ನೀತಿ ಚಿಂತಾಮಣಿ

 ಜಿ.ಪಿ.ಬಸವರಾಜು

1

ಈ ಮುದುಕಿಗೆ ಒಂದಿಷ್ಟಾದರೂ
ವಿವೇಕ ಬೇಡವೇ?
ಬೆಳಕೊಡೆಯದ ಕತ್ತಲಿಗೇ ಎದ್ದು
ಗಡಗಡ ನಡುಗುವ ಚಳಿಯಲ್ಲಿ
ಕೂಗುವ ಕೋಳಿಯ ಬಗಲಲ್ಲಿಟ್ಟುಕೊಂಡು
ಕಾಡಿನ ದಾರಿ ಹಿಡಿಯುವುದೇ?

ಒಂದು ಕಪ್ಪು ಬಿಸಿಬಿಸಿ ಕಾಫಿಯೂ
ಇಲ್ಲದೆ ಸೂರ್ಯ ನಡುನೆತ್ತಿಗೆ
ಬರುವವರೆಗೂ ಕಾಯಬೇಕೆ, ತನ್ನೂರಲ್ಲಿ
ಬೆಳಗಾಯಿತು ಕೋಳಿ ಕೂಗದೆಯೂ
ಎಂದು ತಿಳಿಯಲು; ಹೊಟ್ಟೆ ಹೊಟ್ಟೆಯೇ
ಚುರುಗುಟ್ಟಿ ಮರಳಿದಳು ಮುದುಕಿ
ಕೋಳಿಯ ಜತೆಯಲ್ಲಿ ಮನೆಗೆ

2
ಈ ಮೊಲ ಚುರುಕು ಎಂದರೂ
ಅದರ ಬುದ್ಧಿ ಮಾತ್ರ ಮೊಟಕು
ಒಂದು ಆಮೆಯ ವೇಗ ಎಷ್ಟೆಂಬುದು
ತಿಳಿಯಲಿಲ್ಲವೇ ಅದಕೆ; ಸುಖಾಸುಮ್ಮನೆ
ಹೆಜ್ಜೆ ಹಾಕಿದ್ದರೂ ಗೆಲ್ಲಬಹುದಿತ್ತಲ್ಲ ಅದನ

ಎಲ್ಲ ಬಿಟ್ಟು ಉಸಿರುಕಟ್ಟಿ ಓಡಿದ್ದು
ಯಾವ ಮೊಲಾರ್ಥಕ್ಕೆ?
ಓಡಿ ಓಡಿ ಉಸಿರುಕಟ್ಟಿ
ದಾರಿ ಮಧ್ಯದಲ್ಲೇ ಮಲಗುವ
ಅವಿವೇಕವಾದರೂ ಯಾಕೆ ಬೇಕಿತ್ತು?

3
ಒಂದು ಹೆಜ್ಜೆ ಬದಿಗೆ ಸರಿಯುವುದೆಂದರೆ
ಅದು ಸಹಕಾರ
ಅದು ಸಹಬಾಳ್ವೆ
ಬದುಕಬೇಕೆಂದರೆ ಎಲ್ಲರ ಜೊತೆ ಇಷ್ಟು
ಬೇಕಾಗುತ್ತದೆ
ಇದೂ ತಿಳಿಯದ ಈ ಅಹಂಕಾರಿ ಹೋತಗಳು
ಕಾದಾಡಿ, ಆಳದ
ಹೊಳೆಗೆ ಬಿದ್ದು ಪ್ರಾಣಬಿಟ್ಟದ್ದು ಯಾವ ಅಹಂಕಾರಕ್ಕೆ?

ನಮ್ಮ ಗೌಡರನ್ನೊ
ಖರ್ಗೆಯವರನ್ನೊ
ಕೇಳಿದ್ದರೆ ಹೇಳುತ್ತಿದ್ದರು
ಹೊಂದಾಣಿಕೆ ಎಂದರೇನೆಂದು

4
ಕೋತಿಯ ಕರುಳು
ಕೊಂಬೆಯ ಮೇಲೆ
ನಂಬೇಬಿಡಬೇಕೆ ಈ ಮೆದುಳಿಲ್ಲದ ಮೊಸಳೆ,
ನಡುನೀರಲ್ಲಿ
ಕೋತಿಗೆ ಹೊಳೆದದ್ದು
ನೆಲ-ನೀರನ್ನು ಬಲ್ಲ ಮೊಸಳೆಗೆ ಹೊಳೆಯದಿದ್ದರೆ…

5
ನರಿಯ ಬುದ್ಧಿ ಅಷ್ಟೇಕೆ
ಚುರುಕು ಸದಾ?

ಅದಕ್ಕೆ ಯಾವಾಗಲೂ
ಹೊಟ್ಟೆ ಖಾಲಿ,
ಸಿಕ್ಕುವುದಿಲ್ಲ
ಅನ್ನ ಸುಮ್ಮನೆ, ತಿರುಗುತ್ತಲೇ
ಇರಬೇಕು ಜೋಳಿಗೆ ಹೊತ್ತು

6

ಸುಮ್ಮನೇ ಅಲ್ಲ ನಮ್ಮ
ಪ್ರಧಾನಿ ಮೋದಿ
ಗೊತ್ತಿದೆ ಅವರಿಗೆ ಬದುಕುವ ಹಾದಿ
ಟ್ರಂಪ್‍ ಬಂದದ್ದು ಸುಮ್ಮನೇ ಅಲ್ಲ
ಆಮೇಲಲ್ಲವೇ ಈ ಕೊರೊನಾ ಎಲ್ಲ

‍ಲೇಖಕರು nalike

July 31, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Vasundhara k m

    ಗೊತ್ತಿರುವ ಕತೆಗಳನ್ನೇ ಕಾವ್ಯದಲ್ಲಿ ಹೆಣೆದಿದ್ದೀರಿ. ಸಮಕಾಲೀನತೆಯ ಎಳೆಗಳನ್ನೂ ಸೇರಿಸಿರುವುದರಿಂದ ಬಹಳ ಚೆನ್ನಾಗಿದೆ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: