ಜೋಳಿಗಿ ವಳಗೊಂದು ಜ್ವಾಳದ ತೆನಿ ಕಥಿ
-ರಮೇಶ ಅರೋಲಿ
ಜಗತ್ತಿನ ಹುಟ್ಟಿಗೆ ಕಾರಣವೆನ್ನಲಾಗುವ ಗ್ರಹಗಳಾಚೆಯ ದೇವಕಣಗಳ ಇರುವಿಕೆಯನ್ನು ಒಪ್ಪಿಕೊಳ್ಳುವ ಈ ‘ಸಿವಿಲ್ ಸೊಸೈಟಿ’ ಪರಂಪರಾಗತವಾಗಿ ಹೆಣ್ಣುಮಕ್ಕಳನ್ನು ದೇವದಾಸಿ ಪದ್ದತಿಗೆ ದೂಡುತ್ತಿರುವುದನ್ನು ಮತ್ತವರ ಸಂಖ್ಯೆ ದಿನಾಲೂ ಬೆಳೆಯುತ್ತಿರುವುದನ್ನು ಮಾತ್ರ ಒಪ್ಪಿಕೊಳ್ಳುವುದಕ್ಕೆ ತಯಾರು ಇಲ್ಲ.
ಮನೆಯಂಗಳದಲ್ಲಿ ಓಡಾಡಿಕೊಂಡಿದ್ದ ಓಣಿ ಹುಡುಗಿಯೊಬ್ಬಳು ದಿಢೀರನೆ ಯಲ್ಲಮ್ಮನ ಪಾದುಕೆ, ಬೇವಿನ ಎಲೆ, ಕುಂಕುಮ ಅರಿಸಿಣದ ಬುಟ್ಟಿ ಹಿಡುದು ಪ್ರತ್ಯಕ್ಷ್ಯಳಾದದ್ದು ಕಂಡಾಗ ಬರೆದದ್ದು.
‘ಅವಧಿ’ ಓದುಗರಿಗಾಗಿ ರಮೇಶ್ ಆರೋಲಿ ಇದನ್ನು ಕಳಿಸಿಕೊಟ್ಟಿದ್ದಾರೆ
ಗಿಲಿಗಿಲಿ ಕಿರಿಗೆಜ್ಜೆ ಮಾದೇವಿ
ನೀನು ಗಿರಿಕೇಲಿ ಹಗ್ಗಾವು ಮಾದೇವಿ
ಕೆರೆಯಾಗ ಆರುತಿ ಮಾದೇವಿ
ನಿನ್ನ ಕೊಳ್ಳಾಗ ಜಕ್ಕಣಿಕೆ ಮಾದೇವಿ
ಅಕ್ಕ ಅವ್ವಕ್ಕ ಮಾದೇವಿ
ನಿನ್ನ ಅಮ್ಮ ನಾಗಮ್ಮ ಮಾದೇವಿ
ಸತ್ತ ಅಪ್ಪನಿಗೆ ಮಾದೇವಿ
ನೀನು ಒಪ್ಪತ್ತು ಮಗಳಾದೆ ಮಾದೇವಿ
ಸಣ್ಣ ಸಾಮಾರ ಮಾದೇವಿ
ನಿನ್ನ ದೊಡ್ಡಾಕಿ ಮಾದೇವಿ
ಹಸಿರು ಬಳೆ ತೊಡು ಮಾದೇವಿ
ನೀನು ಬಸುರಿನ ತಾಯಿ ಮಾದೇವಿ
ತುಂಗ ತೀರದಿ ಮಾದೇವಿ
ನಿನ್ನ ಅಕ್ಕ ತಂಗಿಯರು ಮಾದೇವಿ
ಕಂಕಣ ಕಟ್ಟ್ಯಾರ ಮಾದೇವಿ
ನಿಂಗೆ ಕೊಂಕಳ ಚೌಡಿಕೆ ಮಾದೇವಿ
ಕಣ್ಣಿಗೆ ಕಾಡಿಗೆ ಮಾದೇವಿ
ನಿನ್ನ ಹಣೆ ತುಂಬ ಅರಸಿಣ ಮಾದೇವಿ
ಗೆಜ್ಜೆ ಗೆಳತಿ ಕಾಲು ಮಾದೇವಿ
ನೀನು ಸಜ್ಜನರ ಹೆಂಡತಿ ಮಾದೇವಿ
