ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀಲಿಗಾಲ

ನಂದಿನಿ .ಎಚ್. ಎಂ .

ಹಸಿದ ಹಸುಕಂದನಂತೆ ನಟಿಸಿ
ನೀಕುಡಿದ ಮೊಲೆಯೊಳಗೆ
ಇದ್ದದ್ದು ನದಿಯಲ್ಲ.

ಮೆತ್ತಿದ ತುಟಿಯಂಚಿನ ಹೊಲಸು
ಇತ್ತೀಚಿಗೆ ನಿನ್ನ ಮೈಯಿಂದಲೂ
ಹೊಮ್ಮಿರುವುದು ಇನ್ನು
ಗುಟ್ಟಾಗಿ ಉಳಿದಿಲ್ಲ.

ನೆಲಮುಗಿಲಿನಂತೊಂದು ಕವಿತೆ
ಪ್ರಸವಿಸುವ ಮೊದಲೇ
ಪ್ರಹಸನದಲಿ ಪರದೆ ಜಾರಿದ್ದು
ಮೀರಿದ್ದ ನನ್ನ
ತೀವ್ರತೆಗೆ ತಿಳಿಯಲೇ ಇಲ್ಲ.

ನನ್ನ ಕಡುಗಂದುಗಣ್ಣುಗಳ
ತಪ್ಪಿಸಿ ನೀ ಕಳ್ಳ ಸಾಂತ್ವನ
ಹೇಳುವಾಗಲೇ ಮುಚ್ಚಿದ ಎದೆಗೆ
ರಚ್ಚೆಗಳ ಗೆಲುವುದು ಕಷ್ಟವಾಗಲೇ ಇಲ್ಲ.

ಬಿಡದ ಜಡಿ ಮಳೆಗೆ
ನೆಲ ಕೊಳೆವ ಸತ್ಯ ತಿಳಿದದ್ದು
ನೀ ಬಂದು ಹೊರಟ ಮೇಲೆ.
ಸೋಗಿನಲಿ ಬೀಗುವುದ
ಈಗೀಗ ನಿನ್ನ ಸ್ವರವೂ
ಮರೆಮಾಚುತ್ತಿಲ್ಲ.

 

ಬಿದ್ದ ಗಿಲೀಟು ಕಿರೀಟವ ಎತ್ತಿ
ತಲೆಯ ಮೇಲಿಟ್ಟುಕೋ
ಸಧ್ಯ ನೀನು.
ತಿಳಿದಿರಲಿ.,
ಗೆದ್ದದ್ದು ನೀನಲ್ಲ.

ನಿರಾಸೆಗಳ ರಾಶಿಯಲಿ ನೀರು
ಕಾಯಿಸಿ ತಲೆಗೆ ಮಿಂದೆ ನಾನೆಂದೋ.
ಸೋಲುಗಳ ಮೂಲೆಗಿರಿಸಿ
ಸುಟ್ಟು ದೃಷ್ಟಿ ನಿವಾಳಿಸಿದೆ ಇಂದು.

ನನ್ನ ಪಾಲಿಗಿನ್ನೂ ಕಾಲ ನೀಲಿ ನೀಲಿ.
ಎದೆ ಹೂವು ಅರಳುವ ಈ ನೀಳ
ಹಾದಿಯಲಿ,ಅಚಾನಕ್ಕು ಅವ ಸಿಕ್ಕರೆ ನಕ್ಕರೆ
ಮಳೆಯಾಗಲಾರೆ ಮತ್ತೆ.

ಹನಿಯಾಗುವ ಪಾಠ
ಶುರುವಾಗಿದೆ ಖುಷಿಯಿಂದಲೇ.

‍ಲೇಖಕರು Avadhi

25 October, 2018

1 Comment

  1. Anand

    Marvelous and i felt as if one of my friend is trying to tell someone….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading