ದಿನಾ ದಣಿಯುವವಳು
~ ಅನೀಲ ತಾಳಿಕೋಟಿ
ಅಚ್ಚರಿ ಪಡುತ್ತೇನೆ
ಅದೆಂತೂ ಒಂದಕ್ಕೊಂದು ತಾಳೆಯಾಗುತ್ತ
ಬಳುಕೆಯಾಗುತ್ತಲೂ ಬಾಳಾಗುತ್ತದೆಂದು
ಎಲ್ಲೋ ಏನೋ ಓದುತ್ತ ಬೆಳೆದ ನಾನು
ಅದೇ ಮಯೂರ, ತರಂಗಾದಿ ಸುಳಿಯಲ್ಲಿ ಸಿಲುಕಿ ಬೆಳಗಿದ ನೀನು
ಬುದ್ದಿ ಬೆಳೆಯುವ ಮುಂಚೆ ನೋಡೆ ಇರದಿದ್ದರೂ
ನೋಡಿರದ ಸಾಧ್ಯತೆ ಇಲ್ಲವೇನಲ್ಲಾ ಎಂಬ ಪುಳಕ
ನೀರು ಕೂಡಿರದ ಹಾಲಿರಲು ಸಾಧ್ಯವೇ
ಎಂಬ ಜಿಜ್ಞಾಸೆ.

ಕನ್ನಡತನ
ಎರಕ ಹೊಯ್ದಂತಿರುವ ಮನಸು
ಅಪ್ರತಿಮ ಚಳಕ, ಸ್ವಲ್ಪ ಸ್ವಮರುಕ
ಹರಿದೋಡಿ ಹೋಗುವದೇ ಬಾಳಿನೇಕೈಕ ಗುರಿಯಲ್ಲ
ಎನ್ನುವ ತಿಳವಳಿಕೆ, ನಿಂತದ್ದು ಹೆಚ್ಚಾಯಿತೇನೋ
ಎನ್ನುವ ಆತಂಕ, ಅವರಿವರ ಉಸಾಬರಿಗೆ ಬೀಳದೇ
ಕೈಲಿ ಕಸಬರಿಗೆ ಹಿಡಿದು ಸ್ವಚ್ಛಗೊಳಿಸುವ ಸೊಗಸು
ಕೆಟ್ಟದ್ದು ಕಲಿಸುವದೇತಕೋ ಈ ಜಗ
ಎಂದು ಗಾಭರಿಗೊಳ್ಳುವ ಮುಗ್ಧ ಮನಸು
ಹುಟ್ಟಿನಲ್ಲೆಲ್ಲರೂ ಒಳ್ಳೆಯವರೆ ಆದರೆ
ಕೆಟ್ಟದ್ದು ಬಂದಿತೆಲ್ಲಿಂದ ಎಂದು ತಳಮಳಿಸುವ
ಜೀವ.
ಏನಾದರಾಗಲಿ , ಇನ್ನೊಬ್ಬರಿಗೆ ನೋವು ತನ್ನಿಂದಾಗದಿರಲಿ
ಅವರು, ಇವರು, ನಾನು , ನೀನು
ಹಂ ಇಲ್ಲದ ಬಿಮ್ಮೂಲ್ಲದ
ಮಾತೊಂದು ಗುಲಗಂಜಿಯಷ್ಟಾದರೂ ಹೆಚ್ಚಿದರೂ
ಕೇಳಿಸಿಕೊಂಡವರೆಲ್ಲಿ ಕೆಂಗೆಟ್ಟಾರೆಂಬ ಭಯ.
ಆಗಾಗ ನನಗೆ ಬೀಳುವ ಕನಸೆಂದರೆ ನೀ
ರಾಜಕಾರಣಿಯೋ, ಸಿನಿಮಾ ನಟಿಯಾಗಿಯೋ
ನಗೆಪಾಟಲಾಗುವ ವಿಚಾರ, ಆಣೆ ಮಾಡಿ ಹೇಳುತ್ತೇನೆ
ಎರಡು ದಿನವೂ ಟಿಕಾಯಿಸಲಾರೆ ನೀನಾ ಕಾರ್ಯಗಳಲ್ಲಿ
ಅಸಲಿಗೆ ಇಪ್ಪತ್ತೊಂದನೆಯ ಶತಮಾನದವಳೆ ಅಲ್ಲ
ಹತ್ತೊಂಬತ್ತರಾಚೆ ಇಚೆ ಇರಬೇಕಾಗಿತ್ತೇನೋ
ಕ್ಯಾಪಿಟಲಿಸ್ಟೋ, ಸ್ಟ್ರಿಟ್ ಸ್ಮಾರ್ಟೊ ಎಂದರೆ
ಬೀದಿಯ ಇನ್ನೊಂದು ಬದಿಗೆ ನುಣುಚಿ ಜಾರಿಕೊಳ್ಳುವವಳು
ಎತ್ತದ ಧ್ವನಿ
ಎಲ್ಲರೂ ಧಣಿ
ಒದಗದ ದಗದ, ದುಡಿತ, ದಣಿವು
ಕೆಲಸ ಮಾಡಿ ನೀ ದಣಿದೆ ದಣಿದಿ
ಹೆಣ್ಣೆಂದರಷ್ಟೆ, ದಿನಾ ದಣಿಯುವವಳು.






Very well written
koneya saalugagaLu kaadidavu…anil oLLeya kavana..
ಭಾವುಕತೆಯ ಕೊರತೆ ಬಿಟ್ಟರೆ ಕವಿತೆ ಚನ್ನಾಗಿದೆ
beautiful poem, olasuliva svagatada bhavagalu
Chennagide..
chennaagide. ಹೆಣ್ಣೆಂದರಷ್ಟೆ, ದಿನಾ ದಣಿಯುವವಳು. opkoloke manasilla adroo satya..