕಂಡು, ಹಿತ್ತಲು, ಕೋಣೆ, ಮನೆ ತುಂಬಲೂ ಹಾರಾಡ್ಕಂಡು ಗೇದರೂ, ವಕ್ಕಡೆ ಕುಂತ್ಕಂಡು ಸಮಾಧಾನಾಗಿ ಉಣ್ಣಂಗಿಲ್ಲ. ಬೆಳಗಿನ ಹೊತ್ನಲ್ಲಿ ರೊಟ್ಟಿ ಕೈಲಿ ಹಿಡಕಂದು ತಿನ್ನಕಂದೇ…. ದನ ಬುಟ್ಟಕೊಡಬೇಕು. ಅಂಥ ಪಡಿಪಾಟಲು.

ಹರವಕೊಂದು ಬೇಕಾದಂಗೇನೋ ಬದುಕು ಮನೆ ವಳಿಗೆ ಬಿದ್ದೀತೆ! ತಡ್ರಸ್ಕಳಕ್ಕೆ ಪುರೊಸೊತ್ತಿಲ್ಲದಂಗೆ ನಾವು ಗೇಯ್ತೀವಿ ಅಂದ್ರೆ, ನಮ್ಮ ಮಕ್ಕಳು ಕೈಲಿ ಆಗುತ್ತಾ? ಪಾಪ!  ಹಾಸನದ ಕೋಟೆ ನಮ್ಮಕ್ಕಂಗೂ ಭಾವಂಗೂ ನನ್ನ ಕಂಡ್ರೆ ಅವರ ಹೊಟ್ಟೇಲಿ ಹುಟ್ಟಿದ ಮಕ್ಕಳಿಗಿಂತಲೂ ಆಸೇ ಹೆಚ್ಚಾಗೀತೆ. ಆದ್ರೆ ಅವಳು ಇಲ್ಲಿಗೆ ಬಂದು ಹೋಗೋವಾಗೆಲ್ಲ ಕಣ್ಣೀರ ಕೆಡುವದಲೆ  ಓಗದೇ ಇಲ್ಲ. ಗಿಣಿ ಹಂಗೆ ಸಾಕಿದ ಮಗಳು ತಂದು ಇಂಥ ಅರೆಗಾಣಕ್ಕೆ ಹಾಕಬುಟ್ಟವನಲ್ಲ! ನಮ್ಮಪ್ಪ, ಅನಕಂದು ನಮ್ಮಪ್ಪನಿಗೆ ಶಾಪ ಹಾಕಂದು ನೊಂದಕಂದೆ ಹೋಯ್ತಾಳೆ. ಅವಳ ಕಣ್ಣೀರೇನು ನಂಗೆ ತಿಳಿದೆ ಇರದಾ? ಒಂದೇ ಹೊಟ್ಟೆಲಿ ಹುಟ್ದವ್ರಲ್ಲವಾ ನಾವು? ಹಂಗಂಥ ನನ್ನ ಗಂಡನ ಪರದಾಟೇನು ಕಡಿಮೆನಾ?…..

ತಗಳಪ್ಪಾ….. ಪಾಪಾ! ಪ್ಯಾಟೇ ಮನೆ ತಿರಿಕ್ಕಂಡು, ಮಕ್ಕಳ್ಗೇ, ಅಂಗೆ ಜೀವ ಬಿಟ್ಟಕಂದು ಜೀವಮಾನನೇ ತೇಯ್ತರೆ… ಅವರೂವೆ. ಹೊತ್ತೊತ್ತಿಗೆ ಊಟವ ಊರೋರಂಗೆ ಕುಂತು ಉಣ್ಣಂಗಿಲ್ಲ. ಯಾವಗ್ಲೂವೆ ಉಸ್ರು ಕಟ್ಕಂದೆ ಅಡ್ಡಾಡಬೇಕು. ಎಂಟು ಮಕ್ಕಳನ್ನೂ ತಗಹೋಗಿ ಪ್ಯಾಟೇಲಿಟ್ಟು ಮಕ್ಕಳ ಒದ್ಸೋದು ಅಂದ್ರೆ ಸುಮ್ನಾಯ್ತಾ? ಅದೇನು ಹುಡುಗಾಟದ ಮಾತ ಅಂತರೆ ಕಂಡರೆಲ್ಲರೂವೆ. ಎಂಗೋ ಮಕ್ಕಳ ಮೇಲೆ ನಮ್ಮ ಮನೆದ್ಯಾವ್ರು ಸಕನಿರಂಗ ಕಣ್ಬಿಟ್ಟು

ನೋಡುದ್ರೆ ಸಾಕು.

blue featherಅಷ್ಟ್ರಲ್ಲಿ ಮತ್ತೆ “ರಂಗವ್ವಾರೇ,ರಂಗವ್ವಾರೇ” ಅನ್ನ ನೀಲಿ ಕೂಗು ಅವರ ಯೋಚ್ನೆ ತುಂಡು ಮಾಡತು. ಬಿರ್ರನೆ ಅತ್ಲಾಗೆ ಸೌದೆ ತಗಹೋಗಿ ಒಲೆ ಮೂಲೇಲಿ ಅಂಗೆ ಹಾಕಿ, ಆಮೇಲೆ ಬಂದು, ಜೋಡಿಸಿ ಒಲೆ ಕತ್ತಹಾಕನ ಬುಡು. ಅಂತಲೆ ಚಾವಡಿಗೆ ಬಂದ್ರು. ಏನೋ ಆಗೀತೆ? ಅದಕ್ಕೆ ಅಂಗೆ ಕೂಗತಾ ಆವಳೇ ಅನ್ನದು ಗ್ಯಾರಂಟಿ ಆಯ್ತು.

“ಯಾಕೆ? ಇದ್ಯಾಕಗೀ? ಏನಾತೆ? ಮಗ ಹುಶಾರಾಗೀತೇನೆ? ಪಕ್ಕೆಶೂಲೆ ಎಂಗೀತೆ?” ನಡುಮನೆ ದಾಟಿ ಚಾವಡಿಗೆ ಬಂದ್ರು.

“ಇಲ್ಲಾ ಕಣೀ, ಬೆಳುಗ್ಗೆ ಆಸ್ಪತ್ರೆಗೆ ಕರಕಹೋಗಬೇಕು. ಇಲ್ಲದೆ ಹೋದ್ರೆ ಮಗ ಕೈ ಬುಟ್ಟೋತಿತೆ. ಇದೊಂದ್ ರಾತ್ರಿ ತುಂಬಸುದ್ರೆ ಸಾಕಾಗೀತೆ.ನಮಗೆ. ಉಸ್ರ ಏಳುದು, ಎಳುದು ಬುಡೋದ ನೋಡುದ್ರೆ, ನನಗೆ ಈ ಭೂಮಿ ಮೇಲೆ ಯಾಕಾದ್ರೂ ಉಳ್ಕಂಡಿದಿನೋ ಅನ್ನಸ್ತೀತೆ. ನಮ್ಮಂಥ ಬಡವ್ರಿಗೆ ಯಾಕೆ ಕೊಡತಾನಿ ಆ ದೇವರು ಮಕ್ಕಳ…. ನಂಗೊತ್ತಿಲ್ಲಪ್ಪಾ.. ಬಡವರ ಪಾಡು ಯಾವಾಗ ತೀರುಸ್ತಾನೋ ಅವನು” ಅಂದ ಅವಳಿಗೆ ಗೌಡಮ್ಮಾರು ವಸಿ ರೇಗಿ ಸಮಧಾನ ಹೇಳುದ್ರು.

“ಮಕ್ಕಳು ಕೊಟ್ಟುದ್ದೂ ಅಲ್ಲದೆ ಆ ದೇವ್ರು, ಅವ ಸೌಕರ್ಯ ಮಾಡಕ್ಕೆ ಬೇರೆ ಬತ್ತನ ನಿಮ್ಮನಿಗೆ, ಹೋಗೆ ಈಗ. ನಾಕು ದಿಸ ಈ ಕೂಲಿನಾಲಿ ಬುಟ್ಟು ಮೊದ್ಲು ಮಗ ನಿಗಾ ಮಾಡು. ಹೊತ್ತಾರೆ ಕೋಳಿಮಖಕ್ಕೆ ಎದ್ದು ಹೊರಡು. ದೇವ್ರಿದಾನೆ.

ಎಲ್ಲಾ ಸರಿಹೋಯ್ತದೆ ಕನ್ ಹೋಗೆ. ಭಂಡ ಧೈರ್ಯ ಇರಬೇಕು ಧರೆ ಮೇಲೆ ಹುಟ್ಟಿದ ಈ ಜನ್ಮಕ್ಕೆ” ಇವರ ಮಾತಿಗೆ ಪಕ್ಕದಲ್ಲಿ ಈರ ಸುಮ್ಮಗ ನಿಂತಿದ್ದೋನು

“ಎಂಗಾರ ಮಾಡಿ ಗೌಡ್ರಿಗೆ ಯೋಳಿ. ನಾವು ಆಸ್ಪತ್ರೆಗೆ ಬತ್ತೀವಿ ಅಂತವ. ನಾವು ಹಾಸನದ ಕೋಟೆ ಮುಖ ನೋಡೋದೆ ಹೊಸತು. ಇನ್ನ ಆಸ್ಪತ್ರೇಲಿ ನಮ್ಮ ಯಾರು ಕ್ಯಾರೆ ಅಂತರಿ ಅಲ್ಲಿ. ಗೌಡ್ರು ಇದ್ರೆ ಆಗದು.ನಮಗೆ ಧೈರ್ಯ ಬರದು.”

“ನಿಜ ಕಣ್ಲಾ ಈರ. ಗೌಡ್ರು ಇವತ್ತು ಅಲ್ಲೇ ಮಕ್ಕಳತಾವ ಉಳಕಂದರೆ. ಅವರ ಎಂಗೆ ಹಿಡಿತೀಯಪ್ಪ…  ನೀನೆ ಹೇಳು?”

“ನಾನು ಹೋದನೆ ವರ್ಷ ಒಂಜಿಸ ಸೌದೆ ಗಾಡಿ ತಗಹೋಗಿ ಇಳುಸುದ್ನಲ್ಲಾ! ಆ ಜಕ್ಕನಳ್ಳಿ ಲಿಂಗಾಯಿತರ ಮನಿಗೆ. ಅಲ್ಲಿಗೆ ಹೋಗ ದಾರಿ ಹಿಡಕಂಡು ಹೋಯ್ತೀನಿ. ಅವ್ರು ಅಲ್ಲಿ ನಿಮ್ಮ ಮಕ್ಕಳಿರೊ ಮನೆಯ ತೋರುಸ್ತಾರೆ. ಅಲ್ಲೆ ಸಿಕ್ತಾರೆ ಗೌಡ್ರು. ಅಲ್ಲಿಂದ ಗೌಡ್ರು ಕರಕ ಹೋತೀವಿ. ಅಲ್ವೇನಿ” ಅಂದ.

“ಹೂಂ,ಅಂಗೆ ಮಾಡು. ಕೋಳಿ ಮುಕಕ್ಕೆ ಹೊಂಟ್ರೆ ನಿಮಗೆ ಅವ್ರು ಸಿಕ್ತಾರೆ. ಅಲ್ಲೇ ಒಂಚೂರ ಏನಾರ ಹೊಟ್ಟೆಗೆ ಈಸಕಂದು ತಿಂದು ಆಸ್ಪತ್ರೆ ಕೆಲ್ಸ ಮುಗುಸ್ಕಂದು ಇತ್ಲಾಗೆ ಬನ್ರೋ…. ಒಲೆ ಕತ್ತ ಹಾಕಬೇಕು ಕಣೊ. ಬಂದೆ ಇರು.”

ಅಂತ ವಳಗೆ ಹೋದ್ರು.

ಬೆಂಕಿ ಆಡಕಳ್ಳಲಿ ಅನ್ನಕಂದು, ಒಲೆ ವಳಗೆ ಬಿಟ್ಟಿದ್ದ ಸೌದೆಲಿ ಬೂದಿ ಈಚಿಗೆ ಕೆರದು, ಒಲೆ ದಿಂಡಿಗೆ ವತ್ತರ್ಸಿ, ಪುಳ್ಳೆ ಮುರುದು ಹಾಕಿ ,ಅಂಗೆ ಬೆಂಕಿ ತಂತಾನೆ ಕಚ್ಚಕಳ ಹುನ್ನಾರ ಮಾಡಿ, ಅದರ ಮೇಲೆ ಸಣ್ಣ ಸೌದೆ, ದೊಡ್ಡಸೌದೆ ಇಟ್ರು. ಊದುಕೊಳವೆಲಿ, ತಮ್ಮ ಪುಪ್ಪಸದ ವಳಗಿನ ಗಾಳಿಯ ಹೊಗೆಯಾಡೊ ಸಣ್ಣ ಬೆಂಕಿ ಮಯ್ಯಗೆ ಊದಿ, ಅದರ ಮೈ ಚಳಿ ಬುಡಸಿ ಬೆಂಕಿ ರಜವಾಗೊ ಹಂಗೆ ಮಾಡದ್ರು. ಇಷ್ಟೊತ್ತು, ಕೇವಲ ಒಂದು ಕಾಷ್ಠ ಹೊತ್ತು ಮಲಗಿದ್ದ ಆ ಸೌದೆ ತುಂಡುಗಳು ಯಾವುದೋ ಶಾಪದಿಂದ ಅಹಲ್ಯೆ ಕಲ್ಲಾಗಿ ರಾಮನ ಸ್ಪರ್ಶಕ್ಕೆ ಎದ್ದು ನಿಂತಂತೆ, ಹಳೆಯ ಮೋಹ ಉರಿದುಹೋದಂತೆ, ಆರಿ ಬೂದಿಯಾಗಿ ಹೊಸ ಜನ್ಮ ಪಡೆದುಕೊಂಡ ರೀತೀಲಿ, ಬದುಕಿನ ಮೋಹ ಉರಿಯುವಂತೆ ಈ ಗೌಡಮ್ಮರು ಕೈ ಮುಟ್ಟಿ ಇಟ್ಟ ಸೌದೆಗಳು ಉರಿಯತೊಡಗಿದವು. ಅವೂ ತಮ್ಮ ದೇಹದ ಮೋಹ ತೊರೆದು ಇವರ ಮನೆಯ ಹಸಿದ ಕರುಳಿಗೆ ಅನ್ನವಾಗಿ ಅರಳುವ ಪ್ರಕ್ರಿಯೆಯಲ್ಲಿ ಇವರ ಪುಪ್ಪಸದ ಉಸಿರನ್ನ ತಾಕಿಸಿಕೊಂಡು ಅವರೆದೆಯ ನೋವನ್ನು ಉರಿಯಾಡೊ ತಮ್ಮ ನಾಲಿಗೆಯಲ್ಲಿ ನೆಕ್ಕುತ್ತಾ, ಅವರ ನೋವಿಗೆ ಬೆಚ್ಚನೆಯ ಕಾವು ಕೊಡುತ್ತಾ ನಾವಿದ್ದೀವಿ ಅಂತ ಆ ಹೆಣ್ಣನ್ನು ಸಂತೈಸಿ ಬದುಕಿನ ಕೊನೇ ಎತ್ತರದ ಉರಿದು ಬೂದಿಯಾಗುವಂಥ ಕ್ರಿಯೆಯಲ್ಲಿ ತೊಡಗಿದವು.

women in blueಈ ಜಗತ್ತಿನ ಮಾಯಕದ ಗಳಿಗೆಗಳನ್ನು ಏನೂ ಅರಿಯದಿರ ಗೌಡಮ್ಮರು ಬೆಂಕಿ ಕಚ್ಚಿಕಂದು ಉರಿಯೊ ಸೌದೆ ಕಂಡು ನಿರಾಳವಾಗಿ ಅನ್ನದ ತಪ್ಪಲೆಲಿ ನೀರ ತುಂಬಿ ಒಲೆಯ ಮೂರು ಕುಪ್ಪಿ ಮೇಲೆ ನೆಟ್ಟಗೆ ಕೂರಸಿ ಬೀರು ತೆಗೆದವರೆ, ಅದರೊಳಗೆ ಇದ್ದ ಕಡಬು ತಗಂದು, ಅದರ ಮ್ಯಾಲೆ ಹಸ್ರುಮೆಣಸಿನಕಾಯನೂ ಹುಣಸೆಕಾಯನೂ ಕುದುಸಿ ಉಪ್ಪುಹುಚ್ಚಳ್ಳು  ಹುಡಿ ಹಾಕಿ ಮಾಡಿದ ಕುದುಕ್ಲು ಹಾಕಿ, ಮ್ಯಾಲೀಟು ಮೊಸ್ರು ಸುರುದು ಮುತ್ತಗದೆಲೆಲಿ ಹಿಡಕ ತಂದು ಅವರ ಕೈ ಮೇಲೆ ಇಟ್ಟಕೊಟ್ರು.

ನೀಲಿ ಅದ ಇಸ್ಕಂಡ್ರೂವೆ ಮ್ಯಾಲೆ ಎದ್ದೇಳದೆಯ ಕುಂತೇ ಇರದ ಕಂಡೋರು “ಇದ್ಯಾಕೆ? ಮಗಿನ್ತಕೆ ಹೋಗಬಾರದೇನೆ” ಅಂದ್ರು.

“ಇನ್ನೊಂದು ಕನಿ. ಒಂದಿಪ್ಪತ್ತೈದು ರೂಪಾಯಿ ಇದ್ರೆ ಕೊಟ್ಟಿರಿ.” ಅಂದ ಅವಳ ದೈನೇಸಿ ಮಾತಿಗೆ ಇವರು ಹೌಹಾರಿದ್ದೆ ಬಿಡಸಿ ಬಿಡಸಿ ಹೇಳುದ್ರು.

” ಏನಂದೆ ನೀನು?….ಅಲ್ಲಾಕನಗೀ, ನೀವೆ ಕಂಡಿದಿರ ನಮ್ಮನೆ ತಾಪತ್ರೆಯ ಅನ್ನದ. ನೀನೇನು ದೂರದವಳೇನೆ. ದಿನಾಲೂ ನಮ್ಮನೆ ಕಷ್ಟಸುಖ ಕಂಡೋಳು. ಮೊನ್ನೆ ಬುಧವಾರ ಸಂತೆ ದಿಸ ಕೂಲಿ ಬಟವಾಡೆ ಮಾಡಕ್ಕೆ ಗೌಡ್ರು  ಅಯ್ಯೋ…ಪರದಾಡುಬುಟ್ರು. ಹಂಗೆಯ.. ಸಾಯಂಕಾಲ ಮಾಡುದ್ರು ಅಂತ ನೀನೆ ಹೊಟ್ಟುರ್ಕಂಡು ಹೇಳಿದಿಯಾ… ಆಮೇಲೆ ಸಂತೆ ಮುಗಸಿ ಮನಿಗೆ ಬರೊ ಹೊತ್ಗೆ  ನಮ್ಗೆ ತಡ ಆಯ್ತು ಕಣಿ ಅಂತ ಹೇಳಿದೀಯಲ್ಲಗೀ. ಈಗ ನೋ…ಡುದ್ರೆ ಇಷ್ಟಂದೊಡ್ಡಿ  ದುಡ್ಡು ಕೇಳ್ತಿದಿಯ. ಎಲ್ಲಿಂದ ತರದು? ನನ್ನತ್ರ ಹುಡುಕಿದ್ರು ಒಂದೆರಡು ರೂಪಾಯಿ ಸಿಕ್ಕುದ್ರೆ ಹೆಚ್ಚವ್ವಾ! ನಮ್ಮನೇಲಿ ಮುಚ್ಚು ಮರೆ ವ್ಯವಹಾರ ಇಲ್ಲಾ ಅನ್ನದು ನಿಂಗೊತ್ತಿಲ್ವಾ?”

“ಹಂಗೆ ಕೊಡಬೇಡಿ. ಈ ಚಿನ್ನದ ಬೇಸರಿ ಇಟ್ಕಂಡು ಕೊಡಿ. ಆಮೇಲೆ ಬುಡಸ್ಕತೀನಿ. ನಿಮ್ಮನೇಲಿ ಕೂಲಿ ಗೇದಾರು ಸರಿ, ಇಲ್ಲದೆ ಹೋದ್ರೆ ಸೌದೆ ಗಾಡೀನಾರ ಹೊಡದು ಕೊಟ್ಟು ಬುಡ್ತೀವಿ.” ಅವರು ಇವರನ್ನ ಬುಟ್ಟು ಹೋಗಂಗೆ ಕಾಣಲಿಲ್ಲ.

“ನಿನಗೂ ತಿವಾಸ ಕಣೇ ನೀಲಿ. ಇಂಥ ಇಳೇ ಹೊತ್ನಲ್ಲಿ, ಎದೆ ವಳಗೆ ನೋವ ಕಟ್ಟಕಂದು ಮಗ ಉಳುಸ್ಕಳಕೆ ಅಂತವ, ನಿನ್ನ ಮೈಮೇಲೆ ಇರೊದೊಂದ ವಡವೆಯ ಬಿಚ್ಚಕಂದು ತಂದು ನನ್ನ ಕೈಗಿಡ್ತಿದಿಯಲ್ಲಾ….ಆ ನೋವು ನನ್ನ ಮನೆಗೆ ಸುತ್ತಕಳ್ಲಿ ಅಂತವ….ನಾನು, ಇದನ್ನ” ಅಡ ” ಅಂತ ತಗ ಹೋಗಿ, ಅದೂ ಮನೆ ಪೆಟ್ಟಿಗೆ ವಳೀಗೆ….ಇಟ್ಟಕಳ್ಳಲಾ? ಮೊದ್ಲು ತಗ ಹೋಗು ಇದ ನೀನು. ತುಂಬಿದ ಮನೇಲಿ ಇಂಥ ಯವಾರನೇ ಬೇಡ. ನಾವು ಯಾವತ್ತೂ ಇಂಥ ದುಡ್ಡ ಕಂಡರಲ್ಲ. ಇನ್ಮುಂದಕೂ ಇಂಥ ಕಂಡೋರ ಮನೆ ಮುರ್ಯೋ ಕೆಲ್ಸ ಹೇಳಕೊಡಬೇಡ ನಮಗೆ ನೀನು. ಈ ಮನೆ ವಳಗೆ ಮಕ್ಕಳು ಮರಿ ಬದುಕ… ಮಾಡಬೇಕೋ ಬೇಡವೋ ಹೇಳು ನೋಡನ?” ಒರಟಾಗಿ ಹೇಳುದ್ರೂವೆ ಅವಳ  ಭಣಗುಡೋ ಮೂಗ ನೋಡದ್ರು.

ನೀಲಿಯ ಉಂಡುಂಡಾಗಿದ್ದ ಮೂಗಲ್ಲಿ ಒಂದು ಆಕಾಶ ನೀಲಿ ಹರಳಿನ ಸುತ್ತ  ಬಿಳಿ ಬಣ್ಣದ , ದಾಳಿಂಬೆ ಕೆಂಪು ಬಣ್ಣದ ಹರಳ ನೇದು ಅಲಂಕಾರಕ್ಕೆ ಕಟ್ಟಿದ ಹೂವಿನ ಚೆಂಡಿನಂಗೆ ಚಂದಕ್ಕಿದ್ದ ಮೂಗು ಬಟ್ಟು ಅದು. ಅವಳ ಮುಕಕ್ಕೆ ಅಂಗೆ ಅದು ಎದ್ದು ಕಾಣದು. ಅದನ್ನ ಅವರವ್ವ ಮದುವೇಲಿ ಅಕ್ಕಸಾಲಿಗರು ಮನೇಲಿ ಕುಂತು, ಇಂಗಲ್ಲ ಇಂಗೆ, ಅಂತ ಹೇಳಿ ಮಾಡಸಿದ್ಲಂತೆ. ಕೆಂಪಗೆ  ಬಿಸಲಲ್ಲಿ  ರವಗುಡೋ ಅವಳ  ಮುಖದ ಬಣ್ಣಕ್ಕೂವೆ, ಆ ನತ್ತಿನ ಚೆಂದಕ್ಕೂವೆ ಅವ್ಳ ಮುಖ ಅನ್ನದು ಕಿಲಿಗುಡೋದು. ಗೌಡಮ್ಮರೆ ಆ ಬೇಸುರಿಯ ಅಂದಕ್ಕೆ ಮರಳಾಗೋರು. ನೀಲಿ ಬಿಳೀ ದಾಳಿಂಬೆ ರಂಗಿನ ಕುಸುರಿ ನೇಯ್ಗೆನ ಅಷ್ಟರಮಟ್ಟಿಗೆ ಮಾಡಿದ್ದ ಆ ಆಚಾರಿ. ಅದ ಅವಳ ಕೈಲಿ ಹಿಡಕಂದಿದ್ದ ನೋಡತಿದ್ದಂಗೆ, ಹಾವ ನೋಡದಂಗೆ ಇವ್ರೂ,,,, ಅದನ್ನ  ಕೈಲಿ ಮುಟ್ಟೂ ನೋಡನಿಲ್ಲ.

“ಬಡ್ಡಿಗೆ ಇಟ್ಟಕಳ್ಳಲಿ ಅನಕಂದೇ ಮಂಜಣ್ಣರ ಮನಿಗೆ ಹೋಗಿದ್ವಿ. ಅವರು  ಧರ್ಮಸ್ಥಳಕ್ಕೆ ಓಗವ್ರೆ.” ನೀಲಿ ಮಾತಾಡುದ್ಲು. ಆಗ ಗೌಡಮ್ಮರಗೂ ಹೊಟ್ಟುರ್ದು “ಇಷ್ಟೊತ್ನಲ್ಲಿ ವಾಡೇಗೆ ಯಾರನ್ನಾರ ಇಳಿಸಿದ್ರೆ ಆ ಮಗಿನ ಜೀವ ಉಳುಸಬೋದು. ಇಲ್ಲಾಂದ್ರೆ ಮಗಿಗೆ ಏನಾರ ಆದ್ರೆ, ಆ ಪಾಪ ನಮಗೂ ಬಂದು ಸುತ್ಕತ್ತದೆ. ಆಪತ್ತ ಧನ ಅಂದ್ರೆ ರೈತನ ಮನೇಲಿ ವಾಡೇಲಿ ತುಂಬಿರೊ ಲಕ್ಷಮಿನೆಯಾ! ಏನಪ್ಪಾ ಮಾಡದು? ಈಗ ಸಕನಿರಂಗ! ಅನ್ನಕಂದು ಅತ್ತೆಮ್ಮ ಎಲ್ಲವರೆ? ಅಂತ ನಡುಮನೆಯ ಬಗ್ಗಿ ನೋಡುದ್ರು. ನಡುಮನೆ ವಾಡೆ ಬಾಗಲಲ್ಲೆ ಊರಗಲ ಈಚಲ ಚಾಪೆ ಹಾಸಕಂದು, ಅದರ ಮೇಲೆ ಸೀರೆ ದಟ್ಟ ಹಾಸಕಂದು, ಆಚೆ ಮನೆ ಮಕ್ಕಳು ಬಂದ್ರೆ ಮಲಕ್ಕಲಿ, ಅಂತ ಇತ್ಲಾಗೆ ಜಾಗ

ಬುಟ್ಟು, ಗೋಡೆ ವತ್ತಿಗೆ ಕರಕಂಬಳೀ ಹೊದ್ದಕಂಡು, ಕಣ್ಣ ಪಿಳಿಪಿಳಿನೆ ಬುಡತಿದ್ರು. ಅವ್ವೇ… ವಾಡೇಗೆ ಈ ರಾತ್ರಿ ಹೊತ್ನಲ್ಲಿ ಯಾರನ್ನಾದ್ರೂ ಇಳುಸುದ್ರೆ…. ನನ್ನ… ಸುಮ್ಮನೆ ಬುಡತಾರ? ಮನೆ ಸೂರನೆ ಹಾರುಸ್ಬುಡ್ತಾರೆ.

ಹಿಂಗೆ ಯೋಚನೇಲಿ ಮುಳುಗಿ ಪರಿಹಾರಕ್ಕೆ ಕಾಯ್ತಾ ಚಾವಡೀಲಿ ಕುಂತಿದ್ದ ನೀಲಿ ಈರ ಜೋಡಿ ಅನ್ನೋದು ಸತ್ಯಹರಿಶ್ಚಂದ್ರನ್ನ ಪರೀಕ್ಷೆ ಮಾಡಕ್ಕೆ ಬಂದು ಕುಂತಿರೊ ವಿಶ್ವಾಮಿತ್ರನಂಗೆ ಆ ಚಣದಲ್ಲಿ ಇವ್ರಿಗೆ ಕಾಣಸ್ಕಂಡರು. ಹಾಸನದ ಅಕ್ಕನ ಮನಿಗೆ ಹೋದಾಗ ಅಕ್ಕ ಬುಡುದಲೆಯ ಈ ನಾಟ್ಕಕ್ಕೆ ಕರಕಂದು ಹೋಗಿದ್ಲು. ಅಲ್ಲಿ ಆ ರುಷಿಮುನಿ ಹಿಂಗೆ ಬಂದು ಎದೆ ಮೇಲೆ ನಿಂತಕಳನು. ಈಗ ಊರೊಳುಗೆ ಯಾರಪ್ಪಾ…ದುಡ್ಡು ಇಟ್ಕಂಡಿರರು…ಗಂಡ ಇದ್ದಿದ್ರೆ,

ಈ ಕಷ್ಟಕ್ಕೆ ಏನಾರು ಒಂದು ಗತಿ ಕಾಣಸರು.  ನೋಡನ.! ತಡಿ ಅಂದು ಅಡಿಗೆಮನೆಗೆ ಬಂದು ಸೇರಲ್ಲಿ ಅಕ್ಕಿ ತಗಹೋಗಿ ಒಲೆಮೇಲೆ ಮರಳೋ ನೀರಿಗೆ ಸುರುದುಬಂದ್ರು. ಅಷ್ಟ್ರಲ್ಲಿ ರಾಗಿ ಹಿಟ್ಟು ಮಾಡುಸ್ಕಬರಕೆ ಅಂಥ, ದೊಡ್ಡಗೌಡ್ರು ಮನೆ ಗಾಡೀಗೆ ಒಂದು ಮೂವತ್ತು ಸೇರು ರಾಗೀಯಾ ಸಾಯಂಕಾಲ ಹಾಕಿಸಿದ್ದು ನೆಪ್ಪಾಯ್ತು. ಓ! ಎಂಗೂ… ಕೋಳಿ ಕೂಗೋ ಹೊತ್ತಿಗೆ ಗಾಡಿ ಮಿಲ್ಲಿಗೆ ಹೊರೊಡೋದು. ಇಂಥ ಊರಿಂದ ಹೊರಡೋ ಗಾಡೀಗೆ ಆಚೀಚೆ ಮನೇರೆಲ್ಲಾ ಮಿಲ್ಲು ಮಾಡುಸ್ಕಬರಂಥ ರಾಗಿ, ಬತ್ತ ,ವನದಿರೊ ಅಕ್ಕಿ ನುಚ್ಚುನ್ನ  ಹಾಕಿರೋರು. ಗಾಡಿಲಿ ಹೋದೋರು ಅಸಿಟ್ಟು ಮಾಡುಸ್ಕಂಬಂದು ಇವ್ರಿಗೆ ಕೊಡರು.

ಇವರ್ ಮನೆ ಗಾಡಿ ಹೋದಾಗ, ಇವರು ಅವರಂಗೆ ಅನುಸರ್ಸೋರು. ಹಿಂಗೆ ಕೊಡುಕೊಳ್ಳು ನೆವದಲ್ಲಿ ಊರು ಸುಖ ಕಾಣದು. ಅಂತೂ ಇಂತೂ ನೀಲಿ ಮಗಿನ ಪಕ್ಕೆಶೂಲೆಗೆ ಒಂದು ಬಿಡುಗಡೆ ಅನ್ನದಾರಿ ಈಗ ಕಾಣುಸ್ಕಂತು.  ಸಡಗರ ಮಾಡಕಂಡು ದೊಡ್ಡಗೌಡರ ಗಾಡೀತಕೆ ಹೋಗಿ, ಕೆಳಗೆ ಸೇರಿಹೋಗಿದ್ದ ಆ ರಾಗಿಮೂಟೇಯ ಮೇಲಿದ್ದ ದೊಡ್ಡ ದೊಡ್ಡ ಮೂಟೇ ಸಂದಿಂದ ಅದನ್ನ ಈಚೆಗೆ ಎಳ್ಸಿ, ಗೌಡಮ್ಮರು “ಹೊತ್ಕೊ ಓಗೊ ಈರ. ಮೂವತ್ತು ಸೇರು ಅವೆ. ಅಲ್ಲೇ ರುದ್ರೇಶನ ಅಂಗಡೀಗೆ ಕೊಟ್ರೆ ಒಂದು ಮೂವತ್ತು ರೂಪಾಯಿಗೆ ಮೋಸಿಲ್ಲ. ಓಗು ಬಸ್ಸಿನ ಖರ್ಚೂ ಕಳಿತಿತೆ” ಅಂತಂದರು. ಬೀಸೆ ದೊಣ್ಣೆ ಇಂದ ಎಂಗೋ ತಪ್ಪಿಸ್ಕಂದ ಉಸುರು ಹೊರಗೆ ಹಾಕಿ ಅವರ ಜೊತಿಗೆ… ಹೋಗಿ  ಅವರ ಗುಡುಸ್ಲು ಬಾಗಲಲ್ಲಿ ನಿಂತು ಮಗ ಉಸ್ರೆಳೆಯದ ನೋಡೀ ಅಂಗೇಯ “ಇದು ನಾಟಿ ಔಸ್ತಿಗೆ ಬಗ್ಗದಲ್ಲ. ಮೊದ್ಲು ದೊಡ್ಡಾಸ್ಪತ್ರೆಗೆ ಸೇರ್ಸು ಕರಕಹೋಗಿ. ನೀವು ಇಲ್ಲಿವರ್ಗೂ ಬುಟ್ಟಿದ್ದೇ ತಪ್ಪಾತು. ಮೈ ತುಂಬ ಬೆಚ್ಚಗೆ ಹೊಚ್ಚಿ  ಇವತ್ತಿನ ರಾತ್ರಿಯ ಎಂಗೋ ತುಂಬಸಿ. ದೇವರಿದಾನೆ ” ಅಂದು ಮನೆ ಕಡಿಕೆ ಬಂದ್ರು.

design blueಒಲೆಮೇಲಿಟ್ಟ ಅನ್ನ ಗಂಜಿ ಸುತ್ತಕತೋ? ಏನೋ? ಅನ್ನಕಂದು, ಅನ್ನ ಬಶಿಯಾಕೆ ಕಲಗಚ್ಚಿನ ಕೂನಿ ಒಲೆ ತೋಡಲ್ಲಿ ಇಟ್ಕಂಡು, ಮಂಡಿ ಮೇಲೆ ಕುಂತರು ರಂಗವ್ವಾರು.  ಅನ್ನ ಬಸದು ಕೆಂಡದ ಮೇಲೆ ಪಾತ್ರೆಯ ಜೋರಾಗಿ ಅಳ್ಳಾಡುಸಿ ಇಟ್ಟರು. ಮುಚ್ಚಳ ತೆಗೆದಾಗ ಅಕ್ಕಿ ಅರಳಕೊಂಡು ಅನ್ನ ಹಂಗೆ ಹೂವಾಗಿತ್ತು. ಓಗಾಲೆ ಮೇಲಿನ ಹುರುಳಿ ಸಾರು ತಗ… ಬೆಣ್ಣೆ ಹಾಕಂಡು ಉಣ್ಣಕ್ಕೆ ಎದ್ದು ಬನ್ನಿ ಅನ್ನಕಂದು ಅಡುಗೆ ಕೋಣೆ ಇಂದ ಘಮ್ಗುಟ್ಟಕೊಂಡು ಕರಿತಿತ್ತು. ಅಜ್ಜಮ್ಮಾರು ವಚ್ಚಗಣ್ಣಿಂದ ಸೊಸೆ ಕಾರುಬಾರ ನೋಡಕಂದೇ ಮಲಗಿದ್ದವರು ಎದ್ದೋರೆ ಹಿತ್ಲ ಕಡಿಕೆ ಹೋಗಬಂದು ಸೊಸೆಯ ಕರದ್ರು. “ಬಾ, ನಂಗೆ ಗಂಗಳಕ್ಕೆ ಇಕ್ಕೊಡು. ಬಂದೋರ ಗುಬ್ಬಿ ಪಂಚಾಯಿತಿ ಮುಗ್ದಿತಲ್ಲಾ ಈಗ” ಅಂತ ಸೊಸಿಗೆ ಮರಕುಟಕನಂಗೆ ಒಂದು ಕುಟುಕ ಹಾಕಿ, ಒಲೆ ಮುಂದೆ ಬೆಂಕಿ ಕಾವಿಗೆ ಬಂದು ಮೈ ಕಾಯಿಸ್ತಾ ಕುಂತರು.

ಇವ್ರು, ಅವ್ರ ಹಳೆಚಾಳಿಗೆ ಪುಸುಕ್ಕನೆ, ಒಂದು ಹುಸಿನಗೆ ತಂದಕಂದು ಇಕ್ಕೊಡಕ್ಕೆ ಅಂತಲೆ ಅವರ ಕಂಚಿನ ಗಂಗಳವ ನಾಗೋಲೆ ಮೇಲಿಂದ ಕೈಗೆ ಎತ್ತಕಂಡರು. ಬೆರಣಿ ಬೂದೀಲಿ ಬೆಳಗಿದ್ದ ಆ ಗಂಗಳ ಕನ್ನಡಿಯಂಗೆ ಹೊಳುದು ಇವರ ಮುಖವ ಅದರಲ್ಲಿ ತೇಲಿ ಬಿಡತು. ನಾನು ಇಂಗಿದಿನಿ ಅಂತಲೇ ಅಲ್ಲವಾ? ಈ ಮನೆ ಹಿರೇರು ಕಿರೇರು ಎಲ್ಲಾ ಮೂರು ವರ್ಶ ನಮ್ಮಪ್ಪನ ಮನೆ ಹೊಸಲು ಕಾದು, ಗೌಡರ ಹಠಕ್ಕೆ ಬಗ್ಗಿ ನನ್ನ ತಂದುಕಂಡಿದ್ದು. ಹಳೆದ ನೆನಸ್ಕಂದು

ಅತ್ತೆಮ್ಮನ ಮುಂದಕ್ಕೆ ನಗುಮುಖದಲ್ಲಿ ತಟ್ಟೆ ಇಟ್ರು. ಇವರ ಮೂಗಿನ ನತ್ತು ಒಲೆ ಉರಿಲಿ ಬೆಳಗುತಿತ್ತು.

ಮುತ್ತುಕಂಡೇನವ್ವಾ ತಂಗಿ ನಾನೊಂದ

ಮೂಗಿನಲ್ಲಿರುವುದೇ ನತ್ತೊಂದ

ಒಂದು ವರ್ಣದ ಮುತ್ತು ಓಂ ನಾಮದೊಳಗಿತ್ತು

ಎರಡು ವರ್ಣದ ಮುತ್ತು ಎಡಬಲದೊಳಿತ್ತು

ಮೂರು ವರ್ಣದ ಮುತ್ತು ಮೂಡಲ ಸಾಮಿಗೆ ಗೊತ್ತು

ನಾಕೂ ವರ್ಣದ ಮುತ್ತು ನಾಗೇಶನಲ್ಲಿತ್ತು

ಐದು ವರ್ಣದ ಮುತ್ತು ಐಕ್ಯಸ್ಥಾನದೊಳಿತ್ತು

‍ಲೇಖಕರು Admin

November 20, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

10 ಪ್ರತಿಕ್ರಿಯೆಗಳು

  1. lalitha siddabasavaiah

    ಸುಜಾತಾ ಕಣ್ಣು ತುಂಬ್ಕೊಂಡೊ ಕಣ್ರೀ

    ಪ್ರತಿಕ್ರಿಯೆ
  2. Shyamala Madhav

    ತುಂಬಾ ಚೆನ್ನಾಗಿ ಬರೆದಿದ್ದೀರಿ, ಸುಜಾತಾ ; ಹೃದಯ ಕಲಕಿತು. ಮೆಚ್ಚಿದೆ.

    ಪ್ರತಿಕ್ರಿಯೆ
  3. Gopinath R

    Sujatha,
    Harmonium master ella ragagaLannu Mooroo mane yalli nudisi chachchida haage nivu Halli jeevana mattu adara madhuryavannu ede tumbi hadta iddiri.ABINANDANEGALU.
    Gopinath R

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: