ನೀರಿಲ್ಲದ್ದಕ್ಕೇ ನೀರು ಕೇಳಿದ್ದು ಸ್ವಾಮೀ

rajaram tallur low res profile

ರಾಜಾರಾಂ ತಲ್ಲೂರು

ನಿಮಗೆ 2+2 ಅಂದರೆ 4 ಅಂತ ಉತ್ತರ ಸಿಗೋದಿಲ್ಲ…

ಅದಕ್ಕೆ 3 ಅಂತ  ಉತ್ತರ ಬೇಕಾ ಅಥವಾ 5 ಅಂತ ಉತ್ತರ ಸಿಗಬೇಕಾ?… ಮಾಡ್ಕೊಡ್ತೇವೆ!

ಇದು ನಮ್ಮ ಒಕ್ಕೂಟ ವ್ಯವಸ್ಥೆಯ ಈವತ್ತಿನ ಚಿತ್ರಣ.

ಕುಡಿಯುವ ನೀರು, ನಿಂತ ನೆಲ, ತಿನ್ನುವ ಆಹಾರಕ್ಕೆ ದೊಣ್ಣಾಯಕರನ್ನು ನೇಮಿಸಿ, ಅವರ ಮೂಲಕ ಖಿಚಡಿ ಬೇಯಿಸಿಕೊಂಡು ತಿನ್ನುವುದು ವ್ಯವಸ್ಥೆಗೆ ಅಭ್ಯಾಸ ಆಗಿಬಿಟ್ಟಿದೆ.

avadhi-column-tallur-verti- low res- cropನೀರಿಗೆ ಸಂಬಂಧಿಸಿದಂತೆ, ಅಂತರ್ ರಾಜ್ಯ ಜಲ ವಿವಾದಗಳ ಕಾಯಿದೆ 1956 ರ ಅಡಿಯಲ್ಲಿ  ಈವತ್ತಿನ ತನಕ ಕೃಷ್ಣೆ (ಮಹಾರಾಷ್ಟ್ರ, ಕರ್ನಾಟಕ, ಆಂಧ್ರ), ಕಾವೇರಿ (ಕರ್ನಾಟಕ, ಕೇರಳ, ತಮಿಳುನಾಡು, ಪಾಂಡಿಚೇರಿ), ಗೋದಾವರಿ (ಮಹಾರಾಷ್ಟ್ರ, ಆಂಧ್ರ, ಕರ್ನಾಟಕ, ಮಧ್ಯಪ್ರದೇಶ, ಓಡಿಷಾ), ನರ್ಮದೆ (ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ), ಮಹಾದಾಯಿ (ಗೋವಾ, ಕರ್ನಾಟಕ, ಮಹಾರಾಷ್ಟ್ರ), ವಂಶಧಾರಾ (ಆಂಧ್ರ, ಓಡಿಷಾ) ರಾವಿ-ಬಿಯಾಸ್ (ಪಂಜಾಬ್, ಹರ್ಯಾಣ) ನದಿಗಳ ನೀರು ಹಂಚಿಕೆಯ ಬಗ್ಗೆ ಟ್ರಿಬ್ಯುನಲ್ ಗಳು ಸ್ಥಾಪನೆಗೊಂಡಿವೆಯಾದರೂ ಇವುಗಳಲ್ಲಿ ಒಂದೇ ಒಂದು ಹಂಚಿಕೆ ಈವತ್ತಿನ ತನಕ ಪೂರ್ಣಗೊಂಡಿಲ್ಲ. ಅಂತಿಮ ಫಲಿತಾಂಶ ಬಂದಲ್ಲಿ, ಹೆಚ್ಚುವರಿ ವಿವರಣೆ ಅಥವಾ ಮಾರ್ಗದರ್ಶನಕ್ಕಾಗಿ ಮತ್ತೆ ಟ್ರಿಬ್ಯುನಲ್ ಗಳ ಬಾಗಿಲು ತಟ್ಟಲಾಗಿದೆ. ಎಲ್ಲ ನದಿಗಳಲ್ಲೂ ಬೆಂಕಿ ಉರಿಯುತ್ತಿದೆ.

ಅಂದರೆ, ಬೀಸುವ ಕತ್ತಿ ತಪ್ಪಿಸಿಕೊಳ್ಳಲು, ಮುಖ ಉಳಿಸಿಕೊಳ್ಳಲು, ರಾಜಕೀಯವಾಗಿ ಕಿರುಕುಳ ನೀಡಿ ಆಟದ ಚೆಂದ ನೋಡಲು ಈ ಟ್ರಿಬ್ಯೂನಲ್ ಗಳು ದಾಳವಾಗಿವೆಯೇ ಹೊರತು ಮೂಲ ಉದ್ದೇಶ ಸಾಧಿಸುವಲ್ಲಿ ಫಲಿತಾಂಶ ಈ ತನಕ ಶೂನ್ಯ. ಇಂತಹ ವ್ಯವಸ್ಥೆಗಳನ್ನು ಒಮ್ಮೆ ಹಿಂದಿರುಗಿ ನೋಡದೆ ಮುಂದುವರಿಸುತ್ತಿರುವುದು ಒಕ್ಕೂಟ ವ್ಯವಸ್ಥೆಗೆ ಮಾರಕ.

ಈವತ್ತು ಕುಡಿಯುವ, ಕೃಷಿ ಬಳಕೆಯ ನೀರಿಗೆ ಉಂಟಾಗುತ್ತಿರುವ ಒತ್ತಡ ಆಕಸ್ಮಿಕವೂ ಅಲ್ಲ, ಅನಿರೀಕ್ಷಿತವೂ ಅಲ್ಲ. ನೀರಿನ ಹೆಸರಲ್ಲಿ ನಡೆಯುತ್ತಿರುವ ರಾಜ್ಯವಾರು ಭಾವನಾತ್ಮಕ ಸಂಘರ್ಷಗಳ ಹಿನ್ನೆಲೆಯಲ್ಲಿರುವುದು ಶುದ್ಧ ರಾಜಕೀಯವೇ ಹೊರತು ವಾಸ್ತವಗಳನ್ನು ಒಪ್ಪಿಕೊಂಡು ಹೊಂದಾಣಿಕೆಯಿಂದ ಸಾಗುವ ಮನಸ್ಸಲ್ಲ. ಪ್ರತಿಯೊಂದು ಜಲವಿವಾದದಲ್ಲಿ ಇಂತಹದೊಂದು ಟ್ರಿಗರಿಂಗ್ ಬಿಂದುವಿಗೆ ವ್ಯವಸ್ಥೆಯನ್ನು ತಲುಪಿಸುತ್ತಿರುವುದು ವಿಷನ್ ಇಲ್ಲದ ರಾಜಕೀಯ.

ಕರ್ನಾಟಕದ ಮೂಲಕ ಹರಿದುಹೋಗುವ ಮಹಾದಾಯಿ ನದಿಯ ನೀರನ್ನು ಕಳಸಾ ಮತ್ತು ಬಂಡೂರಿ ನಾಲೆಗಳ ಮೂಲಕ ಮಲಪ್ರಭೆಯ ಮಡಿಲಲ್ಲಿ ತುಂಬಿ ಬರಪೀಡಿತ ಉತ್ತರಕರ್ನಾಟಕಕ್ಕೆ ನೀರು ಒದಗಿಸುವ ಯೋಜನೆ ಆರಂಭವಾದದ್ದು 1988ರಲ್ಲಿ ಗುಂಡೂರಾಯರ ಕಾಲದಲ್ಲಿ. ಆದರೆ, ಈ ಯೋಜನೆಗೆ ಗೋವಾದ ವಿರೋಧ ಇದೆ. ಹಾಗಾಗಿ ಈವತ್ತು ಈ ವಿವಾದ ಟ್ರಿಬ್ಯೂನಲ್ ಮುಂದಿದೆ.

mahadayi mapಈ ನಡುವೆ ಕಳೆದ  ಎರಡು ತಿಂಗಳುಗಳಿಂದ ಉತ್ತರ ಕರ್ನಾಟಕದಲ್ಲಿ ಮಹಾದಾಯಿ ನೀರಿಗಾಗಿ ಹೋರಾಟ ನಡೆದಿದೆ. ಸಹಜವಾಗಿಯೇ ಗೋವಾ ಮತ್ತು ಕೇಂದ್ರ ಸರ್ಕಾರಗಳಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ ಮತ್ತು ಕರ್ನಾಟಕದಲ್ಲಿ ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ಸಂಸದರಿರುವುದರಿಂದ ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ, ಪ್ರಧಾನಿ ಮಧ್ಯಸ್ಥಿಕೆ ವಹಿಸಿದರೆ, ಸಮಸ್ಯೆ ಸುಗಮವಾಗಿ ಬಗೆಹರಿದೀತು ಎಂಬ ನಿರೀಕ್ಷೆ ರಾಜ್ಯದಲ್ಲಿದೆ.

ಗೋವಾದಂತಹ ಸಮುದ್ರ ತಟದ ಪುಟ್ಟ ರಾಜ್ಯ ಮತ್ತು ಕಳೆದ ನಾಲ್ಕು ದಶಕಗಳಿಂದಲೂ ಸತತವಾಗಿ ಬರಪೀಡಿತವಾಗಿರುವ ಉತ್ತರ ಕರ್ನಾಟಕಗಳ ನಡುವೆ ಕುಡಿಯುವ ನೀರು ಮತ್ತು ಕ್ರಷಿಗೆ ಆದ್ಯತೆಯ ಪ್ರಶ್ನೆ ಬಂದಾಗ ಯಾರಿಗೆ ಮನ್ನಣೆ ಕೊಡಬೇಕೆಂಬುದು ಒಕ್ಕೂಟ ವ್ಯವಸ್ಥೆಯೊಂದಕ್ಕೆ ದೊಡ್ಡ ಪ್ರಶ್ನೆ ಖಂಡಿತಾ ಆಗಬಾರದಿತ್ತು. ಪಕ್ಷ ರಾಜಕೀಯ ಬಿಟ್ಟು ಜನಪ್ರತಿನಿಧಿಗಳಾಗಿ ವರ್ತಿಸಿದರೆ, ರಾಜ್ಯದ ಸಂಸದರಿಗೆ ಇದು ದೊಡ್ಡ ಸಂಗತಿಯೇ ಅಲ್ಲ.

ಅಂದಹಾಗೆ, ಈಗ ಮಧ್ಯಂತರ ಆದೇಶದಲ್ಲಿ ಟ್ರಿಬ್ಯೂನಲ್ “ಹೆಚ್ಚುವರಿ ನೀರಿಲ್ಲದಿರುವುದರಿಂದ” ನೀರು ಕೊಡಲಾಗುವುದಿಲ್ಲ ಅಂದಿದೆ ಎಂದರೆ, ಅದರ ಅರ್ಥ, ಉತ್ತರ ಕರ್ನಾಟಕದಲ್ಲಿ ನೀರಿಲ್ಲ ಎಂದು ಒಪ್ಪಿಕೊಂಡಂತೆಯೇ ಅಲ್ಲವೇ?

‍ಲೇಖಕರು Admin

July 28, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: