– ಜೀ ಕೇ ನವೀನ್ ಕುಮಾರ್
ನಾ ನಿನ್ನ ಗೆಳತಿ ನಿಜ,
ಆದರೇ
ನೀನು ಬರಬೇಡ ಚಂದ್ರ ಈ ಭುವಿಗೆ
ನನಗಾಗಿ
ಬಾನು ಬಿಡುವಷ್ಟು ಮೋಹವಿದ್ದರೂ.
ನೀ ಮೇಲಿಂದ ಕಂಡಂತಲ್ಲ ನನ್ನ
ಸುತ್ತಲಿನ ಈ ಜನ,
ಬೆಳಕು ನೀಡುವ ಶಕ್ತಿ ನಿನಗಿಲ್ಲವೆಂದು
ಮೂದಲಿಸುವರು,
ನೀ ಬರಿಯ ಕಲ್ಲು ಗುಂಡೆಂದು, ವ್ಯಂಗಿಸಿ
ಗಹಗಹಿಸಿ ನಗುವರು,

ನೀನು ಬರಬೇಡ ಚಂದ್ರ ಈ ಭುವಿಗೆ
ನಾ ನಿನ್ನನು ದಿನ ರಾತ್ರಿ ನೆನೆದರೂ.
ನಿನ್ನೆದೆಯ ಗರ್ಭದಲಿ ಲೋಹವನು
ಮಾತ್ರ ಹುಡುಕುವರು,
ನಿನ್ನ ಬಿಳುಪಿಗೆ ಕಪ್ಪು ಬಂದೂಕಿನ
ಮಸಿ ಅಂಟಿಸುವರು,
ನಿನ್ನನು ತುಳಿದದ್ದು ಸಾಹಸವೆಂದು ಬೀಗುತಾ,
ನೀನು ಬರಬೇಡ ಚಂದ್ರ ಈ ಭುವಿಗೆ
ನಾ ನಿನ್ನನು ಕೂಗಿ ಕೂಗಿ ಕರೆದರೂ.
ನಿನ್ನೊಡಲ ಪ್ರೀತಿಯನು ಎಲ್ಲರಿಗೂ
ಹಂಚಲು ಬಿಡರು.
ಕಾಂಚಣದಲಿ ನಿನ್ನ ಕೊಂಡುಕೊಂಡು
ಸ್ವಂತವಾಗಿಸಲು ಹವಣಿಸುವರು
ನೀನು ಬರಬೇಡ ಚಂದ್ರ ಈ ಭುವಿಗೆ
ನಾ ಇಲ್ಲಿ ವಿರಹ ವೇದನೆಯಲಿ ಕನಲಿದರೂ
ನಿನ್ನ ಮೈಯನು ಪರಚಿ ಪರಚಿ
ವಿರೂಪಗೊಳಿಸುವರು.
ನಿನ್ನ ಅಸ್ತಿತ್ವಕ್ಕೆ ಚೂರಿ ಇರಿದು
ತುಂಡು ತುಂಡಾಗಿಸುವರು
ನೀನು ಬರಬೇಡ ಚಂದ್ರ ಈ ಭುವಿಗೆ
ನಾ ಇಲ್ಲಿ ಕಣ್ಣಲ್ಲಿ ನಿನ್ನನೇ ತುಂಬಿಕೊಂಡಿದ್ದರೂ.
ನಿನ್ನ ತಂಪಿನ ಒಡಲಿನ ಒಳಗೆ
ಬಿಸಿ ಬಾಂಬುಗಳನೇ ಸಿಡಿಸುವರು,
ನಿನ್ನನ್ನೊಂದು ಮತದ ಚಿನ್ನೆಯಾಗಿಸಿ
ಬೆಂಕಿ ಹಚ್ಚಿ ಸುಡುವರು
ನೀನು ಬರಬೇಡ ಚಂದ್ರ ಈ ಭುವಿಗೆ
ನಾ ಇಲ್ಲೇ ಮೃತ್ಯುವಿನೊಳಗೆ ಜಾರಿ ಹೋದರೂ.
ಭುವಿಯ ಕಣ್ಣೀರು






0 Comments