ತುಕ್ಕು ತೇರಿನ ತೂಬು ಮಾದೇವಿ
ನೀನು ತೂತಿನ ಡಾಬು ಮಾದೇವಿ
ಕೊರಳಾಗ ಕರಿಮಣಿ ಮಾದೇವಿ
ನಿಂಗೆ ಮಸಣವೆ ಹಸಿಮಣೆ ಮಾದೇವಿ
ಊರಿಗೆ ಹೆಂಡತಿ ಮಾದೇವಿ
ನೀ ನೀರಲ್ಲಿ ಎಂಟಾಣೆ ಮಾದೇವಿ
ಬೇವಿನ ತಪ್ಪಲು ಮಾದೇವಿ
ನಿನ್ನ ಬೆನ್ನಲ್ಲಿ ಇಳಿಜಡೆ ಮಾದೇವಿ
ಸಜ್ಜೆ ಹೊಲದಾಗ ಮಾದೇವಿ
ನಿನ್ನ ಹಿಂದೆ ನೂರೆಜ್ಜೆ ಮಾದೇವಿ
ಜ್ವಾಳದ ತೆನೆಗೆ ಮಾದೇವಿ
ನೀನು ಜೋಳಿಗೆಯಾದೆ ಮಾದೇವಿ
ದರ್ಗಾದ ವಲಿಗೆ ಮಾದೇವಿ
ನೀನು ದತ್ತು ಮಗಳಾದೆ ಮಾದೇವಿ
ಉರುಸಿನ ದಿವಸ ಮಾದೇವಿ
ನೀನು ಊರೆಲ್ಲ ಮಾಲದಿ ಮಾದೇವಿ
ಮೂಲ್ಯಾಗ ಕೋಲಾದೆ ಮಾದೇವಿ
ನಿನ್ನ ನಾಲಿಗೆ ಮ್ಯಾಲೆ ಮಾದೇವಿ
ಕರಿಮಚ್ಚೆ ಗುರುತು ಮಾದೇವಿ
ನೀನು ಅರೆಹುಚ್ಚಿ ದೇವರು ಮಾದೇವಿ
ಅರವಿಲಿ ಜಾತ್ರೇಲಿ ಮಾದೇವಿ
ನೀನು ಅರೆಬೆತ್ತಲಾದೆ ಮಾದೇವಿ
ಕುರಿ ಮಂದೆ ಕುಲವೆಲ್ಲ ಮಾದೇವಿ
ನಿಂಗೆ ಕರಿಬೇವು ತಿನ್ನಿಸಿ ಮಾದೇವಿ
ಹೊತ್ತಲ್ಲದೊತ್ತಲ್ಲಿ ಮಾದೇವಿ
ನಿಂಗೆ ಮುತ್ತು ಕಟ್ಟ್ಯಾರ ಮಾದೇವಿ
ಮುತ್ತಂಥ ಮನಸಿನ ಮಾದೇವಿ
ನೀನು ಮಡಚದ ಹಾಸಿಗೆ ಮಾದೇವಿ
ಗಂಡನ್ಯಾರೆಂದು ಮಾದೇವಿ
ನಿನ್ನ ಚೆಂಡ್ಹೂವು ಕೇಳ್ಯಾವೆ ಮಾದೇವಿ
ಕೊಳ್ಳಾಗ ಕವಡೆ ಮಾದೇವಿ
ನಿನ್ನ ದವಡೆ ಚಿವುಟ್ಯಾವೆ ಮಾದೇವಿ
ಅಮವಾಸೆ ಸಂಜೀಕಿ ಮಾದೇವಿ
ನಿನ್ನ ಹಣೆ ಬೊಟ್ಟು ಅಳಸಿತು ಮಾದೇವಿ
ಎಳ್ಳಾಮಾಸೆಗೆ ಮತ್ತೆ ಮಾದೇವಿ
ನಿನ್ನ ಕೊಳ್ಳಾಗ ತಾಳಿ ಮಾದೇವಿ
ಗುಡ್ಡದ ಮರೆಯಲ್ಲಿ ಮಾದೇವಿ
ನೀನು ಗುಟ್ಟಾಗಿ ತಾಯಾದೆ ಮಾದೇವಿ
ಹುಟ್ಟಿದ ಕೂಸಿಗೆ ಮಾದೇವಿ
ನೀನು ಕಟ್ಟಿಸಿ ತಾಯಿತ ಮಾದೇವಿ
ಇಟ್ಟಂಥ ಹೆಸರೇನು ಮಾದೇವಿ
ನೀನು ಕೊಟ್ಟಂತ ಮಾತೇನು ಮಾದೇವಿ
ಸುಟ್ಟ ಬೂದಿ ಮೈಯಿ ಮಾದೇವಿ
ನೀನು ಇಟ್ಟಿಗೆ ದೇವರು ಮಾದೇವಿ
ಹುಣ್ಣಿಮೆ ಊರಾಗ ಮಾದೇವಿ
ನಿನ್ನ ಕಣೆಲ್ಲ ಬಾವುಲಿ ಮಾದೇವಿ
ಕತ್ತಲು ಕುಣಿತದೆ ಮಾದೇವಿ
ನೀನು ಬೆಳಕಿಗೆ ಬೆತ್ತಲು ಮಾದೇವಿ
ದನದ ಕಳ್ಳು ಹಾರ ಮಾದೇವಿ
ನಿನ್ನ ಕೊಳ್ಳಾಗ ಗುಳಿದಾರ ಮಾದೇವಿ
ಇಡಿ ಇಡಿ ಬಯಲಾಗ ಮಾದೇವಿ
ನಿನ್ನ ಹಿಡಿಲಾಗದೆ ಮಾದೇವಿ
ಕೊಡಪಾನ ತೆಲಿಮ್ಯಾಲೆ ಮಾದೇವಿ
ನೀನು ತುಳುಕುವ ಹೆಂಡ ಮಾದೇವಿ
ಹೋಸೂರು ಹಾದ್ಯಾಗ ಮಾದೇವಿ
ನೀನು ಕೂಸಾಗಿ ತಿರುಗಿದೆ ಮಾದೇವಿ
ಹುಣಿಸೆ ಮರದಡಿ ಮಾದೇವಿ
ನೀನು ಕಲ್ಲಾಗಿ ಕುಂತೀಯ ಮಾದೇವಿ
ಹೊಲದ ಒಡ್ಡಿಗೆ ಮಾದೇವಿ
ನೀನು ಕಳೆಯಾಗಿ ಬೆಳದಿ ಮಾದೇವಿ
ಅಲಸಂದಿ ಕಾಳಿಗೆ ಮಾದೇವಿ
ನೀನು ನೆಲಸಿದ ಊರಿಲ್ಲ ಮಾದೇವಿ
ಕೊಬ್ಬರಿ ತುಂಡಲ್ಲಿ ಮಾದೇವಿ
ನೀನು ಇಬ್ಬರ ಹೆಂಡತಿ ಮಾದೇವಿ
ಮುತ್ತ್ಯಾಲಮ್ಮ ತಂಗಿ ಮಾದೇವಿ
ನೀನು ಕೆಂಚಮ್ಮ ಸವತಿ ಮಾದೇವಿ
ಮಾರೆಮ್ಮ ಮಗಳಂತೆ ಮಾದೇವಿ
ನೀನು ಯಾರಿಗು ಬ್ಯಾಡಾದೆ ಮಾದೇವಿ
ಮಣ್ಣಾಗ ಮೂಡಿದ್ದಿ ಮಾದೇವಿ
ನೀನು ಹೆಣ್ಣಲ್ಲ ಗಂಡಂಗೆ ಮಾದೇವಿ
ಬಯಲು ಊರಾಗ ಮಾದೇವಿ
ನಿಣು ಬಚ್ಚಿಟ್ಟ ಗೋರಿ ಮಾದೇವಿ
ಗಿಲಿಗಿಲಿ ಅಹಃ ಗಿಲಿಗಿಲಿ ಕಿರಿಗೆಜ್ಜೆ ಮಾದೇವಿ
ನೀನು ಗಿರಿಕೇಲಿ ಹಗ್ಗಾವು ಮಾದೇವಿ









touchy. your poetry holds me even after i turn the page, as always ..
-venkatraman