ನಿಸಾರ್ ಸರ್: ಅಲ್ಲಿಯೂ ಪಕ್ಕಾ ಜಿಯಾಲಜಿಸ್ಟ್ ಹಾಗೆ..

ಮೇಘನಾ ಸುಧೀಂದ್ರ 

ನನ್ನ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಜಮೀಲ್ ಸರ್ “ಒಂದು ಸರ್ಪ್ರೈಸ್ ಇದೆ ನೋಡಿ” ಅಂದರು. ನಾನು ಏನು ಎಂದು ಯೋಚಿಸಿಕೊಂಡೇ ಸಾವಣ್ಣ ಪ್ರಕಾಶನದ ಆಫೀಸಿಗೆ ಹೋದೆ, ಅಲ್ಲಿ ನೋಡಿದರೆ ನಿಮ್ಮ, ಭಾರತಿ ಮತ್ತು ರಂಜರಾಜರ ಪುಸ್ತಕ ಬಿಡುಗಡೆಯನ್ನು ಮಾಡುವವರು ನಿಸಾರ್ ಅಹಮದ್ ಅಂದರು. ನಾನು ಒಂದು ನಿಮಿಷ ಅವಕ್ಕಾದೆ. ಅಷ್ಟು ದೊಡ್ಡ ಸಾಹಿತಿಗಳು, ಪದ್ಯ ಬರೆಯೋರು ಹೀಗೆ ಮೊದಲ ಪುಸ್ತಕ ಬರೆದವಳ ಪುಸ್ತಕ ಬಿಡುಗಡೆ ಹೇಗೆ ಮಾಡುತ್ತಾರೆ ಎಂಬ ಪ್ರಶ್ನೆ ಬಂದು, “ಸರ್ ನಿಜವಾಗಿಯೂ ಬರುತ್ತಾರಾ ಸಾರ್, ಜೋಕ್ ಅಲ್ಲಾ ತಾನೆ ” ಅಂದೆ. ಜಮೀಲ್ ಸರ್ ಎಂದಿನ ನಗೆಯನ್ನ ಬೀರಿ “ನೋಡಿ ಮೇಡಮ್ ಬರೋದೂ ಅಲ್ಲದೇ ನಿಮ್ಮೆಲ್ಲರ ಪುಸ್ತಕದ ಬಗ್ಗೆ ನಾಲ್ಕು ಮಾತನ್ನೂ ಆಡುತ್ತಾರೆ ನೋಡಿ” ಎಂದು ಹೇಳಿದರು.

ಚಿಕ್ಕವಳಿದ್ದಾಗ ನಿತ್ಯೋತ್ಸವ ಕವಿತಯನ್ನ ಒಂದು ೫೦ ಸ್ಪರ್ಧೆಯಲ್ಲಿ ಹಾಡಿದ್ದೇನೋ ನನಗೆ ಗೊತ್ತಿಲ್ಲ, ಶಾಲೆಯ ಅದೆಷ್ಟು ಕಾರ್ಯಕ್ರಮದಲ್ಲಿ ಅವರಕವಿ ಪರಿಚಯ ಮಾಡಿಕೊಟ್ಟಿದ್ದೆನೋ ಅದೂ ನಂಬರ್ ನೆನಪಿಲ್ಲ. ಬರೀ ನಿಸಾರ್ ಅಹಮದ್ ಅಲ್ಲ, ಕೆ ಎಸ್ ನಿಸಾರ್ ಅಹಮದ್ ಎನ್ನುವಷ್ಟು ನೆನಪು. ಇನ್ನು ನ್ಯಾಷನಲ್ ಕಾಲೇಜು ಎಂಬ ನಾಟಕದ ಕಾಲೇಜಿಗೆ ಸೇರಿಕೊಂಡಾಗಲಂತೂ ಕಾಲೇಜಿನ ಎಲ್ಲಾ ಏಕಪಕ್ಷೀಯನಿರ್ಧಾರಕ್ಕೂ ಪ್ರತಿಭಟನೆ ಮಾಡುವಾಗ ಬೇಕು ಬೇಕಂತ ಹಾಡುತ್ತಿದ್ದದ್ದು, “ಕುರಿಗಳು ಸಾರ್ ಕುರಿಗಳು”. ಅವರು ಅದನ್ನ ನಮ್ಮ ರಾಜಕೀಯ ವ್ಯವಸ್ಥೆಯ ಬಗ್ಗೆ ಬರೆದಿದ್ದರೂ ನಾವು ಅದನ್ನ ನಮ್ಮ ಕಾಲೇಜಿನಲ್ಲಿ ನಡೆಯದ್ದಿದ್ದ ಎಲೆಕ್ಷನ್, ಹುಡುಗಿಯರ ರೆಸ್ಟ್ ರೂಮ್ ಸರಿಯಿಲ್ಲದಕ್ಕೆ, ಇಲ್ಲ ಎಕ್ಸಾಮ್ ಹೀಗೆ ನಡೆಯಲೇಬಾರದೆನದ್ದಕ್ಕೆ ಪ್ರತಿಭಟನೆ ಮಾಡೋದ್ದಕ್ಕೋಸ್ಕರ ಈ ಹಾಡನ್ನು ಬಳಸಿ ದೊಡ್ಡ ಗಲಾಟೆ ಎಬ್ಬಿಸಿದ್ದೆವು. ಕಡೆಗೆ ನಮ್ಮ ಪ್ರಿನ್ಸಿಪಾಲ್ ಗೀತಾ ರಾಮಾನುಜಂ ಮೇಡಮ್ ಕರೆದು, “ಇಂತಹ ದೊಡ್ಡ ಕಾವ್ಯವನ್ನ ನೀವು ನಿಮ್ಮ ಹುಚ್ಚುತನಕ್ಕೆ ಬಳಸಿಕೊಂಡಿದ್ದು ದಡ್ಡತನ” ಎಂದು ಬೈದು ಕಳಿಸಿದ್ದರು.

ಮೊನ್ನೆ ಮೊನ್ನೆಯಷ್ಟೆ ಒಂದು ಪುಟ್ಟ ಮಗುವಿಗೆ “ಬೆಣ್ಣೆ ಕದ್ದ ನಮ್ಮ ಕೃಷ್ಣ” ಕವಿತಯನ್ನ ಹೇಳಿಕೊಟ್ಟೆ. “ಅವನ ಅಕುಟಿಲ ಬೆಣ್ಣೆಯಂತ ನಗು ಕಾಯಲಿ ಜಗದವರ” ಸಾಲಿನಲ್ಲಿ ದೊಡ್ಡ ಸಿದ್ಧಾಂತವಿದೆ ಎಂದು ಹೇಳಿದ್ದನ್ನು ಕೇಳಿಸಿಯೂಕೊಂಡಿದ್ದೆ.
ಹೋದವಾರ ಸ್ನೇಹಿತರ ಸಂಗೀತದ “lets jam” ಗ್ರೂಪಿನಲ್ಲೂ ಹಾಡಿದ್ದು ನಿತ್ಯೋತ್ಸವ ಹಾಡನ್ನೇ.

ಈ ಪುಸ್ತಕ ಬಿಡುಗಡೆ ಸಮಯದಲ್ಲಿ ನಮ್ಮಮ್ಮನಿಗೆ ನಿಸಾರ್ ಸರ್ ಬರುತ್ತಾರೆಂದು ಗೊತ್ತಾದ ತಕ್ಷಣ, “ನೀನು ಹೇಗೇಗೋ ಬಟ್ಟೆ ಹಾಕೊಂಡು ಹೋಗೋಹಾಗಿಲ್ಲ ಮರ್ಯಾದೆಯಾಗಿ ಹೋಗಬೇಕು” ಎಂದು ಮಾರಲ್ ಪೋಲಿಸಿಂಗ್ ಮಾಡಲು ಶುರುಮಾಡಿದಳು. ಅದರ ಜೊತೆ ಅಪ್ಪನಿಗೆ , “ಅಷ್ಟು ದೊಡ್ಡ ಕವಿಗಳ ಮುಂದೆ ಇವಳು ತಮಾಷೆ ಮಾಡಲೇಬಾರದು” ಎಂದು ಒಂದು ಸಣ್ಣ ಚೀಟಿಯನ್ನು ದಿಂಬಿನ ಪಕ್ಕ ಇಟ್ಟು ಹೋಗಿದ್ದರು. ನಾನು ಅದನ್ನ ತೆಗೆಯಲೇ ಇಲ್ಲ. ಅವರು ನನ್ನ ಪುಸ್ತಕ ಬಿಡುಗಡೆಗೆ ಬಂದರು , ಸೂಟು, ಬೂಟು, ಟೈ, ಶೇಡ್ಸ್, always ever handsome ಹಾಗೆ ಕಾಣಿಸುತ್ತಿದ್ದರು. ಸ್ಟೈಲಾಗಿ ಎಲ್ಲರ ಕೈಕುಲುಕಿ ಮಾತಾಡಿಸಿ, “ಒಹೋ ನೀವೇನಾ ಜಯನಗರದ ಹುಡುಗಿ” ಎಂದು ಹೇಳಿ ಕೆಲವು ಲೇಖನಗಳ ಬಗ್ಗೆ ಕೋತ್ ಮಾಡಿ ಇನ್ನು ಕಾರ್ಯಕ್ರಮದಲ್ಲಿ ಹೇಳುತ್ತೇನೆ ಎಂದರು.

ಅಲ್ಲಿಯೂ ಪಕ್ಕಾ ಜಿಯಾಲಜಿಸ್ಟ್ ಹಾಗೆ ಒಂದೊಂದೆ ಲೇಯರನ್ನ ಎಲ್ಲರ ಪುಸ್ತಕದ ಬಗ್ಗೆಯೂ ಹೇಳಿದರು. ಆವರು ನಮ್ಮ ಪುಸ್ತಕಗಳನ್ನೆಲ್ಲಾ ತರಿಸಿ ಓದಿದ್ದರೆಂದು ಜಮೀಲ್ ಸಾರ್ ಹೇಳಿದ್ದರು. ಒಂದು ದೊಡ್ಡ ಸಾಹಿತಿ ಅವರ ಪದ್ಯ, ಬರಹದಿಂದ ಒಂದು ಪೀಳಿಗೆಯನ್ನ ಎಚ್ಚರಿಸಿರುತ್ತಾರೆ, ಬರಹವನ್ನ ಬರೆಯೋದಕ್ಕೆ ಪ್ರೇರೆಪಿಸುತ್ತಾರೆ ಆದರೆ ಅವರ ಮುಂದಿನ ಮತ್ತು ಅದರ ಮುಂದಿನ ಪೀಳಿಗೆಯನ್ನು ಬರಹದ ಜೊತೆ ಅವರ ಸಿಂಪ್ಲಿಸಿಟಿ ಮತ್ತು ಅವರನ್ನ ಬೆನ್ನು ತಟ್ಟಿ, ಗುರುತಿಸುವುದರಿಂದ ಅವರ ನೆನಪಿನಲ್ಲಿ ಉಳಿಯುತ್ತಾರೆ. ಅಂಥಹವರ ಪಟ್ಟಿಯಲ್ಲಿ ನಿಂತಿದ್ದು ನಿಸಾರ್ ಸರ್. ಇವರನ್ನ ನೆನಪಿಸಿಕೊಂಡಾಗಲ್ಲೆಲ್ಲಾ ಮನಸ್ಸು ಗಾಂಧಿ ಬಜಾರು . ಅಪ್ಪಟ ಬೆಂಗಳೂರಿನ ಕವಿಗೆ ನನ್ನ ನಮನ .

‍ಲೇಖಕರು avadhi

May 4, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: