ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ನೀನೇ ನನ್ನ ಸರ್ವಸ್ವ ಎಂದುಕೊಳ್ಳುತ್ತಿದ್ದೆ..’ ಕೆ ವಿ ತಿರುಮಲೇಶ್ ಅನುವಾದಿಸಿದ ಬ್ರೌನಿಂಗ್ ಕವನ

ಕಂಪಾಞಾದಲ್ಲಿ ಇಬ್ಬರು

ಕೆ ವಿ ತಿರುಮಲೇಶ್

ರಾಬರ್ಟ್ ಬ್ರೌನಿಂಗ್ : Two in the Campagna
[ಮೂಲ : ರಾಬರ್ಟ್ ಬ್ರೌನಿಂಗ್. ಹತ್ತೊಂಬತ್ತನೇ ಶತಮಾನದ ಇಂಗ್ಲಿಷ್ ಕವಿ ರಾಬರ್ಟ್ ಬ್ರೌನಿಂಗ್, ಎಲಿಜಬೆತ್ ಬ್ಯಾರೆಟ್ ಎಂಬ ತನಗಿಂತ ವಯಸ್ಸಿಸ್ಸಿನಲ್ಲಿ ಹಿರಿಯಳಾದ ಇನ್ನೊಬ್ಬ ಕವಿಯನ್ನು ಪ್ರೀತಿಸಿ ಮದುವೆಯಾದ. ಇಬ್ಬರೂ ಇಟೆಲಿಗೆ ಬಂದು ಅಲ್ಲಿ ಫ್ಲೋರೆನ್ಸ್ನಲ್ಲಿ ವಾಸಿಸುತ್ತಾರೆ. ಆ ಕಾಲದಲ್ಲಿ ಬ್ರೌನಿಂಗ್ ಬರೆದ Two in the Campagna  ಎಂಬ ಒಂದು ವಿಶಿಷ್ಟ ಕವಿತೆಯ ಅನುವಾದ ಇದು. ಸ್ಥೂಲವಾಗಿ ಹೇಳುವುದಾದರೆ, ಕ್ಷಣಕ್ಷಣಕ್ಕೂ ಚಂಚಲವಾಗಿದ್ದು, ಎಲ್ಲಿಯೂ, ಪ್ರೀತಿಯಲ್ಲಿಯೂ, ಸ್ಥಿರವಾಗಿ ನೆಲೆಗೊಳದ, ಊರ್ಧ್ವಗಾಮಿ ಮನಸ್ಸು ಇದರ ವಿಷಯ]
 

ನನಗೆ ಗೊತ್ತಿಲ್ಲ ನಿನಗನಿಸುವುದೊ ಈವತ್ತು
ನನಗನಿಸಿದಂತೆ ಆವತ್ತು ಕೈಯಲ್ಲಿ ಕೈಹಿಡಿದು,
ನಾವು ಹುಲ್ಲಿನ ಮೇಲೆ ಕೂತಿದ್ದ ದಿನದಿಂದ,
ಅಲೆಯುವುದಕ್ಕೆ ಮಾನಸಿಕವಾಗಿ ನೆಲದಗಲ
ಈ ರೋಮಿನ ಹಾಗೂ ಮೇ ತಿಂಗಳ ಮುಂಜಾನೆ?
 
ನಾನಾದರೋ ಒಂದು ವಿಚಾರವ ಮುಟ್ಟಿದ್ದು, ನನಗೆ
ಗೊತ್ತಿದೆ, ಹಲವು ಸಲ ಕಾಡಿದೆ ನನ್ನ
(ಜೇಡ ಛೇಡಿಸಿ ಎಸೆವ ನೂಲಿನ ಹಾಗೆ ನಮ್ಮ
ದಾರಿಗೆ ಅಡ್ಡ) ಪ್ರಾಸಗಳಿಗೋಸ್ಕರ
ಚಾಚಿ ಹಿಡಿಯುವುದು ಬಿಡುವುದು.
 
ಹಿಡಿಯಲು ಸಹಾಯ ಮಾಡು ನನಗೆ ಅದನ್ನು!
ಯಾವುದೋ ಹಳೆಗೋರಿಯ ಅವಶೇಷ,
ಇಟ್ಟಿಗೆ ಗೋಡೆ ಸೆರೆ, ಅದರಲ್ಲಿ ಎಗೆ ಬಿಡುತ್ತ
ಬೀಜವೊಡೆದ ಹಳದಿ ಹಣ್ಣೆಲೆಯ ಸೋಂಪು:
ಓ ಅಲ್ಲಿ ಆ ಕಳೆಗಿಡ ಎತ್ತಿಕೊಂಡಿತು ತೇಲುವ ನೂಲ,
 
ಅಲ್ಲೊಂದು ಸಣ್ಣ ಕಿತ್ತಳೆಕೋಶ ಸಂಗ್ರಹಿಸಿದೆ
ಐದು ತುಂಬಿಗಳನ್ನು,-ಜೇನೂಟದ ನಡುವೆ
ಪರದಾಡುತ್ತಿವೆ, ಅಂಧ ಮತ್ತು ಹರಿದ್ರಾವರ್ಣ: ಆಮೇಲೆ
ಕೊನೆಗೆ, ಹುಲ್ಲ ಇಳಿಜಾರಿನಲಿ ಪ್ರತಿಯೊಂದು ಕಡೆ
ನಾನದರ ಜಾಡ ಹಿಡಿದೆ. ಬಿಗಿಯಾಗಿ ಹಿಡಿದುಕೋ!
 
ಮೃದು ತ್ವಚೆಯ ಹುಲ್ಲುಗಳ ಅಪರಿಮಿತ ತುಪ್ಪಳ
ಬಯಲು ತುಂಬಾ ಪ್ರತಿಯೊಂದು ಕಡೆ!
ಮೌನ ಮತ್ತು ಉನ್ಮಾದ, ಹರ್ಷ ಹಾಗೂ ಶಾಂತಿ,
ಗಾಳಿಯ ಅನಂತ ತೊಯ್ತತು-ರೋಮಿನ ಭೂತ
ರೋಮ್ ಗತಿಸಿದ ಅಂದಿನಿಂದಲೂ.
 
ಆ ಅಂಥ ಜೀವ ಇಲ್ಲಿ, ಆ ಅಂಥ ಗಳಿಗೆಗಳ ಉದ್ದಕ್ಕು,
ಆ ಅಂಥ ಪವಾಡಗಳು ಆಟದಲಿ ಪ್ರಯೋಗಿಸಿದವು,
ಆ ಅಂಥ ಹೂವುಗಳ ಪುರಾನಗ್ನ ರೂಪಗಳು,
ಆ ಅಂಥ ಪ್ರಕೃತಿ ವಿಲಾಸ ಮನಸೋ ಇಚ್ಛೆ,
ಅಂತರಿಕ್ಷ ನೋಡುತ್ತಿರಲು ತನ್ನ ಗೋಪುರಗಳಿಂದ.
 
ಏನೆನ್ನುವಿ ನೀನು? ಓ ನನ್ನ ಪಾರಿವ, ನಾವು
ನಾಚದಿರೋಣ ನಮ್ಮ ಜೀವಾತ್ಮದ ಕುರಿತು,
ನೆಲ ಮಲಗಿದ ಹಾಗೆ ಅಂಗಾತ ಮೇಲಿನ ಅಂತರಿಕ್ಷಕ್ಕೆ!
ಅದೆಂತು ನಮ್ಮ ನಿಯಂತ್ರಣದಲ್ಲಿದ್ದೀತು,
ಪ್ರೀತಿಸುವುದು ಅಥವ ಪ್ರೀತಿಸದೆ ಇರುವುದು?
 
ನೀನೇ ನನ್ನ ಸರ್ವಸ್ವ ಎಂದುಕೊಳ್ಳುತ್ತಿದ್ದೆ,
ಅಷ್ಟೆಯೆ ನೀನು, ಅದಕಿಂತ ಹೆಚ್ಚಲ್ಲ. ನಿನ್ನವಳೂ
ಅಲ್ಲ, ನನ್ನವಳೂ ಅಲ್ಲ, ಜೀತದವಳಲ್ಲ, ಮುಕ್ತಳೂ ಅಲ್ಲ!
ತಪ್ಪು ನೆಲಸಿರುವುದೆಲ್ಲಿ? ಗಾಯದ ಬಿತ್ತು ಯಾವುದು,
ಗಾಯ ಇರಲೇ ಬೇಕು ಎಂದಾದರೆ?
 
ಅಂದುಕೊಳ್ಳುತ್ತೇನೆ, ನಿನ್ನಿಚ್ಛೆಯ ನಾನು ನನ್ನದಾಗಿಸುವಂತಿದ್ದರೆ,
ನಿನ್ನ ಕಣ್ಣುಗಳಿಂದ ನಾನು ನೋಡುವಂತಿದ್ದರೆ, ಮತ್ತು ನನ್ನ ಹೃದಯದ
ಬಡಿತವ ನಿನ್ನದಕ್ಕೆ ಹೊಂದಿಸುವಂತಿದ್ದರೆ, ಹಾಗೂ ನಿನ್ನಾತ್ಮದ
ಕಾರಂಜಿಗಳಿಂದ ನನ್ನ ದಾಹವ ತಣಿಸುವಂತಿದ್ದರೆ,-ನಿನ್ನ ಪಾತ್ರ
ಜೀವನದಲ್ಲಿ ನನ್ನ ಪಾತ್ರ, ಒಳಿತಿಗೋ ಕೆಡುಕಿಗೋ.
 
ಇಲ್ಲ. ನಾನೆಳಸುವುದು ಮೇಲಕ್ಕೆ, ನಿನ್ನ ಮುಟ್ಟುವೆನು ಹತ್ತಿರದಿಂದ,
ಆಮೇಲೆ ನಿಲ್ಲುವೆನು ದೂರ. ನಿನ್ನ ಕದಪು ಚುಂಬಿಸುವೆ,
ನಿನ್ನಾತ್ಮದುಸಿರ ಬಿಸಿಯ ಹಿಡಿಯುವೆ,-ಗುಲಾಬಿಯ ಕೀಳುವೆ,
ಮಾತು ಹೇಳುವುದಕ್ಕಿಂತ ಹೆಚ್ಚು ನಾನದನ್ನು ಪ್ರೀತಿಸುವೆ,-
ಆಮೇಲೆ ಆ ಶುಭನಿಮಿಷ ಜಾರಿಹೋಗುವುದು.
 
ಈಗಾಗಲೇ ನಾನದೆಂತು ಅದೆಷ್ಟು ದೂರ
ಆ ನಿಮಿಷದಿಂದ? ನಾನಿನ್ನೂ ಹೋಗಬೇಕೇ
ರೇಶ್ಮೆಹತ್ತಿಯ ಹಾಗೆ ನಿಶ್ಚಲ, ತಡೆರಹಿತ,
ಮುಂದಕ್ಕೆ, ಮೆಲುಗಾಳಿ ಬೀಸುವಾಗೆಲ್ಲ,
ಯಾವುದೇ ಸ್ನೇಹನಕ್ಷತ್ರ ನೆಲೆಯ ತೋರಿರದೆ?
 
ಇನ್ನೇನು ನಾನು ಕಲಿತೆ ಎಂದು ಅನಿಸಿದಾಗಲೇ!
ನೂಲೆಲ್ಲಿ ಈಗ? ಹೊರಟಾಯಿತು ಪುನಃ!
ಆ ಹಳೇ ಅಭ್ಯಾಸ! ಮಾತ್ರ ನನಗೆ ಕಾಣಿಸುವುದು-
ಅಮಿತವಾದ ಆರ್ತತೆ, ಮತ್ತು ಹಂಬಲಿಸುವ
ಮಿತಹೃದಯಗಳ ನೋವು.
 
***
ಟಿಪ್ಪಣಿಗಳು :
ಮನಸ್ಸು ವಸ್ತುಗಳ ಬೆಂಬತ್ತಿ ಸಂಚಲಿಸುವ ರೀತಿ0ುನ್ನು ಆಪ್ಯಾ0ುಮಾನವಾಗಿ ಚಿತ್ರಿಸುವ ಕವಿತೆ ಇದು.
ಕಂಪಾಞಾ. ರೋಮಿನ ಹೊರವಲಯದ ಬಯಲು.
ರೇಶ್ಮೆಹತ್ತಿ. thistle (thistle-down), ಗಾಳಿಯಲ್ಲಿ ಹಗುರಾಗಿ ತೇಲಿಕೊಂಡು ಸಾಗುವಂಥ ಹತ್ತಿಬೀಜ.
 

‍ಲೇಖಕರು G

1 October, 2014

4 Comments

  1. maheshwari.u

    ಸರ್, ಕವಿತೆ ತುಂಬಾ ಚೆನ್ನಾಗಿದೆ.ಅನುವಾದ ಕೂಡ.ರೇಷ್ಮೆ ಹತ್ತಿ- ನಾವು ನಮ್ಮೂರಲ್ಲಿ ‘ಅಜ್ಜನಗಡ್ಡ’ ಎಂದು ಕರೆಯುತ್ತೇವಲ್ಲ- ಅದೇ ತಾನೇ?

  2. kvtirumalesh

    `ಅಜ್ಜನ ಗಡ್ಡ’ ಸರಿಯಾದ ಪದ; ನಾನೂ ಅದನ್ನೇ ಮೊದಲು ಇರಿಸಿದ್ದೆ. ಆದರೆ ತೀರಾ ಪ್ರಾದೇಶಿಕವಾಯಿತು ಎಂದುಕೊಂಡು `ರೇಶ್ಮೆ ಹತ್ತಿ’ ಎಂಬ ಪದ ಬಳಿಸಿದೆ. ಈಗ ಮತ್ತೆ ಯೋಚಿಸುವೆ.
    ಓದುಗರ ಅವಗಾಹನೆಗೆ: ನಿನ್ನೆ, ಸೆಪ್ತೆಂಬರ್ ೩೦, ಅಂತಾರಾಷ್ಟ್ರೀಯ ಭಾಷಾಂತರ ದಿವಸವಾಗಿತ್ತು. ಇದು ಸಂತ ಜೆರೋಮ್ ಎಂಬ ಕ್ರಿಶ್ಚಿಯನ್ ಸಂತನ ದೇಹಾಂತದ ವಾರ್ಷಿಕ ದಿವಸವೂ ಹೌದು. ಸಂತ ಜೆರೋಮ್ ಪ್ರಸಿದ್ಧ ಭಾಷಾಂತರಕಾರನಾಗಿದ್ದ. ಈ ವರ್ಷ ಅಂತಾರಾಷ್ಟ್ರೀಯ ಭಾಷಾಂತರ ದಿವಸವನ್ನು ಭಾಷಾ ಹಕ್ಕುಗಳ ವಿಷಯದ ಮೇಲೆ ಆಚರಿಸಲಾಗುತ್ತದೆ.
    ಕೆ.ವಿ. ತಿರುಮಲೇಶ್

  3. Anil Talikoti

    “ಆಮೇಲೆ ಆ ಶುಭನಿಮಿಷ ಜಾರಿಹೋಗುವುದು” ಎಂಬುವದು ಇಲ್ಲಿಯ ಜೀವಾಳವಲ್ಲವೆ? ಎಷ್ಟೇ ಉತ್ಕಟವಾಗಿ ಕವಿ ಪ್ರೀತಿಯಲ್ಲಿ ಬೆರೆತು ಹೋಗಲು ಪ್ರಯತ್ನಿಸಿದರೂ ನಿಶ್ಚಿತ ಹೃದಯದ ಚಂಚಲತೆ ಆ ಕ್ಷಣದ ನಂತರ ಮತ್ತೆ ಉತ್ಕಟತೆಯಿಂದ ಕೆಳ ಜಾರುತ್ತದೆ. ಇದೊಂದು ಅತ್ಯುತ್ತಮ ಅನುವಾದವಾದರೂ ಯಾಕೋ ಏನೋ ನನಗೆ ಯಾವ ಅನುವಾದಗಳು ಮೂಲಕ್ಕೆ ನ್ಯಾಯವಾದ ಮೌಲ್ಯ ಕೊಡುವಲ್ಲಿ ಸ್ವಲ್ಪ ಮಟ್ಟಿಗೆ ಸೋಲುತ್ತವೆ ಎನಿಸುತ್ತದೆ -ಅಥವಾ ನಮ್ಮ ಸಂವೇದನೆಗಳನ್ನು ಮೂಲ ಬಡೆದೆಬ್ಬಿಸುವಂತೆ ಅನುವಾದಗಳು ಎಂದೂ ಮಾಡಲಾರವೇನೋ?ಒಳ್ಳೆಯ ಕವಿತೆಗಾಗಿ ಧನ್ಯವಾದಗಳು.
    ~ಅನಿಲ ತಾಳಿಕೋಟಿ

  4. D.M.Sagar

    Nice poem, proportionately nice translation “ನಿನ್ನ ಪಾತ್ರ
    ಜೀವನದಲ್ಲಿ ನನ್ನ ಪಾತ್ರ, ಒಳಿತಿಗೋ ಕೆಡುಕಿಗೋ.” very touching phrase!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading